ಕೃಷಿ ಕ್ಷೇತ್ರದಲ್ಲಿ ಹಿನ್ನಡೆಯಿಂದ ದೇಶದ ಆರ್ಥಿಕತೆ ಮೇಲೆ ಭಾರೀ ಹೊಡೆತ

By Kannadaprabha News  |  First Published Mar 21, 2024, 11:17 AM IST

ಸಾಂಪ್ರದಾಯಿಕ ವ್ಯವಸಾಯ, ಮಳೆಯಾಶ್ರಿತ ಕೃಷಿ ಕ್ಷೇತ್ರದ ಹಿನ್ನಡೆಯಿಂದ ದೇಶದ ಆರ್ಥಿಕತೆ ಮೇಲೆ ಭಾರೀ ಹೊಡೆತ ಬೀಳುತ್ತಿದೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.


 ನಾಗಮಂಗಲ : ಸಾಂಪ್ರದಾಯಿಕ ವ್ಯವಸಾಯ, ಮಳೆಯಾಶ್ರಿತ ಕೃಷಿ ಕ್ಷೇತ್ರದ ಹಿನ್ನಡೆಯಿಂದ ದೇಶದ ಆರ್ಥಿಕತೆ ಮೇಲೆ ಭಾರೀ ಹೊಡೆತ ಬೀಳುತ್ತಿದೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲೂಕಿನ ಆದಿಚುಂಚನಗಿರಿಯಲ್ಲಿ ಜಾತ್ರಾ ಮಹೋತ್ಸವದ ನಿಮಿತ್ತ ಇಲಾಖೆ ಸಹಯೋಗದಲ್ಲಿ ನಡೆದ ಕೃಷಿ ಉಪನ್ಯಾಸ ಮಾಲಿಕೆಯ ಉದ್ಘಾಟನಾ ಸಮಾರಂಭದಲ್ಲಿ ಸಾನಿಧ್ಯವಹಿಸಿ ಮಾತನಾಡಿದರು.

Latest Videos

undefined

ಈ ಹಿಂದೆ ಶೇ.70ರಷ್ಟು ಜನ ಕೃಷಿ ನಂಬಿ ಬದುಕುತ್ತಿದ್ದರೆ, ಇನ್ನುಳಿದ ಶೇ.30 ರಷ್ಟು ಜನರು, ಉತ್ಪಾದನೆ ಹಾಗೂ ಇತರ ಸೇವಾ ಕ್ಷೇತ್ರದಲ್ಲಿದ್ದರು. ಇಂದು ಕೃಷಿ ಕ್ಷೇತ್ರದಲ್ಲಿನ ಹಿನ್ನಡೆಯಿಂದ ದೇಶದ ಆರ್ಥಿಕತೆಗೆ ರೈತರ ಕೊಡುಗೆ ಶೇ.15ಕ್ಕೆ ಕುಸಿದಿದೆ ಎಂದು ಆತಂಕ ವ್ಯಕ್ತಪಡಿಸಿದರು.

8 ರಿಂದ 10 ತಿಂಗಳು ಶ್ರಮಿಸುವ ರೈತರಿಗಿಂತ ಕೇವಲ 15 ದಿನ ಶ್ರಮಿಸುವ ಮಧ್ಯವರ್ತಿಗಳಿಗೆ ಕೃಷಿಯಲ್ಲಿ ಲಾಭವಾಗುತ್ತಿದೆ. ಇದಕ್ಕೆ ಮಧ್ಯವರ್ತಿಗಳು ಗುಣಮಟ್ಟವನ್ನು ವೃದ್ಧಿಸಿ ಪ್ಯಾಕಿಂಗ್ ಇತ್ಯಾದಿ ವ್ಯವಸ್ಥೆ ನಿರ್ವಹಿಸುವ ಕಾಯಕದಿಂದಾಗಿ ರೈತರನ್ನು ಲಾಭ ರಹಿತರನ್ನಾಗಿಸಿದೆ ಎಂದರು.

ಇಂದು ರಾಸಾಯನಿಕ ಬಳಕೆ ಹೆಚ್ಚಳದಿಂದ ಬೆಳೆ ಜೊತೆಗೆ ಭೂಮಿಯೂ ಕೂಡ ಫಲವತ್ತತೆ ಕಳೆದುಕೊಳ್ಳುತ್ತಿದೆ. ಜಾಗತಿಕ ತಾಪಮಾನವೂ ಕೃಷಿ ಮೇಲೆ ಪರಿಣಾಮ ಬೀರಿ ಪೌಷ್ಠಿಕ ಹಾಗೂ ಸಾವಯವ ಆಹಾರದ ಸಮಸ್ಯೆ ತಲೆದೂರುತ್ತಿದೆ ಎಂದು ಎಚ್ಚರಿಸಿದರು.

ವಿಜ್ಞಾನ-ತಂತ್ರಜ್ಞಾನ ಯುಗದಲ್ಲಿ ದೇಶಕ್ಕೆ ಅನ್ನ ನೀಡುವ ರೈತರ ಬದುಕನ್ನು ಹಸನುಗೊಳಿಸಲು ಆಧುನಿಕ ಸಂಪ್ರದಾಯಿಕ ಕೃಷಿಯನ್ನು ಉತ್ತೇಜಿಸುವ ಕೆಲಸವಾಗಬೇಕಿದೆ ಎಂದು ಸಲಹೆ ನೀಡಿದರು.

ಮಂಡ್ಯ ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್ ಮಾತನಾಡಿ,35 ರಿಂದ 40 ಕೋಟಿ ಜನಸಂಖ್ಯೆ ಇದ್ದ ಭಾರತದಲ್ಲಿ ಆಹಾರದ ಸಮಸ್ಯೆ ಇರಲಿಲ್ಲ. ಕೊರೋನಾ ಪೀಡುಗಿನ ನಂತರ ಆಹಾರ ಉತ್ಪಾದನೆ ಕ್ಷೀಣಿಸಿದೆ. 100 ಕೋಟಿ ದಾಟಿದ ಭಾರತಕ್ಕೆ ಸಮರ್ಪಕ ಆರೋಗ್ಯಯುತ ಆಹಾರವನ್ನು ಪೂರೈಸುವುದೇ ಸವಾಲಾಗಿ ಪರಿಣಮಿಸಿದೆ ಎಂದರು.

ದೇಶ ಕೊರೋನ ಅವಧಿಯಲ್ಲಿ ವೈದ್ಯಕೀಯ ಕ್ಷೇತ್ರ ಸೇರಿದಂತೆ ಇನ್ನಿತರ ಕ್ಷೇತ್ರಕ್ಕೆ ಲಾಭವಾದರೂ ರೈತರಿಗೆ ಮಾತ್ರ ನಷ್ಟದ ಮೇಲೆ ನಷ್ಠ ಉಂಟಾಗಿದೆ. ಏಕೆಂದರೇ ರೈತ ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕವಿರಲಿಲ್ಲ. ದಲ್ಲಾಳಿಗಳ ದಬ್ಬಾಳಿಕೆ ರೈತರ ಲಾಭ ಮೂಲವನ್ನು ಕುಂಠಿತಗೊಳಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರೈತ ಉತ್ಪಾದಕ ಸಂಘಗಳ ನೆರವು, ರಸಗೊಬ್ಬರ ಹಾಗೂ ಕೀಟ ನಾಶಕ, ಬಿತ್ತನೆ, ಸಗಟ್ಟು ವ್ಯಾಪಾರ ಕಂಪನಿಗಳ ಪರವಾನಗಿ, ಜೇನು ಕೃಷಿ ಉದ್ಯಮ ಮತ್ತು ಆದಾಯ, ರೈತ ಸಮಸ್ಯೆಗಳು ಹಾಗೂ ಸವಾಲುಗಳು ಎಂಬ ವಿಷಯಗಳನ್ನು ಕುರಿತ ಉಪನ್ಯಾಸ ಮಾಲಿಕೆಯ ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಕೃಷಿ ತಜ್ಞ ಸಿ.ಎ.ಶ್ರೀಪಾದ ಭಟ್ಟರು, ಮಂಡ್ಯ ವಿ.ಸಿ.ಫಾರಂ ಡಾ.ರಾಜಗೋಪಾಲ್, ಮೈಸೂರಿನ ಡಾ.ಜಿ.ಕೆ.ಸದಾನಂದ ಇವರು ರೈತರಿಗೆ ಉಪನ್ಯಾಸ ನೀಡಿದರು.

ಕೃಷಿ ಮಾಲಿಕೆಯಲ್ಲಿ 20ಕ್ಕೂ ಹೆಚ್ಚು ರೈತ ಉತ್ಪನ್ನ ಕಂಪನಿಗಳು ಆಗಮಿಸಿದವು. ಕೃಷಿಯನ್ನೇ ನಂಬಿ ಬದುಕುವ ಮಂಡ್ಯ ಜಿಲ್ಲೆ ಹಾಗೂ ಅಕ್ಕಪಕ್ಕದ ಜಿಲ್ಲೆಯ ನೂರಾರು ಕೃಷಿಕರು ಭಾಗವಹಿಸಿದ್ದರು.

ಶ್ರೀ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ, ಸಹಾಯಕ ಕೃಷಿ ನಿರ್ದೇಶಕಿ ಪ್ರತಿಭಾ, ರೈತ ಮುಖಂಡರಾದ ಶಂಭೂಗೌಡ, ಮಹೇಶ್ ಚಂದ್ರ, ಕಾರಸವಾಡಿ ಮಹದೇವ್, ಡಾ.ಎ.ಟಿ.ಶಿವರಾಮು ಸೇರಿದಂತೆ ಹಲವರು ಹಾಜರಿದ್ದರು.

click me!