ಜಡಿಮಳೆ: ಕಾಫಿಗೆ ಕೊಳೆ ರೋಗದ ಭೀತಿ

By Kannadaprabha News  |  First Published Jul 17, 2024, 11:49 AM IST

ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಜಡಿ ಮಳೆ ಕಾಫಿ ಬೆಳೆಗಾರರಿಗೆ ಕೊಳೆರೋಗದ ಆತಂಕ ತಂದೊಡ್ಡಿದೆ. ಸೋನೆ ಮಳೆ ಶುರುವಾಗುವ ಯಾವುದೇ ಮುನ್ಸೂಚನೆ ಇಲ್ಲದೆ ಮೇ ತಿಂಗಳ ಅಂತ್ಯದಲ್ಲಿ ಆರಂಭವಾದ ಮಳೆ ಒಂದೂವರೆ ತಿಂಗಳು ಕಳೆರೂ ನಿಲ್ಲದೇ ಇರುರುವುದು ಕಾಫಿ ಬೆಳೆಗಾರರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.


 ಶ್ರೀವಿದ್ಯಾ ಸಕಲೇಶಪುರ

 ಸಕಲೇಶಪುರ :  ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಜಡಿ ಮಳೆ ಕಾಫಿ ಬೆಳೆಗಾರರಿಗೆ ಕೊಳೆರೋಗದ ಆತಂಕ ತಂದೊಡ್ಡಿದೆ. ಸೋನೆ ಮಳೆ ಶುರುವಾಗುವ ಯಾವುದೇ ಮುನ್ಸೂಚನೆ ಇಲ್ಲದೆ ಮೇ ತಿಂಗಳ ಅಂತ್ಯದಲ್ಲಿ ಆರಂಭವಾದ ಮಳೆ ಒಂದೂವರೆ ತಿಂಗಳು ಕಳೆರೂ ನಿಲ್ಲದೇ ಇರುರುವುದು ಕಾಫಿ ಬೆಳೆಗಾರರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.

Latest Videos

undefined

ಏಕಾಏಕಿ ಹಿಡಿದ ಮಳೆಯಿಂದಾಗಿ ಕಾಫಿ ತೋಟದಲ್ಲಿ ಮಳೆಗಾಲಕ್ಕೂ ಮುನ್ನ ಮುಗಿಸಬೇಕಿದ್ದ ಮರಗಸಿ, ಗಿಡಕಸಿ, ಕೊಟ್ಟಿಗೆ ಗೊಬ್ಬರ ನೀಡುವುದು ಸೇರಿದಂತೆ ಹಲವು ಕೆಲಸಗಳು ಸಾಕಷ್ಟು ಬಾಕಿ ಉಳಿದಿವೆ. ನಿರಂತರವಾಗಿ ಸುರಿಯುತ್ತಿರುವ ಜಡಿ ಮಳೆಯಿಂದ ಮಳೆನೀರು ಹೊರ ಹರಿದಿದ್ದಕ್ಕಿಂತ ಭೂಮಿಯಲ್ಲಿ ಇಂಗಿದ್ದೇ ಹೆಚ್ಚಾಗಿದ್ದು, ಈಗಾಗಲೇ ಭೂಮಿ ಶೀತಪೀಡಿತವಾಗಿರುವುದರಿಂದ ತಾಲೂಕಿನಲ್ಲಿ ಸಾವಿರ ಮಿ.ಮೀಟರ್ ಮಳೆಯಾಗುವ ಮುನ್ನವೆ ಹಲವು ತಗ್ಗುಪ್ರದೇಶಗಳಲ್ಲಿ ಜಲ ಹೊರಹೊಮ್ಮುತ್ತಿದೆ.

ಕೊಳೆ ರೋಗದ ಭೀತಿ: ನಿರಂತರ ಜಡಿ ಮಳೆ ಹಾಗೂ ಅಲ್ಲಲ್ಲಿ ಸುರಿಯುತ್ತಿರುವ ಮಂಜಿನಿಂದಾಗಿ ವಾಣಿಜ್ಯ ಬೆಳೆಗಳಾದ ಕಾಫಿ, ಮೆಣಸು ಹಾಗೂ ಅಡಿಕೆಗೆ ಕೊಳೆರೋಗ ಆವರಿಸುವ ಭಯ ಬೆಳೆಗಾರರನ್ನು ಕಾಡುತ್ತಿದೆ. ಶೀಘ್ರವೆ ಈ ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಿಸುವ ಕೆಲಸವನ್ನು ಮಳೆ ಮಧ್ಯೆಯೇ ಹಲವು ತೋಟಗಳಲ್ಲಿ ಆರಂಭಿಸಿದ್ದರಾದರೂ ಹೆಚ್ಚಿನ ಪರಿಣಾಮವಿಲ್ಲ ಎನ್ನಲಾಗುತ್ತಿದೆ. ಆದರೆ, ಸಾಕಷ್ಟು ಕಾಫಿ ಬೆಳೆಗಾರರು ಕ್ರಿಮಿನಾಶಕ ಸಿಂಪಡಣೆಗೆ ಮಳೆ ಬಿಡುವು ನೀಡುವುದನ್ನೆ ಕಾಯುತ್ತಿದ್ದಾರೆ. ಆದರೆ ಜಡಿ ಮಳೆ ನಿಲ್ಲುತ್ತಿಲ್ಲ.

*ಕಾಣೆಯಾದ ಆಷಾಢದ ಮಳೆ

ಮಲೆನಾಡಿನಲ್ಲಿ ದಿನ ಒಂದಕ್ಕೆ ಕನಿಷ್ಠ 150 ರಿಂದ 300 ಮೀ.ಮೀಟರ್( 6 ರಿಂದ 12) ಇಂಚು ಮಳೆಯಾಗುವುದು ಸಾಮಾನ್ಯ. ಇದರಿಂದಾಗಿ ಹಳ್ಳಕೊಳ್ಳಗಳು ಉಕ್ಕಿ ಹರಿಯುವ ಮೂಲಕ ಮಲೆನಾಡಿನಲ್ಲಿ ಮಳೆಯ ರೌದ್ರವತಾರಕ್ಕೆ ಮೆರಗು ದೊರಕುತಿತ್ತು. ಆದರೆ, ಈ ಬಾರಿ ಮಾರನಹಳ್ಳಿ ಮಳೆ ಮಾಪನ ಕೇಂದ್ರ ಒಂದನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ಮಳೆ ಮಾಪನ ಕೇಂದ್ರದಲ್ಲೂ ದಿನ ಒಂದಕ್ಕೆ 100 ಮೀ.ಮೀಟರ್(4 ಇಂಚು) ಮಳೆಯಾಗಿರುವ ನಿದರ್ಶನಗಳು ಇಲ್ಲದಾಗಿದೆ.

ಬಿರುಸಿ ಮಳೆ ಇಲ್ಲ: ಆಷಾಢ ಮಾಸದಲ್ಲಿ ಭಾರಿ ಪ್ರಮಾಣದ ಗಾಳಿ, ಎಡಬಿಡದ ಮಳೆ ಸುರಿಯುವುದು ಸಾಮಾನ್ಯ, ಗಾಳಿ ಮಳೆಗೆ ಮಲೆನಾಡಿನಲ್ಲಿ ಸಾಮಾನ್ಯವಾಗಿ ಅಂರ್ತಜಲ ಉಕ್ಕುತ್ತಿದ್ದರೆ, ನೂರಾರು ಮರಗಳು ಧರೆಶಾಯಿಯಾಗುತ್ತಿದ್ದವು. ಅಲ್ಲದೆ ನದಿಗಳ ತಮ್ಮ ಹರಿವನ್ನು ವಿಸ್ತಾರಗೊಳಿಸುತ್ತಿದ್ದರಿಂದ ನೈಜ ಮಲೆನಾಡಿನ ಮಳೆಗೋಚರವಾಗುತಿತ್ತು. ಆದರೆ, ಈ ಬಾರಿ ಶೀತದಿಂದ ಕೂಡಿದ ಜಡಿ ಮಳೆಯಾಗುತ್ತಿದ್ದು ಬಾರಿ ಮಳೆ ಕಾಣೆಯಾಗಿದೆ.

ಎಷ್ಟು ಮಳೆ: ತಾಲೂಕಿನಲ್ಲಿ ಜನವರಿ ಇಂದ ಜುಲೈ 15 ರವರಗೆ 992 ಮೀ.ಮೀಟರ್ ವಾಡಿಕೆ ಮಳೆಯಾಗಬೇಕಿತ್ತು. ಜುಲೈ 15 ಕ್ಕೆ 1225  ಮೀ.ಮೀಟರ್ ಮಳೆಯಾಗಿದ್ದು ಶೇ 23  ರಷ್ಟು ಹೆಚ್ಚು ಮಳೆಯಾಗಿದೆ. ತಾಲೂಕಿನ ಐದು ಹೋಬಳಿಗಳಲ್ಲಿ 9ಮಳೆ ಮಾಫನ ಕೇಂದ್ರಗಳಿದ್ದು ಒಂದು ಮಳೆ ಮಾಪನ ಕೇಂದ್ರದಿಂದ ಮತ್ತೊಂದು ಕೇಂದ್ರಕ್ಕೆ ಸಾವಿರ ಮೀ.ಮೀಟರ್‌ಗಿಂತಲು ಅಧಿಕ ಮಳೆ ವೆತ್ಯಾಸವಿರುವುದು ಆಶ್ಚರ್ಯಕರವಾಗಿದೆ. ತಾಲೂಕಿನಲ್ಲಿ ಹೆಚ್ಚು ಮಳೆ ಬೀಳುವ ಮಾರನಹಳ್ಳಿ ಮಳೆ ಮಾಪನ ಕೇಂದ್ರದಲ್ಲಿ ಜುಲೈ 15 ರವರೆಗೆ1768  ಮೀ.ಮೀಟರ್ ಮಳೆಯಾಗಿದ್ದರೆ, ಬಾಳ್ಳುಪೇಟೆ ಮಳೆ ಮಾಫನ ಕೇಂದ್ರದಲ್ಲಿ ಇದುವರೆಗೆ ಕೇವಲ 565 ಹಾಗೂ ಯಸಳೂರು ಮಳೆ ಮಾಪನ ಕೇಂದ್ರದಲ್ಲಿ559  ಮೀ.ಮೀಟರ್ ಮಾತ್ರ ಮಳೆಯಾಗಿದೆ. ಬೆಳಗೋಡು ಮಳೆ ಮಾಪನ ಕೇಂದ್ರದಲ್ಲಿ 712, ಹೊಸೂರು 971, ಸಕಲೇಶಪುರದಲ್ಲಿ 997 ,ಶುಕ್ರವಾರಸಂತೆಯಲ್ಲಿ 1205,ಹಾನುಬಾಳ್ ೧೦೧೦, ಹೆತ್ತೂರು 1361 ಮೀ.ಮೀಟರ್ ಮಳೆ ದಾಖಲಾಗಿದೆ.

 ತುಂಬದ ನದಿ ಒಡಲು

ತಾಲೂಕಿನಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ನಿರಂತರವಾಗಿ ಮಳೆಯಾಗುತ್ತಿದ್ದರೂ ತಾಲೂಕಿನ ಪ್ರಮುಖ ನದಿ ಹೇಮಾವತಿ ನದಿ ಸೇರಿದಂತೆ ಯಾವುದೇ ನದಿಯ ಒಡಲು ತುಂಬಿಲ್ಲ. ಹೇಮಾವತಿ ನದಿಗೆ ಕಟ್ಟಲಾಗಿರುವ ಗೊರೂರು ಅಣೆಕಟ್ಟೆಯಿಂದ ನಿರಂತರವಾಗಿ ನೀರು ಹೊರಹರಿಯುತ್ತಿರುವುದರಿಂದ ಅರ್ಧ ಮಳೆಗಾಲ ಕಳೆದರೂ ತಾಲೂಕಿನಲ್ಲಿ ಗೊರೂರು ಹಿನ್ನೀರು ಕಾಣೆಯಾಗಿದೆ. ಸಾವಿರಾರು ಎಕರೆ ಹಿನ್ನೀರು ಪ್ರದೇಶ ಸಂಪೂರ್ಣ ಹಸಿರು ಹುಲ್ಲಿನ ಹೊದಿಕೆಯಾಗಿ ಗೋಚರಿಸುತಿದ್ದು, ಜಾನುವಾರುಗಳಿಗೆ ಉತ್ತಮ ಮೇವಿನ ತಾಣವಾಗಿದೆ..

ತಾಲೂಕಿನಲ್ಲಿ ನೈಜ ಮಳೆಯಾಗದಾಗಿದ್ದು ಜಡಿ ಮಳೆ ಬೆಳೆಗಳಿಗೆ ರೋಗಕಾರಕವಾಗಿದೆ. ಸದ್ಯ ಕೆಲದಿನಗಳ ಮಳೆ ಬಿಡುವು ನೀಡಿದರೆ ಬೆಳೆ ಉಳಿಸಿಕೊಳ್ಳಲು ಅನುಕೂಲವಾಗಲಿದೆ. ತಾಲೂಕಿನಲ್ಲಿ ಇದುವರೆಗೆ ೯೯೨ ಮೀ.ಮೀಟರ್ ವಾಡಿಕೆ ಮಳೆಯಾಗಬೇಕಿತ್ತು. ಸದ್ಯ ೧೨೨೫ ಮೀಟರ್ ಮಳೆಯಾಗಿದ್ದು, ಶೇ. ೨೩ರಷ್ಟು ಹೆಚ್ಚು ಮಳೆಯಾಗಿದ್ದು ಭತ್ತದ ನಾಟಿಗೆ ಇದು ಯೋಗ್ಯ ಮಳೆಯಾಗಿದೆ.

- ಚಲುವರಂಗಪ್ಪ, ಸಹಾಯಕ ನಿರ್ದೇಶಕ ಕೃಷಿ ಇಲಾಖೆ,ಸಕಲೇಶಪುರ,

click me!