ನಿಮ್ಮ ವರ್ಷ ಹೇಗಿರಬೇಕು ಅಂತ ಯೋಚಿಸಲು ಇದು ಪರ್ಫೆಕ್ಟ್ ಟೈಮ್. ಹಾಗಾಗಿ ವರ್ಷ ಪೂರ್ತಿ ಖುಷಿಯಾಗಿರಿಸುವ ಏಳು ಐಡಿಯಾಗಳನ್ನು ಇಲ್ಲಿ ನೀಡಲಾಗಿದೆ. ಸ್ಫೂರ್ತಿ ನೀಡುವ ಈ ಐಡಿಯಾಗಳು ನಿಮ್ಮ ಬದುಕಿನಲ್ಲಿ ಸಮಾಧಾನ ನೀಡಲಿ. ಹ್ಯಾಪಿ ನ್ಯೂ ಯಿಯರ್.
ಹೊಸ ಹೆಜ್ಜೆ ಇಡುವಾಗ ಆತಂಕ, ಖುಷಿ, ಅಂಜಿಕೆ, ಸಂತೋಷ ಎಲ್ಲವೂ ಇರುತ್ತದೆ. ಅಂಥಾ ಮತ್ತೊಂದು ಆರಂಭದ ಘಳಿಗೆ ಎದುರಾಗಿದೆ. ಹೊಸ ವರ್ಷ ಶುರುವಾಗಿದೆ. ನಿನ್ನೆಯ ನೋವು ನಾಳೆ ಇರಬಾರದು. ಇಂದಿನ ಆತಂಕ ಮುಂದೆ ಜತೆ ಇರಬಾರದು. ಆಗಿದ್ದೆಲ್ಲವನ್ನೂ ಆಚೆ ತಳ್ಳಿ ಹೊಸ ಬದುಕು ಆರಂಭಿಸುವ ಕ್ಷಣಗಳಿವು. ವರ್ಷ ಪೂರ್ತಿ ನೆಮ್ಮದಿ, ಖುಷಿಗಳೇ ಇರಬೇಕು ಅನ್ನುವುದು ಎಲ್ಲರ ಆಸೆ. ಅವೆಲ್ಲವನ್ನೂ ದಕ್ಕಿಸಿಕೊಳ್ಳುವುದಕ್ಕೆ ಸ್ವಲ್ಪ ಬೇರೆ ಥರ ಯೋಚಿಸಬೇಕು. ಹೊಸ ರೀತಿಯ ಕೆಲಸಗಳಲ್ಲಿ ತೊಗಿಸಿಕೊಳ್ಳಬೇಕು.
ಹೊಸತು ಕಲಿಯುವ ಸಮಯ
undefined
ಬಾಲ್ಯದಲ್ಲಿ ಏನೋ ಕಲಿಯುವ ಆಸೆ ಇರುತ್ತದೆ. ಆದರೆ ಆಗ ಕಲಿಯಲು ಆಗಿರಲಿಕ್ಕಿಲ್ಲ. ಅದು ಹೊಸ ಭಾಷೆಯೇ ಆಗಿರಬಹುದು ಅಥವಾ ಅಡುಗೆ ಮಾಡುವುದು ಕಲಿಯುವುದೇ ಆಗಿರಬಹುದು. ಅಂಥ ಆಸೆಗಳ ಪಟ್ಟಿ ತಯಾರಿಸಿ ಮತ್ತು ಈಗಲೇ ಆ ಹೊಸತು ಕಲಿಯುವ ಕ್ಲಾಸುಗಳಿಗೆ ಸೇರಿಕೊಳ್ಳಿಗೆ. ವರ್ಷದ ಕೊನೆಗೆ ನೀವು ಆ ಕಲೆಯಲ್ಲಿ ಮಾಸ್ಟರ್ ಆಗಿರಬೇಕು.
ಜತೆಗಿರಲಿ ಚಂದದ ಯೋಜನೆ
ಕೆಲವರ ವರ್ಷದ ಪ್ಲಾನ್ ಈಗಾಗಲೇ ರೆಡಿಯಾಗಿರಬಹುದು. ಇನ್ನು ಕೆಲವರು ಯೋಚಿಸುತ್ತಲೇ ಬಾಕಿಯಾಗಿರಬಹುದು. ಈಗ ಸಮಯ ಬಂದಿದೆ. ಈ ತಿಂಗಳು ಏನೆಲ್ಲ ಮಾಡಬೇಕು ಅನ್ನುವ ಒಂದು ಯೋಜನೆ ರೆಡಿ ಮಾಡಿಕೊಳ್ಳಿ. ಅದೇ ಥರ ಮಾಡುತ್ತೀರೋ ಇಲ್ಲವೋ ಕನಿಷ್ಠ ಪಕ್ಷ ನೀವು ಯಾವುದಕ್ಕೆ ಆದ್ಯತೆ ನೀಡುತ್ತೀರಿ ಎಂಬುದು ಸ್ಪಷ್ಟವಾಗುತ್ತದೆ.
ವ್ಯಾಯಾಮಕ್ಕೆ ಒಂಚೂರು ಟೈಮು
ಬಹಳಷ್ಟು ಜನರ ಜಿಮ್‌ಗೆ ಹೋಗುವ ಪ್ಲಾನ್ ಕೆಲವೇ ದಿನಕ್ಕೆ ಬದಲಾಗುತ್ತದೆ. ಅದು ಯಾಕೆ ಹಾಗಾಗುತ್ತದೆ ಎಂದರೆ ದೊಡ್ಡದೊಡ್ಡ ಪ್ಲಾನ್‌ಗಳಿಂದಾಗಿ. ಅದಕ್ಕೆ ಬದಲಾಗಿ ಸಣ್ಣ ಸಣ್ಣ ಗೋಲ್ ಇರಲಿ. ಸಿಕ್ಸ್ ಪ್ಯಾಕ್ ಮಾಡಿಕೊಳ್ಳುವ ಆಲೋಚನೆ ಬೇಡ. ಜಾಗಿಂಗ್ ಹೋಗುವುದೇ, ಜುಂಬಾ ಕ್ಲಾಸ್ ಸೇರುವುದೋ ಮಾಡಿ. ಆರಂಭದಲ್ಲಿ ವಾಕಿಂಗ್ ಆದರೂ ಪರ್ವಾಗಿಲ್ಲ.
ಅಪ್ಪ-ಅಮ್ಮನ ಜತೆ ಇರುವುದೇ ಆಶೀರ್ವಾದ
ಒತ್ತಡ ಇದ್ದಿದ್ದೇ. ಕೆಲಸಗಳು ಯಾವಾಗಲೂ ಇರುವುದೇ. ಹಾಗಾಗಿ ಎಂಥಾ ಕೆಲಸ, ಒತ್ತಡವೇ ಇದ್ದರೂ ದಿನಕ್ಕೆ ಸ್ವಲ್ಪ ಸಮಯ ಪೋಷಕರಿಗೆ ಕೊಡಿ. ಅದರಿಂದ ನೀವು ಕಳೆದುಕೊಳ್ಳುವುದೇನಿಲ್ಲ. ಪಡುದುಕೊಳ್ಳುವುದು ದೊಡ್ಡದಿದೆ. ಬದುಕು ಚೆಂದವಾಗಲು ಸಣ್ಣ ಸಣ್ಣ ಖುಷಿ ಬೇಕು. ಅಪ್ಪ-ಅಮ್ಮನ ಜತೆ ಇದ್ದರೆ ಅಪಾರ ಖುಷಿ ಸಿಗುವುದು ನಿಶ್ಚಿತ.
ತಿಂಗಳಿಗೊಂದು ಬುಕ್ಕು
ಯಾವುದು ಓದಲಿ ಎಂಬ ಅನುಮಾನವಿದ್ದರೆ ಗೆಳಯರ ಬಳಿ, ಗೊತ್ತಿರುವವರ ಬಳಿ ಕೇಳಿ ಒಂದು ಪಟ್ಟಿ ತಯಾರಿಸಿ. ದಿನಕ್ಕೊಂದು ಪುಸ್ತಕ ಓದಿ ಅಂತ ಹೇಳುವುದಿಲ್ಲ. ತಿಂಗಳಿಗೆ ಒಂದಾದರೂ ಬುಕ್ಕು ಓದಬೇಕು. ಮೆದುಳು ಚುರುಕಾಗಿರಲು ಇದು ಅವಶ್ಯ. ಆಮೇಲಾಮೇಲೆ ತಿಂಗಳಿಗೆ ಎರಡು ಪುಸ್ತಕ ಓದಬಹುದು. ಈ ಹವ್ಯಾಸ ನಿಮ್ಮನ್ನು ಸೋಲಿಸುವುದಿಲ್ಲ.
ಏಕಾಗ್ರತೆ ಹೆಚ್ಚಿಸುವ ಮಂತ್ರ
ಹಲವಾರು ಕಾರಣಗಳಿಂದ ಏಕಾಗ್ರತೆ ಕಡಿಮೆಯಾಗುವುದು ಸಹಜ. ಅದಕ್ಕಾಗಿ ಪತ್ರಿಕೆಗಳಲ್ಲಿ, ಮ್ಯಾಗಜೀನ್‌ಗಳಲ್ಲಿ ಅಥವಾ ಫೋನ್‌ನಲ್ಲಿ ಮೆದುಳಿಗೆ ಕೆಲಸ ಕೊಡುವ ಪಜಲ್‌ಗಳನ್ನು ಬಿಡಿಸಿ. ಹಾಗಂತ ಯಾವುದೋ ಆಟ ಆಡುವುದಲ್ಲ. ಪದಬಂಧ, ಸುಡೊಕೋ ಇತ್ಯಾದಿಗಳನ್ನು ಆಡುವ ಅಭ್ಯಾಸ ಬೆಳೆಸಿಕೊಂಡರೆ ಏಕಾಗ್ರತೆ ಸಾಧಿಸಬಹುದು.
ರೆಡಿ ಮಾಡಿ ಟ್ರಾವೆಲ್ ಫಂಡ್
ಜಗತ್ತು ಸುತ್ತುನ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಅದಕ್ಕೆ ತಕ್ಕ ಆರ್ಥಿಕ ಬೆಂಬಲ ಇರುವುದಿಲ್ಲ. ಅದಕ್ಕೊಂದು ಐಡಿಯಾ ಇದೆ. ಟೂರ್ ಪ್ಲಾನ್ ಮಾಡಿ ಹಣ ಒಟ್ಟು ಮಾಡುವುದಕ್ಕಿಂತ ಈ ತಿಂಗಳಿನಿಂದಲೇ ಒಂದು ಟ್ರಾವೆಲ್ ಫಂಡ್ ರೆಡಿ ಮಾಡಿ. ಸ್ವಲ್ಪ ಸ್ವಲ್ಪ ದುಡ್ಡು ಹಾಕುತ್ತಾ ಬಂದರೆ ಒಂದು ಹಂತಕ್ಕೆ ದೊಡ್ಡ ಫಂಡ್ ರೆಡಿಯಾಗಲಿದೆ.