ಚನ್ನಪಟ್ಟಣ ಬೈಎಲೆಕ್ಷನ್‌: ಡಿಕೆಶಿಗೆ ಹೆಚ್ಚಿದ ಪ್ರಾಬಲ್ಯ, ಕುಮಾರಸ್ವಾಮಿಗೆ ಭಾರೀ ಹಿನ್ನಡೆ!

By Kannadaprabha News  |  First Published Nov 24, 2024, 9:44 PM IST

ಚನ್ನಪಟ್ಟಣ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ಪಡೆಯುವುದು ಜೆಡಿಎಸ್ ಹಾಗೂ ಕಾಂಗ್ರೆಸ್ ಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಹಾಗಾಗಿ ಉಪಚುನಾವಣೆ ಸೋಲು ದೇವೇಗೌಡರ ಕುಟುಂಬಕ್ಕೆ ಭಾರಿ ಮುಖಭಂಗ ಉಂಟಾಗುವಂತೆ ಮಾಡಿದೆ.


ರಾಮನಗರ(ನ.24):  ಜಿದ್ದಾ ಜಿದ್ದಿನ ರಾಜಕಾರಣಕ್ಕೆ ಹೆಸರಾದ ಬೊಂಬೆನಾಡು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಫಲಿತಾಂಶ ಕೆಪಿಸಿಸಿ ಅಧ್ಯಕ್ಷರಾದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಾಬಲ್ಯ ಹೆಚ್ಚಿಸಿದರೆ, ಜೆಡಿಎಸ್ ನಾಯಕರಾದ ಕೇಂದ್ರ ಸಚಿವ ಕುಮಾರಸ್ವಾಮಿ ತೀವ್ರ ಹಿನ್ನಡೆ ಅನುಭವಿಸಿದ್ದಾರೆ.

ಈ ಉಪ ಚುನಾವಣೆಯಲ್ಲಿ ಮೇಲ್ನೋಟಕ್ಕೆ ಜೆಡಿಎಸ್ ನಿಂದ ನಿಖಿಲ್ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಿಂದ ಯೋಗೇಶ್ವರ್ ಅಭ್ಯರ್ಥಿಗಳಾಗಿದ್ದರು ಸಹ ಮಾಜಿ ಪ್ರಧಾನಿ ದೇವೇಗೌಡ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ಕದನ ಎಂಬಂತೆ ಬಿಂಬಿತವಾಗಿತ್ತು. ಹೀಗಾಗಿ ಚನ್ನಪಟ್ಟಣ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ಪಡೆಯುವುದು ಜೆಡಿಎಸ್ ಹಾಗೂ ಕಾಂಗ್ರೆಸ್ ಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಹಾಗಾಗಿ ಉಪಚುನಾವಣೆ ಸೋಲು ದೇವೇಗೌಡರ ಕುಟುಂಬಕ್ಕೆ ಭಾರಿ ಮುಖಭಂಗ ಉಂಟಾಗುವಂತೆ ಮಾಡಿದೆ.

Tap to resize

Latest Videos

ಚನ್ನಪಟ್ಟಣ ಉಪಚುನಾವಣೆ: ರೇಷ್ಮೆ ನಾಡಲ್ಲಿ ದಳಪತಿ ಭದ್ರಕೋಟೆ ಧ್ವಂಸ!

2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ, ಮಾಗಡಿ, ಕನಕಪುರ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಪಾಳಯಕ್ಕೆ ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಯಲ್ಲಿ ಯೋಗೇಶ್ವರ್ ಗೆಲುವು ಮತ್ತಷ್ಟು ಶಕ್ತಿ ತುಂಬಿದಂತಾಗಿದೆ. ನಾಲ್ಕು ಕ್ಷೇತ್ರಗಳಲ್ಲಿಯೂ ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಜಿಲ್ಲೆಯಲ್ಲಿ ಪ್ರಾಬಲ್ಯ ಮೆರೆದಿದೆ.

ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ, ವಿಧಾನ ಪರಿಷತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಗೆದ್ದು ಬೀಗುತ್ತಿದ್ದ ಕಾಂಗ್ರೆಸ್ ನ ಗೆಲುವಿನ ಓಟಕ್ಕೆ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಲೋಕಸಭಾ ಚುನಾವಣೆಯಲ್ಲಿ ಬ್ರೇಕ್ ಹಾಕುವಲ್ಲಿ ಯಶಸ್ವಿಯಾಗಿದ್ದರು. ಆದರೀಗ ಚನ್ನಪಟ್ಟಣ ಉಪಚುನಾವಣೆಯಲ್ಲಿ ಗೆಲುವಿನ ಮೂಲಕ ಜೆಡಿಎಸ್ ನ ಭದ್ರಕೋಟೆಯನ್ನು ಬೇಧಿಸಿ ಕಾಂಗ್ರೆಸ್ ಬಾವುಟ ಹಾರಿಸುವಲ್ಲಿ ಯಶಸ್ವಿಯಾಗಿದೆ.

ಮಗನ ಹ್ಯಾಟ್ರಿಕ್ ಸೋಲು ತಪ್ಪಿಸಲಾಗದ ತಂದೆ:

ಕಳೆದ ಒಂದು ದಶಕದಿಂದ ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವೇ ಪಾರುಪತ್ಯ ಮೆರೆಯುತ್ತಿತ್ತು. ಕೇಂದ್ರ ಸಚಿವ ಕುಮಾರಸ್ವಾಮಿ ಕ್ಷೇತ್ರದಲ್ಲಿ ಹಿಡಿತ ಸಾಧಿಸುತ್ತಾ ಬಂದಿದ್ದರು. ಮಂಡ್ಯ ಸಂಸತ್ ಕ್ಷೇತ್ರ ಚುನಾವಣೆಯಲ್ಲಿ ಸೋತಿದ್ದ ಪುತ್ರ ನಿಖಿಲ್ ಅವರಿಗೆ 2013ರ ಚುನಾವಣೆಯಲ್ಲಿ ತಾಯಿ ಅನಿತಾರವರು ರಾಮನಗರ ಕ್ಷೇತ್ರ ತ್ಯಾಗ ಮಾಡಿದ್ದರು. ಕಾಂಗ್ರೆಸ್‌ನಿಂದ ಹುರಿಯಾಳಾಗಿದ್ದ ಇಕ್ಬಾಲ್ ಹುಸೇನ್ ಎದುರು ನಿಖಿಲ್‌ನನ್ನು ಗೆಲ್ಲಿಸಿಕೊಳ್ಳುವಲ್ಲಿ ತಂದೆ ಕುಮಾರಸ್ವಾಮಿ ಎಡವಿದ್ದರು.

ಇನ್ನು ತಾವೇ ಪ್ರತಿನಿಧಿಸಿದ್ದ ಚನ್ನಪಟ್ಟಣ ಕ್ಷೇತ್ರದಿಂದ ನಿಖಿಲ್ ಅವರನ್ನು ಕುಮಾರಸ್ವಾಮಿ ಕಣಕ್ಕಿಳಿಸಿದ್ದರು. ತಾತ ದೇವೇಗೌಡ, ತಂದೆ ಕುಮಾರಸ್ವಾಮಿ, ತಾಯಿ ಅನಿತಾ, ಪತ್ನಿ ರೇವತಿ ಸೇರಿದಂತೆ ದೋಸ್ತಿ ಪಕ್ಷಗಳ ಘಟಾನುಘಟಿ ನಾಯಕರು ಪ್ರಚಾರ ನಡೆಸಿದ್ದರು. ಆದರೂ ನಿಖಿಲ್ ಹ್ಯಾಟ್ರಿಕ್ ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.

ಒಂದೂವರೆ ದಶಕದ ಬಳಿಕ ಬೊಂಬೆನಾಡು ಕೈವಶ :

ಬೊಂಬೆನಾಡು ಚನ್ನಪಟ್ಟಣ ಕ್ಷೇತ್ರದಲ್ಲಿ ಕಳೆದ ಎರಡು ಚುನಾವಣೆಗಳಿಂದ ಜೆಡಿಎಸ್ ಗೆಲುವು ಸಾಧಿಸಿತ್ತು. 2018 ಮತ್ತು 2023ರಲ್ಲಿ ಜೆಡಿಎಸ್ ನಿಂದ ಗೆದ್ದಿದ್ದ ಕುಮಾರಸ್ವಾಮಿರವರು 2024ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರಕ್ಕೆ ವಲಸೆ ಹೋಗಿ ಗೆದ್ದು ಕೇಂದ್ರ ಸಚಿವ ಸ್ಥಾನವನ್ನು ಅಲಂಕರಿಸಿದರು. ತೆರವಾಗಿದ್ದ ಚನ್ನಪಟ್ಟಣ ಕ್ಷೇತ್ರದಲ್ಲಿ ಪುತ್ರ ನಿಖಿಲ್ ಅವರನ್ನು ಪ್ರತಿಷ್ಠಾಪಿಸಿ ರಾಜಕೀಯ ಭವಿಷ್ಯ ರೂಪಿಸಲು ಕುಮಾರಸ್ವಾಮಿ ಇನ್ನಿಲ್ಲದ ಕಸರತ್ತು ನಡೆಸಿದ್ದರು. ಆದರೆ, ಯೋಗೇಶ್ವರ್ ರವರು ಗೆಲುವಿನ ನಗೆ ಬೀರಿ ಚನ್ನಪಟ್ಟಣವನ್ನು ಒಂದೂವರೆ ದಶಕಗಳ ನಂತರ ಕೈ ವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಫಲ ನೀಡದ ದೋಸ್ತಿ ರಾಜಕಾರಣ:

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿ ಮ್ಯಾಜಿಕ್ ಮಾಡುವಲ್ಲಿ ಸೋತಿದೆ. ಬಿಜೆಪಿ ಪಾಲಿಗೆ ಪ್ರಬಲ ನಾಯಕರಾಗಿದ್ದ ಯೋಗೇಶ್ವರ್ ರಾತ್ರೋರಾತ್ರಿ ಕಾಂಗ್ರೆಸ್ ಗೆ ಪಕ್ಷಾಂತರ ಮಾಡಿದ್ದು ಕಮಲ ಪಾಳಯದ ಶಕ್ತಿಯನ್ನು ಸಂಪೂರ್ಣವಾಗಿ ಕುಗ್ಗಿಸಿತು.

ಮಂಡ್ಯ ಲೋಕಸಭೆ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಸೋತಿದ್ದ ನಿಖಿಲ್ ಅವರನ್ನು ಕಣಕ್ಕಿಳಿಸಿ ಚನ್ನಪಟ್ಟಣ ಕ್ಷೇತ್ರವನ್ನು ಗೆದ್ದುಕೊಳ್ಳುವುದು ಜೆಡಿಎಸ್ - ಬಿಜೆಪಿ ಮಿತ್ರ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾದರೆ, ಮತ್ತೊಂದೆಡೆ ಯೋಗೇಶ್ವರ್ ಅವರನ್ನು ಗೆಲ್ಲಿಸಿಕೊಳ್ಳುವ ಸವಾಲು ಕಾಂಗ್ರೆಸ್ ಪಾಳಯದ ಮುಂದಿತ್ತು.

ಸೋತಿದ್ದೇನೆ ಅಂತ ಸುಮ್ಮನೇ ಕೂರಲ್ಲ, ಹೋರಾಟ ಮಾಡುತ್ತೇನೆ: ನಿಖಿಲ್ ಕುಮಾರಸ್ವಾಮಿ

ಆಡಳಿತಾರೂಢ ಕಾಂಗ್ರೆಸ್ ಪಕ್ಷದಿಂದ ಯೋಗೇಶ್ವರ್ ಕಣಕ್ಕಿಳಿದಿದ್ದು ಉಪಚುನಾವಣೆ ಎದುರಿಸಲು ಹೆಚ್ಚಿನ ಬಲ ತಂದುಕೊಟ್ಟಿತು. ಅಲ್ಲದೆ, ಬಿಜೆಪಿಯಲ್ಲಿದ್ದ ಕಾರಣಕ್ಕೆ ದೂರವಾಗಿದ್ದ ಅಲ್ಪಸಂಖ್ಯಾತರು ಮತ್ತೆ ಯೋಗೇಶ್ವರ್ ಬೆನ್ನಿಗೆ ನಿಂತರು. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಜೆಡಿಎಸ್ ವಿರುದ್ಧ ಅಹಿಂದ ವರ್ಗ ಒಂದಾಗಿ ಕಾಂಗ್ರೆಸ್ ಬೆಂಬಲಿಸಿತು.

ಎರಡು ಸೋಲಿನ ಅನುಕಂಪ, ಮನೆ ಮಗ, ಸ್ಥಳೀಯ ಸ್ವಾಭಿಮಾನ ಹಾಗೂ ಅಧಿಕಾರದಲ್ಲಿದ್ದಾಗ ಯೋಗೇಶ್ವರ್ ಅನುಷ್ಠಾನಗೊಳಿಸಿದ ನೀರಾವರಿ ಯೋಜನೆಗಳು, ಅಭಿವೃದ್ಧಿ ಕಾರ್ಯಗಳು. ಮಾಜಿ ಸಂಸದ ಡಿ.ಕೆ.ಸುರೇಶ್ ಆರಂಭದಿಂದ ಕೊನೆವರೆಗೂ ಯೋಗೇಶ್ವರ್ ಪರ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವರು, ಶಾಸಕರು ಪ್ರಚಾರಕ್ಕೆ ಸಾಥ್ ನೀಡಿ ಶಕ್ತಿ ತುಂಬಿದ್ದು ಯೋಗೇಶ್ವರ್ ಗೆಲುವಿಗೆ ಸಹಕಾರಿಯಾಯಿತು.

click me!