ಯಾದಗಿರಿ: ಸರ್ಕಾರಿ ಕಚೇರಿಗೆ ಸೂರು, ಬಾಡಿಗೆ ಮಾಫಿಯಾ ಜೋರು..!

By Kannadaprabha NewsFirst Published Oct 19, 2023, 11:00 PM IST
Highlights

ವಾಣಿಜ್ಯ ನಗರಿಯತ್ತ ದಾಪುಗಾಲು ಇಡುತ್ತಿರುವ ಶಹಾಪುರ ತಾಲೂಕಿನಲ್ಲಿ ಸುಮಾರು ಒಂಬತ್ತು ಕಚೇರಿಗಳಿಗೆ ಸ್ವಂತ ಕಟ್ಟಡವೇ ಇಲ್ಲ. ಸರಕಾರಿ ಕಟ್ಟಡಗಳು ಆನೇಕ ಖಾಲಿ ಮತ್ತು ಪಾಳುಬಿದ್ದಿವೆ. ಇವುಗಳನ್ನು ಕೊಂಚ ದುರಸ್ತಿಗೊಳಿಸಿ ಸುಣ್ಣಬಣ್ಣ ಬಳಿದು ಕೊಟ್ಟರೆ ಸರಕಾರಿ ಆಸ್ತಿಯೂ ಉಳಿಸಿದಂತಾಗುತ್ತದೆ ಮತ್ತು ದೊಡ್ಡ ಮೊತ್ತದ ಬಾಡಿಗೆಯೂ ಉಳಿಯುತ್ತದೆ. ಆದರೆ, ಅಂತಹ ಯಾವ ಕೆಲಸಕ್ಕೂ ಒಬ್ಬ ಅಧಿಕಾರಿಯೂ ಮುಂದಾಗುತ್ತಿಲ್ಲ.

ಮಲ್ಲಯ್ಯ ಪೋಲಂಪಲ್ಲಿ

ಶಹಾಪುರ(ಅ.19):  ತಾಲೂಕಿನ ಸರ್ಕಾರಿ ಕಚೇರಿಗಳಿಗೆ ಸ್ವಂತ ಕಟ್ಟಡವಿಲ್ಲದೆ ಬಾಡಿಗೆಯಲ್ಲೇ ನಡೆಯುತ್ತಿದ್ದು, ಸರಕಾರದ ಖಜಾನೆಗೆ ಕೋಟ್ಯಂತರ ರು.ಗಳ ಹೊರೆಯಾಗುತ್ತಿದೆ. ವಾಣಿಜ್ಯ ನಗರಿಯತ್ತ ದಾಪುಗಾಲು ಇಡುತ್ತಿರುವ ಶಹಾಪುರ ತಾಲೂಕಿನಲ್ಲಿ ಸುಮಾರು ಒಂಬತ್ತು ಕಚೇರಿಗಳಿಗೆ ಸ್ವಂತ ಕಟ್ಟಡವೇ ಇಲ್ಲ. ಸರಕಾರಿ ಕಟ್ಟಡಗಳು ಆನೇಕ ಖಾಲಿ ಮತ್ತು ಪಾಳುಬಿದ್ದಿವೆ. ಇವುಗಳನ್ನು ಕೊಂಚ ದುರಸ್ತಿಗೊಳಿಸಿ ಸುಣ್ಣಬಣ್ಣ ಬಳಿದು ಕೊಟ್ಟರೆ ಸರಕಾರಿ ಆಸ್ತಿಯೂ ಉಳಿಸಿದಂತಾಗುತ್ತದೆ ಮತ್ತು ದೊಡ್ಡ ಮೊತ್ತದ ಬಾಡಿಗೆಯೂ ಉಳಿಯುತ್ತದೆ. ಆದರೆ, ಅಂತಹ ಯಾವ ಕೆಲಸಕ್ಕೂ ಒಬ್ಬ ಅಧಿಕಾರಿಯೂ ಮುಂದಾಗುತ್ತಿಲ್ಲ.

2.72 ಕೋಟಿ ರು.ಗಳ ಪಾವತಿ:

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಬಕಾರಿ ಇಲಾಖೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಉಪ ನೋಂದಣಿ ಅಧಿಕಾರಿಗಳ ಕಚೇರಿ ಸೇರಿ ಹಲವು ಕಚೇರಿಗಳು ಸೇರಿ ಪ್ರತಿ ತಿಂಗಳಿಗೆ 22.63 ಲಕ್ಷ ರು. ಬಾಡಿಗೆ ಹಣ ಪಾವತಿಸಲಾಗುತ್ತಿದೆ.

ಅಧಿಕಾರಿಗಳ ನಿರ್ಲಕ್ಷ್ಯ, ಯಾದಗಿರಿಯಲ್ಲಿ ನರೇಗಾ ಕೆಲಸಕ್ಕಾಗಿ ಮಹಿಳೆಯರ ಅಲೆದಾಟ

ವರ್ಷಕ್ಕೆ 2.72 ಕೋಟಿ ರು. ಬಾಡಿಗೆ ಪಾವತಿಸಲಾಗುತ್ತಿದ್ದು, ಈ ಬಾಡಿಗೆ ಮಾಫಿಯಾದಲ್ಲಿ ಅಧಿಕಾರಿಗಳೇ ಶಾಮೀಲಾಗಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಆರೋಗ್ಯ ಇಲಾಖೆಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ 2016-17ನೇ ಸಾಲಿನಿಂದ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ತಿಂಗಳಿಗೆ 30 ಸಾವಿರ, ವರ್ಷಕ್ಕೆ 3.60 ಲಕ್ಷ ರು.ಗಳನ್ನು ಪಾವತಿಸುತ್ತದೆ. ಸಬ್ ರಿಜಿಸ್ಟ್ರಾರ್ ಕಚೇರಿ 2018ರಿಂದ ತಿಂಗಳಿಗೆ 45 ಸಾವಿರ ಪಾವತಿಸುತ್ತಿದ್ದು, ವರ್ಷಕ್ಕೆ 5.40 ಲಕ್ಷ ರು.ಗಳನ್ನು ಬಾಡಿಗೆಗಾಗಿ ವ್ಯಯಿಸುತ್ತಿದೆ. ಸಿಡಿಪಿಒ ಕಚೇರಿ ತಿಂಗಳಿಗೆ 34,400 ರು. ಬಾಡಿಗೆ ನೀಡುತ್ತಿದ್ದು, ವರ್ಷಕ್ಕೆ 4.12 ಲಕ್ಷ ರು. ಪಾವತಿಸುತ್ತಿದೆ. ಅಬಕಾರಿ ನಿರೀಕ್ಷಕರ ಕಚೇರಿ ತಿಂಗಳಿಗೆ 22 ಸಾವಿರ ಬಾಡಿಗೆ ಹೊಂದಿದ್ದು, ವರ್ಷಕ್ಕೆ 2.64 ಲಕ್ಷ ರು. ನೀಡುತ್ತಿದೆ. ಅಬಕಾರಿ ಉಪ ನಿರೀಕ್ಷಕರ ಕಚೇರಿ ಬಾಡಿಗೆ ತಿಂಗಳಿಗೆ 23 ಸಾವಿರ ರು. ಇದ್ದು, ವರ್ಷಕ್ಕೆ 2.76 ಲಕ್ಷ ಆಗುತ್ತಿದೆ. ಜೊತೆಗೆ ಬಿಸಿಎಂ ವರ್ಷಕ್ಕೆ 1.44 ಲಕ್ಷ ರು., ಸಮಾಜ ಕಲ್ಯಾಣ ಇಲಾಖೆ ವರ್ಷಕ್ಕೆ 1.35 ಲಕ್ಷ ರು., ಮೀನುಗಾರಿಕೆ ಇಲಾಖೆ ವರ್ಷಕ್ಕೆ 82 ಸಾವಿರ ರು., ಕಾರ್ಮಿಕ ಇಲಾಖೆ ವರ್ಷಕ್ಕೆ 48 ಸಾವಿರ ರು.ಗಳನ್ನು ಪಾವತಿಸುತ್ತಿವೆ. ಹೀಗೆ ಅನೇಕ ಕಟ್ಟಡಗಳಿಗೆ ಪ್ರತಿ ವರ್ಷ ಲಕ್ಷಾನುಲಕ್ಷ ಬಾಡಿಗೆ ಪಾವತಿಸಲಾಗುತ್ತಿದೆ.

ಹೊಂದಾಣಿಕೆ ವಾಸನೆ:

ಕಟ್ಟಡ ಮಾಲೀಕರು ಮತ್ತು ಸರಕಾರಿ ತಾಲೂಕು ಮಟ್ಟದ ಅಧಿಕಾರಿಗಳು ಹೊಂದಾಣಿಕೆ ಮಾಡಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಆ ಕಟ್ಟಡಗಳಿಗೆ 10 ಸಾವಿರ ರು. ಬಾಡಿಗೆ ಕೊಡುವಷ್ಟು ಯೋಗ್ಯವಲ್ಲದಿದ್ದರೂ, ತಿಂಗಳಿಗೆ 30 ರಿಂದ 40 ಸಾವಿರ ರು. ಗಳ ಬಾಡಿಗೆ ಪಾವತಿಸುತ್ತಾ, ಸರ್ಕಾರಕ್ಕೆ ವಂಚಿಸುತ್ತಿದ್ದಾರೆ ಎನ್ನುವ ಆರೋಪಗಳೂ ಇವೆ.

ಅಲೆಯುವುದೇ ಜನರ ಕೆಲಸ:

ಸರ್ಕಾರ ಪ್ರಸ್ತುತ ಬಾಡಿಗೆ ದರ ಆಧರಿಸಿ ಕಟ್ಟಡಗಳ ಮಾಲೀಕರಿಗೆ ನೀಡಬೇಕಿದೆ. ಖಾಸಗಿ ಕಟ್ಟಡಗಳಲ್ಲಿ ಅಲ್ಲೊಂದು, ಇಲ್ಲೊಂದು ಇಲಾಖೆ ಇವೆ. ಒಂದೇ ಕೆಲಸಕ್ಕೆ ಬೇರೆ ಬೇರೆಡೆ ಅಲೆಯಬೇಕಿದೆ. ಅಧಿಕಾರಿಗಳ ಸಾರ್ವಜನಿಕರ ಹಣವನ್ನು ಈ ರೀತಿ ವ್ಯರ್ಥ ಮಾಡುವುದು ಸಮಂಜಸವಲ್ಲ. ಕೋಟ್ಯಂತರ ರುಪಾಯಿ ಬಾಡಿಗೆ ಹಣ ಉಳಿಸಲು ಕಚೇರಿಗಳಿಗೆ ಸ್ವಂತ ನಿವೇಶನ ಮತ್ತು ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು ಎಂಬುದು ದಲಿತ ಮುಖಂಡ ನಿಂಗಣ್ಣ ನಾಟೇಕರ್ ಸೇರಿದಂತೆ ಸಾರ್ವಜನಿಕರ ಆಗ್ರಹವಾಗಿದೆ.

ಬಾಡಿಗೆ ಕಟ್ಟಡದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದ್ದರೂ ಅತಿಹೆಚ್ಚಿನ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಮೂಲಸೌಕರ್ಯ ಒದಗಿಸಿ ಕೊಡದ ಕಟ್ಟಡ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಗರದ ಯುವ ಮುಖಂಡ ಬಸವರಾಜ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಒಂದೇ ಸೂರಿನಡಿ ಎಲ್ಲ ಇಲಾಖೆಗಳು ದೊರೆಯುವಂತೆ ಮಾಡಿದರೆ ವರ್ಷಕ್ಕೆ ಕೋಟಿ ಕೋಟಿ ರು.ಬಾಡಿಗೆ ಉಳಿಯುತ್ತದೆ. ಅಲ್ಲದೆ ಸರ್ಕಾರ ಎರಡ್ಮೂರು ವರ್ಷದಲ್ಲಿ ಬಾಡಿಗೆ ಹಣದಲ್ಲೇ ಎಲ್ಲ ಇಲಾಖೆಗಳು ಒಂದೆಡೆ ಕಾರ್ಯ ನಿರ್ವಹಿಸಬಹುದು ಎನ್ನಲಾಗುತ್ತಿದೆ.

4 ಸಾವಿರಕ್ಕೂ ಅಧಿಕ‌ ಜನರ ಜೀವ ಕಾಪಾಡಿದ ಭೂದೇವಮ್ಮ: ಜೀವರಕ್ಷಕಿಗೆ ಸೀಗಬೇಕಿದೆ ರಾಜ್ಯೋತ್ಸವದ ಗರಿ?

ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಲೆಕ್ಕ ತೋರಿಸಿ ಹೆಚ್ಚಿನ ಬಾಡಿಗೆ ವಸೂಲಿ ಮಾಡುತ್ತಿರುವ ಅನುಮಾನವಿದೆ. ಸರ್ಕಾರ ಕೂಡಲೇ ಇದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ತಾಲೂಕಿನಲ್ಲಿ ಎಲ್ಲಾ ಇಲಾಖೆಗಳು ಒಂದೇ ಕಡೆ ಕಾರ್ಯ ನಿರ್ವಹಿಸಲು ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರ್ನಾಟಕ ಲಂಚ ಮುಕ್ತ ನಿರ್ಮಾಣ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಮೊಹ್ಮದ್ ಇಸ್ಮಾಯಿಲ್ ತಿಮ್ಮಾಪುರಿ ತಿಳಿಸಿದ್ದಾರೆ. 

ಜಿಲ್ಲಾಧಿಕಾರಿ, ಜನಪ್ರತಿನಿಧಿಗಳು ಹಾಗೂ ಸರ್ಕಾರದ ನಿರ್ಲಕ್ಷ್ಯದಿಂದ ಸಾರ್ವಜನಿಕರ ಹಣ ಬಾಡಿಗೆ ರೂಪದಲ್ಲಿ ವ್ಯರ್ಥವಾಗುತ್ತಿದೆ. ಸರ್ಕಾರ ಕೂಡಲೇ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಸರ್ಕಾರಿ ಇಲಾಖೆಗಳನ್ನು ಇನ್ನಿತರೆ ಸರಕಾರಿ ಕಚೇರಿಗಳಿಗೆ ಸ್ಥಳಾಂತರಿಸಬೇಕು. ಇಲ್ಲವೇ ಸ್ವಂತ ಕಟ್ಟಡ ನಿರ್ಮಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಸಾಮಾಜಿಕ ಹೋರಾಟಗಾರ ಬಸವರಾಜ್ ಭಜಂತ್ರಿ ಹೇಳಿದ್ದಾರೆ. 

click me!