
ಕಲಬುರಗಿ(ಏ.30): ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೇವರ್ಗಿ ಮತಕ್ಷೇತ್ರದಿಂದ 10 ಸಾವಿರಕ್ಕೂ ಹೆಚ್ಚಿನ ಲೀಡ್ ನಿಶ್ಚಿತ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಹೇಳಿದ್ದಾರೆ. ಇಂದು(ಮಂಗಳವಾರ) ಕಲಬುರಗಿ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಅಜಯ್ ಸಿಂಗ್ ಅವರು, ಲೀಡ್ ವಿಚಾರದಲ್ಲಿ ಯಾರು ಏನೇ ಹೇಳಿದರೂ ತಾವು ಗಮನ ಕೊಡೋದಿಲ್ಲ, ಕಾಂಗ್ರೆಸ್‌ನ ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ ಜೇವರ್ಗಿ ವ್ಯಾಪ್ತಿಯಲ್ಲಿಯೂ ಜನ ಕಾಂಗ್ರೆಸ್ ಪರ ವಾಲಿದ್ದಾರೆ. ಶೇ. 85 ಕ್ಕೂ ಹೆಚ್ಚು ಹೆಮ್ಮಕ್ಕಳು ತಾವೇ ಕೈ ಬಲಪಡಿಸುವ ಉತ್ಸಾಹದಲ್ಲಿದ್ದಾರೆ ಎಂದು ಹೇಳಿದರು.
ವಿರೋಧ ಪಕ್ಷದವರು ಲೀಡ್ ವಿಚಾರದಲ್ಲಿ ಏನೇ ಹೇಳಲಿ, ತಾವು ಅದಕ್ಕೆಲ್ಲ ಪ್ರತಿಕ್ರಿಯಿಸುವ ಗೋಜಿಗೆ ಹೋಗೋದಿಲ್ಲ. ನಮ್ಮ ಕೆಲಸಕ್ಕೆ ಜನ ಸ್ಪಂದಿಸುತ್ತಿದ್ದಾರೆ, ನಾವು ಹಳ್ಳಿಗಾಡಿಗೆ ಹೋದಾಗೆಲ್ಲಾ ಜನ ಕೈ ಹಿಡಿಯುವ ಭರವಸೆ ನೀಡುತ್ತಿದ್ದಾರೆ. ಇದಕ್ಕಿಂತ ಹೆಚ್ಚಿನದು ಏನು ಬೇಕು ಹೇಳಿ? ಎಂದು ಸಿಂಗ್ ಪ್ರಶ್ನಿಸಿದರು.
ನಾವು ಕೇಳಿದ್ದರ ಕಾಲು ಭಾಗ ಬರ ಪರಿಹಾರವನ್ನೂ ಕೊಟ್ಟಿಲ್ಲ: ಸಿಎಂ ಸಿದ್ದರಾಮಯ್ಯ
ಗೃಹ ಲಕ್ಷ್ಮೀ ಹಣ ಹಳ್ಳಿ ಹೆಣ್ಮಕ್ಕಳ ಸಂಸಾರಕ್ಕೆ ಅನುಕೂಲ
ಗೃಹ ಲಕ್ಷ್ಮೀ ಯೋಜನೆಯ ಹಣ ಹಳ್ಳಿ ಹೆಣ್ಮಕ್ಕಳಿಗೆ ಸಂಸಾರಕ್ಕೆ ಅನುಕೂಲವಾಗಿದೆ. ಕರೆಂಟ್ ಫ್ರೀ, ಅಕ್ಕಿ ಬದಲು ನೀಡುತ್ತಿರುವ ಹಣ, ಬಸ್‌ನಲ್ಲಿ ಉಚಿತ ಪ್ರಯಾಣದಿಂದಾಗಿ ಗ್ರಾಮೀಣ ಮಹಿಳೆಯರು ಕಾಂಗ್ರೆಸ್‌ನತ್ತ ಒಲವು ತೋರುತ್ತಿದ್ದಾರೆ. ನಾವು ಪ್ರಚಾರಕ್ಕೆ ಹೋದ ಕಡೆಗಳಲ್ಲೆಲ್ಲಾ ಮಹಿಳೆಯರ ಸಮೂಹದಲ್ಲಿನ ಈ ಒಲವು ಸ್ಪಷ್ಟವಾಗಿ ಕಾಣುತ್ತಿದೆ ಎಂದರು.
ಹಿಂದುಳಿದ ವರ್ಗಕ್ಕೆ ಚೊಂಬು ಕೊಟ್ಟ ಸಿಎಂ ಸಿದ್ದರಾಮಯ್ಯ: ಉಮೇಶ್ ಜಾಧವ್ ಆಕ್ರೋಶ
ಕಳೆದ ಲೋಕಸಭೆ ಚುನಾವಣೆಯಲ್ಲಿ ಇಲ್ಲಿನ 8 ಕ್ಷೇತ್ರಗಳ ಪೈಕಿ 6 ರಲ್ಲಿ ಬಿಜೆಪಿ ಲೀಡ್ ಬಂತು. ಈ ಪೈಕಿ 5 ರಲ್ಲಿ 20 ಸಾವಿರಕ್ಕೂ ಹೆಚ್ಚು ಲೀಡ್ ಇತ್ತು. ಜೇವರ್ಗಿಯಲ್ಲಿ 24, 288 ಲೀಡ್ ಇತ್ತು. ರಾಜ್ಯದಲ್ಲೇ 28 ಸಂಸತ್ ಸ್ಥಾನಗಳಲ್ಲಿ 27 ಬಿಜೆಪಿ ಗೆದ್ದರೆ, 1 ಮಾತ್ರ ಕಾಂಗ್ರೆಸ್‌ಗೆ ಒಲಿದಿತ್ತು. ಎಂದೂ ಹೀಗಾಗಿರಲಿಲ್ಲ. ಹೀಗಾಗಿ ಲೀಡ್ ಹೆಚ್ಚಿರಬಹುದೇ ವಿನಹಃ ಈ ಬಾರಿ ಹಾಗೇನಿಲ್ಲ. ಕಾಂಗ್ರೆಸ್ ಪರ ಅಲೆ ಸ್ಪಷ್ಟವಾಿದೆ. ಜೇವರ್ಗಿಯಿಂದ ಹೆಚ್ಚಿನ ಲೀಡ್ ಕೊಟ್ಟೋ ಕೊಡುತ್ತೇವೆ. ಕಲಬರಗಿಯಲ್ಲಿ ನಮ್ಮ ಅಭ್ಯರ್ಥಿ ರಾಧಾಕೃಷ್ಣ 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆಂದು ಡಾ. ಅಜಯ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.
ರೈತರು ಮೋದಿ ಸರಕಾರದಲ್ಲಿ ಯಾವುದೇ ಪ್ರಯೋಜನ ಪಡೆದಿಲ್ಲ. ಕಾಂಗ್ರೆಸ್‌ನಿಂದ ಸ್ವಾಮಿನಾಥನ್ ವರದಿ ಜಾರಿ, ಎಂಎಸ್‌ಪಿಗೆ ಕಾನೂನು ಬದ್ಧತೆ, ರೈತಸ್ನೇಹಿ ಘೋಷಣೆಗಳು ಪ್ರತಿಧ್ವನಿಸಿದ್ದು ರೈತರು ಪಕ್ಷದ ಪರ ಒಲವು ತೋರುತ್ತಿದ್ದಾರೆ. ರೈತರಿಗೆ ಹೆಚ್ಚಿನ ಅನುಕೂಲ ಕೊಡುವುದೇ ನಮ್ಮ ಉದ್ದೇಶವೆಂದು ಅಜಯ್ ಸಿಂಗ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.