ಪುತ್ರಿಯರ ಮೇಲೆಯೇ ಕಣ್ಣು ಹಾಕಿದ್ದ ಪತಿ ಹತ್ಯೆ : 18 ದಿನಗಳ ಬಳಿಕ ಬೆಳಕಿಗೆ

By Kannadaprabha NewsFirst Published Mar 2, 2021, 7:17 AM IST
Highlights

ತನ್ನವೇ ಹೆಣ್ಣು ಮಕ್ಕಳು ಬಟ್ಟೆ ಬದಲಾಯಿಸುವುದನ್ನು ಸ್ನಾನ ಮಾಡುವುದನ್ನು ಕದ್ದು ನೋಡುತ್ತಾ ಅವರ ಮೇಲೆ ಕಣ್ಣು ಹಾಕಿದ್ದ ಪತಿಯನ್ನು ಪತ್ನಿಯೇ ಕೊಲ್ಲಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

 ಬೆಂಗಳೂರು (ಮಾ.02):  ವಯಸ್ಸಿಗೆ ಬಂದ ಹೆಣ್ಣು ಮಕ್ಕಳ ಬಳಿ ಅಸಭ್ಯ ವರ್ತನೆ ತೋರುತ್ತಿದ್ದ ಪತಿಯನ್ನು ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ ಪತ್ನಿ ಹಾಗೂ ಪುತ್ರ ಸೇರಿ ಐವರು ಆರೋಪಿಗಳು ರಾಜಗೋಪಾಲನಗರ ಠಾಣೆ ಪೊಲೀಸರಿಗೆ ಸಿಕ್ಕಿ ಬಿದಿದ್ದಾರೆ.

ಹೆಗ್ಗನಹಳ್ಳಿ ನಿವಾಸಿ ಮಹಮ್ಮದ್‌ ಹಂಜಲ(52) ಕೊಲೆಯಾದವ. ಈ ಸಂಬಂಧ ಮೃತನ ಪತ್ನಿ ಸರ್ವರಿ ಬೇಗಂ(42), ಪುತ್ರ ಶಫಿ ರೆಹಮಾನ್‌(20), ಥಣಿಸಂದ್ರದ ನಿವಾಸಿ ಅಫ್ತಾಬ್‌(21), ಪೀಣ್ಯದ ಸೈಯದ್‌ ಅವೆಜ್‌ ಪಾಷಾ(23) ಹಾಗೂ ಮಹಮ್ಮದ್‌ ಸೈಫ್‌(20) ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 98 ಸಾವಿರ ರು. ಜಪ್ತಿ ಮಾಡಲಾಗಿದೆ. ಘಟನೆ ನಡೆದ 18 ದಿನಗಳ ಬಳಿಕ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಇಣುಕಿ ನೋಡುವ ಕೆಟ್ಟಚಾಳಿ:

ಹೆಗ್ಗನಹಳ್ಳಿ ನಿವಾಸಿ ಮಹಮ್ಮದ್‌ ಹಂಜಲ ಚಪ್ಪಲಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಮೃತನಿಗೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಮೂವರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರನಿದ್ದಾನೆ. ಮಹಮ್ಮದ್‌ ಹೆಣ್ಣು ಮಕ್ಕಳು ಬಟ್ಟೆಬದಲಾಯಿಸುವಾಗ, ಸ್ನಾನಕ್ಕೆ ಹೋದಾಗ ಇಣುಕಿ ನೋಡುತ್ತಿದ್ದ. ಈ ಬಗ್ಗೆ ಪತ್ನಿ ಹಲವು ಬಾರಿ ಪತಿಗೆ ಎಚ್ಚರಿಕೆ ನೀಡಿದ್ದರು. ಆದರೂ ಮೃತ ಮಹಮ್ಮದ್‌ ತನ್ನ ಚಾಳಿಯನ್ನು ಬಿಟ್ಟಿರಲಿಲ್ಲ. ಅಲ್ಲದೆ, ಪತ್ನಿಯ ಶೀಲ ಶಂಕಿಸಿ ಆಗಾಗ್ಗೆ ಮಹಮ್ಮದ್‌ ಜಗಳವಾಡುತ್ತಿದ್ದ. ಪತಿಯ ಕೆಟ್ಟವರ್ತನೆಯಿಂದ ಬೇಸತ್ತ ಸರ್ವರಿ ಬೇಗಂ, ಪುತ್ರ ಶಫಿ ಉರ್‌ ರೆಹಮಾನ್‌ ಜತೆ ಸೇರಿ ಕೊಲೆಗೆ ಸಂಚು ರೂಪಿಸಿದ್ದಳು.

ಆಸೆ ತೋರಿಸಿ ಮಹಿಳೆಗೆ ವಂಚಿಸಿದ ಫೇಸ್ಬುಕ್‌ ಗೆಳೆಯ

4.5 ಲಕ್ಷಕ್ಕೆ ಸುಪಾರಿ:

ಸರ್ವರಿ ಬೇಗಂ ಪುತ್ರನೊಂದಿಗೆ ಸೇರಿ ಪತಿ ಹತ್ಯೆ ಮಾಡಲು ಅಫ್ತಾಬ್‌, ಮಹಮ್ಮದ್‌ ಸೈಫ್‌ ಹಾಗೂ ಸೈಯದ್‌ ಅವೆಜ್‌ ಪಾಷಾಗೆ 4.5 ರು.ಗೆ ಸುಪಾರಿ ನೀಡಿದ್ದಳು. ಫೆ.10ರಂದು ರಾತ್ರಿ ಸರ್ವರಿ ಬೇಗಂ ಪತಿಯ ಊಟದಲ್ಲಿ ಆರು ನಿದ್ರೆ ಮಾತ್ರೆ ಬೆರೆಸಿ ಕೊಟ್ಟಿದ್ದಳು. ಊಟ ಮಾಡಿ ಮಹಮ್ಮದ್‌ ನಿದ್ರೆಗೆ ಜಾರಿದ್ದ. ಬೆಳಗಿನ ಜಾವ 3.30ರ ಸುಮಾರಿಗೆ ಆರೋಪಿಗಳು ಮಹಮ್ಮದ್‌ನನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದರು. ಮರುದಿನ ಪತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ಅಲ್ಲದೆ, ಮೃತದೇಹವನ್ನು ತಿಗಳರಪಾಳ್ಯದಲ್ಲಿ ಮಣ್ಣು ಮಾಡಿದ್ದರು ಎಂದು ಪೊಲೀಸರು ತಿಳಿಸಿದರು.

ಸುಪಾರಿ ಹಣ ಕೊಡುವುದು ತಡವಾಗಿದ್ದೇ ಎಡವಟ್ಟಾಯ್ತು!

ಸರ್ವರಿ ಬೇಗಂ ಮತ್ತು ಪುತ್ರ ಸುಪಾರಿ ಪಡೆದಿದ್ದವರಿಗೆ ಒಂದು ಲಕ್ಷ ಹಣ ನೀಡಿದ್ದು, ಉಳಿಕೆ ಹಣ ನೀಡಿರಲಿಲ್ಲ. ಹಣ ಕೇಳಿದರೆ ಸತಾಯಿಸುತ್ತಿದ್ದರು. ಇದರಿಂದ ಅಫ್ತಾಬ್‌ ಈ ವಿಚಾರವನ್ನು ಬೇರೊಬ್ಬ ರೌಡಿಶೀಟರ್‌ ಬಳಿ ಹೇಳಿಕೊಂಡಿದ್ದ. ಈ ವಿಷಯ ಬೇರೆ ಮೂಲಗಳಿಂದ ಪೊಲೀಸರಿಗೆ ತಲುಪಿದೆ.

ಕೂಡಲೇ ಎಸಿಪಿ ರೀನಾ ಎನ್‌.ಸುವರ್ಣ ಹಾಗೂ ಇನ್ಸ್‌ಪೆಕ್ಟರ್‌ ಬಿ.ಐಯ್ಯಣ್ಣ ರೆಡ್ಡಿ ನೇತೃತ್ವದ ತಂಡ ಆರೋಪಿಗಳ ಬಂಧನಕ್ಕೆ ಬಲೆ ಬೀಸಿತ್ತು. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ಮೃತದೇಹವನ್ನು ಹೊರಗೆ ತೆಗೆದು ಮರಣೋತ್ತರ ಪರೀಕ್ಷೆ ನಡೆಸಬೇಕಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇನ್ನು ಬಂಧಿತ ಆರೋಪಿ ಅಫ್ತಾಬ್‌ ವಿರುದ್ಧ ರಾಜಗೋಪಾಲನಗರ ಠಾಣೆಯಲ್ಲಿ ಕೊಲೆ ಯತ್ನ, ತುಮಕೂರು ಟೌನ್‌ ಠಾಣೆಯಲ್ಲಿ ಮೊಬೈಲ್‌ ಕಳವು ಪ್ರಕರಣ ಇದೆ ಎಂದು ಪೊಲೀಸರು ಮಾಹಿತಿ ನೀಡಿದರು.

click me!