ಹೂಳೆತ್ತದೆ ಸಮಸ್ಯೆ: ಕಾವೇರಿ ತಟದಲ್ಲಿ ಪ್ರವಾಹ ಭೀತಿ

By Kannadaprabha NewsFirst Published May 3, 2020, 11:53 AM IST
Highlights

ಕುಶಾಲನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮುಂಗಾರು ಪೂರ್ವ ಮಳೆಯಾಗುತ್ತಿದ್ದು, ಕಾವೇರಿ ನದಿ ಹೂಳೆತ್ತದ ಪರಿಣಾಮ ಪಟ್ಟಣ ಹಾಗೂ ಕಾವೇರಿ ನದಿ ತಟದ ಜನತೆ ಮತ್ತೆ ಪ್ರವಾಹದ ಭೀತಿಗೆ ಒಳಗಾಗಿದ್ದಾರೆ.

ಕುಶಾಲನಗರ(ಮೇ.03): ಕುಶಾಲನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮುಂಗಾರು ಪೂರ್ವ ಮಳೆಯಾಗುತ್ತಿದ್ದು, ಕಾವೇರಿ ನದಿ ಹೂಳೆತ್ತದ ಪರಿಣಾಮ ಪಟ್ಟಣ ಹಾಗೂ ಕಾವೇರಿ ನದಿ ತಟದ ಜನತೆ ಮತ್ತೆ ಪ್ರವಾಹದ ಭೀತಿಗೆ ಒಳಗಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಕೊರೋನಾ ಮಾರಿಯಿಂದ ರಕ್ಷಣೆ ಪಡೆಯಲು ಮನೆಯೊಳಗೆ ಸೇರಿರುವ ಜನತೆಗೆ ಈಗ ಭವಿಷ್ಯದ ಬಗ್ಗೆ ಚಿಂತೆ ಮಾಡುವ ಪರಿಸ್ಥಿತಿ ಎದುರಾಗಿದೆ.

ಕಳೆದ ಎರಡು ವರ್ಷ ಜುಲೈ, ಆಗಸ್ಟ್‌ ತಿಂಗಳಲ್ಲಿ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನಿರಂತರ ಮಳೆಯಾದ ಬೆನ್ನಲ್ಲೇ ಕಾವೇರಿ ಉಕ್ಕಿ ಹರಿದು ಸಾವಿರಾರು ಮನೆಗಳು ಜಲಾವೃತಗೊಂಡಿದ್ದವು. ಇಡೀ ಜನಜೀವನವೇ ಅಸ್ತವ್ಯಸ್ತಗೊಂಡು ಇನ್ನೂ ಚೇತರಿಕೆಗೊಳ್ಳದ ನಾಗರಿಕರು, ಏಕಾಏಕಿ ಕೊರೋನಾ ಭೀತಿಯಿಂದ ಮನೆಯಲ್ಲಿದ್ದು, ಮತ್ತೆ ಎದುರಾಗುವ ಸಂಭಾವ್ಯ ಪ್ರವಾಹದ ಬಗ್ಗೆ ಆತಂಕದ ಮನಃಸ್ಥಿತಿಯಲ್ಲಿ ದಿನದೂಡುತ್ತಿದ್ದಾರೆ.

ಉಡುಪಿ, ದಕ್ಷಿಣ ಕನ್ನಡದಲ್ಲಿ ಗುಡಗು ಸಹಿತ ಭಾರೀ ಮಳೆ

ಒಂದು ವೇಳೆ ಕೊರೋನಾ ಭಯದಿಂದ ಹೊರಬಂದರೂ ಕಾವೇರಿಯ ಪ್ರವಾಹದ ಭೀತಿ ಎದುರಿಸುವುದಂತೂ ಖಚಿತ ಎನ್ನುತ್ತಾರೆ ಕಾವೇರಿ ನದಿ ಪ್ರವಾಹ ಸಂತ್ರಸ್ತರ ವೇದಿಕೆಯ ಉಪಾಧ್ಯಕ್ಷ ತೋರೇರ ಉದಯಕುಮಾರ್‌. ಯಾವುದೇ ರೀತಿಯಲ್ಲೂ ಇದರಿಂದ ಹೊರಬರಲು ಅಸಾಧ್ಯ ಎನ್ನುತ್ತಾರೆ.

ಹರಿವಿಗೆ ಅಡ್ಡಿ:

ಕುಶಾಲನಗರದ ಬೈಚನಹಳ್ಳಿ ಭಾಗದಿಂದ ಮುಳ್ಳುಸೋಗೆ ತನಕ ಕಾವೇರಿ ನದಿಯಲ್ಲಿ ನೀರಿನ ಹರಿವು ಸರಾಗವಾಗಿ ಹರಿಯಲು ಅಡ್ಡಿಯುಂಟಾಗಿದ್ದು, ಈ ಬಗ್ಗೆ ಸ್ಥಳೀಯರು ಪ್ರವಾಹ ಸಂತ್ರಸ್ತರ ವೇದಿಕೆ ಮೂಲಕ ಜಿಲ್ಲಾಧಿಕಾರಿಗೆ ನದಿಯ ಹೂಳು ಮತ್ತು ಕಳೆ ತೆರವುಗೊಳಿಸಲು 4 ತಿಂಗಳ ಹಿಂದೆ ಮನವಿ ಮಾಡಿದ್ದರು. ಆ ಮೇರೆಗೆ ಜಿಲ್ಲಾಧಿಕಾರಿ ಕಾವೇರಿ ನೀರಾವರಿ ನಿಗಮ ಮೂಲಕ ಅಂದಾಜು ಪಟ್ಟಿತಯಾರಿಸಿ ನದಿಯ ಕಳೆ ತೆಗೆಯುವ ಯೋಜನೆಗೆ ಅಂದಾಜು 88 ಲಕ್ಷ ರು. ಅನುದಾನ ಕೂಡ ಕಲ್ಪಿಸಿದ್ದರು.

ಆದರೆ ಕೋವಿಡ್‌-19ನಿಂದ ಈ ಯೋಜನೆ ಈಗ ನನೆಗುದಿಗೆ ಬಿದ್ದಿದೆ. ಈ ಬಗ್ಗೆ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಅವರ ಮೂಲಕ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗಿದ್ದು, ಕೂಡಲೇ ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ನದಿಯ ಹೂಳೆತ್ತುವ ಕಾರ್ಯ ನಡೆಯಬೇಕಾಗಿದೆ ಎಂದು ವೇದಿಕೆ ಪ್ರಮುಖರು ತಿಳಿಸಿದ್ದಾರೆ.

ನಿರ್ಮಲವಾಗಿದೆ ಪಶ್ಚಿಮ ಘಟ್ಟ: ಲಾಕ್‌ಡೌನ್‌ನಿಂದಾಗಿ ಕಾಡ್ಗಿಚ್ಚೂ ಇಲ್ಲ..!

ನದಿ ನಿರ್ವಹಣೆ ಕಾರ್ಯಕ್ಕೆ ಎಲ್ಲ ರೀತಿಯ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಅಪ್ಪಚ್ಚುರಂಜನ್‌ ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಇದಕ್ಕೆ ಸಮ್ಮತ್ತಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಅಂತಿಮ ಹಂತದಲ್ಲಿ ಕೋವಿಡ್‌-19 ಒತ್ತಡದಿಂದ ಈ ಕಾಮಗಾರಿಗೆ ಅಡ್ಡಿಯುಂಟಾಗಿತ್ತು. ಕಾವೇರಿ ನದಿಯ ಹೂಳು ಎತ್ತುವ ಮೂಲಕ ನದಿ ನಿರ್ವಹಣೆ ಕಾರ್ಯದ ಬಗ್ಗೆ ವಿಶೇಷ ರೀತಿಯ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ವೇದಿಕೆ ಪ್ರಮುಖರಿಗೆ ಭರವಸೆ ನೀಡಿದ್ದಾರೆ.

ತುರ್ತು ಕ್ರಮ ಅತ್ಯಗತ್ಯ:

ಕಳೆದ ವರ್ಷ ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯ ಸುಮಾರು 1200ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದ್ದು, ಮಡಿಕೇರಿ ಕುಶಾಲನಗರ, ಮೈಸೂರು ರಾಷ್ಟ್ರೀಯ ಹೆದ್ದಾರಿ ಕೂಡ ಮೂರು ದಿನ ನೀರಿನಿಂದ ಆವೃತಗೊಂಡು ವಾಹನ ಸಂಚಾರ ಸ್ಥಗಿತಗೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ನದಿ ನಿರ್ವಹಣೆಗೆ ತುರ್ತು ಕ್ರಮಕೈಗೊಳ್ಳಬೇಕಾಗಿದೆ ಎನ್ನುವುದು ಈ ಭಾಗದ ಜನತೆಯ ಆಗ್ರಹವಾಗಿದೆ.

 

ಲಾಕ್‌ಡೌನ್‌ನಿಂದಾಗಿ ಗದ್ದೆಯಲ್ಲಿಯೇ ಸೃಷ್ಟಿಯಾಯ್ತು ಮಾರ್ಕೆಟ್..!

 

ಈಗಾಗಲೇ ಕಾಮಗಾರಿಗೆ ಅಂದಾಜುಪಟ್ಟಿಸಿದ್ಧವಾಗಿದೆ. ಈ ಬಗ್ಗೆ ಉಸ್ತುವಾರಿ ಸಚಿವರ ಜೊತೆಗೆ ಚರ್ಚಿಸಲಾಗಿದೆ. ತಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚ ರಂಜನ್‌ ತಿಳಿಸಿದ್ದಾರೆ.

ಕಾಮಗಾರಿಯ ಅಂದಾಜುಪಟ್ಟಿಸಿದ್ಧವಾಗಿದ್ದು, ಕಾವೇರಿ ನೀರಾವರಿ ನಿಗಮಕ್ಕೆ ಕಾಮಗಾರಿ ಆರಂಭಿಸಲು ಸೂಚನೆ ನೀಡಲಾಗಿದ. ಕಾಮಗಾರಿ ಗುಣಮಟ್ಟಪರಿಶೀಲನೆ ಸಂಬಂಧವೂ ಪತ್ರ ವ್ಯವಹಾರ ನಡೆಸಲಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ತಿಳಿಸಿದ್ದಾರೆ.

-ಕೀರ್ತನಾ

click me!