ಬಾಲಿವುಡ್ ಸೆಲೆಬ್ರಿಟಿಗಳ ಚಿರಯೌವನದ ಸೀಕ್ರೇಟ್ ಏನು..?

By Kannadaprabha NewsFirst Published Nov 12, 2018, 11:40 AM IST
Highlights
  • ಅನಿಲ್ ತೂಕ ಒಂಚೂರೂ ಹೆಚ್ಚಿಲ್ಲ, ಕಮ್ಮಿಯಿಲ್ಲ. ಹಾಗಂತ ತಿನ್ನೋದರಲ್ಲೇ ಕಡಿಮೆ ಮಾಡಿಲ್ಲ. ಪಂಜಾಬಿ ಸ್ಟೈಲ್ ಊಟ ಅಂದರೆ ಬಹಳ ಇಷ್ಟ.
  • ಮಿಲಿಂದ್ ಆರೋಗ್ಯದ ವಿಷಯದಲ್ಲಿ ಬಹಳ ಕಟ್ಟುನಿಟ್ಟು. ಕರಿದ ತಿಂಡಿಯನ್ನು, ಸಕ್ಕರೆ ಹಾಕಿದ ಪದಾರ್ಥಗಳನ್ನು ಕಣ್ಣೆತ್ತಿಯೂ ನೋಡಲ್ಲ.
  • ಕಾಜೊಲ್ ಅಡುಗೆ ಮನೆಯಲ್ಲಿ ಹೈ ಪ್ರೊಟೀನ್ ಪದಾರ್ಥಗಳೇ ಹೆಚ್ಚಿವೆ. ಮಕ್ಕಳಿಗೂ ಆ ಬಗೆಯ ಆರೋಗ್ಯಕರ ಆಹಾರವೇ ಹೆಚ್ಚು ಇಷ್ಟವಾಗುವ ಹಾಗೆ ನೋಡಿಕೊಳ್ಳುತ್ತಾರೆ. 

ಅನಿಲ್ ಕಪೂರ್

ಮೂವತ್ತು ವರ್ಷ ಕೆಳಗಿನ ‘ಮಿಸ್ಟರ್ ಇಂಡಿಯಾ’ದ ಯಂಗ್ ಮ್ಯಾನ್ ಈಗಲೂ ಅದೇ ಯಂಗ್‌ನೆಸ್ ಉಳಿಸಿಕೊಂಡಿದ್ದಾರೆ ಅಂದರೆ ಅದರ ಹಿಂದಿನ ರಹಸ್ಯ ಏನು? ಈ ಪ್ರಶ್ನೆಯನ್ನು ಅನಿಲ್‌ಗೆ ಕೇಳಿದರೆ ಅವರು ಹೇಳೋದು ‘ಖುಷಿ ಖುಷಿಯಾಗಿದ್ರೆ ಯಾರಿಗೂ ವಯಸ್ಸಾಗಲ್ಲ’ ರೋಗ ಬಂದರೆ, ಚಿಂತೆ ಆವರಿಸಿಕೊಂಡರೆ ಯಾರಿಗಾದರೂ ಖುಷಿಯಾಗಿರೋದು ಕಷ್ಟ. ಆದರೆ ಇವ್ಯಾವುವೂ ಹತ್ತಿರ ಸುಳಿಯದಂತೆ ಅನಿಲ್ ಕಪೂರ್ ಆರೋಗ್ಯಕರ ಜೀವನಶೈಲಿ ರೂಢಿಸಿಕೊಂಡಿದ್ದಾರೆ.
ಮೂರು ಗಂಟೆ ಜಿಮ್‌ನಲ್ಲಿ ಬೆವರಿಳಿಸ್ತಾರೆ!: ಇಂಡಸ್ಟ್ರಿಗೆ ಬಂದ ಆರಂಭದ ದಿನಗಳಿಂದ ಇಂದಿನವರೆಗೂ ದಿನದಲ್ಲಿ ಮೂರು ಗಂಟೆ ಜಿಮ್‌ನಲ್ಲಿ ಬೆವರಿಳಿಸ್ತಾರೆ. ಅತ್ಯುತ್ತಮ ಸೈಕಲ್ ಪಟುವೂ ಹೌದು. ರಾತ್ರಿ 11ಕ್ಕೆಲ್ಲ ಮಲಗಿದರೆ ಬೆಳಗಿನ ಜಾಗ ಐದು ಗಂಟೆಗೆ ಏಳೋದು. ಎದ್ದ ಸ್ವಲ್ಪ ಹೊತ್ತಿಗೆ ಫ್ರೆಶ್ ಗಾಳಿಗೆ ಜಾಗಿಂಗ್ ಬಳಿಕ ಸೈಕಲ್ ಹೊಡೆಯೋದು. ಯೋಗ ಮಾಡೋದೂ ಇದೆ.
ಪಂಜಾಬಿ ಫುಡೀ: ವಯಸ್ಸಾಗುತ್ತಿರುವ ಹಾಗೆ ಮೈ ಬಿಗಿ ಕಳೆದುಕೊಳ್ಳುವುದು, ದಪ್ಪಗಾಗೋದು ಸಾಮಾನ್ಯ. ಆದರೆ ಅನಿಲ್ ತೂಕ ಒಂಚೂರೂ ಹೆಚ್ಚಿಲ್ಲ, ಕಮ್ಮಿಯಿಲ್ಲ. ಹಾಗಂತ ತಿನ್ನೋದರಲ್ಲೇ ಕಡಿಮೆ ಮಾಡಿಲ್ಲ. ಪಂಜಾಬಿ ಸ್ಟೈಲ್ ಊಟ ಅಂದರೆ ಬಹಳ ಇಷ್ಟ. ಉಳಿದಂತೆ ಜಂಕ್ ಫುಡ್‌ಗಳಿಂದ ದೂರ. ಸಕ್ಕರೆ, ಡೈರಿ ಪ್ರಾಡಕ್ಟ್ ತಿನ್ನಲ್ಲ. ನಮ್ಮ ಆರೋಗ್ಯದ ದೊಡ್ಡ ವಿಲನ್ ಸಕ್ಕರೆ ಅನ್ನೋದು ಅವರ ನಂಬಿಕೆ. ದೇವರ ದಯದಿಂದ ಬಿ.ಪಿ, ಶುಗರ್‌ನಂಥ ಯಾವ ಸಮಸ್ಯೆಗಳೂ ಇವರಿಗೆ ಬಂದಿಲ್ಲ. ತರಕಾರಿ, ಹಣ್ಣು, ಚಿಕನ್, ಓಟ್ಸ್, ದಾಲ್, ಮೀನು ಇತ್ಯಾದಿಗಳಲ್ಲಿ ದಿನಕ್ಕೆ ಐದು ಬಾರಿ ಸ್ವಲ್ಪ ಸ್ವಲ್ಪ ಊಟ ಮಾಡ್ತಾರೆ. 

ರೇಖಾ

ರೇಖಾಗೆ ಆಗಲೇ 64 ದಾಟಿದೆ. ಆದರೆ ಮದುವೆ, ಮಕ್ಕಳ ಹಂಗಿಲ್ಲದ ದೇಹದ ವಯಸ್ಸು ಎಲ್ಲೋ ತಟಸ್ಥವಾದ ಹಾಗಿದೆ. ಈಕೆ ಸ್ಟೇಜ್ ಮೇಲೆ ಬಂದರೆ ಸಿಳ್ಳೆ, ಚಪ್ಪಾಳೆಗಳಿಗೆ ಕೊರತೆ ಇಲ್ಲ. ರೇಖಾ ಜೊತೆ ಡಾನ್ಸ್ ಮಾಡಲು ಸ್ಟಾರ್ ನಟರ ಪೈಪೋಟಿ. ಈಕೆಯ ನಟನೆ, ಚಾರ್ಮ್, ವರ್ಚಸ್ಸಿಗೆ ಸಿಗುವ ಗೌರವವದು.
ಬ್ಯೂಟಿಗೆ ಅನ್ವರ್ಥ: ಇಂದಿಗೂ ರೇಖಾ ಅವರ ಸೌಂದರ್ಯಪ್ರಜ್ಞೆ ಅಪಾರ. ಮೇಕಪ್ ತೆಗೆಯದೇ ಯಾವತ್ತೂ ಮಲಗಿದ್ದಿಲ್ಲ. ದಿನಾ ಕ್ಲೆನ್ಸಿಂಗ್, ಟೋನಿಂಗ್, ಮಾಯಿಶ್ಚರೈಸಿಂಗ್ ಮಾಡುತ್ತಾರೆ. ಫಳ ಫಳ ಹೊಳೆವ ಚರ್ಮಕ್ಕೆ ಇದೇ ಕಾರಣ. ಇಡೀ ದಿನ ಸಾಕಷ್ಟು ನೀರು ಕುಡಿಯುತ್ತಾರೆ. ಚರ್ಮದಲ್ಲಿ ಆರ್ದ್ರತೆ ಉಳಿದು ಚೈತನ್ಯವಿರಲು ಇದು ಸಹಕಾರಿ. ಕೂದಲಿಗೆ ಹೋಂಮೇಡ್ ಮೊಸರು, ಮೊಟ್ಟೆ, ಜೇನಿನ ಪ್ಯಾಕ್ ಹಾಕುತ್ತಾರೆ. ಇದರಿಂದ ಕೂದಲಿಗೆ ಶೈನಿಂಗ್ ಬಂದಿದೆ.
ಸಿಂಪಲ್ ಎಕ್ಸರ್‌ಸೈಸ್: ದಿನವಿಡೀ ಒಂದಿಲ್ಲೊಂದು ಚಟುವಟಿಕೆಯಲ್ಲಿ ಮುಳುಗಿರುತ್ತಾರೆ. ಅರ್ಧ ಗಂಟೆ ಸಿಂಪಲ್ ಎಕ್ಸರ್‌ಸೈಸ್ ಮಾಡ್ತಾರೆ. ದೇಹದ ಶೇಪ್ ಹಾಳಾಗದ ವರ್ಕೌಟ್ ಮಾಡುತ್ತಾರೆ. ನಿತ್ಯ ತೊಡಗಿಸಿಕೊಳ್ಳುವ ಗಾರ್ಡನಿಂಗ್, ಡಾನ್ಸಿಂಗ್ ಇವರ ಫಿಟ್‌ನೆಸ್‌ಗೆ ತಮ್ಮದೇ ಆದ ಕೊಡುಗೆ ನೀಡಿವೆ. 

ಮಿಲಿಂದ್ ಸೋಮನ್

ಮಿಲಿಂದ್ ಲೈಫ್‌ಸ್ಟೈಲ್ ಉಳಿದ ಸೆಲೆಬ್ರಿಟಿಗಳಿಗಿಂತ ತುಸು ಭಿನ್ನ. ಬಹಳ ಸರಳ ಲೈಫ್‌ಸ್ಟೈಲ್ ಇವರದ್ದು. ಶೂ ಧರಿಸಲ್ಲ. ಸ್ವಂತ ಎರಡೆರಡು ಜಿಮ್ ಇದ್ದರೂ ತಾವೆಂದೂ ಆ ಕಡೆ ಮುಖಮಾಡಿದವರಲ್ಲ. ಹಾಗೆಂದು ಫಿಟ್‌ನೆಸ್ ವಿಷಯದಲ್ಲಿ ಇವರನ್ನು ಮೀರಿಸುವವರಿಲ್ಲ. ನಡಿಗೆ ಉಸಿರಾಟದಷ್ಟೇ ಸರಾಗ. ನೂರಾರು ಕಿಲೋಮೀಟರ್‌ಗಳನ್ನು ಬರಿಗಾಲ ನಡಿಗೆಯ ಮೂಲಕ ಕ್ರಮಿಸಿ ವಿಶ್ವಮಟ್ಟದಲ್ಲಿ ಹೆಸರು ಮಾಡಿದ್ದಾರೆ. ೧೮ನೇ ವಯಸ್ಸಿನಲ್ಲಿ ಎಷ್ಟು ತೂಕವಿತ್ತೋ ಅಷ್ಟೇ ತೂಕವನ್ನು ಈಗಲೂ ಮೈಂಟೇನ್ ಮಾಡಿದ್ದಾರೆ.
ಚಪಲಕ್ಕಿಂತ ಆರೋಗ್ಯ ಮುಖ: ಕರಿದ ತಿಂಡಿಯನ್ನು, ಸಕ್ಕರೆ ಹಾಕಿದ ಪದಾರ್ಥಗಳನ್ನು ಕಣ್ಣೆತ್ತಿಯೂ ನೋಡಲ್ಲ. ಶುದ್ಧ ದೇಸಿ ಆಕಳ ಹಾಲು ಕುಡಿಯೋದು, ಮನೆಯಲ್ಲೇ ಬೆಳೆದ ರಸಾಯನಿಕ ರಹಿತ ತರಕಾರಿ, ಅನ್ನ ತಿನ್ನೋದು ಇವರ ಹವ್ಯಾಸ. ‘ಆರೋಗ್ಯಯುತ ಆಹಾರವನ್ನು ಕಟ್ಟುನಿಟ್ಟಾಗಿ ತಿನ್ನಲು ಶುರು ಮಾಡಿ. ಸ್ವಲ್ಪ ದಿನಕ್ಕೆ ದೇಹ ಅದಕ್ಕೆ ಅಡ್ಜೆಸ್ಟ್ ಆಗುತ್ತೆ. ಆರೋಗ್ಯವೂ ಸುಧಾರಿಸುತ್ತೆ’ ಅಂತಾರೆ ಮಿಲಿಂದ್.
ದೇಹದ ಬಗ್ಗೆ ಪ್ರೀತಿ ಇದೆ: ಈ ಫಿಟ್‌ನೆಸ್ ಐಕಾನ್ ಪ್ರತೀದಿನ ಎಕ್ಸರ್ ಸೈಸ್‌ಗಳನ್ನೇನೂ ಫಾಲೋ ಮಾಡಲ್ಲ. ದಿನಕ್ಕೆ ಹತ್ತೇ ನಿಮಿಷ ವಾಕ್. ಒಮ್ಮೊಮ್ಮೆ ಹುರುಪು ಬಂದಾಗ ಎಷ್ಟೋ ಕಿಲೋಮೀಟರ್ ನಡೆದುಬಿಡುತ್ತಾರೆ. ಒಂದಿಷ್ಟು ವ್ಯಾಯಾಮ ಮಾಡುತ್ತಾರೆ ಅಷ್ಟೇ. ಆದರೂ ಈ ಹೆಲ್ದಿ ದೇಹದ ಬಳಿ ಸುಳಿಯಲು ಬೊಜ್ಜಿಗೂ ಭಯ. ಹುಟ್ಟಿನೊಂದಿಗೆ ವಯಸ್ಸು ನಿರ್ಧರಿಸಬಾರದು, ಬಯೋಲಾಜಿಕಲ್ ಏಜ್ ಅನ್ನೋದಷ್ಟೇ ಸತ್ಯ ಎಂಬುದು ಇವರ ನಂಬಿಕೆ. 

ಐಶ್ವರ್ಯಾ ರೈ

ಈಕೆ ಎವರ್‌ಗ್ರೀನ್ ವಿಶ್ವಸುಂದರಿ. ವಯಸ್ಸು ನಲುವತ್ತೈದು, ಸೌಂದರ್ಯ ತುಸುವೂ ಮಾಸಿಲ್ಲ. ಬೇಡಿಕೆಯೂ ಕುಂದಿಲ್ಲ. ತನಗಿಂತ ಬಹಳ ಕಿರಿಯ ರಣಬೀರ್ ಕಪೂರ್‌ನಂಥ ಹೀರೋಗಳ ಜೊತೆಗೂ ನಟಿಸಿ ಸೈ
ಅನಿಸಿಕೊಂಡಾಕೆ.
ಹಣ್ಣು, ತರಕಾರಿ, ಬ್ರೌನ್ ರೈಸ್‌1: ಪ್ರಗ್ನೆನ್ಸಿ ಸಮಯದಲ್ಲಿ ಬಹಳ ದಪ್ಪಗಾಗಿದ್ದ ಐಶ್ವರ್ಯಾ ಮತ್ತೆ ಹಿಂದಿಗಿಂತಲೂ ಕಡಿಮೆ ಮಟ್ಟಕ್ಕೆ ತೂಕ ಇಳಿಸಿಕೊಂಡಿದ್ದೇ ದೊಡ್ಡ ಕಥೆ. ಇದಕ್ಕೆ ಸ್ಟ್ರಿಕ್ಟ್ ಡಯೆಟ್, ಎಕ್ಸರ್‌ಸೈಸ್ ಮುಖ್ಯ ಕಾರಣ. ಮಂಗಳೂರ  ಬೆಡಗಿಗೆ ಕಡಲ ಮೀನುಗಳನ್ನು ತಿನ್ನೋ ಕ್ರೇಜ್ ಇದೆ. ದಿನವಿಡೀ ಬಹಳ ನೀರು ಕುಡಿಯುತ್ತಾರೆ. ಆಹಾರದಲ್ಲಿ ಪ್ರೊಟೀನ್ ಪ್ರಮಾಣ ಹೆಚ್ಚಿರುವಂತೆ ನೋಡಿಕೊಳ್ಳುತ್ತಾರೆ. ಬೆಳಗಿನ ಉಪಹಾರ ಹೆಚ್ಚಿನ ಪ್ರಮಾಣದಲ್ಲಿದ್ದರೆ, ರಾತ್ರಿ ಬಹಳ ಮಿತವಾಗಿ ತಿನ್ನೋದನ್ನು ರೂಢಿಸಿಕೊಂಡಿದ್ದಾರೆ. ಹಣ್ಣು, ತರಕಾರಿ, ಬ್ರೌನ್ ರೈಸ್ ತಿನ್ನೋದಿಷ್ಟ.
ಜಿಮ್ ಇಷ್ಟ ಆಗಲ್ಲ: ಐಶ್ವರ್ಯಾಗೆ ಮೊದಲಿನಿಂದಲೂ ಜಿಮ್ ಕಂಡರೆ ಅಷ್ಟಕ್ಕಷ್ಟೇ. ಆದರೂ ಅನಿವಾರ್ಯಕ್ಕೆ ಬಿದ್ದು ವಾರಕ್ಕೆ ಎರಡು ಬಾರಿ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಾರೆ. ಮಿತವಾಗಿ ತಿಂದು ಯೋಗಾಭ್ಯಾಸ ಮಾಡುತ್ತಿದ್ದರೆ ದೇಹಕ್ಕೂ, ಮನಸ್ಸಿಗೂ ಅತ್ಯುತ್ತಮ ಅನ್ನೋದು ಅವರ ಅನುಭವದ ನುಡಿ. ಇದಲ್ಲದೇ ಬೆಳಗ್ಗೆ ಜಾಗಿಂಗ್, ಬ್ರಿಸ್ಕ್ ವಾಕ್ ಮಾಡುತ್ತಾರೆ. 45 ನಿಮಿಷಗಳ ಯೋಗ ಹಾಗೂ ಪವರ್ ಯೋಗ ಅಭ್ಯಾಸ ಮಾಡುತ್ತಾರೆ. 

ಕಾಜೊಲ್

ಸ್ನಿಗ್ಧ ಸುಂದರಿ ಕಾಜೊಲ್‌ಗೀಗ ನಲತ್ನಾಲ್ಕು ವಯಸ್ಸು. ಇಬ್ಬರು ಮಕ್ಕಳ ತಾಯಿ ಹೂ ನಗೆ ಬೀರುತ್ತಾ ನಡೆದು ಬರುತ್ತಿದ್ದರೆ ಥೇಟ್ ಡಿಡಿಎಲ್‌ಜೆಯ ಅಂಜಲಿಯೇ. ಆ ಸಿನಿಮಾಕ್ಕೂ ಇಂದಿಗೂ ದಶಕಗಳ ಗ್ಯಾಪ್ ಇದ್ದರೂ ಈಕೆಯ ವಯಸ್ಸು ಅಲ್ಲೇ ನಿಂತ ಹಾಗಿದೆ.
ಬೆಂಗಾಲಿ ಹೆಣ್ಣಿನ ಕಿಚನ್: ಕಾಜೊಲ್ ಅಡುಗೆ ಮನೆಯಲ್ಲಿ ಹೈ ಪ್ರೊಟೀನ್ ಪದಾರ್ಥಗಳೇ ಹೆಚ್ಚಿವೆ. ಮಕ್ಕಳಿಗೂ ಆ ಬಗೆಯ ಆರೋಗ್ಯಕರ ಆಹಾರವೇ ಹೆಚ್ಚು ಇಷ್ಟವಾಗುವ ಹಾಗೆ ನೋಡಿಕೊಳ್ಳುತ್ತಾರೆ. ಎಗ್,ಚಿಕನ್, ನಟ್ಸ್ ಇವರ ಮನೆಯಲ್ಲಿ ಖಾಲಿಯಾಗೋದೇ ಇಲ್ವಂತೆ. ಹಣ್ಣು, ತರಕಾರಿ, ದಾಲ್ ತಿನ್ನೋಕೋ ಇಷ್ಟ. ಆದರೆ ಜಂಕ್‌ಫುಡ್‌ನಿಂದ ದೂರ. ಬೆಳಗ್ಗೆ ಬಾದಾಮಿ ಹಾಲು, ಬ್ಲ್ಯಾಕ್ ಟೀ, ಮಧ್ಯಾಹ್ನ ತರಕಾರಿ ಸಲಾಡ್ ಜೊತೆಗೆ ಸ್ವಲ್ಪ ಅನ್ನ, ಚಪಾತಿ, ಚಿಕನ್. ರಾತ್ರಿಗೆ ಮಿತವಾದ ಉಪಹಾರ.
ಆ್ಯಕ್ಟಿವ್ ಅಮ್ಮ: ಒಮ್ಮೆ ಗುಂಡಗಾಗಿದ್ದ ಕಾಜೊಲ್ ಮತ್ತೆ ಡಿಡಿಎಲ್‌ಜೆ ಅಂಜಲಿ ಶೇಪ್ಗೆ ಬಂದಿದ್ದು ಎರಡು ವರ್ಷಗಳ ಕೆಳಗೆ. ಈಗಲೂ ಅದೇ ಫಿಟ್‌ನೆಸ್ ಇದೆ. ತನ್ನ ಟ್ರೈನರ್ ಮಾತನ್ನು ಚಾಚೂ ತಪ್ಪದೇ ಪಾಲಿಸೋ ಈಕೆ ದಿನಕ್ಕೆ ಒಂದೆರಡು ಗಂಟೆ ವರ್ಕೌಟ್ ಮಾಡುತ್ತಾರೆ. ನೀರಿಗಿಳಿದ್ರೆ ಮೀನಿನ ಹಾಗೆ ಸ್ವಿಮ್ಮಿಂಗ್ ಮಾಡುತ್ತಾರೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಪಕ್ಕಾ ಅಮ್ಮನಾಗಿ ಮಕ್ಕಳ ಜೊತೆಗೆ ಸದಾ ಆ್ಯಕ್ಟಿವ್ ಆಗಿರ್ತಾರೆ. ಮಕ್ಕಳ ಜೊತೆ
ಮಗುವಾಗಿದ್ದು ಬಿಡಿ, ಎಲ್ಲ ಎಕ್ಸರ್‌ಸೈಸ್ಗಳಿಗಿಂತ ಬೇಗ ಸಣ್ಣಗಾಗಿ ಹೆಲ್ದಿಯಾಗಿರ‌್ತೀರಿ ಅನ್ನೋದು ಇವರ ಮಾತು. 

 

click me!