ಫುಡ್ ಕ್ರೇವಿಂಗ್ಸ್ ಏನೋ ಹೇಳೋಕೆ ಹೊರಟಿದೆ, ಕಿವಿಗೊಟ್ಟು ಕೇಳಿ

By Web DeskFirst Published Aug 14, 2019, 4:28 PM IST
Highlights

ಸಮತೋಲಿತ ಆಹಾರ ಸೇವಿಸದಿದ್ದರೆ ದೇಹದಲ್ಲಿ ಕೆಲವೊಂದು ಪೋಷಕಾಂಶದ ಕೊರತೆಯಾಗುತ್ತದೆ. ಆಗ ದೇಹ ಆ ಕೊರತೆ ನೀಗಲು ಇಂಥದ್ದನ್ನು ತಿನ್ನಬೇಕೆಂಬ ಆಸೆ ವ್ಯಕ್ತಪಡಿಸುತ್ತದೆ. ಅದನ್ನು ನೀವು ಬರಿಯ ಬಾಯಿ ಚಪಲವೆಂದು ತಪ್ಪು ತಿಳಿದುಕೊಂಡಲ್ಲಿ ಕೆಲವೊಂದು ಆರೋಗ್ಯ ಸಮಸ್ಯೆಗಳು ಕಾಡಬಹುದು. 

ಕೆಲವೊಮ್ಮೆ ಪಿಜ್ಜಾ ತಿನ್ನಬೇಕಿನಿಸಬಹುದು. ಅದರರ್ಥ ಅಷ್ಟೇ ಆಗಿರುತ್ತದೆ. ಇನ್ನು ಕೆಲವೊಮ್ಮೆ ಕೆಲ ಆಹಾರ ತಿನ್ನಬೇಕೆಂಬ ಆಸೆ ನಿಮ್ಮ ಹಳೆಯ ನೆನಪುಗಳಿಗೆ, ಅನುಭವಗಳಿಗೆ ಸಂಬಂಧಿಸಿರುತ್ತದೆ.  ದುಃಖವಾದಾಗ ಅಥವಾ ಏಕಾಂಗಿತನ ಕಾಡಿದಾಗ ಏನಾದರೂ ತಿನ್ನಬೇಕೆನಿಸುವುದು ಹೆಚ್ಚಾಗಿ ನಿಮ್ಮ ಎಮೋಶನ್ಸ್‌ಗೆ ಸಂಬಂಧಿಸಿರುತ್ತದೆಯೇ ಹೊರತು, ದೈಹಿಕ ಕಾರಣಗಳಿಗಲ್ಲ. ಆದರೆ, ಬೇರೆ ಸಮಯಗಳಲ್ಲಿ ನಿರ್ದಿಷ್ಟವಾಗಿ ಇಂಥದ್ದನ್ನೇ ತಿನ್ನಲೇಬೇಕೆನಿಸುವುದು ಮಾತ್ರ ನಿಮ್ಮ ದೇಹದ ಕೊರತೆಯನ್ನು ಅಥವಾ ಆರೋಗ್ಯದ ಕುರಿತು ಹೇಳುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸಾಮಾನ್ಯವಾಗಿ ಕ್ರೇವಿಂಗ್ಸ್ ಪೋಷಕಾಂಶದ ಕೊರತೆ ಸೂಚಿಸುತ್ತದೆ. ಯಾವುದರ ಕ್ರೇವಿಂಗ್ಸ್ ಯಾವ ಪೋಷಕಾಂಶದ ಕೊರತೆ ಹೇಳುತ್ತದೆ ಎಂಬುದನ್ನು ತಿಳಿದುಕೊಳ್ಳಿ. 

1. ಚಿಪ್ಸ್
ಯಾವತ್ತಾದರೂ ಚಿಪ್ಸ್, ಲೇಸ್, ಕುರ್‌ಕುರೆ ಮುಂತಾದವನ್ನು ತಿನ್ನಲೇಬೇಕೆಂಬ ಉತ್ಕಟ ಬಯಕೆ ಆಗಿದೆಯೇ? ಇದು ದೇಹದಲ್ಲಿ ಸೋಡಿಯಂ ಕೊರತೆ ಹೇಳುತ್ತಿದೆ ಎಂದು ನೀವೆಣಿಸಿದರೆ, ಅಷ್ಟೇ ಅಲ್ಲ, ಡಿಹೈಡ್ರೇಶನ್ನನ್ನು ಕೂಡಾ ಇದು ಸೂಚಿಸುತ್ತಿದೆ. ಉಪ್ಪು ದೇಹದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಜೊತೆಗೆ ನೀರನ್ನು ಆಕರ್ಷಿಸುತ್ತದೆ. ದೇಹದಲ್ಲಿ ಹಾಗೂ ರಕ್ತದಲ್ಲಿ ಸೋಡಿಯಂ ಹೆಚ್ಚಾಗಿದ್ದಾಗ ಕೂಡ ಹೆಚ್ಚು ನೀರನ್ನು ಎಳೆದುಕೊಳ್ಳಲು ಸಹಾಯವಾಗಲೆಂದು ಮತ್ತಷ್ಟು ಸೋಡಿಯಂ ಹೆಚ್ಚಿರುವ ಆಹಾರವನ್ನೇ ದೇಹ ಕೇಳುತ್ತದೆ. ಉಪ್ಪಿನ ಪದಾರ್ಥ ಬೇಕೆನಿಸುತ್ತಿದ್ದರೆ ಮೊದಲು ಎರಡು ಲೋಟ ನೀರು ಕುಡಿಯಿರಿ. ಅಷ್ಟಾಗಿಯೂ ಕ್ರೇವಿಂಗ್ ಹೋಗಲಿಲ್ಲವೆಂದರೆ ಸಾಲ್ಟಿ ಫುಡ್ ಸೇವಿಸಿ.

2. ಚಾಕೋಲೇಟ್
ಚಾಕೋಲೇಟ್ ಬೇಕೇ ಬೇಕೆನಿಸಿದರೆ ಮೆಗ್ನೀಶಿಯಂ ಕೊರತೆ ಆಗಿದೆ ಎಂದರ್ಥ. ಅದರಲ್ಲೂ ಮುಟ್ಟಿನ ಸಂದರ್ಭದಲ್ಲಿ ಹಾಗೂ ಗರ್ಭಿಣಿ ಮಹಿಳೆಯರಲ್ಲಿ ಆದಾಗ ಮೆಗ್ನೀಶಿಯಂ ಕೊರತೆ ಎಂಬುದು ಪಕ್ಕಾ. ಮೆಗ್ನೀಶಿಯಂ ದೇಹದಲ್ಲಿ ಇನ್ಸುಲಿನ್ ಮಟ್ಟ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ, ಚಾಕೋಲೇಟ್ ಬೇಕೆನಿಸಿದಾಗ ಸ್ವಲ್ಪ ಬಾದಾಮಿಯನ್ನೋ, ಹಸಿರು ಸೊಪ್ಪುಗಳನ್ನೋ ತಿಂದು ನೋಡಿ, ಶೇ.70ರಷ್ಟು ಕೋಕೋ ಇರುವ ಚಾಕೋಲೇಟ್ ಆದರೂ ಸರಿಯೇ. ಇವೆಲ್ಲವೂ ನಿಮಗೆ ಅಗತ್ಯವಿರುವ ಮೆಗ್ನೀಶಿಯಂ ಹಾಗೂ ಆ್ಯಂಟಿ ಆಕ್ಸಿಡೆಂಟ್‌ಗಳನ್ನು ಒದಗಿಸುತ್ತವೆ. 

3. ಸ್ವೀಟ್ಸ್
ಚಾಕೋಲೇಟ್ ಬಿಡಿ, ಬೇರೆ ಯಾವುದಾದರೂ ಸ್ವೀಟ್ ತಿನ್ನಬೇಕೆಂದು ಬಲವಾಗಿ ಅನ್ನಿಸುತ್ತಿದ್ದರೆ, ನಿಮಗೆ ನಿದ್ದೆಯ ಕೊರತೆಯಾಗಿರಬಹುದು. ಸಾಮಾನ್ಯವಾಗಿ ಸುಸ್ತಾದಾಗ ಎನರ್ಜಿ ತುಂಬಲು ಜನರು ಸ್ವೀಟ್ ತಿನ್ನುತ್ತಾರೆ. ಇದು ನಿಮಗೆ ತಕ್ಷಣಕ್ಕೆ ಎನರ್ಜಿ ನೀಡುತ್ತದೆ ಹಾಗೂ ಹೆಚ್ಚು ಎಚ್ಚರವಾಗಿರಲು ಸಹಾಯ ಮಾಡುತ್ತದೆ. ಆದರೆ, ಇದು ಧೀರ್ಘಕಾಲೀನ ಪರಿಹಾರವಲ್ಲ. ಧೀರ್ಘ ಕಾಲದಲ್ಲಿ ನೀವು ಮತ್ತಷ್ಟು ಸುಸ್ತಾಗಬಹುದು. ಇದು ಆಗಬಾರದೆಂದರೆ ಪ್ರತಿ ದಿನ ಚೆನ್ನಾಗಿ ನಿದ್ರೆ ಮಾಡಿ.

ವೀರ್ಯದಲ್ಲಿ  ಅಡುಗೆ ಮಾಡುತ್ತಾನಂತೆ ಈ ಭೂಪ

4. ಸಿಟ್ರಸ್
ಈ ಕೂಡಲೇ ಆರೆಂಜ್ ಜ್ಯೂಸ್ ಕುಡಿಯಲೇಬೇಕು ಎನಿಸುತ್ತಿದ್ದರೆ ಅಥವಾ ದ್ರಾಕ್ಷಿ ಹಣ್ಣು ತಿನ್ನುವ ತೀವ್ರ ಬಯಕೆಯಾಗಿದ್ದರೆ ನಿಮ್ಮ ದೇಹಕ್ಕೆ ವಿಟಮಿನ್ ಸಿ ಬೇಕಾಗಿದೆ ಎಂದು ಅರ್ಥ ಮಾಡಿಕೊಳ್ಳಿ. ಬಹುಷಃ ಯಾವುದೋ ಇನ್ಫೆಕ್ಷನ್ ವಿರುದ್ಧ ಹೋರಾಡಲು ನಿಮ್ಮ ದೇಹ ವಿಟಮಿನ್ ಸಿ ಎಂಬ ಆಯುಧ ಕೇಳುತ್ತಿರಬಹುದು. ದೇಹದ ಬೆಳವಣಿಗೆ, ಎತ್ತರ, ಟಿಶ್ಯೂಗಳ ರಿಪೇರಿಗೆ, ರೋಗ ನಿರೋಧಕ ಶಕ್ತಿಗೆ, ಗಾಯ ಬೇಗ ಗುಣವಾಗಲು, ಮೂಳೆ, ಹಲ್ಲುಗಳ ಆರೋಗ್ಯಕ್ಕೆ ವಿಟಮಿನ್ ಸಿ ಬೇಕಾಗಿರುವುದರಿಂದ ಸಾಕಷ್ಟು ಸಿಟ್ರಸ್ ಹಣ್ಣುಗಳನ್ನು ಸೇವಿಸಿ. 

ಆಲೂ ಚಾಟ್ಸ್ ರೆಸಿಪಿ ಇಲ್ಲಿದೆ

5. ನೀರು
ಚೆನ್ನಾಗಿ ನೀರು ಕುಡಿದು, ನಿಮ್ಮ ಮೂತ್ರ ನೀರಿನ ಬಣ್ಣದಲ್ಲೇ ಹೋಗುತ್ತಿದ್ದರೆ, ನೀವು ಸಾಕಷ್ಟು ಕುಡಿಯುತ್ತಿದ್ದೀರೆಂದು ಅರ್ಥ. ಆದರೂ ಇಡೀ ದಿನ ಬಾಯಾರಿಕೆಯಾಗುತ್ತಲೇ ಇದೆ ಎಂದರೆ ಸಕ್ಕರೆ ಕಾಯಿಲೆ ಇರಬಹುದು. ಸದಾ ಬಾಯಾರುವುದು ಹಾಗೂ ಪದೇ ಪದೇ ಮೂತ್ರಕ್ಕೆ ಹೋಗಬೇಕಾಗುವುದು ಡಯಾಬಿಟೀಸ್‌ನ ಆರಂಭಿಕ ಸೂಚನೆ. ದೇಹದಲ್ಲಿ ಇನ್ಸುಲಿನ್ ಮಟ್ಟ ಹೆಚ್ಚಾಗಿದೆ ಎಂದರ್ಥ. ರಕ್ತದಲ್ಲಿ ಗ್ಲೂಕೋಸ್ ಹೆಚ್ಚಾದಾಗ ಕಿಡ್ನಿಗಳು ಅದನ್ನು ಮೂತ್ರದ ಮೂಲಕ ಹೊರ ಹಾಕಲು ನೋಡುತ್ತವೆ. ಡಯಾಬಿಟೀಸ್ ಇರುವವರು ಅತಿಯಾಗಿ ಮೂತ್ರಕ್ಕೆ ಹೋಗಲು ಇದೇ ಕಾರಣ. ಆದ್ದರಿಂದ ಸುಖಾಸುಮ್ಮನೆ ಇಡೀ ದಿನ  ಬಾಯಾರುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ. 

click me!