ಫಾರಿನ್ನಲ್ಲಿ ಸಿಕ್ಕ ಅನ್ನ ಹಳಸಿತ್ತು, ಕಣ್ಣಿಗೊತ್ತಿಕೊಂಡು ತಿಂದ ಡಾ.ರಾಜ್ ಹೇಳಿದ್ದೇನು?

By Suvarna News  |  First Published Nov 23, 2024, 5:59 PM IST

ಅನ್ನಕ್ಕಾಗಿ ಪರದಾಡುತ್ತಿದ್ದು ಅಣ್ಣಾವ್ರು. ಆದರೆ, ಹೊಟ್ಟೆ ತುಂಬಾ ಊಟ ಸಿಗೋ ಪರಿಸ್ಥಿತಿ ಬಂದಾಗಲೂ ಅನ್ನದ ಬೆಲೆಯನ್ನು ಮರೆಯಲಿಲ್ಲ. ಹೇಗಿದ್ದರೂ ಪ್ರತೀ ತುತ್ತನ್ನೂ ಕಣ್ಣಿಗೊತ್ತಿಕೊಂಡೇ ಸೇವಿಸುತ್ತಿದ್ದರು. 


-ಮಹೇಶ್ ದೇವಶೆಟ್ಟಿ
ರಾಜ್‌ಕುಮಾರ್! ಈ ಹೆಸರು ಕೇಳಿದರೆ ಸಾಕು ಕನ್ನಡಿಗರು ಎದೆ ಉಬ್ಬಿಸುತ್ತಾರೆ. ಭಕ್ತಗಣ ಕಾಲರ್ ಟೈಟ್ ಮಾಡಿಕೊಳ್ಳುತ್ತದೆ. ಅದೊಂದು ಜೀವ ಇನ್ನೂ ಇರಬೇಕಿತ್ತು. ಈಗಲೂ ಕರುನಾಡು ಹೊತ್ತಲ್ಲದ ಹೊತ್ತಲ್ಲಿ ಎದೆಯನ್ನು ತೇವ ಮಾಡಿಕೊಳ್ಳುತ್ತದೆ. ಹಾಗಿದ್ದರು ನಮ್ಮ ಅಣ್ಣಾವ್ರು. ಬದುಕೇ ಬೇರೆ, ಸಿನಿಮಾನೇ ಬೇರೆ. ಹೀಗವರು ಬಾಳಲಿಲ್ಲ. ಅಕಸ್ಮಾತ್ ಹಾಗೇನಾದರೂ ನಡೆದುಕೊಂಡಿದ್ದರೆ ಕರುನಾಡು ಅವರನ್ನು ಈ ರೀತಿ ಮೆರವಣಿಗೆ ಮಾಡುತ್ತಿರಲಿಲ್ಲ. ಅದಕ್ಕೆಲ್ಲ ಕಾರಣ ರಾಜ್ ನಡೆದ ಹಾದಿ, ತೋರಿಸಿದ ಬೀದಿ. ಇದೆಲ್ಲ ಸೇರಿಕೊಂಡು ರಾಜ್‌ಕುಮಾರ್ ಎನ್ನುವ ವ್ಯಕ್ತಿ ಇಂದು ಕನ್ನಡದ ಕಿರೀಟವಾಗಿದ್ದಾರೆ. ಮನದ ಗೂಡಲ್ಲಿ ನೆನಪಾಗಿ ಅಚ್ಚೆ ಹಾಕಿ ಕುಳಿತಿದ್ದಾರೆ. 

ಇಂಥ ರಾಜ್‌ಕುಮಾರ್‌ಗೆ ಅನ್ನ ಕಂಡರೆ ಸಾಕು ಎರಡು ಹೊಟ್ಟೆ. ಅವರ ಪಕ್ಕ ಕುಳಿತು ಊಟ ಮಾಡುವುದು ಅಂತಿಂಥವರಿಗೆ ದಿಕ್ಕು ತಪ್ಪುತ್ತಿತ್ತು. ಕಾರಣ ತಾವು ತಿಂದಷ್ಟನ್ನೇ ಅಕ್ಕ ಪಕ್ಕದವರೂ ತಿನ್ನಬೇಕೆಂದು ಒತ್ತಾಯಿಸುತ್ತಿದ್ದರು. 'ಅಯ್ಯೋ...ಏನೂ ಆಗಲ್ಲ...ಕಣ್ ಮುಚ್ಚಿಕೊಂಡು ಜಮಾಯ್ಸಿ. ಅದನ್ನು ಬೆವರಿಳಿಸಿ ಕರಗಿಸಿದ್ರಾಯ್ತು...'  ಎಂದು ಬೆನ್ನು ತಟ್ಟುತ್ತಿದ್ದರು. ಅದೊಂದು ಕಾಲದಲ್ಲಿ ಅನ್ನವೇ ಇಲ್ಲದ ದಿನಗಳನ್ನು ತಳ್ಳಿದ ದೇಹ ಅದು. ಎಷ್ಟೋ ಸಾರಿ ಗಂಜಿ ಅನ್ನಕ್ಕೆ ಉಪ್ಪು ಬೆರೆಸಿ, ನಂಜಿಕೊಳ್ಳಲು ಹಸಿ ಮೆಣಸಿಕಾಯಿ ಸಿಕ್ಕರೆ ಅದೇ ಹಬ್ಬದೂಟದಂತೆ ಸಡಗರ ಪಡುತ್ತಿದ್ದ ಕೂಸದು. ಅನ್ನದ ಒಂದೊಂದು ಅಗುಳನ್ನೂ ಕಣ್ಣಿಗೆ ಒತ್ತಿಕೊಂಡು ಹೊಟ್ಟೆಗೆ ಇಳಿಸುತ್ತಿದ್ದರು. ಅನ್ನ ಅವರಿಗೆ ಕೇವಲ ಹೊಟ್ಟೆ ತುಂಬಿಸುವ ಕಾಳಾಗಿರಲಿಲ್ಲ, ಅದು ದೈವದ ಪ್ರತಿರೂಪವಾಗಿತ್ತು.

ಡಾ ರಾಜ್‌ ಜೊತೆ ಭವ್ಯಾ ಒಮ್ಮೆಯೂ ನಟಿಸಲಿಲ್ಲ; ಹೊರಬಿದ್ದಿರುವ ಆ ಗುಟ್ಟು ನಿಜವೇ?

Tap to resize

Latest Videos

ಕರುನಾಡಲ್ಲಿ ರಾಜ್‌ಕುಮಾರ್ ದಿಬ್ಬಣ ಹೊರಟರು. ಹಣ ಕಾಲು ಮುರಕೊಂಡು ಬಿತ್ತು. ಮಕ್ಕಳೂ ದೊಡ್ಡವರಾಗುತ್ತಿದ್ದರು. ಕಾಸು, ಕೀರ್ತಿ...ಎಲ್ಲವೂ ಹೊಸಿಲಲ್ಲಿ ನಗುತ್ತಿತ್ತು. ಹೀಗಿದ್ದಾಗ ಅದೊಮ್ಮೆ ಮಕ್ಕಳ ಜೊತೆ ವಿದೇಶಕ್ಕೆ ಹೋಗಬೇಕಾಯಿತು. ಬೆಳೆಯುತ್ತಿದ್ದ ಶಿವಣ್ಣ ಹಾಗೂ ರಾಘಣ್ಣ ಕೂಡ ಇದ್ದರು. ಆ ಊರಿನಲ್ಲಿ ಅನ್ನ ಸುಲಭವಾಗಿ ಸಿಗುತ್ತಿರಲಿಲ್ಲ. ಅನ್ನ ಇಲ್ಲದ ಊಟಕ್ಕಾಗಿ ಎಲ್ಲರೂ ಚಡಪಡಿಸುತ್ತಿದ್ದರು. ಅಲ್ಲಿ ಇಲ್ಲಿ ಹುಡುಕಿ, ಕೊನೆಗೂ ಅನ್ನದ ಮೂರು ಪಾರ್ಸೆಲ್ ತರಿಸಿಕೊಂಡರು. ಎಷ್ಟೋ ದಿನದ ಮೇಲೆ ಅನ್ನ ಕಣ್ಣ ಮುಂದೆ. ಅಪ್ಪ ಮಕ್ಕಳ ಕಣ್ಣಲ್ಲಿ ದೀಪಾವಳಿ. ಶಿವಣ್ಣ ಹಾಗೂ ರಾಘಣ್ಣ ಒಂದು ತುತ್ತನ್ನು ಎತ್ತಿ ಬಾಯಿಗಿಟ್ಟರು. ಅಷ್ಟೇ...ಮುಖ ಹಿಂಡಿದರು.ಕಣ್ಣಲ್ಲಿ ಕಸಿವಿಸಿ... ಮತ್ತೆ ತುತ್ತನ್ನು ತಟ್ಟೆಗಿಟ್ಟರು. ಅವರಿಬ್ಬರ ಮುಖ ನೋಡಿದ ರಾಜ್ ಕಣ್ಣಲ್ಲೇ ಪ್ರಶ್ನೆ ಹಾಕಿದರು. 'ಅಪ್ಪಾಜಿ. ಅನ್ನ ಹಳಸಿದೆ. ತಿನ್ನಕ್ಕಾಗಲ್ಲ...ಉಹುಂ...' ರಾಜ್ ಒಮ್ಮೆ ಅನ್ನದತ್ತ ದಿಟ್ಟಿಸಿದರು. ಅನ್ನ ಹಳಸಿದ್ದು ಗೊತ್ತಾಯಿತು. ಅವರಿಗೂ ಆ ವಾಸನೆ ಅಡರುತ್ತಿತ್ತು. ಇನ್ನೇನು ಮಾಡಬೇಕು? ಚೆಲ್ಲದೆ ಬೇರೆ ದಾರಿ ಇಲ್ಲ. ಈ ರೀತಿ ಮಕ್ಕಳು ಅಂದುಕೊಂಡರು. ಅಷ್ಟರಲ್ಲಿ ಅಣ್ಣಾವ್ರು ಅನ್ನವನ್ನು ಐದು ಬೆರಳಿಂದ ಹಿಡಿದೆತ್ತಿ ಕಣ್ಣಿಗೆ ಒತ್ತಿಕೊಂಡರು. ಒಂದು, ಎರಡು, ಮೂರು...ತುತ್ತು ಕರುಳನ್ನು ಸೇರುತ್ತಾ ಹೋದವು. ಶಿವಣ್ಣ-ರಾಘಣ್ಣ ಅಪ್ಪಾಜಿಯನ್ನು ಅಚ್ಚರಿಯಿಂದ ನೋಡುತ್ತಿದ್ದರು. ಅಲ್ಲಿಗೇ ರಾಜ್ ಸುಮ್ಮನಾದರಾ? ಇಲ್ಲವೇ ಇಲ್ಲ. ಮಕ್ಕಳಿಬ್ಬರೂ ಬಿಟ್ಟ ಅನ್ನವನ್ನೂ ಅಷ್ಟೇ ಭಕ್ತಿಯಿಂದ ಹೊಟ್ಟೆಗೆ ಸೇರಿಸಿದರು. ಕೈ ತೊಳೆದು ಕೊಂಡರು. ಮಕ್ಕಳ ಕಣ್ಣಲ್ಲಿದ್ದ ಪ್ರಶ್ನೆ ಅರ್ಥ ಮಾಡಿಕೊಂಡರು. ಆಗ ಆ ಜೀವ ಹೇಳಿದ್ದು ಇಷ್ಟೇ. 'ಅನ್ನ ದೇವರ ಸಮಾನ. ನಮಗೆ ಹಳಸಿದ ಅನ್ನವಾದರೂ ಸಿಕ್ಕಿದೆ. ಎಷ್ಟೋ ಜನರಿಗೆ ಇದಕ್ಕೂ ಅದೃಷ್ಟ ಇರಲ್ಲ. ಅನ್ನವನ್ನು ಯಾವ ಕಾರಣಕ್ಕೂ ಚೆಲ್ಲಬಾರದು, ಹಾಳು ಮಾಡಬಾರದು, ಕೆಡಿಸಬಾರದು. ಅದಕ್ಕೇ ನಾನು ಹಳಸಿದ್ದರೂ ತಿಂದು ಬಿಟ್ಟೆ.'

ದೊಡ್ಮನೆಯ ಮೊದಲ ಲವ್ ಸ್ಟೋರಿ ರಿವೀಲ್; ಶಿವಣ್ಣನ ಮದುವೆಯಲ್ಲೇ ನಡೆದಿತ್ತು ಕಣ್ಣಾಮುಚ್ಚಾಲೆ!

ಅಪ್ಪಾಜಿ ಮಾತನ್ನು ಕೇಳುತ್ತಾ ಮಕ್ಕಳು ಏನಂದುಕೊಂಡರೊ? ಗೊತ್ತಿಲ್ಲ. ಆದರೆ ಒಂದು ಮಾತಂತೂ ಸತ್ಯ. ಹಳಸಿದ ಅನ್ನಕ್ಕೂ ಮುಕ್ತಿ ನೀಡಿದ ಅಣ್ಣಾವ್ರು ಬಹುಶಃ ಈ ಎಲ್ಲ ಕಾರಣಕ್ಕೇ ಇಂದು ಕರುನಾಡಿನಲ್ಲಿ ಅನಭಿಷಿಕ್ತ ಚಕ್ರವರ್ತಿಯಾಗಿ ವಿರಾಜಮಾನವಾಗಿದ್ದಾರೆ. ರಾಜ್‌ಕುಮಾರ್ ಬರೀ ಹೆಸರಲ್ಲ, ಅದು ತಿಕ್ಕಿ ಒರೆಸಿದರೂ ಅಳಿಸಲಾಗದ ಇತಿಹಾಸ...ಅಲ್ಲವೆ?
 

click me!