ಶೃಂಗೇರಿಯ ಶಾರದಾ ಮಠದ ನೆರವಿನಿಂದ ನೂರಾರು ಮಕ್ಕಳಿಗೆ ಬೆಳಕು

By Kannadaprabha News  |  First Published Dec 31, 2018, 12:28 PM IST

ಸಾಕಷ್ಟು ಅನಾಥಾಶ್ರಮಗಳು, ಶಿಶು ಹಾರೈಕಾ ಕೇಂದ್ರಗಳನ್ನು ನಾವು ಕಂಡಿರುತ್ತವೆ. ಅವರ ಸೇವೆಯನ್ನು ಮೆಚ್ಚಿರುತ್ತೇವೆ. ಸಾಧ್ಯವಾದರೆ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಕೈಲಾದಷ್ಟು ಸಹಾಯವನ್ನೂ ಮಾಡಿರುತ್ತೇವೆ. ಇಲ್ಲಿ ಇದೇ ಸಾಲಿಗೆ ಸೇರಿದರೂ ಕೊಂಚ ಭಿನ್ನವಾದ ಸಂಸ್ಥೆಯೊಂದು ಬೆಂಗಳೂರಿನ ಲಗ್ಗೆರೆಯಲ್ಲಿ ‘ಸೋ ಕೇರ್ ಇಂಡ್’ ಎನ್ನುವ ಹೆಸರಿನೊಂದಿಗೆ ಎರಡು ದಶಕಗಳಿಂದ ಸೇವಾ ನಿರತವಾಗಿದೆ


ಕೆಂಡಪ್ರದಿ

ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ದೊಡ್ಡ ಹುದ್ದೆ ಹೊಂದಿದ್ದ ರಾಘವಾಚಾರಿ ಮಣಿ ಅವರು ನಿತ್ಯವೂ ಆಫೀಸಿಗೆ ಶೇಷಾದ್ರಿ ರಸ್ತೆಯ ಸೆಂಟ್ರಲ್ ಜೈಲ್‌ನ ಮುಂದೆಯಿಂದ ಹೋಗುತ್ತಿದ್ದರು. ಆಗ ಅವರ ಕಣ್ಣಿಗೆ ಜೈಲಿನ ಮುಂದೆ ಸಾಕಷ್ಟು ಪುಟ್ಟ ಪುಟ್ಟ ಮಕ್ಕಳು ಯಾವಾಗಲೂ ಇರುವುದು ಕಾಣಿಸುತ್ತದೆ. ಯಾಕೆ ಈ ಮಕ್ಕಳು ಶಾಲೆಗೆ ಹೋಗದೇ ಇಲ್ಲಿವೆ? ಇಲ್ಲಿ ಇವರಿಗೆ ಏನು ಕೆಲಸ ಎಂದು ವಿಚಾರಿಸಿದಾಗ ಆ ಮಕ್ಕಳ ತಂದೆಯೋ, ತಾಯಿಯೋ ಜೈಲು ಸೇರಿರುವ ವಿಷಯ ತಿಳಿಯುತ್ತದೆ. ಅವರು ಮಾಡಿರುವ ತಪ್ಪಿಗೆ ಅವರು ಶಿಕ್ಷೆ ಅನುಭವಿಸುತ್ತಿರುವುದು ಸರಿ, ಆದರೆ ಏನೂ ತಪ್ಪು ಮಾಡದ ಈ ಮಕ್ಕಳೇಕೆ ಶಿಕ್ಷೆ ಅನುಭವಿಸಬೇಕು ಎಂದು ಯೋಚಿಸಿದ ರಾಘವಾಚಾರಿ ಮಣಿ ಅವರು ಅಂದೇ ನಿರ್ಧರಿಸಿ ಆ ಮಕ್ಕಳಿಗಾಗಿ ‘ಸೋ ಕೇರ್ ಇಂಡ್’ ಸಂಸ್ಥೆ ಹುಟ್ಟು ಹಾಕುತ್ತಾರೆ. ಆ ಸಂಸ್ಥೆಯನ್ನು ಇಂದು ಶೃಂಗೇರಿಯ ಶಾರದಾ ಪೀಠ ನೋಡಿಕೊಳ್ಳುತ್ತಿದೆ. ಇದು ಆ ಸಂಸ್ಥೆಯ ಸೇವಾ ಮಾರ್ಗದ ಕಿರು ದರ್ಶನ. ಅದು ಜೈಲು ಸೇರಿದ ವ್ಯಕ್ತಿಗಳ ಮಕ್ಕಳ ಪಾಲಿಗೆ ವರವಾಗುವ ಮೂಲಕ.

Latest Videos

undefined

ಬಂಧಿಗಳ ಮಕ್ಕಳಿಗೆ ಮಾತ್ರ

ಇಲ್ಲಿ ಸದ್ಯ 164 ಮಕ್ಕಳು ಉಚಿತವಾಗಿ ಶಿಕ್ಷಣ, ಆರೋಗ್ಯ, ವಸತಿ, ಊಟವನ್ನು ಪಡೆಯುತ್ತಾ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವ ನಿಟ್ಟಿನಲ್ಲಿ ತಯಾರಾಗುತ್ತಿದ್ದಾರೆ. ಅದು ಜೈಲು ಸೇರಿದ ಹೆತ್ತವರು, ಪೋಷಕರ ಮಕ್ಕಳಿಗೆ ಮಾತ್ರ ಇಲ್ಲಿ ಅವಕಾಶ. ಒಂದು ವೇಳೆ ಈ ಮಕ್ಕಳು ಸೋ ಕೇರ್‌ಗೆ ಬರದೇ ಇದ್ದಿದ್ದರೆ ಸಮಾಜ ಇವರನ್ನು ಯಾವ ರೀತಿ ನೋಡುತ್ತಿತ್ತೋ, ಅವರ ಭವಿಷ್ಯ ಏನಾಗುತ್ತಿತ್ತೋ ಯಾರೂ ಬಲ್ಲವರಿಲ್ಲ.

ಸ್ವಂತ ಕಟ್ಟಡಕ್ಕೆ ನೆರವಾಗಿ ನಿಂತರು ಶೃಂಗೇರಿ ಶ್ರೀ

ರಾಘವಾಚಾರಿ ಮಣಿ ಅವರು ಬಡ ಕುಟುಂಬದಿಂದ ಬಂದವರು. ಬಡವರ ಕಷ್ಟ ಗೊತ್ತಿದ್ದ ಅವರು ತಮ್ಮ ನಿವೃತ್ತಿ ಜೀವನವನ್ನು ಪೂರ್ಣವಾಗಿ ಮಕ್ಕಳ ಏಳಿಗೆಗಾಗಿಯೇ ವಿನಿಯೋಗಿಸಿದವರು. ಮಕ್ಕಳ ಸಂಖ್ಯೆ ಹೆಚ್ಚಿದಂತೆ, ಅವರಿಗೆ ಶಾಸ್ವತವಾದ ಸಹಾಯ ದೊರೆಯುವಂತೆ ಮಾಡುವ ಸಲುವಾಗಿ 2007ರಲ್ಲಿ ಲಗ್ಗೆರೆಯಲ್ಲಿ ಸ್ವಂತ ಕಟ್ಟಡ ಸ್ಥಾಪಿಸಲು ಮುಂದಾಗುತ್ತಾರೆ. ಆಗ ಸ್ವಂತ ಕಟ್ಟಡಕ್ಕೆ ಸಿಮೆಂಟ್‌ಅನ್ನು ರಿಯಾಯಿತಿ ದರದಲ್ಲಿ ಕೊಡಲು ಸಾಧ್ಯವೇ ಎಂದು ಸಿಮೆಂಟ್ ಕಂಪನಿಯನ್ನು ಕೇಳಲು ಹೋದಾಗ ಅಲ್ಲಿ ಶೃಂಗೇರಿ ಶಾರದಾ ಮಠದವರಿಂದ ನಿಮ್ಮ ಸೇವೆಗೆ ಹೆಚ್ಚಿನ ಸಹಾಯ ದೊರೆದೀತು, ಒಮ್ಮೆ ವಿಚಾರಿಸಿ ಎಂದು ಮಾಲೀಕರು ಹೇಳುತ್ತಾರೆ. ಕೂಡಲೇ ಶೃಂಗೇರಿ ಶಾರದಾ ಪೀಠದ ಭಾರತೀ ತೀರ್ಥ ಸ್ವಾಮೀಜಿಗಳನ್ನು ಸಂಪರ್ಕಿಸಿದಾಗ, ಅವರು ಇಂತಹ ಒಳ್ಳೆಯ ಕೆಲಸಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದು ಪೂರ್ಣವಾಗಿ ಕಟ್ಟಡ ನಿರ್ಮಿಸಿಕೊಡುವ ಜವಾಬ್ದಾರಿ ಹೊತ್ತುಕೊಳ್ಳುತ್ತಾರೆ. ಮತ್ತು ಅಂದಿನಿಂದ ಇಂದಿನ ವರೆಗೂ ಸಂಸ್ಥೆಯನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ.

ವಿ.ಆರ್. ರಮೇಶ್ ಮತ್ತು ಗೌರಿಶಂಕರ್ ಬಂದ ಮೇಲೆ

ಮಣಿ ಅವರು ಕಟ್ಟಿದ ಸಂಸ್ಥೆಯನ್ನು ಶೃಂಗೇರಿ ಶಾರದಾ ಮಠವು ದತ್ತು ಪಡೆದು ಸೇವಾ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವ ಮನಸ್ಸು ಮಾಡುತ್ತದೆ. ಅದಕ್ಕಾಗಿ ಆರ್.ವಿ. ರಮೇಶ್ ಮತ್ತು ಗೌರಿಶಂಕರ್ ಅವರನ್ನು ಶಾರದಾ ಪೀಠ ಸಂಸ್ಥೆಯ ಅಭಿವೃದ್ಧಿಗಾಗಿ ನೇಮಿಸುತ್ತದೆ. ಅದಾದ ಮೇಲೆ ಮಕ್ಕಳ ಸಂಖ್ಯೆಯೂ ಹೆಚ್ಚಿದ್ದು, ಬೆಂಗಳೂರಿನಿಂದ ಆಚೆ ಹೋಗಿ ರಾಜ್ಯದ ಎಲ್ಲಾ ಕಡೆಯಲ್ಲೂ ಇರುವ ಈ ರೀತಿಯ ಮಕ್ಕಳಿಗೆ ಆಶ್ರಯ ನೀಡಿದ್ದಾರೆ. ಅಲ್ಲದೆ ಕಲಬುರಗಿಯಲ್ಲಿಯೂ ಸೇವಾ ಕೇಂದ್ರವನ್ನು ತೆರೆದಿದ್ದಾರೆ. ಮುಂದಿನ ವರ್ಷ ಇಲ್ಲಿಯೂ ಸ್ವಂತ ಕಟ್ಟಡ ಕಟ್ಟುವ ತಯಾರಿ ಈಗಾಗಲೇ ನಡೆದಿದೆ.

ಉತ್ತಮ ಪ್ರಜೆಗಳ ನಿರ್ಮಾಣ

ಯಾರೋ ಮಾಡಿದ ತಪ್ಪಿಗೆ ಮಕ್ಕಳು ಬಲಿಯಾಗುವುದು ಬೇಡ. ಅವರ ಭವಿಷ್ಯ ಮತ್ತಷ್ಟು ಉಜ್ವಲವಾಗಬೇಕು, ಆ ನಿಟ್ಟಿನಲ್ಲಿ ನಾವು ನಿತ್ಯವೂ ಕೆಲಸ ಮಾಡುತ್ತೇವೆ ಎಂದುಕೊಂಡು ಕಾರ್ಯನಿರ್ವಹಿಸುತ್ತಿವೆ ಸೋಕೇರ್ ಸಂಸ್ಥೆ ದೊಡ್ಡ ದೊಡ್ಡ ಕಂಪನಿಗಳು, ನಿವೃತ್ತ ಅಧಿಕಾರಿಗಳು, ಕೆಲವೊಂದಷ್ಟು ದಾನಿಗಳು ಹಾಗು ಮುಖ್ಯವಾಗಿ ಶೃಂಗೇರಿ ಶಾರದಾ ಮಠದ ಶ್ರೀಗಳಾದ ಭಾರತೀ ತೀರ್ಥ ಶ್ರೀಪಾದರ ಆಶೀರ್ವಾದ ಬಲದಿಂದ ಮುಂದೆ ಸಾಗುತ್ತಿದೆ. ಸಂಧ್ಯಾ ಎಸ್. ಕುಮಾರ್ ಅವರೂ ‘ಸುರ್ ಸಂಧ್ಯಾ’ ಎನ್ನುವ ಸಂಗೀತ ಕಾರ್ಯಕ್ರಮ ಮಾಡಿ ಇವರ ಸೇವೆಗೆ ನೆರವಾಗುತ್ತಿದ್ದಾರೆ. ಸಂಸ್ಥೆಯ ಅಧ್ಯಕ್ಷರಾಗಿರುವ ವಿ.ಆರ್. ರಮೇಶ್ ಮತ್ತು ಅವರ ತಂಡದವರಾದ ನಾರಾಯಣನ್, ಎಂ.ಆರ್. ರಾವ್, ಶ್ರೀ ಹರಿ, ವೆಂಕಟನಾಥನ್, ಆಶಾ ನಾರಾಯಣನ್, ನವೀನ್, ಡಾ. ಸುಂದರೇಶನ್, ಸಿಂಗಾರಂ ಮೊದಲಾದವರ ನೆರವಿನಿಂದ ಮಕ್ಕಳ ಪಾಲಿಗೆ ಬೆಳಕು ಹಂಚುತ್ತಿದೆ ಈ ಸಂಸ್ಥೆ. ಅದು ನಿತ್ಯ ನಿರಂತರವಾಗಿ. ಅವರ ಈ ಸೇವೆ ನೀವೂ ಒಂದು ಮೆಚ್ಚುಗೆ ಸೂಚಿಸಿ. ದೂ. 08023321864/08023329774

ಸಂಸ್ಥೆ ಕಟ್ಟಿದ ಸೇವಾ ಮೂರ್ತಿ  ಮಣಿ

ಅದು 90ರ ದಶಕ. ಬೆಂಗಳೂರಿನ ಆರ್‌ಬಿಐ ಕಚೇರಿಯಲ್ಲಿ ಉನ್ನತ ಹುದ್ದೆ ಹೊಂದಿದ್ದ ರಾಘವಾಚಾರಿ ಮಣಿ ಅವರು ನಿತ್ಯವೂ ಶೇಷಾದ್ರಿ ರಸ್ತೆಯಲ್ಲಿ ಓಡಾಡುತ್ತಿದ್ದ ಕಾಲವದು. ಆಗ ಅಲ್ಲಿಯೇ ಸೆಂಟ್ರಲ್ ಜೈಲ್ ಇತ್ತು. ಜೈಲ್ ಮುಂದೆ ಸಾಕಷ್ಟು ಮಂದಿ ಪೊಲೀಸರು, ಲಾಯರ್‌ಗಳು, ಬಂಧಿತರ ಕುಟುಂಬಸ್ಥರು ಇರುತ್ತಿದ್ದರು. ಇವರ ಜೊತೆಗೆ ಪುಟ್ಟ ಪುಟ್ಟ ಮಕ್ಕಳು ಕೂಡ. ಯಾಕೆ ಈ ಮಕ್ಕಳು ಶಾಲೆಗೆ ಹೋಗುವುದು ಬಿಟ್ಟು ಇಲ್ಲಿದ್ದಾರೆ ಎಂದು ವಿಚಾರಿಸಿದ ರಾಘವಾಚಾರಿ ಮಣಿ ಅವರಿಗೆ ಗೊತ್ತಾಗಿದ್ದು ಇವರ ಹೆತ್ತವರೋ, ಪೋಷಕರೋ ಜೈಲು ಸೇರಿದ್ದಾರೆ ಎಂಬುದು. ಇವರನ್ನು ನೋಡಿಕೊಳ್ಳಲು ಯಾರೂ ಇಲ್ಲ ಎನ್ನುವುದು. ಅಂದೇ ಈ ಮಕ್ಕಳಿಗಾಗಿ ಏನಾದರೂ ಮಾಡಬೇಕು ಎಂದು ನಿರ್ಧರಿಸಿ ಮಣಿ ಅವರು ಕೆಲಸದಿಂದ ನಿವೃತ್ತಿಯಾಗುತ್ತಿದ್ದಂತೆಯೇ 1999ರಲ್ಲಿ ಮೂರು ಜನ ಮಕ್ಕಳನ್ನು ದತ್ತು ಪಡೆದು ತಮ್ಮ ಮನೆಯಲ್ಲಿಯೇ ಸಾಕಲು ಮುಂದಾಗುತ್ತಾರೆ. ಇದಕ್ಕೆಲ್ಲಾ ಬೆನ್ನಲುಬಾಗಿ ನಿಂತಿದ್ದು ಮಣಿ ಅವರ ಪತ್ನಿ ಸರೋಜಿ ಮಣಿ. ಹೀಗೆ ದಿನದಿಂದ ದಿನಕ್ಕೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಮನೆಯೇ ಮಕ್ಕಳ ಆರೈಕೆ ಕೇಂದ್ರವಾಗುತ್ತದೆ. ಮುಂದೆ ರಾಜಾಜಿ ನಗರದಲ್ಲಿ ಇದ್ದ ತಮ್ಮ ಮನೆಯಲ್ಲಿಯೇ 30ಕ್ಕೂ ಹೆಚ್ಚು ಹೆಣ್ಣು ಮಕ್ಕಳನ್ನೂ, ಹತ್ತಿರದಲ್ಲೇ ಬಾಡಿಗೆ ಕಟ್ಟಡವನ್ನು ಪಡೆದು ಅಲ್ಲಿ 30ಕ್ಕೂ ಹೆಚ್ಚು ಗಂಡು ಮಕ್ಕಳಿಗೆ ಆಶ್ರಯ ನೀಡುತ್ತಾರೆ. ಇದಕ್ಕಾಗಿ ಅವರು ಬಳಕೆ ಮಾಡಿದ್ದು ತಮ್ಮ ದೀರ್ಘ ಕಾಲದ ಉಳಿತಾಯದ ಹಣ ಮತ್ತು ನಿವೃತ್ತಿ ವೇತನ.

click me!