Children's Help Center: ಹುಬ್ಳಿ ರೈಲ್ವೆ ನಿಲ್ದಾಣದಲ್ಲಿ 484 ಮಕ್ಕಳ ರಕ್ಷಿಸಿದ ಸಹಾಯವಾಣಿ ಕೇಂದ್ರ

By Kannadaprabha NewsFirst Published Dec 27, 2021, 12:21 PM IST
Highlights

*  ಹೊರರಾಜ್ಯದಿಂದ ಕೆಲಸ ಹುಡುಕಿ ಬರುವ ಮಕ್ಕಳು
*  ಐದು ವರ್ಷದಲ್ಲಿ 3330 ಮಕ್ಕಳು ಮರಳಿ ಗೂಡಿಗೆ
*  ಮಕ್ಕಳ ಸಹಾಯವಾಣಿ ಕೇಂದ್ರ(1098) 
 

ಮಯೂರ ಹೆಗಡೆ

ಹುಬ್ಬಳ್ಳಿ(ಡಿ.27): ಆತ ರಾಜಸ್ತಾನದ ಹುಡುಗ. ಪಾಲಕರು ಮೊಬೈಲ್‌ ಕೊಟ್ಟಿಲ್ಲ ಎಂಬ ಕಾರಣಕ್ಕೆ ಸಿಟ್ಟಿಂದ ಸೀದಾ ರೈಲು(Train) ಹತ್ತಿಬಿಟ್ಟ. ಬಂದು ಇಳಿದದ್ದು ಹುಬ್ಬಳ್ಳಿಗೆ(Hubballi). ಎಲ್ಲಿಗೆ ಬಂದೆ, ಏನು ಮಾಡಬೇಕು ಯಾವ ಭಾಷೆ ಮಾತನಾಡಬೇಕು ಒಂದೂ ತೋಚದೆ ನಿಂತಿದ್ದ. ಆ ಬಾಲಕನ ರಕ್ಷಿಸಿ ಸುರಕ್ಷಿತವಾಗಿ ಪಾಲಕರ ಬಳಿ ತಲುಪಿಸಿದ್ದು ನಿಲ್ದಾಣದ ಮಕ್ಕಳ ಸಹಾಯವಾಣಿ ಕೇಂದ್ರ!(Children's Help Center) ಕಳೆದ ಜನವರಿಯಿಂದ ಇಲ್ಲಿವರೆಗೆ (ಡಿ.24) ಹೊರರಾಜ್ಯದ ಇಂತಹ 52 ಮಕ್ಕಳು ಸೇರಿ ಒಟ್ಟು 484 ಮಕ್ಕಳನ್ನು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದ ಮಕ್ಕಳ ಸಹಾಯವಾಣಿ ಕೇಂದ್ರ ರಕ್ಷಿಸಿದೆ.

ಹೀಗೆ ರೈಲ್ವೆ ನಿಲ್ದಾಣದಲ್ಲಿ ಸಿಗುವವರ ಹಿಂದೆ ಒಂದೊಂದು ಕಥೆ ಇರುತ್ತದೆ. ಕೇಂದ್ರದ ಸಿಬ್ಬಂದಿ ಅವರ ಕಥೆಗೆ ಕಿವಿಯಾಗುತ್ತಾರೆ. ಓದುವ ಆಸೆಯಿದ್ದ ಬಾಲಕಾರ್ಮಿಕರನ್ನು(Child Labors) ರಕ್ಷಿಸಿ ಶಾಲೆಗೆ ಸೇರಿಸಲಾಗಿದೆ. ರೈಲಲ್ಲಿ ಬಿಕ್ಷಾಪಾತ್ರೆ ಹಿಡಿದು ಓಡಾಡುತ್ತಿದ್ದ ಮಕ್ಕಳಿಗೆ(Children) ಪುಸ್ತಕ ಕೊಡಲಾಗಿದೆ. ಅಂಗವಿಕಲ ಮಕ್ಕಳಿಗೆ ಸುರಕ್ಷಿತ ಆಶ್ರಯ ಕಲ್ಪಿಸಲಾಗಿದೆ. ಹೆತ್ತವರು ಬಿಟ್ಟು ಹೋದ ಹಸುಗೂಸನ್ನು ಬದುಕಿಸುವ ಪ್ರಯತ್ನವೂ ನಡೆದಿದೆ. ಪ್ರೇಮಿಯ ಜೊತೆ ಬಂದ ಅಪ್ರಾಪ್ತೆಗೆ ತಿಳಿ ಹೇಳುವ ಕೆಲಸವನ್ನೂ ಸಹಾಯವಾಣಿ ಕೇಂದ್ರದ ಸಿಬ್ಬಂದಿ ಮಾಡಿದ್ದಾರೆ.

Hubballi Railway Station: ಸೋಂಕು ಹೆಚ್ಚುತ್ತಿದ್ರೂ ಲಸಿಕೆ ಪ್ರಮಾಣಪತ್ರ ಪರಿಶೀಲನೆಗಿಲ್ಲ ವ್ಯವಸ್ಥೆ..!

ಕನ್ನಡಪ್ರಭ(Kannada Prabha) ಜತೆ ಮಾತನಾಡಿದ ಸಹಾಯವಾಣಿ ಕೇಂದ್ರದ ಸಹಾಯಕ ನಿರ್ದೇಶಕ ಫಾ.ಪೀಟರ್‌ ಆಶೀರ್ವಾದ, ‘ನಮ್ಮ ಕೇಂದ್ರದಲ್ಲಿ 12 ಸಿಬ್ಬಂದಿ ಇದ್ದಾರೆ. ನಿಲ್ದಾಣದ ಐದು ಪ್ಲಾಟ್‌ಫಾರಂನಲ್ಲಿ ಒಬ್ಬರನ್ನು ನಿಯೋಜನೆ ಮಾಡಿದ್ದೇವೆ. ಮಕ್ಕಳನ್ನು ಗಮನಿಸುವುದೆ ಇವರ ಕೆಲಸ. ಸಂಶಯ ಬಂದರೆ ಮಾತನಾಡಿಸಿ, ವಿಶ್ವಾಸಕ್ಕೆ ತೆಗೆದುಕೊಂಡು ಹಿನ್ನೆಲೆ ಕೆದಕುತ್ತಾರೆ. ಸೀದಾ ಕೇಂದ್ರಕ್ಕೆ ಕರೆತಂದು ಮುಂದಿನ ಪ್ರಕ್ರಿಯೆ ನಡೆಸುತ್ತೇವೆ’ ಎಂದರು.
‘ಮಕ್ಕಳಿಂದ ವಿಷಯ ಹೊರ ತೆಗೆಯುವುದು ಕಷ್ಟವೇ. ಅದಕ್ಕಾಗಿ ಆಪ್ತ ಸಮಾಲೋಚಕರ(Counseling) ತಂಡವೂ ಇದೆ. ಇಬ್ಬರು ಸ್ವಯಂ ಸೇವಕರಿದ್ದಾರೆ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮೂಲಕ ಪೋಷಕರಿಗೆ ಒಪ್ಪಿಸಲಾಗುತ್ತದೆ. ಕೆಲವೊಮ್ಮೆ ದಿನಕ್ಕೆ ಎಂಟು ಮಕ್ಕಳವರೆಗೂ ರಕ್ಷಣೆ ಮಾಡಿದ್ದಿದೆ’ ಎಂದು ತಿಳಿಸಿದರು.

‘ಹೊರರಾಜ್ಯದಿಂದ ಮಕ್ಕಳು ಹೆಚ್ಚಾಗಿ ಕೆಲಸ ಹುಡುಕಿ ಬರುತ್ತವೆ. ಓದಿನ ಬಗ್ಗೆ ಬುದ್ಧಿ ಹೇಳಿದ್ದಕ್ಕೆ ಮನೆಯಲ್ಲಿ ಪಾಲಕರ ಮಾತಿಗೆ ಸಿಟ್ಟು, ಬೇಸರ ಮಾಡಿಕೊಂಡು ಬರುವ ಮಕ್ಕಳೇ ಹೆಚ್ಚು. ಇಂಟರ್‌ನೆಟ್‌ ಪ್ಯಾಕ್‌ ಹಾಕಿಸಿಲ್ಲ ಎಂದು ಕೋಪಗೊಂಡು ಬರುವವರೂ ಇದ್ದಾರೆ. ಕೆಲ ಮಕ್ಕಳು ರೈಲಿನ ಪ್ರಯಾಣದ ಕುತೂಹಲಕ್ಕೆ ಹತ್ತಿಬಿಡುತ್ತಾರೆ. ಹುಬ್ಬಳ್ಳಿ ಸುತ್ತಲ ಜಿಲ್ಲೆಯ ಮಕ್ಕಳು ಶಾಲಾ ಸಮವಸ್ತ್ರದೊಂದಿಗೆ ಬಂದು ಬಿಡುತ್ತಾರೆ’ ಎನ್ನುತ್ತಾರೆ ಫಾ. ಪೀಟರ್‌.
ಎರಡು ತಿಂಗಳ ಹಿಂದೆ ಹೃದಯದಲ್ಲಿ ರಂದ್ರವಿದ್ದ ಮಗುವನ್ನು ಸ್ವತಃ ಪಾಲಕರೇ ಪ್ಲಾಟ್‌ಫಾರಂನಲ್ಲಿ ಬಿಟ್ಟು ಹೋಗಿದ್ದರು. ಆಸ್ಪತ್ರೆಗೆ ಮಗು ದಾಖಲಿಸಿದರೂ ದುರದೃಷ್ಟವಶಾತ್‌ ಬದುಕಲಿಲ್ಲ. ಪಾಲಕರೀಗ ಜೈಲಿನಲ್ಲಿದ್ದಾರೆ ಎಂದು ಕೇಂದ್ರದ ಸಿಬ್ಬಂದಿ ವಿಷಾದ ವ್ಯಕ್ತಪಡಿಸುತ್ತಾರೆ.

ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಪಬ್ಲಿಕ್‌ ಸ್ಟೋರ್‌, ಫ್ರಿಡ್ಜ್‌ ಮಾಯ..!

80 ಬಾಲಕಾರ್ಮಿಕರ ರಕ್ಷಣೆ

ಈ ವರ್ಷ 406 ಗಂಡು, 78 ಹೆಣ್ಣು ಸೇರಿ 484 ಮಕ್ಕಳನ್ನು ರಕ್ಷಿಸಲಾಗಿದೆ. ಅದರಲ್ಲಿ ಒಡಿಶಾದ 11, ಪ.ಬಂಗಾಳದ 9, ಮಹಾರಾಷ್ಟ್ರ, ಉತ್ತರ ಪ್ರದೇಶದ ತಲಾ 7, ರಾಜಸ್ಥಾನದ 6, ಗೋವಾ, ಆಂಧ್ರ, ಮ.ಪ್ರದೇಶ 2, ತಮಿಳುನಾಡು ಮತ್ತು ತೆಲಂಗಾಣದ ಒಂದು ಮಗು ರಕ್ಷಿಸಲಾಗಿದೆ. ಒಟ್ಟಾರೆ 80 ಬಾಲಕಾರ್ಮಿಕರನ್ನು ರಕ್ಷಿಸಲಾಗಿದೆ.

ಕೋವಿಡ್‌ನಿಂದ ಕಡಿಮೆ

ಕಳೆದ 5 ವರ್ಷದಲ್ಲಿ ಈ ರೀತಿ 3330 ಮಕ್ಕಳನ್ನು ಕಾಪಾಡಿ ಪುನಃ ಗೂಡು ಸೇರಿಸಿದೆ. ಹಾಗೆ ನೋಡಿದರೆ, ಕೋವಿಡ್‌ನಿಂದ(Covid-19) ರೈಲು ಸಂಚಾರ ಕಡಿಮೆಯಾದ ಕಾರಣ ಸಹಜವಾಗಿ ಹೀಗೆ ನಿಲ್ದಾಣಕ್ಕೆ ಬರುವ ಮಕ್ಕಳ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿದೆ. 2017ರಲ್ಲಿ 735, 2018ರಲ್ಲಿ 953, 2019ರಲ್ಲಿ 1008 ಮಕ್ಕಳನ್ನು ರಕ್ಷಿಸಲಾಗಿತ್ತು. ಕೋವಿಡ್‌ನಿಂದ ರೈಲು ಸಂಚಾರ ಇಲ್ಲದ ಕಾರಣ 2020ರಲ್ಲಿ 150 ಮಕ್ಕಳನ್ನು ಕಾಪಾಡಲಾಗಿದೆ ಎಂದು ಕೇಂದ್ರದವರು ಮಾಹಿತಿ ನೀಡಿದ್ದಾರೆ.

ಮಕ್ಕಳನ್ನು ರಕ್ಷಿಸಿ ಅವರನ್ನು ವಾಪಸ್‌ ಪಾಲಕರ ಬಳಿ ಸುರಕ್ಷಿತವಾಗಿ ಬಿಡುವುದು ಕೂಡ ದೊಡ್ಡ ಟಾಸ್ಕ್‌. ಸಹಾಯವಾಣಿ ಇಂಥ ಕೆಲಸ ಮಾಡುತ್ತಿದ್ದು, ಇಂಥ ಮಕ್ಕಳು ನಿಲ್ದಾಣದಲ್ಲಿ ಕಂಡರೆ ಸಹಾಯವಾಣಿ 1098ಕ್ಕೆ ಕರೆ ಮಾಡಿ ಅಂತ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಮಕ್ಕಳ ಸಹಾಯವಾಣಿ ಕೇಂದ್ರದ ಸಹಾಯಕ ನಿರ್ದೇಶಕ ಫಾ. ಪೀಟರ್‌ ಆಶೀರ್ವಾದ ತಿಳಿಸಿದ್ದಾರೆ. 
 

click me!