ಕಲಬುರಗಿಗೆ ಕೀರ್ತಿ ತಂದ ಬಂದರವಾಡ ಬಾಲ ವಿಜ್ಞಾನಿಗಳು

By Kannadaprabha News  |  First Published Dec 25, 2018, 12:03 PM IST

ನಮ್ಮ ಆಯುರ್ವೇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸಣ್ಣ ಪುಟ್ಟಕಾಯಿಲೆಗಳಿಂದ ಹಿಡಿದು, ದೊಡ್ಡ ಕಾಯಿಲೆಗಳಿಗೂ ಆಯುರ್ವೇದದಲ್ಲಿ ಮದ್ದಿದೆ. ಆದರೆ ಇಂದು ಇಂಗ್ಲಿಷ್‌ ಔಷಧಗಳು, ಆಧುನಿಕ ಆಸ್ಪತ್ರೆಯ ಸೌಲಭ್ಯಗಳಿಂದ ನಮ್ಮ ಸಾಂಪ್ರದಾಯಿಕ ಔಷಧ ಪದ್ಧತಿ ಮಾಯವಾಗುತ್ತಿರುವ ಹೊತ್ತಿನಲ್ಲಿಯೇ ಅಫಜಲ್ಪುರ ತಾಲೂಕು ಬಂದರವಾಡದ ನವನಾಥ್‌, ವಿಷ್ಣು, ನಿತಿನ್‌ ಎನ್ನುವ ಮೂರು ವಿದ್ಯಾರ್ಥಿಗಳು ಸಾಂಪ್ರದಾಯಿಕ ವೈದ್ಯ ಪದ್ಧತಿಯಲ್ಲಿ ಸಂಶೋಧನೆ ನಡೆಸಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಗೆದ್ದು ಡಿ. 27ರಿಂದ 30 ರವರೆಗೆ ಮೂರು ದಿನಗಳ ಕಾಲ ಒರಿಸ್ಸಾದ ಭುವನೇಶ್ವರದಲ್ಲಿ ನಡೆಯುತ್ತಿರುವ 26ನೇ ವಿಜ್ಞಾನ ಮೇಳಕ್ಕೆ ಆಯ್ಕೆಯಾಗಿದ್ದಾರೆ.


ಶೇಷಮೂರ್ತಿ ಅವಧಾನಿ

‘ನೋಡಿ ತಿಳಿ, ಮಾಡಿ ಕಲಿ’ ಎನ್ನುವುದು ಗುರು ಹಿರಿಯರು ಹೇಳುವ ಮಾತು. ಈ ಮಾತಿನಂತೆಯೇ ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾಲೂಕಿನ ಬಂದರವಾಡ ಸರ್ಕಾರಿ ಹೈಸ್ಕೂಲ್‌ನ ನವನಾಥ ದೊಡ್ಮನಿ, ವಿಷ್ಣು ಹೊಸ್ಮನಿ ಹಾಗೂ ನಿತೀನ್‌ ಶಾಂತಪ್ಪÜ ತಮ್ಮ ಶಾಲೆಯ ವಿಜ್ಞಾನ ಶಿಕ್ಷಕರ ನೆರವಿನಿಂದ ತಮ್ಮೂರಿನ ಪರಿಸರದಲ್ಲಿಯೇ ಅನಾದಿಕಾಲದಿಂದಲೂ ಇರುವಂತಹ ಗಿಡಮೂಲಿಕೆ ಬಳಸಿ ನಡೆಯುವ ಸಾಂಪ್ರದಾಯಿಕ ವೈದ್ಯ ಪದ್ಧತಿ ಬಗ್ಗೆ ಮಾಹಿತಿ ಕಲೆಹಾಕಿ ಜನರಲ್ಲಿ ಅರಿವು ಮೂಡಿಸುತ್ತಾ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಗಮನ ಸೆಳೆದು ಈಗ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ರಾಜ್ಯದ ಕೀರ್ತಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಲು ಮುಂದಾಗಿದ್ದಾರೆ.

Tap to resize

Latest Videos

undefined

ಡಿ.27ರಿಂದ 3 ದಿನಗಳ ಕಾಲ ಒರಿಸ್ಸಾದ ಭುವನೇಶ್ವರದಲ್ಲಿ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ನಡೆಯಲಿದ್ದು, ತಮ್ಮೂರಿನ ಸಾಂಪ್ರದಾಯಿಕ ವೈದ್ಯ ಪದ್ಧತಿ ಬಗ್ಗೆ ಪ್ರಾತ್ಯಕ್ಷಿಕೆ ನೀಡಲು ಸಜ್ಜಾಗಿದ್ದಾರೆ. ‘ಸ್ವಚ್ಛ, ಹಸಿರು ಮತ್ತು ಆರೋಗ್ಯವಂತ ರಾಷ್ಟ್ರಕ್ಕಾಗಿ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರಗಳು’ ಎಂಬುದು 26ನೇ ವಿಜ್ಞಾನ ಮೇಳದ ವಿಷಯವಾಗಿದ್ದು, ಇದೇ ವಿಷಯದ ಮೇಲೆ ತಮ್ಮೂರಿನ ಪರಿಸದಲ್ಲಿಯೇ ಹಾಸುಹೊಕ್ಕಾಗಿರುವ ಸಾಂಪ್ರದಾಯಿಕ ವೈದ್ಯಕೀಯ ಸಂಗತಿಗಳನ್ನೇ ಹೆಕ್ಕಿ ತೆಗೆಯುವ ಮೂಲಕ ಬಂದರವಾಡದ ಗ್ರಾಮೀಣ ಬಾಲ ವಿಜ್ಞಾನಿಗಳಾಗಿ ಹೊರಹೊಮ್ಮಿದ್ದಾರೆ ಈ ಮೂವರು.

ಹಿರಿಯರಿಂದ ಕಲಿತ ಪಾಠ

ಶಾಲೆಯ ವಿಜ್ಞಾನ ಶಿಕ್ಷಕಿ ಸುರೇಖಾ ಜಗನ್ನಾತ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಮಕ್ಕಳು ಬಂದರವಾಡದಲ್ಲೇ ವಾಸವಾಗಿರುವ ಸಾಂಪ್ರದಾಯಿಕ ವೈದ್ಯ ಶಿವಪುತ್ರಪ್ಪ ದೊಡ್ಮನಿ ಅವರ ಸಹಕಾರದಿಂದ ಸುತ್ತಲಿನ ಔಷಧೀಯ ಸಸ್ಯಗಳ, ಗಿಡ ಮೂಲಿಕೆಗಳ ಜ್ಞಾನ ಸಂಪಾದಿಸಿದ್ದಾರೆ. ಇದರ ಜೊತೆಗೆ ಚಿಕ್ಕಪುಟ್ಟಕಾಯಿಲೆಗಳು ಬಾರದಂತೆ ತಡೆಯುವ, ಅಂತಹ ಕಾಯಿಲೆಗಳು ಬಂದಾಗ ಅವುಗಳನ್ನು ಪರಿಹರಿಸಿಕೊಳ್ಳುವ ಕಲೆಯನ್ನೂ ಶಿವಪುತ್ರಪ್ಪ ಅವರಿಂದ ಕರಗತ ಮಾಡಿಕೊಂಡಿದ್ದಾರೆ. ಮುಂದುವರೆದು ಮಧುನಾಶಿನ, ಅರಳೆ, ಆಲ, ಕುಪ್ಪಿ ಗಿಡ, ಕುರಟಿಗ, ಅತಿಬೆಲೆ, ಉಪ್ಪಿನ ಹಣ್ಣು ಮೊದಲಾದ ತರಹೇವಾರಿ ಔಷಧೀಯ ಸಸ್ಯಗಳನ್ನು ಕಲೆಹಾಕಿ ಅವುಗಳ ಪ್ರಯೋಜನದ ಬಗ್ಗೆ ತಾವೇ ಪ್ರಯೋಗ ಮಾಡಿ ಅರಿತು ಸಿದ್ಧಪಡಿಸಿದ ಪ್ರಾತ್ಯಕ್ಷಿಕೆ ಸಾಂಪ್ರದಾಯಿಕ ವೈದ್ಯಕೀಯ ಜಗತ್ತಿನ ಅನೇಕ ಸಂಗತಿಗಳನ್ನು ದಾಖಲಿಸುವಲ್ಲಿ ಯಶ ಕಂಡಿದ್ದಾರೆ ಈ ಬಾಲ ಪ್ರತಿಭೆಗಳು.

ಮನೆಯೇ ಮೊದಲು ಪಾಠಶಾಲೆ, ಜನನಿ ತಾನೆ ಮೊದಲ ಗುರು... ಎಂಬಂತೆ ಇಲ್ಲಿನ ಸಂಶೋಧನೆಯಲ್ಲಿ ನೀತಿನ್‌, ನವನಾಥ ಹಾಗೂ ವಿಷ್ಣು ಮನೆಯೇ ಮೊದಲ ವೈದ್ಯಶಾಲೆ ಆಗಬೇಕು, ಊರಲ್ಲಿರುವ ಗಿಡಮೂಲಿಕೆ ಬಳಸಿ ಚಿಕಿತ್ಸೆ ನೀಡೋ ಹಿರಿಯರೇ ವೈದ್ಯರಾಗಬೇಕು ಎಂದು ತಮ್ಮ ವೈಜ್ಞಾನಿಕ ವಿಧಾನದ ಮೂಲಕ ದಾಖಲಿಸಿರುವ ಪ್ರಾತ್ಯಕ್ಷಿಕೆಯಲ್ಲಿ ಸ್ಪಷ್ಟಸಂದೇಶ ಸಾರಿದ್ದಾರೆ. ಮನುಷ್ಯರನ್ನು, ಪ್ರಾಣಿಗಳನ್ನು ಕಾಡುವ ಅನೇಕ ರೋಗಗಳಿಗೆ ನೈಸರ್ಗಿಕವಾಗಿಯೇ ಮದ್ದು ಇದೆ. ಅದನ್ನು ಗುರುತಿಸಿ ಬಳಸುವುದೇ ಸಾಂಪ್ರದಾಯಿಕ ವೈದ್ಯಕೀಯ. ಗಿಡ ಮೂಲಿಕೆ ಗುರುತಿಸಿ, ಮಹತ್ವ ಅರಿತು ಬಳಸುತ್ತ ಹೋದಲ್ಲಿ ಯಾವುದೇ ಅಡ್ಡ ಪರಿಣಾಮಗಳು ಇಲ್ಲದಂತೆ ದೇಹದ ವ್ಯಾಧಿಗಳಿಗೆ ಪರಿಹಾರ ಕಾಣಬಹುದು ಎಂಬುದನ್ನು ಇವರು ಸಾರಿ ಹೇಳಿದ್ದು, ಈಗ ರಾಷ್ಟ್ರೀಯ ಮಟ್ಟದಲ್ಲಿ ಇದನ್ನುಸಾಭೀತು ಮಾಡಲು ಮುಂದಾಗಿದ್ದಾರೆ.

ಮನೆ ಮತ್ತು ಪರಿಸರದಲ್ಲಿ, ಊರ ಸುತ್ತಮುತ್ತ ಸುಲಭವಾಗಿ ಸಿಗುವ ಔಷಧಿ ಸಸ್ಯಗಳು, ಮೂಲಿಕೆಗಳ ಬಗ್ಗೆ ತಿಳಿದುಕೊಂಡು ಅವುಗಳನ್ನು ನಿತ್ಯ ಬದುಕಿನಲ್ಲಿ ಬಳಸಬೇಕು. ಇದರಿಂದಾಗಿ ಅಗತ್ಯ ಕಾಯಿಲೆಗಳಿಗೆ ಸುಲಭದಲ್ಲಿ ಹಾಗೂ ಅಗ್ಗದ ದರದಲ್ಲಿ, ಅಡ್ಡ ಪರಿಣಾಮವಿಲ್ಲದಂತಹ ಚಿಕಿತ್ಸೆ ಸಿಗುತ್ತದೆ ಎನ್ನುತ್ತಾರೆ ಈ ಮೂವರು ಪೋರರು.

ಇದಕ್ಕೂ ಮೊದಲು ರಾಜ್ಯದೆಲ್ಲೆಡೆಯಿಂದ ಆಗಮಿಸಿದ್ದ 300ಕ್ಕೂ ಹೆಚ್ಚು ವಿಜ್ಞಾನ ಪ್ರಾತ್ಯಕ್ಷಿಕೆಗಳಲ್ಲಿ ಗ್ರಾಮೀಣ (ಕಿರಿಯರ) ವಿಭಾಗದಲ್ಲಿ ಎಲ್ಲರ ಗಮನ ಸೆಳೆದಿದ್ದ ಈ ಮೂವರು ಈಗ ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. ಇವರು ಅಲ್ಲಿಯೂ ಗೆದ್ದು ಬರಲಿ, ಸಾಂಪ್ರದಾಯಿಕ ವೈದ್ಯ ಪದ್ಧತಿಯ ಮಹತ್ವವನ್ನು ಸಾರಿ ಹೇಳಲಿ ಎಂದು ನಾವೂ ಶುಭಹಾರೈಸೋಣ.

ಬಂದರವಾಡ ಶಾಲೆಯ ವಿಜ್ಞಾನ ಶಿಕ್ಷಕಿ ಸುರೇಖಾ ಜಗನ್ನಾಥ ಅವರು ಮೂವರು ಮಕ್ಕಳಿಗೆ ವಿಷಯ, ಕ್ಷೇತ್ರ ಅಧ್ಯಯನದಲ್ಲಿ ಪ್ರಾವೀಣ್ಯತೆ ನೀಡಿ ಅವರೊಂದಿಗೆ ಸಾಂಪ್ರದಾಯದ ವೈದ್ಯಕೀಯ ವಿಷಯಗಳನ್ನು ಕಲೆಹಾಕಿ ಸಾಕಷ್ಟುಶ್ರಮ ಪಟ್ಟಿದ್ದಾರೆ, ಅವರಿಗೆ ಶಾಲೆಯ ಪರವಾಗಿ ನಾವು ಅಭಿನಂದಿಸುತ್ತೇವೆ. ಅವರ ತಂಡ ಭುವನೇಶ್ವರದಲ್ಲಿಯೂ ಜಯಬೇರಿ ಬಾರಿಸುವಂತಾಗಲಿ.- ರಾಜು ಪಾಯದ್‌, ಮುಖ್ಯ ಶಿಕ್ಷಕರು ಬಂದರವಾಡ

click me!