ಕಚ್ಚಾ ತೈಲ ಬೆಲೆ ಇಳಿದರೂ ಬೆಲೆ ಇಳಿಸದ ಎಫೆಕ್ಟ್: ತೈಲ ಕಂಪನಿ ಲಾಭ 1 ಲಕ್ಷ ಕೋಟಿ

By Kannadaprabha NewsFirst Published Jul 27, 2023, 8:38 AM IST
Highlights

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿತ ಕಂಡರೂ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್‌, ಡೀಸೆಲ್‌ ದರವನ್ನು ಇಳಿಕೆ ಮಾಡದ ಪರಿಣಾಮವಾಗಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಈ ವರ್ಷ ದಾಖಲೆಯ 1 ಲಕ್ಷ ಕೋಟಿ ರು. ಲಾಭ ಗಳಿಸುವತ್ತ ಹೆಜ್ಜೆ ಹಾಕಿವೆ.

ಮುಂಬೈ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿತ ಕಂಡರೂ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್‌, ಡೀಸೆಲ್‌ ದರವನ್ನು ಇಳಿಕೆ ಮಾಡದ ಪರಿಣಾಮವಾಗಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಈ ವರ್ಷ ದಾಖಲೆಯ 1 ಲಕ್ಷ ಕೋಟಿ ರು. ಲಾಭ ಗಳಿಸುವತ್ತ ಹೆಜ್ಜೆ ಹಾಕಿವೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ 3 ಪಟ್ಟು ಅಧಿಕ ಎಂಬುದು ಗಮನಾರ್ಹ.

ಈ ವರ್ಷ ಇಲ್ಲಿವರೆಗೆ ಕಚ್ಚಾ ತೈಲ ಬೆಲೆ ಶೇ.30ಕ್ಕಿಂತ ಅಧಿಕ ಪ್ರಮಾಣದಲ್ಲಿ ಕುಸಿತ ಕಂಡಿದೆ. ಆದಾಗ್ಯೂ ತೈಲ ಮಾರಾಟ ಕಂಪನಿಗಳು 2022ರ ಮೇನಿಂದಲೂ ದರವನ್ನು ಪರಿಷ್ಕರಣೆ ಮಾಡಿಲ್ಲ. 2017ರಿಂದ 2022ರ ನಡುವಣ ಅವಧಿಯಲ್ಲಿ ಈ ಕಂಪನಿಗಳು ಸರಾಸರಿ 60 ಸಾವಿರ ಕೋಟಿ ರು. ಲಾಭವನ್ನು ಗಳಿಸುತ್ತಿದ್ದವು. ಆದರೆ ಇದು ಕಳೆದ ವಿತ್ತೀಯ ವರ್ಷದಲ್ಲಿ 33 ಸಾವಿರ ಕೋಟಿ ರು.ಗೆ ಕುಸಿದಿತ್ತು. ಈ ವರ್ಷ ತೈಲ ಮಾರಾಟ ಕಂಪನಿಗಳು 1 ಲಕ್ಷ ಕೋಟಿ ರು. ತೆರಿಗೆ ಪೂರ್ವ ಲಾಭ ಗಳಿಸಬಹುದು ಎಂದು ಕ್ರಿಸಿಲ್‌ ಸಂಸ್ಥೆ ಮಂಗಳವಾರ ಟಿಪ್ಪಣಿಯೊಂದರಲ್ಲಿ ಹೇಳಿದೆ.

ರಷ್ಯಾದಿಂದ ರಫ್ತಾಗ್ತಿರೋ ಶೇ.80 ರಷ್ಟು ತೈಲ ಭಾರತ, ಚೀನಾದಿಂದ್ಲೇ ಖರೀದಿ! 

 ಭಾರತ-ರಷ್ಯಾ ಸಂಬಂಧ ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿ ಗಟ್ಟಿಗೊಂಡಿದ್ದು, ಇದಕ್ಕೆ ಪೂರಕವೆಂಬಂತೆ ಭಾರತವು ಮೇ ತಿಂಗಳಿನಲ್ಲಿ ದಾಖಲೆಯ ಅಗ್ಗದ ಕಚ್ಚಾ ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಂಡಿದೆ. ಈ ಪ್ರಮಾಣವು ಇರಾಕ್‌ ಹಾಗೂ ಸೌದಿ ಅರೇಬಿಯಾ ದೇಶಗಳಿಂದ ಆಮದು ಮಾಡಿಕೊಂಡ ಪ್ರಮಾಣಕ್ಕಿಂತ ಅಧಿಕವಾಗಿದೆ. ಮೇ ತಿಂಗಳಿನಲ್ಲಿ ಭಾರತವು ರಷ್ಯಾದಿಂದ ದಿನಕ್ಕೆ 19.6 ಲಕ್ಷ ಬ್ಯಾರೆಲ್‌ಗಳನ್ನು ಆಮದು ಮಾಡಿಕೊಂಡಿದೆ. ಇದು ಏಪ್ರಿಲ್‌ ಆಮದಿಗಿಂತ ಶೇ.15ರಷ್ಟು ಅಧಿಕ. ಈ ಪ್ರಮಾಣವು ಭಾರತದ ಒಟ್ಟು ಕಚ್ಚಾತೈಲ ಆಮದಿನ ಶೇ.42 ರಷ್ಟಾಗಿದೆ.

ರಷ್ಯಾ ತೈಲ ಭಾರಿ ಅಗ್ಗ:

ರಷ್ಯಾ-ಉಕ್ರೇನ್‌ ಯುದ್ಧಕ್ಕೂ (Ukraine Russia war) ಮುನ್ನ ಇರಾಕ್‌ನಿಂದ (Iraq) ಪ್ರತಿ ಬ್ಯಾರೆಲ್‌ಗೆ 6408.52 ರು., ಸೌದಿ ಅರೇಬಿಯಾದಿಂದ 7165.81 ರು. ಕೊಟ್ಟು ಭಾರತ ತೈಲ ಆಮದು ಮಾಡಿಕೊಳ್ಳುತ್ತಿತ್ತು. ಇದೀಗ ಭಾರತವು ರಷ್ಯಾದಿಂದ ಕಡಿಮೆ ಬೆಲೆ (5620.74 ರು.) ಕೊಟ್ಟು ಆಮದು ಮಾಡಿಕೊಳ್ಳುತ್ತಿದೆ. ಪಾಶ್ಚಿಮಾತ್ಯ ದೇಶಗಳು ರಷ್ಯಾ ಮೇಲೆ ಹೇರಿರುವ ನಿರ್ಬಂಧದ ಕಾರಣ ರಷ್ಯಾ ಅಗ್ಗದ ದರದಲ್ಲಿ ತೈಲ ಮಾರುತ್ತಿದೆ.

ಈ ಮೊದಲು ಭಾರತವು ಇರಾಕ್‌ನಿಂದ ದಿನಕ್ಕೆ 8.3 ಲಕ್ಷ ಬ್ಯಾರೆಲ್‌ಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಇದರ ನಂತರದ ಸ್ಥಾನದಲ್ಲಿ ಸೌದಿ ಅರೇಬಿಯಾ, ಯುಎಇ ಹಾಗೂ ಅಮೆರಿಕ ದೇಶಗಳಿದ್ದವು. ಆದರೆ ಈಗ ರಷ್ಯಾ ಈ ಎಲ್ಲ ದೇಶಗಳನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದುಕೊಂಡಿದೆ.


ಪ್ರತಿ ಶುಕ್ರವಾರ ಪೆಟ್ರೋಲ್‌ ವಾಹನ ಬೇಡ: ಸಿಬ್ಬಂದಿಗೆ ಬಿಹಾರ ಸಚಿವಾಲಯ ಸಲಹೆ

ಪಟನಾ: ಜಾಗತಿಕ ತಾಪಮಾನ ತಡೆಯಲು ಬಿಹಾರ ಸರ್ಕಾರದ ಪರಿಸರ ಇಲಾಖೆ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದು, ವಾರದಲ್ಲಿ ಒಂದು ದಿನ ಕಚೇರಿಗೆ ಬರುವ ಸಿಬ್ಬಂದಿಗೆ ಪೆಟ್ರೋಲ್‌, ಡೀಸೆಲ್‌ ವಾಹನಗಳನ್ನು ಬಳಸದಂತೆ ಸಲಹೆ ನೀಡಿದೆ. ಈ ಕುರಿತು ಮಾತನಾಡಿದ ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ಕಾರ್ಯದರ್ಶಿ,‘ದೇಶದಲ್ಲಿ ಈಗಾಗಲೇ ಹವಾಮಾನ ಬದಲಾವಣೆ ಪರಿಣಾಮ ಎದುರಿಸುತ್ತಿದ್ದೇವೆ. ಹೀಗಾಗಿ ಆಗಸ್ಟ್‌ ತಿಂಗಳಿನಿಂದ ಪ್ರತಿ ಶುಕ್ರವಾರದಂದು ಕಚೇರಿಗೆ ಪೆಟ್ರೋಲ್‌ ಡೀಸೆಲ್‌ ವಾಹನಗಳನ್ನು ಬಳಸದೆ, ವಿದ್ಯುತ್‌ ವಾಹನ, ಆಟೋರಿಕ್ಷಾ, ಸೈಕಲ್‌ ಅಥವಾ ನಡೆದುಕೊಂಡು ಕಚೇರಿಗೆ ಬರಲು ತೀರ್ಮಾನಿಸಿದ್ದೇವೆ. ಜೊತೆಗೆ ಕಚೇರಿ ಕೆಲಸಗಳಿಗೂ ಇದೇ ರೀತಿ ಸಂಚರಿಸಲು ಸಲಹೆ ನೀಡಲಾಗಿದೆ ಎಂದರು.

ಕಚ್ಚಾ ತೈಲದ ಬೆಲೆ ಇಳಿದರೂ ಇಳಿ​ಯದ ಪೆಟ್ರೋಲ್‌, ಡೀಸೆಲ್‌ ಬೆಲೆ 

 

click me!