ಎಡರಂಗದ ಕೋಟೆಗೆ ಬಿತ್ತು ಬೀಗ..! ಶೂನ್ಯ ಸಂಪಾದನೆಗೇನು ಕಾರಣ? / ಪ್ರಕಟವಾದ ಪಂಚರಾಜ್ಯ ಫಲಿತಾಂಶ/ ಪಶ್ಚಿಮ ಬಂಗಾಳದಲ್ಲಿ ಮಮತಾ ಮ್ಯಾಜಿಕ್/ ನೆಲಕಚ್ಚಿದ ಎಡರಂಗ ಮತ್ತು ಕಾಂಗ್ರೆಸ್/ 'ಕೆಂಪು ಕೋಟೆ'ಗೆ ಬೀಗ
ಡೆಲ್ಲಿ ಮಂಜು
ನವದೆಹಲಿ, (ಮೇ 02) ಕೆಂಪುಕೋಟೆಗೆ' (ಎಡರಂಗದ ಕೋಟೆ) ಬಿತ್ತು ಬೀಗ..! ಇದ್ದ `ಎಡ'ವೆಲ್ಲಾ ವಾಲಿತಾ `ಬಲ'ಕ್ಕೆ..! ಇದು ದೆಹಲಿಯ ರಾಜಕೀಯ ಕಟ್ಟೆಯಲ್ಲಿ ಬಿಸಿಬಿಸಿಯಾಗಿ ಚರ್ಚೆಯಾಗುತ್ತಿರುವ ವಿಷಯ. ವಿಜಯೋತ್ಸವಕ್ಕೆ ಮತ್ತಷ್ಟು ಗರಿಗಳು ತೊಡಿಸುವಂತೆ ಪದಗಳಲ್ಲಿ ಹಿಡಿದಿಡಲಾಗದ ಗೆಲವು ದೀದಿ ಮಮತಾ ಬ್ಯಾರ್ನಜಿ ಮತ್ತು ಅವರ ಪಕ್ಷ ಟಿಎಂಸಿಗೆ ಸಿಕ್ಕಿದೆ. ಎಲ್ಲಾ ಎಕ್ಸಿಟ್ ಪೋಲ್ಸ್ ಗಳನ್ನು ಸುಳ್ಳು ಮಾಡಿ, ಆ ಎಕ್ಸಿಟ್ ಪೋಲ್‍ಗಳಲ್ಲಿ ಟಿಎಂಸಿಗೆ ನೀಡಿದ್ದ ಅಂಕಿಗಳನ್ನು (120 ರಿಂದ 130) ಡಬಲ್ ಮಾಡಿ (213) ದೀದಿಗೆ ಮೂರನೇ ಬಾರಿಗೆ ಬಳುವಳಿಯಾಗಿ ಗೆಲುವಿನ ಉಡುಗೊರೆ ಕೊಟ್ಟಿದ್ದಾರೆ ಬಂಗಾಳಿಗಳು.
undefined
ಇಷ್ಟರ ನಡುವೆ ಚರ್ಚೆಯ ವಸ್ತುವಾಗಿದ್ದು ಹೆಚ್ಚು ಕಡಿಮೆ ಮೂರೂವರೆ ದಶಕಗಳ ಕಾಲ ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸಿದ ಎಡರಂಗ ಎಲ್ಲಿ ಹೋಯ್ತು ಅನ್ನೋದು. ಅದರಲ್ಲೂ ಇಡೀ ಚುನಾವಣೆ ಅಂಕಿ-ಸಂಖ್ಯೆಗಳ ಬೋರ್ಡ್‍ನಲ್ಲಿ ಕನಿಷ್ಠ `ಒಂದು' ಸಂಖ್ಯೆ ಅಥವಾ ಸ್ಥಾನ ಪಡೆಯದಿರುವುದು. ಇನ್ನು ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಜೊತೆಗೂಡಿ ಚುನಾವಣೆ ಎದುರಿಸಿದರೂ ಕೂಡ ಎಡ ಪಕ್ಷಗಳಾಗಿಲಿ ಅಥವಾ ಕಾಂಗ್ರೆಸ್ ಪಕ್ಷವಾಗಲಿ ಒಂದೇ ಒಂದು ಸ್ಥಾನ ಪಡೆಯದೇ ಪೂರ್ತಿಯಾಗಿ ಬಾಗಿಲು ಬಂದ್ ಮಾಡಿಕೊಂಡಿದ್ದು. ಕಳೆದ ಬಾರಿ ಅಂದರೆ 2016ರಲ್ಲಿ ಕಾಂಗ್ರೆಸ್ 23, ಸಿಪಿಐಎಂ 19 ಸೇರಿ ಜೊತೆಗೆ ಸಣ್ಣಪುಟ್ಟ ಪಕ್ಷಗಳು ಸೇರಿ 76 ಸ್ಥಾನಗಳು ಗಳಿಸಿಕೊಂಡಿದ್ದವು. ಮುಸ್ಲಿಂ ಧರ್ಮಗುರು ಅಬ್ಬಾಸ್ ಸಿದ್ದಿಕಿ, ವೈಓಸಿ ಪಕ್ಷ ಸೇರಿ ಈ ಎಲ್ಲಾ ಪಕ್ಷಗಳು ಈ ಬಾರಿ ಎಲ್ಲವೂ ಮೂಲೆ ಸೇರಿವೆ.
ತಮಿಳುನಾಡಿನಲ್ಲಿ ಮತ್ತೆ ಉದಯಿಸಿದ ಸೂರ್ಯ
`ಎಡ'ವೆಲ್ಲಾ ವಾಲಿತಾ `ಬಲ'ಕ್ಕೆ : ಪಶ್ಚಿಮ ಬಂಗಾಳ ಅಂದರೆ ಎಡಪಂಥೀಯರಿಗೆ ಇತಿಹಾಸ ಸೃಷ್ಟಿ ಮಾಡಿಕೊಟ್ಟ ರಾಜ್ಯ. ಜೊತೆಗೆ ಎಡಪಂಥೀಯರ ಕೋಟೆಯಾಗಿ ಮೂರು ದಶಕಗಳ ಕಾಲ ಇದ್ದ ರಾಜ್ಯ. ಅದರಲ್ಲೂ ನಕ್ಸಲ್ ಹೋರಾಟ (ನಕ್ಸಲ್ಬಾರಿ) ಹುಟ್ಟಿದ ರಾಜ್ಯವೂ ಕೂಡ. ಜ್ಯೋತಿಬಸು, ಬುದ್ದದೇವಭಟ್ಟಾಚಾರ್ಯ ಅಂಥವರು ಆಳಿದ ರಾಜ್ಯದಲ್ಲಿ ಇವತ್ತು ಒಬ್ಬೇಒಬ್ಬ ಎರಡರಂಗದ ಪ್ರತಿನಿಧಿ ಕೋಲ್ಕತ್ತದ ಶಕ್ತಿಸೌಧ `ರೈರ್ಟಸ್ ಬಿಲ್ಟಿಂಗ್' ಪ್ರವೇಶಿಸದಿರುವುದು ಆ ಪಕ್ಷದ ರಾಜಕೀಯ ಸ್ಥಿತಿ ತಿಳಿಸುತ್ತದೆ.
ಇನ್ನು ಈ ಬಾರಿಯ ಚುನಾವಣೆಯಲ್ಲಿ ಅಬ್ಬರ ಮಾಡಿದ್ದು ಟಿಎಂಸಿ, ಬಿಜೆಪಿ ಪಕ್ಷಗಳು. ಇವುಗಳ ಅಬ್ಬರದಲ್ಲಿ ಕಾಂಗ್ರೆಸ್, ಎಡರಂಗ ಇತರೆ ಪಕ್ಷಗಳು ಹೆಚ್ಚು ಕಮ್ಮಿ ಎಲ್ಲವೂ ಕೂಡ ಸ್ಥಾನ ಕಳೆದುಕೊಂಡಿವೆ. ಆ ಸ್ಥಾನ ಅಥವಾ ಆ ಅಂಕಿ-ಅಂಶಗಳನ್ನು ಈಗ ಬಿಜೆಪಿ, ಟಿಎಂಸಿಗಳು ತುಂಬಿವೆ. 2016ರಲ್ಲಿ ಮೂರು ಸ್ಥಾನ ಗಳಿಸಿದ್ದ ಬಿಜೆಪಿ ಈ ಬಾರಿ ಅಧಿಕಾರ ಹಿಡದೇ ಬಿಡ್ತಿವಿ ಅಂಥ ಹೊರಟು ಕೊನೆಗೆ 75 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಸೈದ್ದಾಂತಿಕವಾಗಿ ಪಕ್ಷದ ನೆಲೆ ಅಥವಾ ಎಡರಂಗದ ಕೇಡರ್ ಇರಬಹುದು. ಆದರೆ ಈ ಅಂಶಗಳು ಅಧಿಕಾರದ ಸ್ಥಾನ ಅಥವಾ ಅಂಕಿಗಳಾಗಿ ಪರಿವರ್ತಿಸಲು ಸಾಧ್ಯವಾಗಿಲ್ಲ.
ಎಡರಂಗ ಅಥವಾ ಕಾಂಗ್ರೆಸ್ ಸ್ಪರ್ಧಿಸುತ್ತಿದ್ದ ಕ್ಷೇತ್ರಗಳಲ್ಲಿ ಅಂದರೆ ಮುಸ್ಲಿಂ ಬಾಹುಳ್ಯ ಇರುವ ಕ್ಷೇತ್ರಗಳಲ್ಲಿ ಟಿಎಂಸಿ, ಹಿಂದುಗಳು ಬಾಹುಳ್ಯ ಇರುವ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷಗಳು ಜಯಗಳಿಸಿವೆ. ಇದು ಒಂದು ರೀತಿಯಲ್ಲಿ ಕೆಂಪುಕೋಟೆಗೆ (ಎಡರಂಗದ ಕೋಟೆ) ಬೀಗ ಹಾಕಿದಂತೆ ಆಗಿದೆ.