ಬೆಂಗ್ಳೂರಲ್ಲಿ ಹಿಂಗ್ಲಾಜ್‌ ದೇವಿ ಮಂದಿರ ಇಂದು ಉದ್ಘಾಟನೆ

By Kannadaprabha NewsFirst Published Jan 27, 2023, 9:32 AM IST
Highlights

ಬೆಂಗಳೂರಿನ ಕಬ್ಬನ್‌ಪೇಟೆಯಲ್ಲಿ ಪ್ರತಿಷ್ಠಾಪನೆ, ಪಾಕ್‌ನಿಂದ ತದ್ರೂಪಿ ಮೂರ್ತಿ ತರಿಸಿ ಪ್ರತಿಷ್ಠಾಪನೆ, ಸರ್ಕಾರದ ನೆರವಿಲ್ಲದೆ ಬೆಂಗಳೂರಿನ 140 ಕುಟುಂಬದಿಂದ ನಿರ್ಮಾಣ, 45 ಕೇಜಿ ಬೆಳ್ಳಿ, ಕೇಜಿಗಟ್ಟಲೆ ಚಿನ್ನ ಬಳಕೆ. 

ಬೆಂಗಳೂರು(ಜ.27):  ಹಿಂದೂ ಧರ್ಮದ ಪ್ರಮುಖ ಶಕ್ತಿ ಪೀಠಗಳಲ್ಲಿ ಒಂದಾದ, ಪಾಕಿಸ್ತಾನದ ಬಲೂಚಿಸ್ತಾನದಲ್ಲಿರುವ ಹಿಂಗ್ಲಾಜ್‌ ದೇವಿಯ ಭವ್ಯ ಮಂದಿರ ಬೆಂಗಳೂರಿನ ಕಬ್ಬನ್‌ಪೇಟೆಯಲ್ಲಿ ನಿರ್ಮಾಣಗೊಂಡಿದ್ದು, ದೇವಿಯ ದಕ್ಷಿಣ ಭಾರತದ ಮೊದಲ ಗೋಪುರ ಶೈಲಿಯ ದೇವಾಲಯವು ಇಂದು(ಶುಕ್ರವಾರ) ಉದ್ಘಾಟನೆಗೊಳ್ಳಲಿದೆ. ಹಿಂಗ್ಲಾಜ್‌ ದೇವಿಯ ತದ್ರೂಪಿ ವಿಗ್ರಹವು ಪ್ರತಿಷ್ಠಾಪನೆಗೆ ಸಿದ್ಧವಾಗಿದ್ದು, ಕಬ್ಬನ್‌ಪೇಟೆ 3ನೇ ಮುಖ್ಯರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ‘ಹಿಂಗ್ಲಾಜ್‌ ಮಾತಾಜಿ ಮಂದಿರ’ದಲ್ಲಿ ಮಧ್ಯಾಹ್ನ 2 ಗಂಟೆಗೆ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ನಡೆಯಲಿದೆ.

ಈ ಬಗ್ಗೆ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ ರಾಜ್ಯಸಭೆ ಮಾಜಿ ಸದಸ್ಯ ತರುಣ್‌ ವಿಜಯ್‌, ಪಾಕಿಸ್ತಾನದ ಬಲೂಚಿಸ್ತಾನದಲ್ಲಿರುವ ಶಕ್ತಿಪೀಠದಿಂದ ಹಿಂಗ್ಲಾಜ್‌ ದೇವಿಯ ತದ್ರೂಪಿ ಮೂರ್ತಿ 3,200 ಕಿ.ಮೀ. ದೂರ ಕ್ರಮಿಸಿ ಬೆಂಗಳೂರು ಸೇರಿದೆ. ಕಳೆದ ಎರಡು ದಿನಗಳಿಂದ ಹಲಸೂರು ಗೇಟ್‌ ಹಿಂಭಾಗದಲ್ಲಿ ನಿರ್ಮಿಸಿರುವ ಮಂದಿರದ ಸೆಟ್‌ನಲ್ಲಿ ಯಜ್ಞ ಯಾಗಾದಿ ಕೈಂಕರ್ಯಗಳನ್ನು ಯಶಸ್ವಿಯಾಗಿ ಪೂರೈಸಲಾಗಿದೆ. ಶುಕ್ರವಾರ ಬೆಳಗ್ಗೆ ಏಳು ಗಂಟೆಗೆ ನೂತನ ದೇವಾಲಯದಲ್ಲಿ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಮಧ್ಯಾಹ್ನ 2 ಗಂಟೆಗೆ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

'ಹಿಂದೂಗಳಿಗೆ ಮಾತ್ರ ವ್ಯಾಪಾರ ಅವಕಾಶ': ಕದ್ರಿಯ ದೇವಸ್ಥಾನದಲ್ಲಿ ಬ್ಯಾನರ್

ಕೋಟ್ಯಂತರ ರು. ಮೌಲ್ಯದ ಭವ್ಯ ಮಂದಿರ:

ನಾಗರ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಭವ್ಯ ಮಂದಿರವನ್ನು ಸಂಪೂರ್ಣ ರಾಜಸ್ಥಾನದ ಮಕರಾನ ಮಾರ್ಬಲ್‌ ಬಳಕೆ ಮಾಡಿ ನಿರ್ಮಾಣ ಮಾಡಲಾಗಿದೆ. ಇನ್ನು ಗರ್ಭಗುಡಿಯ ದ್ವಾರವನ್ನು 45 ಕೆ.ಜಿ. ಬೆಳ್ಳಿ ಬಳಸಿ ನಿರ್ಮಿಸಿದ್ದು, ಮುಖ್ಯದ್ವಾರಕ್ಕೆ ಕೆ.ಜಿ.ಗಟ್ಟಲೆ ಚಿನ್ನ ಬಳಸಿ ಚಿನ್ನಲೇಪಿತ ದ್ವಾರವನ್ನು ನಿರ್ಮಿಸಲಾಗಿದೆ. ಕ್ಷತ್ರೀಯ ಸಮಾಜದ ಕುಲದೇವಿಯಾದ ಹಿಂಗ್ಲಾಜ್‌ ದೇವಿ ದೇವಾಲಯ ಬೆಂಗಳೂರಿನ ಮತ್ತೊಂದು ಪ್ರೇಕ್ಷಣೀಯ ಸ್ಥಳವಾಗಿ ಬದಲಾಗಲಿದೆ ಎಂದು ತರುಣ್‌ ವಿಜಯ್‌ ಹೇಳಿದರು.

140 ಕುಟುಂಬದಿಂದ ಮಂದಿರ ನಿರ್ಮಾಣ:

ಬೆಂಗಳೂರಿನಲ್ಲಿ ಕೇವಲ 140 ಕುಟುಂಬಗಳನ್ನು ಹೊಂದಿರುವ ಬ್ರಹ್ಮ ಕ್ಷತ್ರೀಯ ಸಮಾಜ ಸರ್ಕಾರದಿಂದ ನಯಾಪೈಸೆ ಅನುದಾನ ಪಡೆಯದೆ ಸ್ವಂತ ಖರ್ಚಿನಲ್ಲಿ ಭವ್ಯ ಮಂದಿರವನ್ನು ನಿರ್ಮಿಸಿದೆ. 140 ಕುಟುಂಬ ಹಾಗೂ ದೇಶಾದ್ಯಂತ ಇರುವ ಅವರ ಸಂಬಂಧಿಕರ ಸಹಾಯದಿಂದ ಇದು ಸಾಧ್ಯವಾಗಿದೆ. ಬ್ರಿಟಿಷರು ಕುಟುಂಬ ಪರಿಕಲ್ಪನೆಯನ್ನು ನಾಶ ಮಾಡಲು ಎಷ್ಟೇ ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಅದಕ್ಕೆ ಇದೇ ಉತ್ತಮ ಉದಾಹರಣೆ ಎಂದು ಕೊಂಡಾಡಿದರು.

ಸಾಮಾಜಿಕ ಮತ್ತು ಸಾಂಸ್ಕೃತಿಕ ಪುನರುಜ್ಜೀವನ ಕೇಂದ್ರ:

ಎರಡು ವರ್ಷದಿಂದ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಕೃಷ್ಣ ದೇವರಾಯರು, ಬಸವಣ್ಣನವರ ನಾಡಿನಲ್ಲಿ ದೇವಾಲಯ ನಿರ್ಮಾಣವಾಗಿರುವುದು ಹೆಮ್ಮೆಯ ವಿಚಾರ. ಈ ಸ್ಥಳವು ಕೇವಲ ಪೂಜೆಗೆ ಮಾತ್ರವಲ್ಲದೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪುನರುಜ್ಜೀವನ ಕೇಂದ್ರವಾಗಲಿದೆ. ಬೆಂಗಳೂರಿನ ಪ್ರಮುಖ ಶಕ್ತಿ ಕೇಂದ್ರವಾಗಿ ಬೆಳೆಯಲಿದೆ. ಇದಕ್ಕೆ ಮುಖ್ಯ ಕಾರಣಕರ್ತರಾದ ಬೆಂಗಳೂರು ಬ್ರಹ್ಮ ಕ್ಷತ್ರೀಯ ಸಮಾಜ ಟ್ರಸ್ಟ್‌ ಅಧ್ಯಕ್ಷ ಲೇಖರಾಜ್‌ ಚುಚ್ಚ ಅವರನ್ನು ಅಭಿನಂದಿಸುತ್ತೇನೆ ಎಂದರು.

ಏನಿದು ಹಿಂಗ್ಲಾಜ್‌ ದೇವಿ ಮಂದಿರ?

ಹಿಂದೂ ಧರ್ಮದ ಪ್ರಕಾರ, ಸತಿ ದೇವಿ (ಪಾರ್ವತಿ) ದೇಹದ 51 ಭಾಗಗಳು ಬಿದ್ದ ಜಾಗಗಳು 51 ಶಕ್ತಿ ಪೀಠಗಳಾಗಿ ಪ್ರಖ್ಯಾತಿ ಪಡೆದಿವೆ. ಭಾರತ, ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾದಲ್ಲಿರುವ ಈ ಶಕ್ತಿ ಪೀಠಗಳ ಪೈಕಿ ದೇವಿಯ ಹಣೆಯ ಭಾಗದಿಂದ (ಬ್ರಹ್ಮರಂಧ್ರ) ಸೃಷ್ಟಿಯಾಗಿದ್ದು ಹಿಂಗ್ಲಾಜ್‌ ಶಕ್ತಿ ಪೀಠ. ಪಾಕಿಸ್ತಾನದ ಬಲೂಚಿಸ್ತಾನದ ಹಿಂಗ್ಲಾಜ್‌ನಲ್ಲಿರುವ ಈ ಕ್ಷೇತ್ರಕ್ಕೆ ಯಾತ್ರೆ ಹೋಗುವುದು ಅತ್ಯಂತ ಕಠಿಣ. ಅಂತಹ ಶಕ್ತಿ ಪೀಠದ ದೇವಾಲಯ ಇದೀಗ ಬೆಂಗಳೂರಿನಲ್ಲೇ ಸ್ಥಾಪನೆಯಾಗಿದೆ ಎಂದು ಸ್ವತಃ ಹಿಂಗ್ಲಾಜ್‌ ಯಾತ್ರೆ ಕೈಗೊಂಡಿದ್ದ ತರುಣ್‌ ವಿಜಯ್‌ ಮಾಹಿತಿ ನೀಡಿದರು.

415 ದಿನಗಳ ಪಾದಯಾತ್ರೆಯಲ್ಲೇ ನೂರಾರು ತೀರ್ಥಕ್ಷೇತ್ರ ದರ್ಶಿಸಿದ ನಿವೃತ್ತ ಪೋಸ್ಟ್‌ಮಾಸ್ಟರ್

ಮೋದಿ ಹಾಗೂ ಅಮಿತ್‌ ಶಾಗೆ ಮನವಿ

ಹಿಂಗ್ಲಾಜ್‌ನ ತದ್ರೂಪಿ ಮಂದಿರವನ್ನು ರಾಜಸ್ಥಾನದಲ್ಲೂ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಅದಕ್ಕೆ ಸೂಕ್ತ ಜಾಗವೂ ಇದ್ದು ಹಿಂಗ್ಲಾಜ್‌ನಿಂದ ಪ್ರಾಣ ಜ್ಯೋತಿಯನ್ನು ತಂದು ಅಲ್ಲಿ ಪ್ರತಿಷ್ಠಾಪಿಸಬೇಕಿದೆ. ಅದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್‌ ಶಾ ಅವರ ಸಹಕಾರ ಹಾಗೂ ಆಶೀರ್ವಾದ ಬೇಕಿದೆ ಎಂದು ತರುಣ್‌ ವಿಜಯ್‌ ಮನವಿ ಮಾಡಿದರು.

ಹಿಂಗ್ಲಾಜ್‌ಗೆ 3,500 ವರ್ಷಗಳ ಇತಿಹಾಸ

ಬಲೂಚಿಸ್ತಾನದ ಹಿಂಗ್ಲಾಜ್‌ ಮಾತಾ ಮಂದಿರಕ್ಕೆ 3,500 ವರ್ಷಗಳ ಇತಿಹಾಸವಿದೆ. ಇಸ್ಲಾಂ ಧರ್ಮ ಪ್ರವರ್ಧಮಾನಕ್ಕೆ ಬಂದರೂ, ದೇವಾಲಯ ಪಾಕಿಸ್ತಾನಕ್ಕೆ ಹಂಚಿ ಹೋದರೂ ದೇವಾಲಯ ಅಸ್ತಿತ್ವಕ್ಕೆ ಯಾವುದೇ ಧಕ್ಕೆ ಬಂದಿಲ್ಲ. ಬಲೂಚಿಸ್ತಾನ ಭಾಗದ ಮುಸ್ಲಿಮರಲ್ಲಿ ಹಿಂದೂಗಳು ಹಾಗೂ ಭಾರತದ ಬಗ್ಗೆ ತುಂಬಾ ಪ್ರೀತಿ ಇದೆ. ಹೀಗಾಗಿಯೇ 300 ವರ್ಷಗಳ ನಿರಂತರ ದಾಳಿಗಳಿಂದ ದೇವಾಲಯವನ್ನು ಉಳಿಸಿದ್ದಾರೆ. ಆ ಭಾಗದ ಮುಸ್ಲಿಮರು ಮಾತಾ ದೇವಾಲಯವನ್ನು ‘ನಾನಿ ಮಂದಿರ’ ಎಂದೇ ಕರೆಯುತ್ತಾರೆ ಎಂದು ತರುಣ್‌ ವಿಜಯ್‌ ಹೇಳಿದರು. ಆ ಭಾಗದ ಜನರು ತಾಲಿಬಾನ್‌ಗಳಂತೆ ಅಲ್ಲ. ಬಲೂಚಿ ಮುಸ್ಲಿಮರು ಮಾನವೀಯತೆ ಪರ ಇರುವವರು ಎಂದು ವಿವರಿಸಿದರು.

click me!