ಹಿರಿಯರು ಹೊರೆ ಎಂದರೂ ಮಗನಿಗಿಂತ ಸೊಸೆಯೇ ಕೇರ್ ಟೇಕರ್!

By Web DeskFirst Published Jun 25, 2019, 3:41 PM IST
Highlights

ಹಿರಿಯರಿರುವ ಮನೆ ಅನುಭವ ಮಂಟಪ. ಅಂಥಾ ತುಂಬಿದ ಮನೆಗಳ ಕಳೆಯೇ ಬೇರೆ. ಆದರೆ, ಹೆತ್ತು ಹೊತ್ತು ಪೊರೆದ ಹಿರಿಯರೇ ನಮಗೆ ದೊಡ್ಡ ಹೊರೆ ಎನ್ನುತ್ತಿದ್ದಾರೆ ಭಾರತೀಯರು. ಈ ಬಗ್ಗೆ ಸರ್ವೆ ಕಂಡುಕೊಂಡಿದ್ದೇನೇನು ಇಲ್ಲಿವೆ ನೋಡಿ.

ಜೂನ್ 15 ವಿಶ್ವ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ ಜಾಗೃತಿ ದಿನ. ಇಂಥದೊಂದು ಜಾಗೃತಿ ಮೂಡಿಸಲು ವರ್ಷದ ಒಂದು ದಿನವನ್ನು ಮೀಸಲಾಗಿಡಲಾಗಿದೆ ಎಂದರೆ, ಭಾರತದಲ್ಲಿ ಅದೆಷ್ಟು ಹಿರಿಯರು ಎಂಥೆಂಥಾ ದೌರ್ಜನ್ಯಗಳಿಗೆ ತುತ್ತಾಗುತ್ತಿರಬಹುದು ನೀವೇ ಲೆಕ್ಕ ಹಾಕಿ. ಈ ಸಂಬಂಧ ನಡೆದ ಸರ್ವೆಯು ಕೆಲವೊಂದು ಆಘಾತಕಾರಿ ಹಾಗೂ ಅಚ್ಚರಿಯ ಸಂಗತಿಗಳನ್ನು ಬಹಿರಂಗಪಡಿಸಿದೆ. 

ಹೆಲ್ಪೇಜ್ ಇಂಡಿಯಾ ಸಂಸ್ಥೆಯು ಭಾರತದ ಹಲವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಿದ ಸರ್ವೆಯಲ್ಲಿ ಶೇ.29ರಷ್ಟು ಜನರು ಹಿರಿಯರನ್ನು ನೋಡಿಕೊಳ್ಳುವುದು ದೊಡ್ಡ ಹೊರೆ ಎಂದು ಹೇಳಿದ್ದಾರೆ. ಹಿರಿಯರ ಜವಾಬ್ದಾರಿ ವಹಿಸಿಕೊಳ್ಳಬೇಕಾದ ಮಗ, ಮಗಳು, ಸೊಸೆ, ಅಳಿಯ ಮುಂತಾದವರು ಈ ಸರ್ವೆಯಲ್ಲಿ ಭಾಗವಹಿಸಿದ್ದರು. ಅವರಲ್ಲಿ ಶೇ.29ರಷ್ಟು ಮಂದಿ ಹಿರಿಯರನ್ನು ನೋಡಿಕೊಳ್ಳುವುದು ಹರಸಾಹಸವಾಗಿದೆ. ಇದು ನಮ್ಮ ಜೀವನವನ್ನು ದುಸ್ತರವಾಗಿಸಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಈಗಿನ ಅಪ್ಪಅಮ್ಮಂದ್ರಿಗೆ ಮಗು ಅಂದ್ರೆ ಮಂಡೆಬಿಸಿ ಅಂತೆ!

ಸಮೀಕ್ಷೆಯ ಫಲಿತಾಂಶದಂತೆ ಶೇ.15 ಮಂದಿ ಅಯ್ಯೋ ಈ ಹಿರಿಯರ ಸಹವಾಸವೇ ಬೇಡ ಎಂದಿದ್ದರೆ, ಶೇ.35ರಷ್ಟು ಜನರು ಈ ಹಿರಿಯರಿಂದಾಗಿ ತಮ್ಮ ಜೀವನದಲ್ಲಿ ಸ್ವಲ್ಪವೂ ಸಂತೋಷವೇ ಇಲ್ಲವಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಶೇ.25.7ರಷ್ಟು ಮಂದಿ ಹಿರಿಯರನ್ನು ನೋಡಿಕೊಂಡು ಸುಸ್ತಾಗಿ, ಅದು ಸಿಟ್ಟಾಗಿ ಅವರ ಮೇಲೆ ಎಗರಾಡುವಂತಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ. 

ಇನ್ನು ಹಿರಿಯರ ಖರ್ಚಿಗೆ ಸಂಬಂಧಿಸಿದಂತೆ ಕುಟುಂಬವೊಂದು ಒಬ್ಬ ಹಿರಿಯರ ಮೇಲೆ ಸರಾಸರಿ 4,125 ರೂ. ಮಾಸಿಕ ಖರ್ಚು ಮಾಡುತ್ತಿದೆ. 

'ಹಿರಿಯರ ವೈದ್ಯಕೀಯ ಖರ್ಚಿನ ವಿಷಯಕ್ಕೆ ಬಂದರೆ ಶೇ.42.5ರಷ್ಟು ಕುಟುಂಬಗಳಲ್ಲಿ ನೋಡಿಕೊಳ್ಳುವವರೇ ಖರ್ಚನ್ನು ತೂಗಿಸಬೇಕು. ಇನ್ನು ಶೇ.65ರಷ್ಟು ಕುಟುಂಬಗಳಲ್ಲಿ, ದೈನಂದಿನ ಚಟುವಟಿಕೆಗಳು ಹಾಗೂ ಉದ್ಯೋಗಕ್ಕಾಗಿ ಹಿರಿಯರನ್ನು ಏಕಾಂಗಿಯಾಗಿ ಮನೆಯಲ್ಲಿ ಬಿಟ್ಟು ಸೂಚನೆಗಳನ್ನು ಕೊಟ್ಟು ಹೋಗಬೇಕಾಗುತ್ತದೆ. ಇನ್ನು ಶೇ.8.42ರಷ್ಟು ಕುಟುಂಬಗಳು ಮನೆ ಕೆಲಸದವರ ಸಹಾಯ ಪಡೆದು ಹಿರಿಯರನ್ನು ಒಬ್ಬರನ್ನೇ ಮನೆಯಲ್ಲಿ ಬಿಡುವುದಾಗಿ ಹೇಳಿದ್ದಾರೆ, ' ಎಂದು ಸಮೀಕ್ಷಾ ವರದಿ ತಿಳಿಸಿದೆ. 

ಮಕ್ಕಳ ಬೆರಳು ಚೀಪೋ ಅಭ್ಯಾಸ ಬಿಡಿಸೋಕೆ ಹೀಗ್ ಮಾಡಿ!

ಶೇ.32ರಷ್ಟು ಕೇರ್‌ಗಿವರ್ಸ್ ಹಿರಿಯರಿಗೆ ಅವರ ಕೆಲಸಗಳಲ್ಲಿ ಅಂದರೆ ವಾಕಿಂಗ್, ಬಟ್ಟೆ ಬದಲಿಸುವುದು, ಸ್ನಾನ, ತಿನ್ನುವುದು, ಟಾಯ್ಲೆಟ್‌ಗೆ ಹೋಗುವುದು ಎಲ್ಲಕ್ಕೂ ಸಹಾಯ ಮಾಡಬೇಕಾಗಿರುವುದನ್ನು ಹೇಳಿಕೊಂಡಿದ್ದಾರೆ. ಗಂಡುಮಕ್ಕಳಿಗೆ ಹೋಲಿಸಿದರೆ, ಸೊಸೆಯಂದಿರೇ ಹೆಚ್ಚಾಗಿ ಹಿರಿಯರಿಗೆ ದೈಹಿಕ ಚಟುವಟಿಕೆಗಳಿಗೆ ಸಹಾಯ ಮಾಡುತ್ತಿದ್ದಾರೆ ಎಂಬುದು ಗಮನಾರ್ಹ. 

ಶೇ.68ರಷ್ಟು ಸೊಸೆಯರು ತಮ್ಮ ವಯಸ್ಸಾದ ಅತ್ತೆ-ಮಾವಂದಿರಿಗೆ ಫೋನ್ ಬಳಕೆ, ಶಾಪಿಂಗ್, ಊಟ ತಯಾರಿಸುವುದು, ಮನೆ ಸ್ವಚ್ಛ ಮಾಡುವುದು, ಅರ ಬಟ್ಟೆ ಒಗೆಯುವುದು, ಔಷಧಿ ತೆಗೆದುಕೊಳ್ಳುವುದು ಮುಂತಾದ ದೈನಂದಿನ ಕಾರ್ಯಕ್ಕೆ ಸಹಾಯ ಮಾಡುತ್ತಾರಾದರೆ, ಶೇ.51ರಷ್ಟು ಪುತ್ರರು ಮಾತ್ರ ತಾವೂ ಈ ಕೆಲಸಗಳಿಗೆ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. 

ಇನ್ನು ಹಿರಿಯ ನಾಗರಿಕರ ಮಾನಸಿಕ ಸಮಸ್ಯೆಗಳಿಗೆ ಸಹಾಯ ಸಂಬಂಧಿಸಿದಂತೆ ಅರ್ಧಕ್ಕಿಂತಾ ಹೆಚ್ಚು ಹಿರಿಯರಿಗೆ ಒಂದಲ್ಲಾ ಒಂದು ಸಮಯದಲ್ಲಿ ಈ ಸಂಬಂಧ ನೆರವು ಬೇಕಾಗುತ್ತದೆ. 'ಬಹುತೇಕ ನೂರಕ್ಕೆ 70ರಷ್ಟು ಹಿರಿಯರು ಅಗತ್ಯವಿದ್ದಾಗ ತಮ್ಮನ್ನು ನೋಡಿಕೊಳ್ಳುವವರಿಂದ ಮಾನಸಿಕ ಬೆಂಬಲ ಪಡೆಯುತ್ತಾರೆ. ಇನ್ನು ಶೇ.29ರಷ್ಟು ಹಿರಿಯ ನಾಗರಿಕರು ಖಿನ್ನತೆ, ಆತ್ಮವಿಶ್ವಾಸದ ಕೊರತೆ ಹಾಗೂ ಒತ್ತಡಗಳ ಕಾರಣದಿಂದ ಯಾವಾಗಲೂ ಮಾನಸಿಕ ಬೆಂಬಲದ ಅಗತ್ಯ ಬೇಡುತ್ತಲೇ ಇರುತ್ತಾರೆ,' ಎಂದು ಸರ್ವೆ ತಿಳಿಸಿದೆ.

ಆತಂಕ, ಆತ್ಮವಿಶ್ವಾಸ ಕೊರತೆ, ಅವಲಂಬನೆ ಭಯ, ಖಿನ್ನತೆ ಮುಂತಾದ ಪರಿಸ್ಥಿತಿಗಳಲ್ಲಿ ಹೆಚ್ಚಿನ ಬಾರಿ ಹಿರಿಯ ನಾಗರಿಕರಿಗೆ ಮಗಳು ಅಥವಾ ಸೊಸೆಯರೇ ನೆರವಿಗೆ ಬರುವುದಾಗಿ ಸರ್ವೆ ಹೇಳಿದೆ. 

ಆಸಕ್ತಿಕರ ವಿಷಯವೆಂದರೆ ಮೊಮ್ಮಕ್ಕಳೂ ಹಿರಿಯರನ್ನು ನೋಡಿಕೊಳ್ಳುವಲ್ಲಿ ಪ್ರತಿದಿನ ಸಾಕಷ್ಟು ನೆರವು ನೀಡುತ್ತಾರೆ. ಸುಮಾರು ಶೇ.82ರಷ್ಟು ಕೇರ್‌ಗಿವರ್ಸ್ ಹಿರಿಯರನ್ನು ನೋಡಿಕೊಳ್ಳುವ ಒತ್ತಡದಿಂದ ಪಾರಾಗಲು ಬರೆಯುವುದು, ವಾಕಿಂಗ್ ಸೇರಿದಂತೆ ಒಂದಿಲ್ಲೊಂದು ಚಟುವಟಿಕೆ ಕಂಡುಕೊಂಡಿದ್ದಾರೆ ಎಂದು ಸರ್ವೆ ತಿಳಿಸಿದೆ.

ಈ ಸಮೀಕ್ಷೆ ಸಂಗತಿಗಳು ಹಿರಿಯರಿಗೆ ಆಘಾತಕಾರಿಯಾಗಿದ್ದು, ಮಕ್ಕಳಿಗೆ ಹೊರೆಯಾಗದಿರಲು ಪ್ರತಿಯೊಬ್ಬರೂ ಒಂದಿಷ್ಟು ಹಣ ಸೇವಿಂಗ್ಸ್ ಇಡುವುದು, ಸರ್ಕಾರಿ ಯೋಜನೆಗಳ ಲಾಭ ಪಡೆಯುವುದು, ಆಸ್ತಿ ಪರಾಭಾರೆ ಮಾಡುವಾಗ ಜಾಣತನ ತೋರುವುದು, ಸಾಧ್ಯವಾದಷ್ಟು ಮಟ್ಟಿಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು, ಚಟುವಟಿಕೆಯಿಂದಿರುವುದು, ಸಾಧ್ಯವಾದಷ್ಟು ಸಣ್ಣ ಪುಟ್ಟ ಕೆಲಸಗಳಲ್ಲಿ ನೆರವಾಗುವುದು ಮಾಡುವುದು ಮುಂತಾದ ಕ್ರಮ ಅನುಸರಿಸಬಹುದು. ಮಕ್ಕಳೂ ಅಷ್ಟೇ, ಹಿರಿಯರಿಗಾಗಿ ಇನ್ಶೂರೆನ್ಸ್ ಮಾಡಿಸುವುದು, ಅವರೊಂದಿಗೆ ದಿನದಲ್ಲಿ ಒಂದೆರಡು ಗಂಟೆ ಪ್ರೀತಿಯಿಂದ ಕಳೆಯುವುದು, ಟೈಂಪಾಸ್‌ಗೆ ಬೇಕಾದ ಅನುಕೂಲತೆ ಮಾಡಿಕೊಡುವುದು, ತಮ್ಮ ಒತ್ತಡಗಳ ನಿವಾರಣೆಗಾಗಿ ಯೋಗ, ಪ್ರಾಣಾಯಾಮ ಮುಂತಾದ ಮಾರ್ಗ ಕಂಡುಕೊಳ್ಳುವುದು ಮಾಡಬಹುದು. ಇಬ್ಬರೂ ಪರಸ್ಪರ ನೆರವಾದರೆ, ಹಿರಿಯರು ಹೊರೆಯಾಗದೆ, ಪರಸ್ಪರ ಅನಿವಾರ್ಯವಾಗಬಹುದು. ಜೊತೆಗೆ, ಈ ಒತ್ತಡಕ್ಕೆ ಪ್ರೀತಿಯೇ ಮದ್ದಾಗಬಹುದು. 

ಕಚಗುಳಿ ಮಾಡಿ ಮಗುವಿಗೆ ಟಾರ್ಚರ್ ಕೊಡಬೇಡಿ...

click me!