Uttara Kannada| ನಿರಂತರ ಮಳೆಗೆ ಬತ್ತದ ಬೆಳೆ ಹಾನಿ, ಕಂಗಾಲಾದ ಅನ್ನದಾತ

By Kannadaprabha NewsFirst Published Nov 8, 2021, 7:56 AM IST
Highlights

*  ಹೆರಾಡಿಯಲ್ಲಿ ಮನೆ, ಮರಕ್ಕೆ ಸಿಡಿಲು ಬಡಿದು ಹಾನಿ
*  ಕರಾವಳಿಯಲ್ಲಿ ಕೊಯ್ಲಿಗೆ ಬಂದ ಬತ್ತ
*  ನಿರಂತರ ಮಳೆಯಿಂದ ರೈತರ ನಿರೀಕ್ಷೆ ಹುಸಿ 

ಕಾರವಾರ(ನ.08):  ಬೆಳಕಿನ ಹಬ್ಬ ದೀಪಾವಳಿ(Deepavali) ಮುಗಿದರೂ ಮಳೆ ಮಾತ್ರ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಜಿಲ್ಲೆಯ ಕರಾವಳಿ(Coastal) ವಿವಿಧೆಡೆ ಬತ್ತದ ಬೆಳೆ ಹಾನಿಗೊಳಗಾಗಿದೆ.

ಕುಮಟಾ(Kumta) ತಾಲೂಕಿನ ಕುಡ್ಲೆ, ಅಂತ್ರವಳ್ಳಿ, ದೀವಗಿ, ಹೊನ್ನಾವರ, ಭಟ್ಕಳ(Bhatkal) ತಾಲೂಕಿನ ವಿವಿಧೆಡೆ, ಅಂಕೋಲಾದ ಗ್ರಾಮೀಣ ಪ್ರದೇಶದಲ್ಲಿ ಬತ್ತದ ತೆನೆಗಳು ನೀರಿನಲ್ಲಿ ಮುಳುಗಿ ಹಾನಿಗೊಳಗಾಗಿದೆ. ವಾರದಿಂದ ಮಳೆ(Rain) ಅಲ್ಲಲ್ಲಿ ಸುರಿಯುತ್ತಿದೆ. ಅದೂ ಗುಡುಗು ಮಿಂಚಿನ ಅಬ್ಬರದೊಂದಿಗೆ ಭಾರಿ ಮಳೆಯೂ ಬಿದ್ದಿದೆ.

ಈ ಬಾರಿ ಬತ್ತದ(Paddy) ಬೆಳೆ ಹುಲುಸಾಗಿ ಬಂದಿತ್ತು. ರೈತರು(Farmers) ಬೆಳೆಯ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಂಡು ಬೆಳೆ ಕೊಯ್ಲಿನ ಸಿದ್ಧತೆ ನಡೆಸುತ್ತಿದ್ದರು. ಅಷ್ಟರಲ್ಲಿ ಮಳೆ ಶುರುವಾಯಿತು. ತೊನೆದಾಡುತ್ತಿದ್ದ ತೆನೆಗಳು ನೆಲಕ್ಕೊರಗಿ ನೀರಿನಲ್ಲಿ ಮುಳುಗಿದ್ದರಿಂದ ಬೆಳೆ(Crop) ಹಾನಿಗೊಳಗಾಗುವಂತಾಯಿತು.

ಕೋಲಾರ ಜಿಲ್ಲೆಯಲ್ಲಿ ವ್ಯಾಪಕ ಮಳೆ : ಭಾರೀ ಬೆಳೆ ಹಾನಿ

ಮಳೆ ಇನ್ನೂ ಮುಗಿದಿಲ್ಲ. ಅಲ್ಲಲ್ಲಿ ಬೀಳುತ್ತಲೇ ಇದೆ. ಇದರಿಂದ ರೈತರ ನಿರೀಕ್ಷೆ ಹುಸಿಯಾಗುತ್ತಿದೆ. ಬಂಪರ್‌ ಬೆಳೆಯ ಕನಸಿನಲ್ಲಿದ್ದ ರೈತರಿಗೆ ಮಳೆ ಬಿಟ್ಟು ಬಿಡದೆ ಕಾಡುತ್ತಿದೆ. ಕೊರೋನಾ(Coronavirus) ಹಾವಳಿಯಿಂದ ರೈತರು ತೀವ್ರ ತೊಂದರೆಗೊಳಗಾಗಿದ್ದರು. ಅದರ ನಡುವೆ ಕಾಳಿ, ಗಂಗಾವಳಿ ಹಾಗೂ ಅಘನಾಶಿನಿ ನದಿಗಳ(River) ಗುಂಟ ಉಂಟಾದ ಪ್ರವಾಹ ರೈತರನ್ನು ಹಿಂಡಿ ಹಿಪ್ಪೆ ಮಾಡಿತು. ಈ ಬಾರಿಯಾದರೂ ಬದುಕು ಕಟ್ಟಿಕೊಳ್ಳಬಹುದೆಂದು ರೈತರ ನಿರೀಕ್ಷೆ ಮತ್ತೆ ಅದೇ ಮಳೆಯಿಂದಾಗಿ ಮಣ್ಣುಪಾಲಾಗುತ್ತಿದೆ.

ದೀಪಾವಳಿ ಸಂದರ್ಭದಲ್ಲಿ ಮಳೆ ಬರುವುದು ತುಂಬ ಅಪರೂಪ. ಈ ಬಾರಿ ಸತತವಾಗಿ ಮಳೆ ಸುರಿಯುತ್ತಿದೆ. ಹಬ್ಬದ ಸಡಗರವನ್ನೂ ಮಳೆ ಕಿತ್ತುಕೊಂಡಿದ್ದರೆ, ಈಗ ರೈತರ ಸಂಭ್ರಮಕ್ಕೂ ಮಳೆ ತಣ್ಣೀರೆರಚಿದೆ.ಉತ್ತರ ಕನ್ನಡದಲ್ಲಿ(Uttara Kannada) ಅಡಕೆ ಪ್ರಮುಖ ವಾಣಿಜ್ಯ ಬೆಳೆ. ಅದನ್ನು ಬಿಟ್ಟರೆ ಬತ್ತವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಘಟ್ಟದ ಮೇಲಿನ ತಾಲೂಕುಗಳಲ್ಲಿ ವಿಳಂಬವಾಗಿ ಬಿತ್ತನೆಯಾಗುವುದರಿಂದ ಬತ್ತ ಕೊಯ್ಲಿಗೆ ಬಂದಿಲ್ಲ. ಆದರೆ ಕರಾವಳಿಯಲ್ಲೀಗ ಬತ್ತದ ಕೊಯ್ಲಿನ ಭರಾಟೆಯ ದಿನಗಳಲ್ಲಿ ಮಳೆಯ ಅಬ್ಬರ ಹೆಚ್ಚಿದೆ.

ಜಿಲ್ಲೆಯ ಕರಾವಳಿಯಲ್ಲಿ ಬತ್ತ ಕೊಯ್ಲಿಗೆ ಬಂದಿದೆ. ಅಲ್ಲಲ್ಲಿ ಮಳೆಯಾಗುತ್ತಿದೆ. ಇದರಿಂದ ಸಹಜವಾಗಿ ಕೊಯ್ಲನ್ನು ಮುಂದೂಡಲಾಗುತ್ತದೆ. ಜತೆಗೆ ಬೆಳೆಹಾನಿ ಸಾಧ್ಯತೆಯೂ ಇದೆ. ಬೆಳೆ ಹಾನಿ ಆದವರಿಂದ ಅರ್ಜಿ ಪಡೆಯಲು ಅಧಿಕಾರಿಗಳಿಗೆ ಈಗಾಗಲೆ ಸೂಚನೆ ನೀಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೌಡ ತಿಳಿಸಿದ್ದಾರೆ.  

ಹೆರಾಡಿಯಲ್ಲಿ ಮನೆ, ಮರಕ್ಕೆ ಸಿಡಿಲು ಬಡಿದು ಹಾನಿ

ಭಟ್ಕಳ ತಾಲೂಕಿನ ಕಾಯ್ಕಿಣಿಯ ಹೆರಾಡಿಯಲ್ಲಿ ವ್ಯಕ್ತಿಯೊಬ್ಬರ ಮನೆ ಸೇರಿದಂತೆ ಮರಗಳಿಗೆ ಸಿಡಿಲು(Lightning Strikes) ಬಡಿದು ಅಪಾರ ಹಾನಿಯಾದ ಬಗ್ಗೆ ಘಟನೆ ನಡೆದಿದೆ.

ಹೆರಾಡಿಯ ಮಂಜುನಾಥ ದೇವಪ್ಪ ಶೆಟ್ಟಿ ಎಂಬುವರ ಮನೆಗೆ ಸಿಡಿಲು ಬಡಿದಿದ್ದು, ವಿದ್ಯುತ್‌ ವೈರ್‌ ಸೇರಿದಂತೆ ಸಲಕರಣೆಗಳು ಸುಟ್ಟು ಕರಕಲಾಗಿವೆ. ಅಲ್ಲದೆ, ತೋಟದಲ್ಲಿನ ತೆಂಗು, ಅಡಿಕೆ ಮರಕ್ಕೂ ಸಿಡಿಲು ಬಡಿದಿದೆ. ಏಕಾಏಕಿ ಸಿಡಿಲು ಬಡಿದಿದ್ದರಿಂದ ಮನೆಯಲ್ಲಿದ್ದವರು ಗಾಬರಿಗೊಂಡಿದ್ದರು. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದ್ದಾರೆ.

ಅಕಾಲಿಕ ಮಳೆಗೆ ತತ್ತರಿಸಿದ ಕರುನಾಡು : ಅಪಾರ ಬೆಳೆ ನಷ್ಟ

ಗುಡುಗು ಸಿಡಿಲಿಗೆ 20 ಅಡಕೆ ಮರ, ಎರಡು ಮನೆಗಳಿಗೆ ಹಾನಿ

ಅನಿರೀಕ್ಷಿತ ಮಳೆಯ ನಾಲ್ಕನೇ ದಿನ ಶನಿವಾರವೂ ಉಡುಪಿ(Udupi) ಜಿಲ್ಲಾದ್ಯಂತ ಸಾಧಾರಣ ಮಳೆಯಾಗಿದೆ. ಮಳೆಯ ಜೊತೆ ಗುಡುಗು ಸಿಡಿಲಿಗೆ ಕಾರ್ಕಳ ತಾಲೂಕಿನ ಕುಕ್ಕುಜೆ ಗ್ರಾಮದ ಸುಧಾಕರ ಶೆಟ್ಟಿಅವರ 20 ಅಡಕೆ ಮರಗಳು ಬಲಿಯಾಗಿವೆ. ಅಲ್ಲದೆ ಕಾರ್ಕಳ ತಾಲೂಕಿನ ಕುಕ್ಕುಜೆ ಗ್ರಾಮದ ಪಿಜಿನ ಎಂಬವರ ಮನೆಗೆ ಸಿಡಿಲು ಬಡಿದು 10,000 ರು. ಮತ್ತು ಎಳ್ಳಾರೆ ಗ್ರಾಮದ ರತ್ನಾವತಿ ದೇವಕಾರಿ ಅವರ ಮನೆಗೆ ಸಿಡಿಲು ಬಡಿದು 10,000 ರು. ನಷ್ಟವಾಗಿದೆ. 
ಭಾನುವಾರ ಮುಂಜಾನೆವರೆಗೆ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 19.60 ಮಿ.ಮೀ. ಮಳೆಯಾಗಿದೆ. ತಾಲೂಕುವಾರು ಉಡುಪಿ 15.10, ಬ್ರಹ್ಮಾವರ 10.10, ಕಾಪು 16.90, ಕುಂದಾಪುರ 25.70, ಬೈಂದೂರು 29.30, ಕಾರ್ಕಳ 18.00 ಮತ್ತು ಹೆಬ್ರಿ 10.9 ಮಿ.ಮೀ ಮಳೆ ಆಗಿದೆ.

ಹವಾಮಾನ ಇಲಾಖೆ(Department of Meteorology) ಕರಾವಳಿಯಲ್ಲಿ ಎರಡು ದಿನ ಯೆಲ್ಲೋ ಅಲರ್ಟ್‌(Yellow Alert) ಘೋಷಿಸಿದರೂ ದ.ಕ. ಜಿಲ್ಲೆಯಲ್ಲಿ ಭಾನುವಾರ ಮಳೆ ದೂರವಾಗಿತ್ತು. ಆದರೆ ನಸುಕಿನ ಜಾವ ದ.ಕ. ಜಿಲ್ಲೆಯ ಅಲ್ಲಲ್ಲಿ ತುಂತುರು ಮಳೆಯಾಗಿದೆ. ಹಗಲು ಹೊತ್ತು ಇಡೀ ದಿನ ಬಿಸಿಲು ಕಂಡುಬಂದಿದ್ದು, ಗ್ರಾಮೀಣ ಭಾಗದಲ್ಲಿ ಮೋಡ, ಬಿಸಿಲು ವಾತಾವರಣ ಇತ್ತು.

ಕಡಬದಲ್ಲಿ ಗರಿಷ್ಠ ಮಳೆ:

ಭಾನುವಾರ ಬೆಳಗ್ಗಿನ ವರೆಗೆ ಜಿಲ್ಲೆಯ ಕಡಬದಲ್ಲಿ ಗರಿಷ್ಠ 59.8 ಮಿಲಿ ಮೀಟರ್‌ ಮಳೆ ದಾಖಲಾಗಿದೆ. ಬೆಳ್ತಂಗಡಿ 32.7 ಮಿ.ಮೀ, ಬಂಟ್ವಾಳ 11 ಮಿ.ಮೀ, ಮಂಗಳೂರು(Mangaluru) 22.8 ಮಿ.ಮೀ, ಪುತ್ತೂರು 21.9 ಮಿ.ಮೀ, ಸುಳ್ಯ 56.6 ಮಿ.ಮೀ, ಮೂಡುಬಿದಿರೆ 12.4 ಮಿ.ಮೀ. ಮಳೆಯಾಗಿದ್ದು, ದಿನದ ಸರಾಸರಿ ಮಳೆ 33.8 ಮಿ.ಮೀ. ದಾಖಲಾಗಿದೆ.
 

click me!