ಬಿಬಿಎಂಪಿ ವಾರ್ಡ್‌ ವಿಂಗಡಣೆ ಎತ್ತಿ ಹಿಡಿದ ಹೈಕೋರ್ಟ್‌

By Kannadaprabha NewsFirst Published Sep 17, 2022, 8:55 AM IST
Highlights

ಬಿಬಿಎಂಪಿಗೆ 243 ವಾರ್ಡ್‌ ರಚಿಸಿ ಅಧಿಸೂಚನೆ ಹೊರಡಿಸಿದ್ದ ಸರ್ಕಾರ, 3 ಶಾಸಕರು ಸಲ್ಲಿಸಿದ್ದ ತಕರಾರು ಅರ್ಜಿ ವಜಾ

ಬೆಂಗಳೂರು(ಸೆ.17):   ಬಿಬಿಎಂಪಿ ವ್ಯಾಪ್ತಿಯ ವಿವಿಧ ವಿಧಾನಸಭೆ ಕ್ಷೇತ್ರಗಳ ವಾರ್ಡ್‌ಗಳ ಮರು ವಿಂಗಡಣೆ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್‌ ಶುಕ್ರವಾರ ಎತ್ತಿಹಿಡಿದಿದ್ದು, ವಾರ್ಡ್‌ ವಿಂಗಡಣೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ವಜಾಗೊಳಿಸಿದೆ. ವಾರ್ಡ್‌ ಮರು ವಿಂಗಡಣೆ ಅಧಿಸೂಚನೆ ರದ್ದುಕೋರಿ ಶಾಸಕರಾದ ಸೌಮ್ಯಾರೆಡ್ಡಿ ಹಾಗೂ ಜಮೀರ್‌ ಅಹ್ಮದ್‌ ಖಾನ್‌, ಎಂ.ಸತೀಶ್‌ ರೆಡ್ಡಿ ಮತ್ತಿತರರು ಸಲ್ಲಿಸಿದ್ದ ಹಲವು ತಕರಾರು ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ಹೇಮಂತ್‌ ಚಂದನಗೌಡರ್‌ ಅವರ ಪೀಠ, ಸರ್ಕಾರದ ಅಧಿಸೂಚನೆಯಲ್ಲಿ ಮಧ್ಯಪ್ರವೇಶಿಸುವ ಅವಶ್ಯಕತೆ ಕಂಡುಬರುತ್ತಿಲ್ಲ ಎಂದು ತಿಳಿಸಿ ಅರ್ಜಿಗಳನ್ನು ವಜಾಗೊಳಿಸಿತು.

ಈ ಮೂಲಕ ವಾರ್ಡ್‌ ಮರು ವಿಂಗಡಣೆ ಅಧಿಸೂಚನೆಗೆ ಹೈಕೋರ್ಟ್‌ ಅಸ್ತು ಎಂದಂತಾಗಿದೆ. ಆದರೆ, ವಾರ್ಡ್‌ವಾರು ಮೀಸಲು ನಿಗದಿಪಡಿಸಿ ಸರ್ಕಾರ ಹೊರಡಿಸಿದ ಅಧಿಸೂಚನೆ ಪ್ರಶ್ನಿಸಿರುವ ಅರ್ಜಿಗಳು ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿವೆ. ಅವು ವಿಲೇವಾರಿಯಾದ ನಂತರವೇ ಬಿಬಿಎಂಪಿ ಚುನಾವಣೆ ನಡೆಯುವ ಬಗ್ಗೆ ಸ್ಪಷ್ಟತೆ ಬರಲಿದೆ.

Bengaluru: ಆಪರೇಷನ್‌ ಡೆಮಾಲಿಷ್‌ಗೆ ಹೆದರಿ ನಿವಾಸಿಗಳಿಂದಲೇ ಒತ್ತುವರಿ ತೆರವು..!

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಕೀಲರು, 2011ರ ಜನಗಣತಿ ಆಧರಿಸಿ ಪ್ರತಿ ವಾರ್ಡ್‌ಗೆ ಜನಸಂಖ್ಯೆ ನಿಗದಿಪಡಿಸಲಾಗಿದೆ. ವಿಧಾನಸಭೆ ಕ್ಷೇತ್ರಗಳ ಭೌಗೋಳಿಕ ವಿಸ್ತೀರ್ಣ, ಜನಸಂಖ್ಯೆ ಬೆಳವಣಿಗೆ ಆಧರಿಸಿ ವಾರ್ಡ್‌ ರಚಿಸಲಾಗಿದೆ. ಪ್ರತಿ ವಿಧಾನಸಭೆ ಕ್ಷೇತ್ರದ ವಾರ್ಡ್‌ ವಿಂಗಡಣೆಯಲ್ಲಿ ಶೇ.10 ಜನಸಂಖ್ಯೆ ಏರಿಳಿತದ ಅನುಪಾತ ಅನುಸರಿಸಲಾಗಿದ್ದು, ಅದರ ಪ್ರಕಾರ 34 ಸಾವಿರದಿಂದ 39 ಸಾವಿರ ಜನಸಂಖ್ಯೆಯ ಆಧಾರದಲ್ಲಿ ವಾರ್ಡ್‌ಗಳನ್ನು ವಿಂಗಡಣೆ ಮಾಡಲಾಗಿದೆ. ಹಾಗಾಗಿ, ಅರ್ಜಿಗಳನ್ನು ವಜಾಗೊಳಿಸಬೇಕು ಎಂದು ವಾದಿಸಿದ್ದರು.

ಅದನ್ನು ಆಕ್ಷೇಪಿಸಿದ್ದ ಅರ್ಜಿದಾರರ ಪರ ವಕೀಲರು, ಬಿಬಿಎಂಪಿ ವ್ಯಾಪ್ತಿಯ 84 ಲಕ್ಷ ಜನಸಂಖ್ಯೆಯನ್ನು ಒಟ್ಟು 243 ವಾರ್ಡ್‌ಗಳಿಂದ ಭಾಗಿಸಿದರೆ ಪ್ರತಿ ವಾರ್ಡ್‌ಗೆ ಅಂದಾಜು 34,500 ಜನಸಂಖ್ಯೆಯಾಗುತ್ತದೆ. ಸರ್ಕಾರ ಹೇಳಿರುವಂತೆ ಶೇ.10 ಏರಿಳಿತದ ಅನುಪಾತ ಪರಿಗಣಿಸಿದರೂ ವಾರ್ಡ್‌ ಜನಸಂಖ್ಯೆ 31 ಸಾವಿರದಿಂದ 37 ಸಾವಿರದ ಆಸುಪಾಸಿಗೆ ಬರುತ್ತದೆ. ಆದರೆ, ಕೆಲ ವಾರ್ಡ್‌ಗಳಲ್ಲಿ 30 ಸಾವಿರ ಜನ ಸಂಖ್ಯೆಯಿದೆ. ಮತ್ತೆ ಕೆಲ ವಾರ್ಡ್‌ಗಳಲ್ಲಿ 39 ಸಾವಿರ ಜನಸಂಖ್ಯೆ ನಿಗದಿಪಡಿಸಲಾಗಿದೆ. ಇನ್ನೂ ಪ್ರತಿಪಕ್ಷಗಳ ಶಾಸಕರ ಕ್ಷೇತ್ರಗಳಲ್ಲಿ ವಾರ್ಡ್‌ಗಳ ಸಂಖ್ಯೆ ಕಡಿತಗೊಳಿಸಲಾಗಿದೆ. ಆಡಳಿತ ಪಕ್ಷದ ಶಾಸಕರ ಕ್ಷೇತ್ರಗಳ ವಾರ್ಡ್‌ ಸಂಖ್ಯೆ ಹೆಚ್ಚಳ ಮಾಡಲಾಗಿದೆ. ರಾಜಕೀಯ ಲಾಭಕ್ಕಾಗಿ ಹೀಗೆ ಮಾಡಲಾಗಿದೆ ಎಂದಿದ್ದರು.

Land-grab: ನಗರದಾಚೆಗಿನ ಭೂಕಬಳಿಕೆಗೆ ಕ್ರಿಮಿನಲ್‌ ಕೇಸಿಲ್ಲ

ಚುನಾವಣಾ ಆಯೋಗದ ಪರ ವಕೀಲರು, 2011ರ ಜನಗಣತಿ ಆಧರಿಸಿಯೇ ವಾರ್ಡ್‌ ಮರು ರಚಿಸಲಾಗಿದೆ. ವಾರ್ಡ್‌ ವಿಂಗಡಣೆ ಮಾಡುವಾಗ ಕೇವಲ ಜನಸಂಖ್ಯೆಯಷ್ಟೇ ಅಲ್ಲ, ಭೌಗೋಳಿಕ ವಿಸ್ತೀರ್ಣ ಮತ್ತಿತರ ಅಂಶಗಳನ್ನೂ ಪರಿಗಣಿಸಬಹುದು. ವಾರ್ಡ್‌ ಜನಸಂಖ್ಯೆ ವಿಭಿನ್ನವಾಗಿ ಇರಬಹುದು ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಆದ್ದರಿಂದ, ಅರ್ಜಿದಾರರ ವಾದ ಪರಿಗಣಿಸದೆ, ಚುನಾವಣೆಗೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದ್ದರು.
ಅರ್ಜಿದಾರರ ವಾದವನ್ನು ಪರಿಗಣಿಸದ ಹೈಕೋರ್ಟ್‌, ಅರ್ಜಿಗಳನ್ನು ವಜಾಗೊಳಿಸಿ ಆದೇಶಿಸಿದೆ.

ಅರ್ಜಿಗಳನ್ನು ಸೆ.13ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್‌, ವಾರ್ಡ್‌ ಮರು ವಿಂಗಡಣೆ ಸಂಕೀರ್ಣವಾದ ಕೆಲಸ. ಎಲ್ಲ ವಾರ್ಡ್‌ಗಳನ್ನೂ ಸಮಾನ ಜನಸಂಖ್ಯೆಗೆ ಅನುಗುಣವಾಗಿ ವಿಂಗಡಿಸುವುದು ಸುಲಭವಲ್ಲ. ಹಲವು ಅಂಶಗಳ ಆಧಾರದಲ್ಲಿ ವಿಸ್ತಾರವಾದ ಪ್ರದೇಶಗಳನ್ನು ವಿಂಗಡಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸಣ್ಣಪುಟ್ಟಸಮಸ್ಯೆಗಳು ಉದ್ಭವಿಸುವುದು ಸಹಜ. ಆದ್ದರಿಂದ, ಸಣ್ಣಪುಟ್ಟ ಲೋಪವಿದ್ದರೆ ನ್ಯಾಯಾಲಯ ಮಧ್ಯ ಪ್ರವೇಶಿಸುವುದಿಲ್ಲ. ಗಂಭೀರ ಲೋಪಗಳು ಕಂಡುಬಂದರೆ ಮಾತ್ರ ಮಧ್ಯ ಪ್ರವೇಶಿಸಲಾಗುವುದು ಎಂದು ಮೌಖಿಕವಾಗಿ ಹೇಳಿತ್ತು.

ನ್ಯಾಯಾಲಯ ತೀರ್ಪು

*ವಾರ್ಡ್‌ ಸಮಾನವಾಗಿ ಹಂಚಲು ಆಗಲ್ಲ
*ಹಲವು ಅಂಶ ಪರಿಗಣಿಸಿ ವಾರ್ಡ್‌ ರಚನೆ
*ಅಧಿಸೂಚನೆಯಲ್ಲಿ ಮಧ್ಯಪ್ರವೇಶ ಇಲ್ಲ
 

click me!