ನಟಿ ರಶ್ಮಿಕಾ ಮಂದಣ್ಣ ಅವರು ಮುಂಬೈನ ಅಟಲ್ ಸೇತುವೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಬಗ್ಗೆ ಮೆಚ್ಚುಗೆ ನುಡಿಗಳನ್ನು ಆಡಿದ್ದಕ್ಕೆ ಪ್ರಧಾನಿ ಮೋದಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ನಟಿ ರಶ್ಮಿಕಾ ಮಂದಣ್ಣ ಅವರು ಮುಂಬೈನ ಅಟಲ್ ಸೇತುವೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಬಗ್ಗೆ ಮೆಚ್ಚುಗೆ ನುಡಿಗಳನ್ನು ಆಡಿದ್ದಕ್ಕೆ ಪ್ರಧಾನಿ ಮೋದಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ರಶ್ಮಿಕಾ ಮಂದಣ್ಣ ಸಂದರ್ಶವೊಂದರಲ್ಲಿ ಅಟಲ್ ಸೇತುವೆ ಮುಂಬೈ ಹಾಗೂ ನವೀ ಮುಂಬೈ ನಡುವಿನ 2 ತಾಸಿನ ಪ್ರಯಾಣವನ್ನು 20 ನಿಮಿಷಕ್ಕೆ ಇಳಿಸಿದೆ. ಇದು ಪ್ರಧಾನಿ ಮೋದಿ ಅವರ ದೂರದೃಷ್ಟಿಯ ಆಡಳಿತದ ಪ್ರತೀಕವಾಗಿದೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ,‘ಜನರೊಂದಿಗೆ ಬೆರೆಯುವುದು ಹಾಗೂ ಅವರ ಜೀವನ ಅಭಿವೃದ್ಧಿ ಮಾಡುವುದರಲ್ಲಿ ಸಿಗುವ ತೃಪ್ತಿ ಹಾಗೂ ಆನಂದ ಬೇರೆಯಾರ ಬಳಿಯೂ ಸಿಗುವುದಿಲ್ಲ ಎಂದು ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಕಳೆದ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಅಟಲ್ ಬಿಹಾರಿ ವಾಜಪೇಯಿ ಸೇವ್ರಿ-ನಹಾ ಶೇವಾ ಅಟಲ್ ಸೇತು ಅನ್ನು ಲೋಕಾರ್ಪಣೆಗೊಳಿಸಿದ್ದರು. ಈ ಎಕ್ಸ್‌ಪ್ರೆಸ್‌ವೇ ಮುಂಬೈನ ಸಾರಿಗೆ ಜಾಲದಲ್ಲಿ ಗೇಮ್ ಚೇಂಜರ್ ಆಗಿದೆ ಎಂದು ರಶ್ಮಿಕಾ ಹೇಳಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ರಶ್ಮಿಕಾ ಶ್ಲಾಘಿಸಿದ್ದರು.
ಮೋದಿ ಅಭಿವೃದ್ಧಿ ರಾಜಕೀಯಕ್ಕೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬಹುಪರಾಕ್!
ಎರಡು ಗಂಟೆಗಳ ಪ್ರಯಾಣವನ್ನು 20 ನಿಮಿಷಗಳಲ್ಲಿ ಈಗ ಮಾಡಬಹುದು. ನೀವಿದನ್ನು ನಂಬೋಕು ಸಾಧ್ಯವಿಲ್ಲ. ಈ ರೀತಿಯಲ್ಲಿ ಏನಾದರೂ ಸಾಧ್ಯವಾಗಬಹುದು ಎಂದು ಈ ಹಿಂದೆ ಯಾರೂ ಭಾವಿಸಿರಲಿಲ್ಲ. ಇಂದು ನವಿ ಮುಂಬೈನಿಂದ ಮುಂಬೈಗೆ ಮತ್ತು ಗೋವಾದಿಂದ ಮುಂಬೈಗೆ ಮತ್ತು ಬೆಂಗಳೂರಿನಿಂದ ಮುಂಬೈಗೆ.. ಎಲ್ಲಾ ಪ್ರಯಾಣಗಳು ತುಂಬಾ ಸುಲಭವಾಗಿ ಮತ್ತು ಅಂತಹ ಅದ್ಭುತ ಮೂಲಸೌಕರ್ಯಗಳೊಂದಿಗೆ ನಡೆದಾಗ ನಿಜಕ್ಕೂ ನನಗೆ ಹೆಮ್ಮೆ ಅನಿಸುತ್ತದೆ ಎಂದು ರಶ್ಮಿಕಾ ಹೇಳಿದ್ದಾರೆ.
ಬಹುಶಃ ನಾನೀಗ ಕನಿಷ್ಠ ಯೋಚನೆ ಮಾಡೋದು ಏನೆಂದರೆ, ಭಾರತ ಈಗ ಎಲ್ಲಿಯೂ ನಿಲ್ಲುತ್ತಿಲ್ಲ. ಈಗ ದೇಶದ ಬೆಳವಣಿಗೆಯನ್ನು ನೋಡಿ. ಕಳೆದ 10 ವರ್ಷಗಳಲ್ಲಿ ದೇಶವು ಹೇಗೆ ಬೆಳೆದಿದೆ ಎನ್ನುವುದನ್ನು ನೋಡಿದರೆ, ಅದ್ಭುತ ಎನಿಸುತ್ತದೆ. ನಮ್ಮ ದೇಶದಲ್ಲಿ ಮೂಲಸೌಕರ್ಯ, ಯೋಜನೆ, ರಸ್ತೆ ಯೋಜನೆ , ಬಹಳ ಅದ್ಭುತವಾಗಿ ನಡೆದಿದೆ. ಇದು ನಮ್ಮ ಸಮಯ ಎಂದು ನಾನು ಭಾವಿಸುತ್ತೇನೆ. ಈ 20 ಕಿಲೋಮೀಟರ್ ದೂರದ ಸೇತುವೆಯನ್ನೊಮ್ಮೆ ನೋಡಿ. ಇದನ್ನು ಮೊದಲ ಬಾರಿಗೆ ನೋಡಿದಾಗ ನಾನು ಮೂಕವಿಸ್ಮಿತಳಾಗಿದ್ದೆ. ಭಾರತ ಈಗ ಸ್ಮಾರ್ಟೆಸ್ಟ್ ದೇಶ ಎಂದು ಹೇಳಲು ಬಯಸುತ್ತೇನೆ ಎಂದು ಅವರು ತಿಳಿಸಿದ್ದಾರೆ. ರಶ್ಮಿಕಾ ಈ ಹೇಳಿಕೆಗೆ ಪ್ರಧಾನಿ ಈಗ ಸಾಮಾಜಿಕ ಜಾಲತಾಣದಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.
ಇನ್ನು ರಶ್ಮಿಕಾ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿರುವುದಕ್ಕೆ ನೂರಾರು ಜನ ಕಾಮೆಂಟ್ ಮಾಡಿದ್ದು, ನ್ಯಾಷನಲ್ ಕ್ರಶ್ ಈಗ ನ್ಯಾಷನಲಿಸ್ಟ್ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೆ ಕೆಲವರು ರಶ್ಮಿಕಾಗೆ ಕೇಸರಿ ಸೀರೆಯುಡಿಸಿ ಕೆಂಪು ಕುಂಕುಮ ಇಟ್ಟ ಫೋಟೋಗಳನ್ನು ಕಾಮೆಂಟ್ ಮಾಡಿದ್ದಾರೆ. ಬಿಜೆಪಿಯ ಅನೇಕರು ರಶ್ಮಿಕಾ ಅವರ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Absolutely! Nothing more satisfying than connecting people and improving lives. https://t.co/GZ3gbLN2bb
— Narendra Modi (@narendramodi)