ಮೆಣಸಿನಕಾಯಿ ಬೆಳೆಗೆ ಕಂಟಕವಾದ ಕಪ್ಪು ನುಸಿ ರೋಗ: ಆತಂಕದಲ್ಲಿ ರೈತರು

By Kannadaprabha NewsFirst Published Dec 2, 2023, 4:00 AM IST
Highlights

ಭೂಮಿ ಸ್ವಲ್ಪ ಮಟ್ಟಿಗೆ ತೇವಾಂಶವಿದ್ದು, ಇರುವಷ್ಟರಲ್ಲಿ ಅಲ್ಪಸ್ವಲ್ಪ ಬೆಳೆ ಬಂದು ಮೆಣಸಿನಕಾಯಿ ಬೆಳೆಗೆ ವಿನಿಯೋಗಿಸಿದ ಖರ್ಚನ್ನಾದರೂ ಪಡೆಯುವ ನಿರೀಕ್ಷೆಯಲ್ಲಿ ರೈತರಿದ್ದರು. ಆದರೆ ಬ್ಲಾಕ್ ಥ್ರೈಪ್ಸ್(ಕಪ್ಪು ನುಸಿ) ರೋಗವು ಬೆಳೆಗೆ ಹರಡುತ್ತಿದ್ದು, ಇದರಿಂದ ಮೆಣಸಿನಕಾಯಿ ಗಿಡದ ಎಲೆಗಳೆಲ್ಲಾ ಕಪ್ಪಾಗಿ, ಹೂವು ಉದುರಿ ಇಳುವರಿಯಲ್ಲಿ ಕುಂಠಿತವಾಗುವ ಆತಂಕ ಉಂಟಾಗಿದ್ದು, ರೈತರ ನಿರೀಕ್ಷೆಯು ಹುಸಿಯಾಗುವ ಭೀತಿ ಹೆಚ್ಚಾಗಿದೆ.

ಬಿ.ಎಚ್.ಎಂ. ಅಮರನಾಥಶಾಸ್ತ್ರಿ

ಕಂಪ್ಲಿ(ಡಿ.02): ತಾಲೂಕಿನಲ್ಲಿ ಅನಾವೃಷ್ಟಿಯಿಂದಾಗಿ ಮೆಣಸಿನಕಾಯಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಒಂದೆಡೆಯಾದರೆ ಇನ್ನೊಂದೆಡೆ ಬ್ಲಾಕ್ ಥ್ರೈಪ್ಸ್(ಕಪ್ಪು ನುಸಿ) ಎಂಬ ರೋಗ ಬೆಳೆಗೆ ಹರಡುತ್ತಿರುವುದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ತಾಲೂಕಿನ ರೈತರು ಭತ್ತ, ಬಾಳೆ ಬಿಟ್ಟರೆ ಹೆಚ್ಚು ಮೆಣಸಿನಕಾಯಿ ಬೆಳೆಯುತ್ತಿದ್ದಾರೆ. ಈ ಹಿಂದೆ ಶ್ರೀರಾಮರಂಗಾಪುರ, ಸುಗ್ಗೇನಹಳ್ಳಿ ಸೇರಿದಂತೆ ಹಲವೆಡೆ ಸೇರಿ 4500ಕ್ಕೂ ಹೆಚ್ಚು ಹೆಕ್ಟೇರ್ ಮೆಣಸಿನಕಾಯಿ ಬೆಳೆ ಬಿತ್ತನೆ ಮಾಡಲಾಗುತ್ತಿತ್ತು. ಈ ಬಾರಿ ಮಳೆ ಕೊರತೆ ಆತಂಕದಲ್ಲಿ 2600 ಹೆಕ್ಟೇರ್‌ನಲ್ಲಿ ಮಾತ್ರ ಮೆಣಸಿನಕಾಯಿ ಬೀಜ ಬಿತ್ತನೆ ಮಾಡಲಾಗಿದೆ. ಮಳೆ ಕೊರತೆಯಿಂದಾಗಿ ತುಂಗಭದ್ರಾ ಜಲಾಶಯದಲ್ಲಿ ನೀರಿನ ಪ್ರಮಾಣವೂ ಕುಸಿದಿದ್ದು, ನ. 27ರಂದು ಕಾಲುವೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. ಇದರಿಂದಾಗಿ ಹೂವು ಬಿಡುವ ಹಂತದಲ್ಲಿರುವ ಮೆಣಸಿನಕಾಯಿ ಬೆಳೆ ಒಣಗುವ ಆತಂಕವಿದೆ. ಅಲ್ಲದೇ ಎಕರೆಗೆ 20ರಿಂದ 25 ಕ್ವಿಂಟಲ್ ಬರುತ್ತಿದ್ದ ಇಳುವರಿ ಅರ್ಧಕ್ಕೆ ಕುಸಿಯುವ ಭೀತಿ ರೈತರನ್ನು ಕಾಡುತ್ತಿದೆ.

ಬಳ್ಳಾರಿ ವಿಮ್ಸ್‌ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ನಿರ್ದೇಶಕ ಗಂಗಾಧರ ಗೌಡ ವಿರುದ್ಧ ಎಫ್‌ಐಆರ್

ಬ್ಲಾಕ್ ಥ್ರೈಪ್ಸ್(ಕಪ್ಪು ನುಸಿ) ಕಂಟಕ:

ಮೆಣಸಿನಕಾಯಿ ಬೆಳೆ ಉತ್ತಮ ಇಳುವರಿ ಬಂದು ರೈತರು ಸಂಕಷ್ಟಗಳಿಂದ ದೂರವಾಗಬೇಕಾದರೆ ಬೆಳೆಗೆ ಡಿಸೆಂಬರ್ ತಿಂಗಳ ಕೊನೆಯವರೆಗೂ ನೀರಿನ ಪೂರೈಕೆಯಾಗಬೇಕು. ಈ ಭಾಗದಲ್ಲಿ ವಾಡಿಕೆಯಷ್ಟು ಮಳೆಯಿಲ್ಲ. ಅಲ್ಲದೇ ಅನಾವೃಷ್ಟಿಯಿಂದ ತುಂಗಭದ್ರಾ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಕಾಲುವೆಗಳಿಗೆ ನೀರು ಹರಿಸುವುದನ್ನು ತಡೆಯಲಾಗಿದೆ.

ಭೂಮಿ ಸ್ವಲ್ಪ ಮಟ್ಟಿಗೆ ತೇವಾಂಶವಿದ್ದು, ಇರುವಷ್ಟರಲ್ಲಿ ಅಲ್ಪಸ್ವಲ್ಪ ಬೆಳೆ ಬಂದು ಮೆಣಸಿನಕಾಯಿ ಬೆಳೆಗೆ ವಿನಿಯೋಗಿಸಿದ ಖರ್ಚನ್ನಾದರೂ ಪಡೆಯುವ ನಿರೀಕ್ಷೆಯಲ್ಲಿ ರೈತರಿದ್ದರು. ಆದರೆ ಬ್ಲಾಕ್ ಥ್ರೈಪ್ಸ್(ಕಪ್ಪು ನುಸಿ) ರೋಗವು ಬೆಳೆಗೆ ಹರಡುತ್ತಿದ್ದು, ಇದರಿಂದ ಮೆಣಸಿನಕಾಯಿ ಗಿಡದ ಎಲೆಗಳೆಲ್ಲಾ ಕಪ್ಪಾಗಿ, ಹೂವು ಉದುರಿ ಇಳುವರಿಯಲ್ಲಿ ಕುಂಠಿತವಾಗುವ ಆತಂಕ ಉಂಟಾಗಿದ್ದು, ರೈತರ ನಿರೀಕ್ಷೆಯು ಹುಸಿಯಾಗುವ ಭೀತಿ ಹೆಚ್ಚಾಗಿದೆ.

ಸಾಲ ತೀರಿಸುವುದಾದರೂ ಹೇಗೆ?:

12 ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದಿದ್ದೇನೆ. ಬೀಜ, ರಸಗೊಬ್ಬರ, ಔಷಧಿ ಸಿಂಪಡಣೆ, ಕೃಷಿ ಕಾರ್ಮಿಕರ ವೆಚ್ಚ ಸೇರಿ 1 ಎಕರೆಗೆ ₹1,20 ಲಕ್ಷದವರೆಗೆ ಖರ್ಚಾಗಿದ್ದು, ಇದಕ್ಕಾಗಿ ಸಾಕಷ್ಟು ಸಾಲ ಮಾಡಿದ್ದೇನೆ. ಮೆಣಸಿನಕಾಯಿಂದ ಎಕರೆಗೆ ₹1 ಲಕ್ಷಕ್ಕೂ ಅಧಿಕ ನಿವ್ವಳ ಲಾಭದ ನಿರೀಕ್ಷೆಯಲ್ಲಿದ್ದೆ. ಮಳೆಯ ಕೊರತೆಯಿಂದಾಗಿ ಬೆಳೆ ಬಾಡಿ ಹೋಗುವ ಆತಂಕ ಒಂದೆಡೆಯಾದರೆ ಬ್ಲಾಕ್ ಥ್ರೈಪ್ಸ್(ಕಪ್ಪು ನುಸಿ) ರೋಗದ ಭೀತಿ ಮತ್ತೊಂದೆಡೆಯಾಗಿದೆ. ಟ್ಯಾಂಕರ್ ಸಹಾಯದಿಂದ ಹೇಗೋ ನೀರು ಪೂರೈಸಿ ಬೆಳೆಗೆ ವಿನಿಯೋಗಿಸಿದ ಖರ್ಚನ್ನಾದರೂ ಹಿಂಪಡೆಯೋಣವೆಂದರೆ ರೋಗಬಾಧೆ ನಮ್ಮ ನಿರೀಕ್ಷೆಗೆ ಅಡ್ಡಿಯನ್ನುಂಟು ಮಾಡಿದೆ ಎನ್ನುತ್ತಾರೆ ಶ್ರೀರಾಮರಂಗಾಪುರದ ರೈತ ನಾರಾಯಣಸ್ವಾಮಿ.

ಬಳ್ಳಾರಿ-ವಿಜಯನಗರ: ನಕಲಿ ಡಾಕ್ಟರ್‌ಗೆ ಕಡಿವಾಣ ಹಾಕೋದಕ್ಕೆ ಆರೋಗ್ಯ ಇಲಾಖೆ ಹರಸಾಹಸ..!

ರೋಗಬಾಧೆ ತಡೆಗೆ ಕೀಟನಾಶಕಗಳಾದ ಪಿಪ್ರೋನಿಲ್ 1 ಮಿಲೀ ಅಥವಾ ಡೈಯಾಫೆಂಥಿಯುರಾನ್ 1 ಗ್ರಾಂ ಅಥವಾ ಪ್ಲುಕ್ಸಮೆಟಾ ಮೈಡ್ 0.52 ಮಿಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಜತೆಗೆ ಆಗಿಂದಾಗ್ಗೆ ಎಡೆ ಹೊಡೆಯುವುದು, ಸರಿಯಾದ ಪ್ರಮಾಣದಲ್ಲಿ ನೀರು ಹಾಯಿಸುವುದರಿಂದ ಮೆಣಸಿನಕಾಯಿ ಬೆಳೆಗೆ ಬ್ಲಾಕ್ ಥ್ರೈಪ್ಸ್ (ಕಪ್ಪು ನುಸಿ) ರೋಗವು ಹರಡದಂತೆ ತಡೆಯಲು ಸಾಧ್ಯ ಎಂದು ಕಂಪ್ಲಿ ಸಹಾಯಕ ತೋಟಗಾರಿಕಾ ಅಧಿಕಾರಿ ಆರ್.ಜೆ. ಕರಿಗೌಡರ್ ಹೇಳಿದ್ದಾರೆ.  

ಬರಗಾಲದಿಂದಾಗಿ ತಾಲೂಕಿನಾದ್ಯಂತ ಅನೇಕ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಬರ ಪರಿಹಾರವನ್ನು ಈವರೆಗೂ ನೀಡದಿರುವುದು ಶೋಚನೀಯ. ಈಗಲಾದರೂ ಸರ್ಕಾರ ಎಚ್ಚೆತ್ತು ರೈತರಿಗೆ ಸೂಕ್ತ ಪರಿಹಾರ ಒದಗಿಸುವ ಮೂಲಕ ನೆರವಿಗೆ ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಬಳ್ಳಾರಿ ಜಿಲ್ಲಾಧ್ಯಕ್ಷ ಬಿ.ವಿ. ಗೌಡ ತಿಳಿಸಿದ್ದಾರೆ. 

click me!