ದುಡಿವ ಶಕ್ತಿ ಇದ್ದರೆ ಪತಿಗೆ ಜೀವನಾಂಶ ಇಲ್ಲ: ಹೈಕೋರ್ಟ್

By Kannadaprabha NewsFirst Published Jan 25, 2023, 2:18 AM IST
Highlights
  • ದುಡಿವ ಶಕ್ತಿ ಇದ್ದರೆ ಪತಿಗೆ ಜೀವನಾಂಶ ಇಲ್ಲ
  •  ಪತ್ನಿಯಿಂದ ಜೀವನಾಂಶ ಕೋರಿದ ಪತಿ ಮನವಿಗೆ ಹೈಕೋರ್ಟ್ ತಿರಸ್ಕಾರ
  • ‘ಜೀವನಾಂಶ ಬಳಸಿ ‘ಆರಾಮ ಜೀವನ’ಕ್ಕೆ ಪತಿ ಯತ್ನಿಸಿದ್ದು ನಿಸ್ಸಂದೇಹ’
  •  ‘ಜೀವನಾಂಶಕ್ಕೆ ಆದೇಶಿಸಿದರೆ ಪತಿಯ ಸೋಮಾರಿತನಕ್ಕೆ ಪ್ರೋತ್ಸಾಹ’

ಬೆಂಗಳೂರು (ಜ.25) : ಕೋವಿಡ್‌ಯಿಂದ ಉದ್ಯೋಗ ಕಳೆದುಕೊಂಡು ಯಾವುದೇ ಆದಾಯವಿಲ್ಲದ ಕಾರಣ ಜೀವನ ನಿರ್ವಹಣೆ ಮಾಡಲು ಪತ್ನಿಯಿಂದ ಜೀವನಾಂಶ ಕೊಡಿಸುವಂತೆ ಪತಿ ಮಾಡಿಕೊಂಡಿದ್ದ ಮನವಿಯನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಹೈಕೋರ್ಚ್‌, ದುಡಿಯಲು ಸಾಮರ್ಥ್ಯ ಹೊಂದಿರುವ ಪತಿಗೆ ಜೀವನಾಂಶ ನೀಡಲು ಪತ್ನಿಗೆ ಆದೇಶಿಸಿದರೆ ಸೋಮಾರಿತನವನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಕಟುವಾಗಿ ನುಡಿದಿದೆ.

ಪತ್ನಿಯಿಂದ ಜೀವನಾಂಶ ಕೊಡಿಸುವಂತೆ ಕೋರಿ ಬೆಂಗಳೂರಿನ ಕನಕಪುರ ರಸ್ತೆಯ ನಿವಾಸಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

High Court of Karnataka: ತಂದೆಯ ಸಾಲಕ್ಕೆ ಮಗ ಚೆಕ್‌ ನೀಡಿದ್ದರೆ ಸಾಲ ತೀರಿಸುವ ಹೊಣೆ ಮಗನದ್ದೇ!

ಪ್ರಕರಣದಲ್ಲಿ ಪತ್ನಿಯಿಂದ ಜೀವನಾಂಶ ಪಡೆದು ತುಂಬಾ ಆರಾಮಾಗಿ ಜೀವನ ನಡೆಸಲು ಪತಿ ನಿರ್ಧರಿಸಿದ್ದಾನೆ ಎಂಬುದಾಗಿ ನಿಸ್ಸಂದೇಹವಾಗಿ ತೀರ್ಮಾನಿಸಬಹುದಾಗಿದೆ. ಹಾಗಾಗಿ, ಪತ್ನಿಯಿಂದ ಜೀವನಾಂಶ ಕೋರಿದ ಪತಿಯ ಅರ್ಜಿಯನ್ನು ಪುರಸ್ಕರಿಸಲಾಗದು ಎಂದು ಹೈಕೋರ್ಟ್ ತಿಳಿಸಿದೆ.

ಪ್ರಕರಣದ ವಿವರ:

ರವಿ ಮತ್ತು ಸುಮಾ (ಇಬ್ಬರ ಹೆಸರು ಬದಲಿಸಲಾಗಿದೆ) 2017ರ ಫೆ.6ರಂದು ಮದುವೆಯಾಗಿದ್ದು, ಸಂಬಂಧ ಹಳಸಿದ ಕಾರಣ ಪತ್ನಿ ತವರು ಮನೆ ಸೇರಿದ್ದರು. ನಂತರ ಪತಿ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರೆ, ವೈವಾಹಿಕ ಸಂಬಂಧ ಪುನರ್‌ ಸ್ಥಾಪಿಸುವಂತೆ ಕೋರಿ ಪತ್ನಿ ಅರ್ಜಿ ಸಲ್ಲಿಸಿದ್ದರು. ಹೀಗಿರುವಾಗ ಪತಿಯಿಂದ ಮಧ್ಯಂತರ ಜೀವನಾಂಶವಾಗಿ ಮಾಸಿಕ 25 ಸಾವಿರ ರು. ಮತ್ತು ವ್ಯಾಜ್ಯ ವೆಚ್ಚವೆಂದು 1 ಲಕ್ಷ ರು. ಕೊಡಿಸುವಂತೆ ಕೋರಿ ಪತ್ನಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಅದನ್ನು ಆಕ್ಷೇಪಿಸಿದ್ದ ಪತಿ, ತನ್ನ ಜೀವನ ನಡೆಸಲು ಯಾವುದೇ ಆದಾಯ ಇಲ್ಲ ಎಂದು ತಿಳಿಸಿದ್ದರು. ಜತೆಗೆ, ವಿಚ್ಛೇದನ ಅರ್ಜಿ ಇತ್ಯರ್ಥವಾಗುವರೆಗೆ ತನ್ನ ಮತ್ತು ಪೋಷಕರ ಜೀವನ ನಿರ್ವಹಣೆಗಾಗಿ ಪತ್ನಿಯಿಂದಲೇ ಮಧ್ಯಂತರ ಜೀವನಾಂಶವಾಗಿ ಮಾಸಿಕ 30 ಸಾವಿರ ರು. ಮತ್ತು ವಾಜ್ಯ ವೆಚ್ಚಕ್ಕಾಗಿ 2 ಲಕ್ಷ ರು. ಕೊಡಿಸುವಂತೆ ಕೋರಿ ಪತಿ ಮಧ್ಯಂತರ ಅರ್ಜಿ ಸಹ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ್ದ ಬೆಂಗಳೂರು ಗ್ರಾಮಾಂತರ ಕೌಟುಂಬಿಕ ನ್ಯಾಯಾಲಯ, ಪತಿಯ ಮಧ್ಯಂತರ ಅರ್ಜಿಯನ್ನು ತಿರಸ್ಕರಿಸಿ, 2021ರ ಡಿಸೆಂಬರ್‌ನಿಂದ ವಿಚ್ಛೇದನ ಅರ್ಜಿ ಇತ್ಯರ್ಥವಾಗುವರೆಗೆ ಪತ್ನಿಗೆ ಮಾಸಿಕ 10 ಸಾವಿರ ರು. ಜೀವನಾಂಶ ಮತ್ತು ವ್ಯಾಜ್ಯ ವೆಚ್ಚಕ್ಕಾಗಿ 25 ಸಾವಿರ ರು. ಪಾವತಿಸುವಂತೆ ಪತಿಗೆ ನಿರ್ದೇಶಿಸಿ 2022ರ ಅ.31ರಂದು ಆದೇಶಿಸಿತ್ತು. ಪತ್ನಿಯಿಂದ ಜೀವನಾಂಶ ಕೋರಿದಕ್ಕೆ 10 ಸಾವಿರ ರು. ದಂಡ ಸಹ ವಿಧಿಸಿತ್ತು. ಈ ಆದೇಶ ಪ್ರಶ್ನಿಸಿ ಪತಿ ಹೈಕೋರ್ಚ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಮನವಿಯಲ್ಲಿ, ಕೋವಿಡ್‌ನಿಂದ ಉದ್ಯೋಗ ಕಳೆದುಕೊಂಡಿದ್ದು, ಎರಡು ವರ್ಷದಿಂದ ಉದ್ಯೋಗ ದೊರೆತಿಲ್ಲ. ಆದ್ದರಿಂದ ಪತ್ನಿ ಪೋಷಣೆಗೆ ಜೀವನಾಂಶ ನೀಡಲು ಸಾಧ್ಯವಿಲ್ಲ. ಬದಲಾಗಿ ಪತಿಯ ಪೋಷಕರು ಸ್ಥಿತಿವಂತರಾಗಿದ್ದಾರೆ. ತನ್ನ ಮೇಲೆ ಪತ್ನಿ ದಾಖಲಿಸಿರುವ ಹಲವು ಪ್ರಕರಣಗಳ ನಿರ್ವಹಣೆಗೆ ಹಣ ವ್ಯಯಿಸಬೇಕಿದೆ. ಹಾಗಾಗಿ ತನಗೆ ಜೀವನಾಂಶ ನೀಡಲು ಪತ್ನಿಗೆ ಆದೇಶಿಸಬೇಕು ಎಂದು ಪತಿ ಕೋರಿದ್ದರು.

ಮತ್ತೊಂದಡೆ ‘ಪತಿ ಉದ್ಯೋಗ ಮಾಡುತ್ತಿದ್ದು, ಮಾಸಿಕ 50ರಿಂದ 60 ಸಾವಿರ ರು.ವರೆಗೂ ಆದಾಯ ಗಳಿಸುತ್ತಿದ್ದಾರೆ. ಆಸ್ತಿ ಬಾಡಿಗೆಯಿಂದ ಮಾಸಿಕ 75 ಸಾವಿರ ರು. ಪಡೆಯುತ್ತಿದ್ದಾರೆ. ಹೀಗಾಗಿ, ಕೌಟುಂಬಿಕ ನ್ಯಾಯಾಲಯ ಸೂಕ್ತವಾಗಿಯೇ ಆದೇಶ ಮಾಡಿದೆ’ ಎಂದು ಪತ್ನಿ ತಿಳಿಸಿದ್ದರು.

Karnataka high court: ಅಪಘಾತಕ್ಕೀಡಾದ ವಾಹನವನ್ನು ವಿಮೆ ಇಲ್ದಿದ್ರೂ ಬಿಡಿ: ಹೈಕೋರ್ಟ್ ಆದೇಶ

ವಾದ-ಪ್ರತಿವಾದ ಆಲಿಸಿದ ಹೈಕೋರ್ಚ್‌, ಪತ್ನಿಯೇ ಜೀವನಾಂಶ ನೀಡಬೇಕು ಎಂಬ ಪತಿಯ ವಾದ ಮೂಲತಃ ದೋಷಪೂರಿತವಾಗಿದ್ದು, ಒಪ್ಪಲು ಸಾಧ್ಯವಿಲ್ಲ. ಅರ್ಜಿದಾರ ಪತಿ ದುಡಿಯಲು ಸಾಮರ್ಥ್ಯವಿರುವ ವ್ಯಕ್ತಿ. ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್‌ 24ರ ಅಡಿಯಲ್ಲಿ ಜೀವನಾಂಶ ಪಡೆಯಲು ಯಾವುದೇ ಲಿಂಗ ಭೇದವಿಲ್ಲ ಎಂಬ ಕಾರಣಕ್ಕೆ ದುಡಿಯಲು ಸಾಮರ್ಥ್ಯವಿರುವ ಪತಿಗೆ ಪತ್ನಿಯಿಂದ ಜೀವನಾಂಶ ನೀಡುವಂತೆ ಆದೇಶಿಸಿದರೆ, ಸೋಮಾರಿತನಕ್ಕೆ ಪ್ರೋತ್ಸಾಹಿಸಿದಂತಾಗುತ್ತದೆ. ಕೋವಿಡ್‌ನಿಂದ ಉದ್ಯೋಗ ಕಳೆದುಕೊಂಡ ಎಂಬ ಕಾರಣಕ್ಕೆ ಪತಿ ಆದಾಯ ಗಳಿಸಲು ಸಾಮರ್ಥ್ಯವಿಲ್ಲ ಎಂದು ಹೇಳಲಾಗದು ಎಂದು ಅಭಿಪ್ರಾಯಪಟ್ಟಿದೆ.

click me!