ಬೆಂಗಳೂರಿಗರಿಗೆ ಕಾದಿದೆ ತೆರಿಗೆ ಹೆಚ್ಚಳದ ಶಾಕ್‌!

By Kannadaprabha NewsFirst Published Sep 19, 2020, 7:40 AM IST
Highlights

ವರ್ಷದಿಂದ ವರ್ಷಕ್ಕೆ ಪಾಲಿಕೆಗೆ ಆರ್ಥಿಕ ಹೊರೆ ಹೆಚ್ಚಳ| ಆದಾಯಕ್ಕಿಂತ ವೆಚ್ಚವೇ ಹೆಚ್ಚು| ಈ ಹಿನ್ನೆಲೆ ತೆರಿಗೆ ಹೆಚ್ಚಿಸುವ ಮೂಲಕ ಆರ್ಥಿಕ ಸುಧಾರಣೆಗೆ ಸಿದ್ಧತೆ| ಖಾತಾ ವರ್ಗಾವಣೆ ಶುಲ್ಕವನ್ನು ಶೇ.2 ರಿಂದ 5 ರಷ್ಟು ಹೆಚ್ಚಳಕ್ಕೂ ಪ್ರಸ್ತಾವನೆ| 

ಬೆಂಗಳೂರು(ಸೆ.19): ಆಸ್ತಿ ತೆರಿಗೆ, ಖಾತಾ ವರ್ಗಾವಣೆ ಶುಲ್ಕ, ಘನತ್ಯಾಜ್ಯ ಕರ ಮತ್ತು ಭೂ ಸಾರಿಗೆ ಕರ ಸೇರಿದಂತೆ ಇನ್ನಿತರ ಶುಲ್ಕ ಏರಿಸುವ ಮೂಲಕ ಆರ್ಥಿಕ ಹೊರೆ ಸುಧಾರಣೆಗೆ ಬಿಬಿಎಂಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಬಿಬಿಎಂಪಿ ಪ್ರತಿವರ್ಷ ತೆರಿಗೆ ಹಾಗೂ ತೆರಿಗೇತರ ಆದಾಯದ ಮೂಲದಿಂದ ಸುಮಾರು 3,200 ಕೋಟಿ ರು. ಆದಾಯ ಬರುತ್ತಿದೆ. ಆದರೆ, ಪ್ರತಿ ವರ್ಷ 10 ಸಾವಿರ ಕೋಟಿ ರು. ಗೂ ಅಧಿಕ ಮೊತ್ತದ ಬಜೆಟ್‌ ಮಂಡಿಸಲಾಗುತ್ತದೆ. ಹಾಗಾಗಿ, ವರ್ಷದಿಂದ ವರ್ಷಕ್ಕೆ ಪಾಲಿಕೆಗೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ಸದ್ಯ ಬಿಬಿಎಂಪಿ 22 ಸಾವಿರ ಕೋಟಿ ರು. ಬಾಕಿ ಬಿಲ್‌ ಪಾವತಿ ಮಾಡಬೇಕಾಗಿದೆ.

ಬಿಬಿಎಂಪಿಯ ಆದಾಯಕ್ಕಿಂತ ವೆಚ್ಚ ಹೆಚ್ಚಾಗಿದೆ. ಇನ್ನು ನಿರೀಕ್ಷಿತ ಆದಾಯ ಪಾಲಿಕೆಗೆ ಬರುತ್ತಿಲ್ಲ ಎಂದು ಈ ಹಿಂದೆಯೇ ಬಿಬಿಎಂಪಿ ಆಯಕ್ತರು ಆಸ್ತಿ ತೆರಿಗೆ ಹೆಚ್ಚಳ, ಭೂ ಸಾರಿಗೆ ಕರ ಹೆಚ್ಚಳ ಸೇರಿದಂತೆ ವಿವಿಧ ಪ್ರಸ್ತಾವನೆಗಳನ್ನು ಕೌನ್ಸಿಲ್‌ ಮುಂದೆ ಮಂಡಿಸಲಾಗಿತ್ತು. ಆದರೆ, ಪಾಲಿಕೆಯ ಆಡಳಿತ ಪಕ್ಷಗಳು ತೆರಿಗೆ ಹೆಚ್ಚಳ ಮಾಡಿದರೆ ಹೆಚ್ಚಳ ಮಾಡಿದರೆ ಜನರ ವಿರೋಧ ಕಟ್ಟಿಕೊಳ್ಳಬೇಕಾಗಲಿದೆ ಎಂದು ಧೈರ್ಯ ಮಾಡಿರಲಿಲ್ಲ.ಹೀಗಾಗಿ, ಕೌನ್ಸಿಲ್‌ ಮುಂದೆ ಪಾಲಿಕೆಯ ಆದಾಯ ವೃದ್ಧಿಸುವ ಸಂಬಂಧಿಸಿದಂತೆ ಈ ಹಿಂದೆ ಮಂಡಿಸಲಾದ ಎಲ್ಲ ಪ್ರಸ್ತಾವನೆಗಳಿಗೆ ಆಡಳಿತಾಧಿಕಾರಿಯ ಅನುಮೋದನೆಗೆ ಸಲ್ಲಿಸಲು ಬಿಬಿಎಂಪಿ ಆಯುಕ್ತರು ಮುಂದಾಗಿದ್ದಾರೆ.

ಸಕಾಲಕ್ಕೆ ಕಸ ಸಂಗ್ರಹಿಸದ ಗುತ್ತಿಗೆದಾರರಿಗೆ ನೋಟಿಸ್‌: ಬಿಬಿಎಂಪಿ

ಈ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌, ಕೆಎಂಸಿ ಕಾಯ್ದೆ ಪ್ರಕಾರ ಪ್ರತಿ ಮೂರು ವರ್ಷಕ್ಕೊಂದು ಬಾರಿ ಶೇ.15 ರಿಂದ ಶೇ.30 ರಷ್ಟುಆಸ್ತಿ ತೆರಿಗೆ ಪ್ರಮಾಣ ಹೆಚ್ಚಳ ಮಾಡಬಹುದು. ಆದರೆ, 2016ರ ನಂತರ ಆಸ್ತಿ ತೆರಿಗೆ ಏರಿಕೆ ಮಾಡಿಲ್ಲ. ಈ ಬಗ್ಗೆ ಕೌನ್ಸಿಲ್‌ಗೆ ಎರಡು ಬಾರಿ ಪ್ರಸ್ತಾವನೆಗಳನ್ನು ಸಲ್ಲಿಕೆ ಮಾಡಲಾಯಿತು. ಸದಸ್ಯರು ಯಾವುದೇ ತೀರ್ಮಾನ ತೆಗೆದುಕೊಂಡಿರಲಿಲ್ಲ. ಹಾಗಾಗಿ, ಪ್ರಸ್ತಾವನೆಯನ್ನು ಆಡಳಿತಾಧಿಕಾರಿ ಮುಂದಿಟ್ಟು ಅನುಮೋದನೆ ಪಡೆದು ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗುವುದು ಎಂದು ತಿಳಿಸಿದರು.

ಇನ್ನು ಹೊಸ ಕಸ ವಿಲೇವಾರಿ ಪದ್ಧತಿ ಆರಂಭಿಸಲಾಗುತ್ತಿದೆ. ಕಸ ವಿಲೇವಾರಿಗೆ ಸಂಬಂಧಿಸಿದಂತೆ ಹೊಸ ಬೈಲಾ ಜಾರಿಗೊಳಿಸಲಾಗಿದೆ. ಆ ಪ್ರಕಾರ ಘನತ್ಯಾಜ್ಯ ಕರ ಏರಿಕೆ ಸಂಬಂಧಿಸಿದಂತೆಯೂ ಪ್ರಸ್ತಾವನೆ ಸಲ್ಲಿಕೆ ಮಾಡಲಾಗುವುದು ಎಂದರು.

ಖಾತಾ ವರ್ಗಾವಣೆ ಶುಲ್ಕ ಹೆಚ್ಚಿಸಿ 15 ವರ್ಷವಾಯ್ತು!

ಖಾತಾ ವರ್ಗಾವಣೆ ಶುಲ್ಕವನ್ನು ಕಳೆದ 15 ವರ್ಷದ ಹಿಂದ ಏರಿಕೆ ಮಾಡಲಾಗಿತ್ತು. ತದ ನಂತರ ಹೆಚ್ಚಳ ಮಾಡಿಲ್ಲ. ಹಾಗಾಗಿ, ಖಾತಾ ವರ್ಗಾವಣೆ ಶುಲ್ಕವನ್ನು ಶೇ.2 ರಿಂದ 5 ರಷ್ಟು ಹೆಚ್ಚಳಕ್ಕೂ ಪ್ರಸ್ತಾವನೆ ಸಲ್ಲಿಕೆ ಮಾಡಲಾಗುವುದು. ಆಡಳಿತಾಧಿಕಾರಿಗಳು ಮತ್ತು ಸರ್ಕಾರ ಅನುಮೋದನೆ ನೀಡಿದರೆ ಜಾರಿ ಮಾಡಲಾಗುವುದು ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು.
 

click me!