ರೈತನನ್ನು ಸಾಯಿಸಿದ ಕಾಡು ಹಂದಿಯನ್ನು ಅಟ್ಟಾಡಿಸಿ ಹೊಡೆದು ಕೊಲೆಗೈದ ಹಾಸನದ ಜನತೆ!

By Sathish Kumar KHFirst Published Dec 18, 2023, 9:03 PM IST
Highlights

ಜಮೀನಿನಲ್ಲಿ ನೀರು ಹಾಯಿಸುತ್ತಿದ್ದ ರೈತನ ಮೇಲೆ ದಾಳಿ ಮಾಡಿ ಸಾಯಿಸಿದ ಕಾಡು ಹಂದಿಯನ್ನು ಹಾಸನ ಜನತೆ ಕಲ್ಲು, ದೊಣ್ಣೆಗಳನ್ನು ಹಿಡಿದು ಅಟ್ಟಾಡಿಸಿ ಹೊಡೆದು ಕೊಂದು ಹಾಕಿದ್ದಾರೆ.

ವರದಿ: ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್
ಹಾಸನ (ಡಿ.18):
ಹಾಸನ ಜಿಲ್ಲೆಯಲ್ಲಿ ಈಗಲೂ ಕಾಟ ಕೊಡುತ್ತಿರುವ ಕಾಡಾನೆ, ಚಿರತೆ, ಕರಡಿ, ಹುಲಿ ಜೊತೆಗೆ ಇದೀಗ ಕಾಡು ಹಂದಿ ಸೇರ್ಪಡೆಯಾಗಿದೆ. ಜಮೀನಿನಲ್ಲಿ ಫಸಲಿಗೆ ನೀರು ಹಾಯಿಸುತ್ತಿದ್ದ ರೈತನಿಗೆ ತಿವಿದು ಸಾಯಿಸಿದ ಹಂದಿಯನ್ನು ಅದೇ ಗ್ರಾಮದ ಜನರು ಕಲ್ಲುಮ ದೊಣ್ಣೆಯಿಂದ ಹೊಡೆದು ಸಾಯಿಸಿದ್ದಾರೆ.

ಜಮೀನು ಬಳಿ ಫಸಲಿಗೆ ನೀರು ಹಾಯಿಸುತ್ತಿದ್ದ, ಹೊಳೆನರಸೀಪುರ ತಾಲ್ಲೂಕಿನ ಹಾರಗೌಡನಹಳ್ಳಿ ಗ್ರಾಮದ ರೈತ ಕುಟುಂಬದ ಮೇಲೆ ಕಾಡು ಹಂದಿ ಏಕಾಏಕಿ ದಾಳಿ ಮಾಡಿದ ಪರಿಣಾಮ, ರೈತ ರಾಜೇಗೌಡ(63) ಎಂಬುವರು ಸ್ಥಳದಲ್ಲೇ ಜೀವ ಕಳೆದುಕೊಂಡಿದ್ದಾರೆ. ಘಟನೆಯಲ್ಲಿ ಇವರೊಂದಿಗಿದ್ದ ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು, ಅಮಾಯಕ ರೈತನನ್ನ ಬಲಿ ಪಡೆದ ಕಾಡು ಹಂದಿನ್ನು ಅಟ್ಟಾಡಿಸಿ ಹೊಡೆದು ಸಾಯಿಸಿದ್ದಾರೆ.

ಷಷ್ಠಿ ಪಂಚಮಿಯಂದು ಹಾವಿನ ಹುತ್ತಕ್ಕೆ ಕೋಳಿ ಮೊಟ್ಟೆ, ರಕ್ತ ಅರ್ಪಿಸಿದರೆ ಹಾವು ಕಚ್ಚೊಲ್ಲ!

ರಾಜೇಗೌಡ, ಶಾಂತಮ್ಮ ಹಾಗೂ ನಂಜಮ್ಮ ಎಂಬ ಮಹಿಳೆಯರು ಜಮೀನಿನಲ್ಲಿ ಬೆಳೆದಿರುವ ವಿವಿಧ ಬೆಳೆಗೆ ನೀರು ಹಾಯಿಸುತ್ತಿದ್ದಾಗ ಏಕಾಏಕಿ ಕಾಡು ಹಂದಿ ದಾಳಿ ಮಾಡಿದೆ. ನೋಡ ನೋಡುತ್ತಿದ್ದಂತೆಯೇ ರಾಜೇಗೌಡ ಅವರ ಮೇಲೆರಗಿದ ಕಾಡು ಹಂದಿ ಧರಿಸಿದ್ದ ಬಟ್ಟೆ ಹರಿದು ಎಲ್ಲೆಂದರಲ್ಲಿ ತನ್ನ ಬಲಿಷ್ಠ ಮೂಗು ಹಾಗೂ ಕೋರೆಯಾಕಾರದ ದಂತದಿಂದ ದೇಹದ ವಿವಿಧ ಭಾಗಗಳಿಗೆ ಮನಬದಂತೆ ತಿವಿದಿದೆ. ಗಂಭೀರ ಪೆಟ್ಟುತಿಂದ ರಾಜೇಗೌಡ ಅಲ್ಲೇ ಕೊನೆಯುಸಿರೆಳೆದಿದ್ದಾರೆ.

ಇವರನ್ನು ಬಿಡಿಸಲು ಹೋಗಿದ್ದ ಇಬ್ಬರು ಮಹಿಳೆಯರೂ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಹೊಳೆನರಸೀಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಹಿಮ್ಸ್‌ಗೆ ರವಾನೆ ಮಾಡಲಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ  ಕಾಡಾನೆ, ಕರಡಿ, ಚಿರತೆ ನಂತರ ಇದೀಗ ಕಾಡು ಹಂದಿ ದಾಳಿ ಶುರುವಾಗಿದೆ. ನಾವು ಇನ್ನೇನೆಲ್ಲಾ ತೊಂದರೆ ಅನುಭವಿಸಬೇಕು ಹೇಳಿ ಎಂದು ತಮ್ಮ ಆಕ್ರೋಶ ಹೊರ ಹಾಕಿದರು. ಅರಣ್ಯ ಇಲಾಖೆಯ ಮೇಲಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವರೆಗೂ ಮೃತದೇಹ ಎತ್ತಲು ಬಿಡುವುದಿಲ್ಲ ಎಂದು ಪ್ರತಿಭಟನೆ ನಡೆಸಿ ತಮ್ಮ ಸಿಟ್ಟು ಹೊರ ಹಾಕಿದರು. ನಂತರ ಮಧ್ಯೆ ಪ್ರವೇಶಿಸಿದ ಸ್ಥಳೀಯರು, ಜನರ ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಕಲ್ಲು ಬಂಡೆಗೆ, ತಲೆಯಿಂದ ಡಿಚ್ಚಿ ಹೊಡೆಯೋ ಜಾತ್ರೆ: ರಕ್ತನೂ ಬರೊಲ್ಲ, ಗಾಯವೂ ಆಗೊಲ್ಲ!

ಜನರ ಸಿಟ್ಟಿಗೆ ಹಂದಿ ಬಲಿ: ರೈತನನ್ನು ಬಲಿ ಪಡೆದ ಕಾಡು ಹಂದಿಯನ್ನು ಸ್ಥಳೀಯರು ಅಟ್ಟಾಡಿಸಿ ಹೊಡೆದು ಸಾಯಿಸಿದ್ದಾರೆ. ಜಮೀನು ಬಳಿಯಿದ್ದಾಗ ನಡೆದ ದಾಳಿಯಲ್ಲಿ ರಾಜೇಗೌಡ ಸಾವು, ಇಬ್ಬರು ಮಹಿಳೆಯರಿಗೆ ಗಾಯ ಸುದ್ದಿ ತಿಳಿಯುತಿದ್ದಂತೆಯೇ ಎಚ್ಚೆತ್ತ ಗ್ರಾಮಸ್ಥರು, ಕಲ್ಲು, ದೊಣ್ಣೆ ಮತ್ತಿತರ ವಸ್ತುಗಳಿಂದ ಕಾಡು ಹಂದಿಗೆ ಹೊಡೆದು ಸಾಯಿಸಿದ್ದಾರೆ. ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

click me!