ಭಾರತದಲ್ಲಿ ಪ್ರಾಣಿಗಳ ಸುರಕ್ಷತೆ ಹಾಗೂ ಅವುಗಳ ಹಕ್ಕನ್ನು ರಕ್ಷಿಸಲು ಕಾನೂನಿನಲ್ಲಿ ಹಲವು ಕಟ್ಟಳೆಗಳಿವೆ. ಆದರೆ, ಆ ಬಗ್ಗೆ ಬಹುತೇಕ ಪ್ರಜೆಗಳಿಗೆ ಅರಿವೇ ಇಲ್ಲ. ಪ್ರಾಣಿಗಳ ಹಕ್ಕುಗಳ ಬಗ್ಗೆ ಇಲ್ಲಿ ನೀಡಲಾಗಿದೆ.
ಬೀದಿನಾಯಿಗಳನ್ನು ಅವುಗಳಿರುವ ಜಾಗ ಬಿಟ್ಟು ಬೇರೆಡೆಗೆ ಕೊಂಡೊಯ್ದು ಬಿಡುವುದು ಕಾನೂನು ಬಾಹಿರ ಎಂಬುದು ನಿಮಗೆ ಗೊತ್ತೇ? ಅಥವಾ ಪ್ರಾಣಿಗಳ ನಡುವೆ ಕದನ ಏರ್ಪಡಿಸಿ ಮಜಾ ನೋಡುವುದು ತಪ್ಪೆಂಬುದರ ಅರಿವಾದರೂ ಇದೆಯೇ? ಪ್ರಾಣಿಗಳ ಹಕ್ಕನ್ನು ರಕ್ಷಿಸಲು ಮಾಡಿರುವ ಹಲವಾರು ಕಾನೂನುಗಳ ಬಗ್ಗೆ ಜನರಿಗೆ ಮಾಹಿತಿಯೇ ಇಲ್ಲ.
ಕೇರಳದಲ್ಲಿ ಆನೆಗಳ ಬಾಯಿಗೆ ಪಟಾಕಿ ಇಟ್ಟು ಸಿಡಿಸುವುದು, ಉತ್ತರ ಪ್ರದೇಶದಲ್ಲಿ ಹಸುವಿನ ಬಾಯಿಗೆ ಪಟಾಕಿ ಕೊಟ್ಟು ಮಜಾ ನೋಡುವುದು, ನಾಯಿಯ ಬಾಯಿಗೆ ಬಟ್ಟೆ ಕಟ್ಟಿ ವಾರಗಳ ಕಾಲ ಅದಕ್ಕೆ ಆಹಾರ ತಿನ್ನಲಾಗದ ಸ್ಥಿತಿ ನೋಡಿ ಖುಷಿಪಡುವುದು, ಪ್ರಾಣಿಗಳನ್ನು ನಮಗೆ ಬೇಕೆಂದಂತೆ ಬಳಸಿ ಶೋಷಿಸುವುದು ಪ್ರತಿದಿನದ ಸಾಮಾನ್ಯ ವಿಷಯವಾಗಿರುವ ಈ ದಿನಗಳಲ್ಲಿ ಜನರಿಗೆ ಪ್ರಾಣಿಗಳ ಹಕ್ಕು ಕುರಿತು ತಿಳಿಸಬೇಕಿದೆ. ಈ ಭೂಮಿ ಕೇವಲ ಮನುಷ್ಯರಿಗಾಗಿಯಲ್ಲ, ಸಕಲ ಚರಾಚರಗಳಿಗೂ ಸೇರಿ ಸೃಷ್ಟಿಯಾದುದು ಎಂಬುದನ್ನು ಅರ್ಥ ಮಾಡಿಸಬೇಕಿದೆ. ಈ ಪ್ರಾಣಿಗಳ ಹಕ್ಕನ್ನು ತಿಳಿದರೆ ತಪ್ಪು ಮಾಡುವವರಿಗೆ ಅರ್ಥವಾಗಬಹುದು, ತಪ್ಪನ್ನು ನೋಡಿದವರು ಗುರುತಿಸಲು ಸಹಾಯವಾಗಬಹುದು.
undefined
- ಆರ್ಟಿಕಲ್ 51 ಎ ಪ್ರಕಾರ, ಎಲ್ಲ ಜೀವಿಗಳನ್ನೂ ಪ್ರೀತಿಯಿಂದ ಕಾಣಬೇಕಾದುದು ಭಾರತೀಯರ ಮೂಲಭೂತ ಕರ್ತವ್ಯ.
- ಐಪಿಸಿ ಸೆಕ್ಷನ್ 428 ಹಾಗೂ 429ರಂತೆ ಬೀದಿನಾಯಿಗಳು ಸೇರಿದಂತೆ ಯಾವುದೇ ಪ್ರಾಣಿಯನ್ನು ಹತ್ಯೆ ಮಾಡುವುದು ಇಲ್ಲವೇ ಅದಕ್ಕೆ ನೋವುಂಟು ಮಾಡುವುದು ಶಿಕ್ಷಾರ್ಹ ಅಪರಾಧ.
- ಯಾವುದೇ ಪ್ರಾಣಿಯನ್ನು ಯಾವುದೇ ಕಾರಣಕ್ಕಾಗಿ ಒಂಟಿಯಾಗಿಸುವುದು, ಪ್ರತ್ಯೇಕವಾಗಿಸುವುದನ್ನು ಮಾಡಿದರೆ ಮೂರು ತಿಂಗಳವರೆಗೆ ಕಂಬಿ ಎಣಿಸಬೇಕಾಗಬಹುದು.
- ಕಸಾಯಿಖಾನೆ ಹೊರತುಪಡಿಸಿ ಬೇರೆ ಯಾವುದೇ ಸ್ಥಳದಲ್ಲಿ ಕೋಳಿಯೂ ಸೇರಿದಂತೆ ಯಾವುದೇ ಪ್ರಾಣಿಪಕ್ಷಿಗಳನ್ನು ಕೊಲ್ಲುವಂತಿಲ್ಲ. ಅನಾರೋಗ್ಯಪೀಡಿತವಾಗಿರುವ ಹಾಗೂ ಗರ್ಭಿಣಿ ಪ್ರಾಣಿಗಳನ್ನು ಕೊಲ್ಲುವಂತಿಲ್ಲ. ಆಹಾರದ ಸುರಕ್ಷತೆ ದೃಷ್ಟಿಯಿಂದ ಹಾಗೂ ಪ್ರಾಣಿಗಳ ವಿರುದ್ಧ ಕ್ರೂರವಾಗಿ ನಡೆದುಕೊಳ್ಳುವುದನ್ನು ತಡೆಯುವ ಸಲುವಾಗಿ ಈ ನಿಯಮಗಳನ್ನು ಸೇರಿಸಲಾಗಿದೆ.
- ಜನನ ನಿಯಂತ್ರಣಕ್ಕಾಗಿ ಶಸ್ತ್ರಚಿಕಿತ್ಸೆಗೊಳಗಾದ ನಾಯಿಗಳನ್ನು ಹಿಡಿಯುವುದಾಗಲೀ, ಬೇರೆ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಬಿಡುವುದಾಗಲೀ ಮಾಡುವುದು ಅಪರಾಧ. ಅಧಿಕಾರದಲ್ಲಿರುವವರಿಗೆ ಕೂಡಾ ಈ ರೀತಿ ನಡೆದುಕೊಳ್ಳುವ ಹಕ್ಕಿಲ್ಲ.
- 1960ರ ಪಿಸಿಎ ಆಕ್ಯ್ಟ್, ಸೆಕ್ಷನ್ 11(1)(h) ಪ್ರಕಾರ, ಯಾವುದಾದರೂ ಪ್ರಾಣಿಯನ್ನು ಕಡೆಗಣಿಸುವುದು, ಅದಕ್ಕೆ ಅನ್ನ ಆಹಾರ ವಸತಿ ಕೊಡದೆ ಹಿಂಸಿಸುವುದು, ಹೆಚ್ಚಿನ ಗಂಟೆಗಳ ಕಾಲ ಚೈನಿನಿಂದ ಕಟ್ಟಿ ಹಾಕುವುದು ಇವೆಲ್ಲಕ್ಕೂ ಫೈನ್ ಇಲ್ಲವೇ 3 ತಿಂಗಳವರೆಗೆ ಜೈಲಿಗೆ ಹಾಕಬಹುದಾಗಿದೆ.
- ವನ್ಯಜೀವಿ ಕಾಯ್ದೆಯ ಪ್ರಕಾರ ಮಂಗಗಳನ್ನು ಪ್ರದರ್ಶನಕ್ಕೆ ಬಳಸುವುದಾಗಿಲೀ, ಸಾಕುವುದಾಗಲೀ ಮಾಡುವಂತಿಲ್ಲ.
- ಕರಡಿಗಳು, ಮಂಗಗಳು, ಹುಲಿ, ಚಿರತೆ, ಸಿಂಹ ಹಾಗೂ ಕೋಣ, ಗೂಳಿಗಳಿಗೆ ತರಬೇತಿ ನೀಡಿ ಬೀದಿಯಲ್ಲಾಗಲೀ, ಸರ್ಕಸ್ಸಿನಲ್ಲಾಗಲೀ ಮನರಂಜನೆ ಕಾರಣಕ್ಕೆ ಬಳಸುವುದನ್ನು ನಿಷೇಧಿಸಲಾಗಿದೆ.
- ಪ್ರಾಣಿಗಳನ್ನು ಬಲಿ ಕೊಡುವುದು ದೇಶದ ಪ್ರತಿ ಭಾಗದಲ್ಲೂ ಕೂನೂನುಬಾಹಿರವಾಗಿದೆ.
- ಗೂಳಿ ಕಾಳಗ, ಮೇಕೆಗಳ ಕಾಳಗ ಹೀಗೆ ಪ್ರಾಣಿಗಳ ನಡುವೆ ಕದನ ಏರ್ಪಡಿಸುವುದು ಹಾಗೂ ಅದನ್ನು ಪ್ರೇರೇಪಿಸುವುದದು ಎರಡೂ ಶಿಕ್ಷಾರ್ಹ ಅಪರಾಧ.
- ಪ್ರಾಣಿಗಳ ಮೇಲೆ ಪ್ರಸಾದನ ಸಾಮಗ್ರಿಗಳನ್ನು ಪ್ರಯೋಗಿಸುವುದು ಹಾಗೂ ಪ್ರಾಣಿಗಳ ಮೇಲೆ ಪ್ರಯೋಗಿಸಿದ ಪ್ರಸಾದನ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿದೆ.
ಪಾಪದ ಪ್ರಾಣಿಗಳ ಮೇಲೆ ಮೃಗೀಯ ವರ್ತನೆ; ವಿಕೃತಿಯ ವಿರಾಟ ರೂಪ
- ಪ್ರಾಣಿ ಸಂಗ್ರಹಾಲಯಗಳಲ್ಲಿರುವ ಪ್ರಾಣಿಗಳನ್ನು ಕೆರಳಿಸುವುದು, ಅವುಗಳಿಗೆ ಭಂಗ ತರುವುದು, ಆಹಾರ ಕೊಡುವುದು ಹಾಗೂ ಸಂಗ್ರಹಾಲಯ ಆವರಣದಲ್ಲಿ ಕಸ ಹಾಕುವುದು ಮುಂತಾದ್ದನ್ನು ಮಾಡಿದರೆ 25000 ರುಪಾಯಿವರೆಗೆ ದಂಡ ವಿಧಿಸಬಹುದಾಗಿದೆ. ಅಷ್ಟೇ ಅಲ್ಲ, ಮೂರು ವರ್ಷಗಳವರೆಗೆ ಜೈಲಿಗೆ ಹಾಕಲೂಬಹುದು.
- ವನ್ಯಪ್ರಾಣಿಗಳನ್ನು ಹಿಡಿಯುವುದು, ಬಲೆ ಹಾಕುವುದು, ವಿಷ ತಿನ್ನಿಸುವುದು ಅಥವಾ ಬೇಟೆಯಾಡುವುದು ಇಲ್ಲವೇ ಇವೆಲ್ಲಕ್ಕಾಗಿ ಪ್ರಯತ್ನಿಸುವುದು ಕೂಡಾ ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ. ಪಕ್ಷಿಗಳು ಹಾಗೂ ಸರೀಸೃಪಗಳ ಮೊಟ್ಟೆಗಳನ್ನು ಹಾಳು ಮಾಡುವುದು, ಗೂಡುಗಳಿಗೆ ಹಾನಿ ಮಾಡುವುದು, ಅಂಥ ಗೂಡುಗಳಿರುವ ಮರ ಕಡಿಯುವುದು- ಹೀಗೆ ಮಾಡಿದರೆ ಗರಿಷ್ಠ 25000 ದಂಡ ಹಾಗೂ 7 ವರ್ಷಗಳ ಕಾಲ ಸಜೆ ವಿಧಿಸಬಹುದಾಗಿದೆ.
- ಪ್ರಾಣಿಗಳನ್ನು ವಾಹನಗಳಲ್ಲಿ ಅವಕ್ಕೆ ಪೆಟ್ಟಾಗುವಂತೆ, ನೋವಾಗುವಂತೆ ತೆಗೆದುಕೊಂಡು ಹೋದರೆ ಕೂಡಾ ಶಿಕ್ಷೆಗೆ ಒಳಪಡಿಸಬಹುದು.