ಇರಾನ್‌ ಸಿನಿಮಾ ಲೋಕದ ಧ್ರುವ ತಾರೆ ಅಬ್ಬಾಸ್‌ ಕೈರೋಸ್ತಮಿ ಚಿತ್ರಗಳ ವಾಸ್ತವ ಜಗತ್ತು

By Kannadaprabha News  |  First Published Mar 3, 2024, 11:56 AM IST

ಅಬ್ಬಾಸ್‌ ಕೈರೋಸ್ತಮಿ ಇರಾನ್‌ ದೇಶದ ಚಲನಚಿತ್ರ ಕ್ಷೇತ್ರದ ಧ್ರುವ ತಾರೆ ಮತ್ತು ಜೀವಿತ ಕಾಲದಲ್ಲಿಯೇ ದಂತಕಥೆಯಾದವನು. ತನ್ನ ಅಪೂರ್ವವಾದ ಪ್ರತಿಭೆಯಿಂದ ಎಲ್ಲ ಕಾಲಕ್ಕೂ ಸಲ್ಲುವಂಥ ಸಾರ್ವತ್ರಿಕ ಮೌಲ್ಯಗಳನ್ನು ಧ್ವನಿಸುವಂಥ ಚಿತ್ರಗಳನ್ನು ಜಗತ್ತಿಗೆ ಕೊಟ್ಟವನು. ಅವರ ಬಗ್ಗೆ ಎಂ.ಎನ್‌ ಪ್ರಸನ್ನ ಬರೆದಿರುವ ಲೇಖನ ಇಲ್ಲಿದೆ.


- ಎ. ಎನ್.‌ ಪ್ರಸನ್ನ

ಅಬ್ಬಾಸ್‌ ಕೈರೋಸ್ತಮಿ ಇರಾನ್‌ ದೇಶದ ಚಲನಚಿತ್ರ ಕ್ಷೇತ್ರದ ಧ್ರುವ ತಾರೆ ಮತ್ತು ಜೀವಿತ ಕಾಲದಲ್ಲಿಯೇ ದಂತಕಥೆಯಾದವನು. ತನ್ನ ಅಪೂರ್ವವಾದ ಪ್ರತಿಭೆಯಿಂದ ಎಲ್ಲ ಕಾಲಕ್ಕೂ ಸಲ್ಲುವಂಥ ಸಾರ್ವತ್ರಿಕ ಮೌಲ್ಯಗಳನ್ನು ಧ್ವನಿಸುವಂಥ ಚಿತ್ರಗಳನ್ನು ಜಗತ್ತಿಗೆ ಕೊಟ್ಟವನು. 1960ರ ಇರಾನ್‌ನಲ್ಲಿ ಪ್ರಾರಂಭವಾದ ʻಹೊಸ ಅಲೆʼಯ ಪ್ರಭಾವದಿಂದ ಚಿತ್ರಗಳನ್ನು ನಿರ್ಮಿಸಿದ ಮಜಿದ್ ಮಜಿದಿ, ಸಿದ್ದಿಕ್ ಬರ್ಮಾಕ್ ಮುಂತಾದವರಿಗಿಂತ ಭಿನ್ನ ದೃಷ್ಟಿಕೋನಗಳಿಂದ ಮತ್ತು ಅತ್ಯಲ್ಪ ಕಥನ ವಿಸ್ತಾರವಿರುವ ಅಸಾಂಪ್ರದಾಯಿಕ ನಿರೂಪಣಾ ವಿಧಾನಗಳನ್ನು ಅನುಸರಿಸಿದ. 1940ರಲ್ಲಿ ಜನಿಸಿ ಎಪ್ಪತ್ತಾರು ವರ್ಷಗಳ ಬಾಳಿನಲ್ಲಿ ಅವನು ಗುರಿಯಿಟ್ಟು ಗಳಿಸಿದ ಗೆಲುವು ಬೆರಗು ಮೂಡಿಸುವಂಥಾದ್ದು. ಅವನ ಚಿತ್ರಗಳು ಪ್ರೇಕ್ಷಕರಿಗೆ ಸಂಪೂರ್ಣ ತನ್ಮಯರಾಗಲು ಬಿಡದೆ ಬ್ರೆಕ್ಟ್‌ನ ಎಪಿಕ್‌ ಥಿಯೇಟರಿನ ಹಾಗೆ ಕೊಂಚ ಅಂತರವನ್ನು ಉಳಿಸಿಕೊಳ್ಳಲು ಶ್ರಮಿಸುತ್ತವೆ.

Tap to resize

Latest Videos

undefined

ಅವನ ಚಿತ್ರಗಳಲ್ಲಿ ಚಿತ್ರದ ಆಶಯಕ್ಕೆ ಪೂರಕವಾದ ವಾತಾವರಣದ ಸೃಷ್ಟಿ, ತಾತ್ವಿಕ ಅಂಶಗಳನ್ನು ಬಿಂಬಿಸುವ ಪ್ರಧಾನ ಪಾತ್ರಗಳು, ಅತ್ಯಂತ ಸಹಜವೆನಿಸುವ ಸಂಭಾಷಣೆ ಮತ್ತು ಹೆಚ್ಚು ಕಡಿಮೆ ವಾಸ್ತವಗತಿ ಪ್ರಮುಖವೆನಿಸುತ್ತವೆ. ಪ್ರೇಕ್ಷಕನ ಗ್ರಹಿಕೆಗೆ ಹಾಗೂ ಸೂಕ್ಷ್ಮತೆಗೆ ಸವಾಲು ಒಡ್ಡುವಂಥ ಚಿತ್ರಗಳಿಂದ ಅವನ ಸೃಷ್ಟ್ಯಾತ್ಮಕ ಶಕ್ತಿಯ ಪರಿಚಯವಾಗುತ್ತದೆ. ಮನುಷ್ಯನ ಅಂತರಂಗದಲ್ಲಿ ಹುದುಗಿರುವ ಭಾವನೆಗಳ ಏರಿಳಿತವನ್ನು ತೀರಾ ಸರಳವಾದ ನಿರೂಪಣಾ ವಿಧಾನದಿಂದ ಪ್ರಸ್ತುತಪಡಿಸುತ್ತಾನೆ. ಅಷ್ಟಕ್ಕೆ ನಿಲ್ಲದೆ ತೀರ ಗಹನ ವಿಷಯಗಳನ್ನು ಅತ್ಯಂತ ಕಡಿಮೆ ಘಟನೆಗಳನ್ನು ಉಪಯೋಗಿಸಿ ಪ್ರಸ್ತುತಪಡಿಸುವುದು ಕೂಡ ಜೊತೆಯಲ್ಲಿಯೇ ಇರುತ್ತದೆ.

ಕೆವಿ ತಿರುಮಲೇಶ್; ಹೊರನಾಡಿನ ಪರಮ ಕವಿ

ಅಬ್ಬಾಸ್‌ ಕೈರೋಸ್ತಮಿ ಟೆಹ್ರಾನ್‌ನಲ್ಲಿ ಪಾಂಟಿಂಗ್‌ ಮತ್ತು ಗ್ರಾಫಿಕ್‌ ಅಭ್ಯಾಸ ಮಾಡಿ ಸ್ವಲ್ಪ ಕಾಲದ ನಂತರ ಮೊದಲ ʻಮುಸಾಫಿರ್‌ʼ ಚಿತ್ರವನ್ನು 1974ರಲ್ಲಿ ಪ್ರಸ್ತುತಪಡಿಸಿದ. ಅದರಲ್ಲಿ ಟೆಹ್ರಾನ್‌ನಲ್ಲಿ ನಡೆಯುವ ಸಾಕರ್‌ ಮ್ಯಾಚ್‌ ನೋಡಬೇಕೆಂದು ಪ್ರಯತ್ನಿಸಿ ಸಫಲನಾಗುವ ಹಳ್ಳಿಯ ಹುಡುಗನೊಬ್ಬನ ಸಂಕಷ್ಟಗಳನ್ನು ನಿರೂಪಿಸುತ್ತಾನೆ.

1987ರಲ್ಲಿ ಪ್ರಾರಂಭಿಸಿದ ತ್ರಿವಳಿ ಚಿತ್ರಗಳಾದ ‘ವೇರ್‌ ಈಸ್‌ ಮೈ ಫೆಂಡ್ಸ್‌ ಹೋಮ್‌’, ‘ಅಂಡ್‌ ಲೈಫ್‌ ಗೋಸ್‌ ಆನ್‌’(1992) ಮತ್ತು ‘ಥ್ರೂ ದ ಆಲೈವ್‌ ಟ್ರೀಸ್‌’ (1994) ಚಿತ್ರಗಳು ಭೂಕಂಪವನ್ನು ಕುರಿತದ್ದಾಗಿವೆ. ಅವನ ʻಕ್ಲೋಸ್‌ ಅಪ್‌ʼ (1990) ಚಿತ್ರದಲ್ಲಿ ವಿಶ್ವಖ್ಯಾತಿ ಗಳಿಸಿದ ಖ್ಯಾತ ನಟನೊಬ್ಬನನ್ನು ಬಲ್ಲೆನೆಂದು ಶ್ರೀಮಂತನೊಬ್ಬನನ್ನು ಮರಳು ಮಾಡಲು ಪ್ರಯತ್ನಿಸುವ ವ್ಯಕ್ತಿಯ ಕಥನವಿದೆ. ಇದರಲ್ಲಿ ಹೆಸರಾಂತ ನಿರ್ದೇಶಕ ಮೊಹಿಸಿನ್‌ ಮಕ್ಬಲ್‌ಬಫ್‌ ನಟಿಸಿದ್ದು ವಿಶೇಷ. ಚಿತ್ರದ ಪರಿಕಲ್ಪನೆಯಲ್ಲಿ ಇಟಲಿಯ ನವವಾಸ್ತವ ಮಾರ್ಗದ ಅಂಶಗಳು ಎದ್ದು ತೋರುತ್ತವೆ. ವಿಪರ್ಯಾಸದ ಸಂಗತಿಯೆಂದರೆ ಸಾಮಾನ್ಯವಾಗಿ ಪ್ರತಿಷ್ಠಿತವೆಂದು ಪರಿಗಣಿಸುವ ಈ ಚಿತ್ರಕ್ಕೆ ಯಾವ ಪ್ರಶಸ್ತಿ ಪುರಸ್ಕಾರಗಳು ಲಭಿಸಲಿಲ್ಲ.

ಕೃತಕ ಬರಹಗಾರ; ಕಂಪ್ಯೂಟರ್‌ ಕೈ ಬರೆಯುತ್ತದೆ

ಅವನ ಮುಖ್ಯ ಚಿತ್ರಗಳಲ್ಲಿ ಒಂದಾದ ‘ಕ್ಲೋಸ್‌ ಅಪ್‌’ ನಿಜವಾದ ಘಟನೆಯನ್ನು ಅವಲಂಬಿಸಿದೆ. ಇನ್ನೊಂದು ವಿಶೇಷವೆಂದರೆ ಅದರಲ್ಲಿ ಪಾತ್ರವಹಿಸಿದವರೆಲ್ಲರೂ ಸಂಭವಿಸಿದ ಘಟನೆಯಲ್ಲಿ ಪಾಲ್ಗೊಂಡವರು. ಚಿತ್ರದಲ್ಲಿ ಪ್ರಚಲಿತವಾದ ಸ್ಥಳೀಯ ರಾಜಕೀಯ ಮತ್ತು ಸಾಮಾಜಿಕ ವಿಷಯಗಳನ್ನು ತೆರೆದಿಡುವ ಪ್ರಯತ್ನವಿದೆ. ಅನಂತರದ ಪ್ರಮುಖವಾದ ʻಟೇಸ್ಟ್‌ ಆಫ್‌ ಚೆರಿʼ (1997) ಚಿತ್ರದಲ್ಲಿ ಬಾದಿ ಎನ್ನುವನೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಹಾಗೆ ಮಾಡಿಕೊಂಡ ತರುವಾಯ ತನ್ನ ದೇಹವನ್ನು ಹೂಳುವ ವ್ಯಕ್ತಿಯನ್ನು ಹುಡುಕಾಡುತ್ತ ಅಲೆದಾಡುವ ವಿಶಿಷ್ಟ ಚಿತ್ರಣವಿದೆ. ಅವನ 1999ರ ʻದ ವಿಂಡ್‌ ವಿಲ್‌ ಕ್ಯಾರಿ ಅಸ್‌ʼ ಚಿತ್ರ ಇರಾನಿನ ಕುರ್ದಿಸ್ತಾನ್‌ನಲ್ಲಿ ಜೊತೆಗಾರರೊಂದಿಗೆ ತನ್ನದೇ ಅದ ಕಾರಣಗಳಿಗಾಗಿ ಅಲೆದಾಡುವ ಎಂಜಿನಿಯರ್‌ನ ಕಥನವಿದೆ. ಇಡೀ ಚಿತ್ರದಲ್ಲಿ ಅವನ ಜೊತೆಗಾರರು ಕಾಣಿಸಿಕೊಳ್ಳುವುದೇ ಇಲ್ಲ. ಈ ಚಿತ್ರದಲ್ಲಿ ಆ ಪ್ರದೇಶದ ಜನರ ಆಚಾರ, ವಿಚಾರ, ನಂಬಿಕೆ, ವಿಧ್ಯುಕ್ತ ಕ್ರಿಯೆಗಳು ಮುಂತಾದವುಗಳನ್ನು ಸ್ಥಳೀಯರ ಕುತೂಹಲ ಹಾಗೂ ವಿರೋಧದೊಂದಿಗೆ ಪರಿಶೋಧಿಸುವ ಪ್ರಯತ್ನವಿದೆ.

ಅವನ ಇನ್ನೊಂದು ಪ್ರಖ್ಯಾತ ಚಿತ್ರ ʻಸರ್ಟಿಫೈಡ್ ಕಾಪಿʼ ನಿರ್ಮಾಣವಾಗಿರುವುದು ಇಟಲಿಯಲ್ಲಿ. ಇದು ಮುಖ್ಯ ನಟ ಹಾಗೂ ನಟಿ ಪ್ರಯಾಣಿಸುತ್ತ ಸಂಭಾಷಣೆಯೊಂದಿಗೆ ಪರಸ್ಪರರನ್ನು ಅರಿತುಕೊಳ್ಳುವ ಪ್ರಯತ್ನದ ಚಿತ್ರ. ಇದೇ ಬಗೆಯನ್ನು ರಿಚರ್ಡ್ ಲಿಂಕ್ಲೇಟರ್‌ನ ʻಬಿಫೋರ್ ಸನ್‌ ರೈಸ್ʼ ಚಿತ್ರದಲ್ಲಿ ಕೂಡ ಕಾಣುತ್ತೇವೆ. ಆದರೆ ʻಸರ್ಟಿಫೈಡ್ ಕಾಪಿʼ ಲಿಂಕ್ಲೇಟರ್‌ನ ಚಿತ್ರದಷ್ಟು ಸರಳವಾಗಿಲ್ಲ. ಚಿತ್ರ ಆಂಟೋನಿಯೋನಿಯ ಚಿತ್ರಗಳನ್ನು ನೆನಪಿಗೆ ಬರುವಂತೆ ಮಾಡುತ್ತದೆ.

ಚಿತ್ರದ ಪ್ರಮುಖ ನಟ ಮತ್ತು ನಟಿ ಜೇಮ್ಸ್‌ ಮತ್ತು ಎಲ್ಲೆ ಪಯಾಣಿಸುತ್ತಲೇ ಅನೇಕ ಮುಖ್ಯಾಂಶಗಳನ್ನು ತೆರೆದಿಡುವುದನ್ನು ಚಿತ್ರದಲ್ಲಿ ಕಾಣಬಹುದಾದರೂ ಇಲ್ಲಿ ಮಾತು, ಭಾವಚಲನೆ, ಅಭಿನಯ ಮುಂತಾದವು ಸ್ಪಷ್ಟತೆಯಿಂದ ನಿಗೂಢತೆಗೆ ಚಲಿಸುತ್ತದೆ. ಈ ಅಂಶ ಪ್ರಾರಂಭದಲ್ಲಿ ಅಷ್ಟು ಪ್ರಬಲವಾಗಿ ಕಾಣಿಸಿಕೊಳ್ಳದಿದ್ದರೂ ಕ್ರಮೇಣ ಇನ್ನಷ್ಟು ಮತ್ತಷ್ಟು ಪದರಗಳನ್ನು ಸೇರಿಸಿಕೊಳ್ಳುತ್ತಾ ಮುಂದುವರೆಯುತ್ತದೆ. ಮತ್ತು ಗಂಡು-ಹೆಣ್ಣುಗಳ ಮಾತಿನ ಅರ್ಥದಲ್ಲಿ ನಿಗೂಢತೆಯಿದೆ. ಹೀಗೆ ಮಾಡುತ್ತಲೇ ಸತ್ಯ ಯಾವುದು, ಮಿಥ್ಯೆ ಯಾವುದು ಎನ್ನುವುದರ ಪರಿಶೋಧನೆಯಲ್ಲಿ ತೊಡಗಿಕೊಳ್ಳುತ್ತವೆ.

ಅಬ್ಬಾಸ್‌ ಕೈರೋಸ್ತಮಿ ನಲವತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾನೆ ಮತ್ತು ನಲವತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದ್ದಾನೆ.

click me!