ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬಂಡಾಯ ಗುಂಪಿನ ಕಾರ್ಯಕರ್ತರ ಮಾರಾಮಾರಿ ನಡೆದಿದೆ. ರಸ್ತೆಯಲ್ಲಿ ಎರಡು ಗುಂಪುಗಳು ಕಿತ್ತಾಡಿಕೊಂಡಿದೆ. ಆದರೆ ಆ್ಯಂಬುಲೆನ್ಸ್ ಬರುತ್ತಿದ್ದಂತೆ ಎರಡು ಗುಂಪಿನ ಕಾರ್ಯಕರ್ತರು ಕಿತ್ತಾಟ ನಿಲ್ಲಿಸಿ ತುರ್ತು ಸೇವೆಗೆ ದಾರಿ ಮಾಡಿದ್ದಾರೆ. ಆ್ಯಂಬುಲೆನ್ಸ್ ಸಾಗಿದ ಬಳಿಕ ಏನಾಯಿತು?
ತಿರುವನಂತಪುರಂ(ನ.18) ಕಾಂಗ್ರೆಸ್ ಕಾರ್ಯಕರ್ತರು ನಡು ರಸ್ತೆಯಲ್ಲಿ ಭಾರಿ ಕಿತ್ತಾಡಿಕೊಂಡಿದ್ದಾರೆ. ನಕಲಿ ಮತದಾನ ಕುರಿತು ಕೇರಳ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಿಪಿಐಎಂ ಬೆಂಬಲಿತ ಕಾಂಗ್ರೆಸ್ ಬಂಡಾಯ ಕಾರ್ಯಕರ್ತರ ಗುಂಪು ನಡು ರಸ್ತೆಯಲ್ಲಿ ಕೈಕೈ ಮಿಲಾಯಿಸಿತ್ತು. ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸಿ ಕಾಲರ್ ಪಟ್ಟಿ ಹಿಡಿದು, ಸಿಕ್ಕ ಸಿಕ್ಕ ವಸ್ತುಗಳಲ್ಲಿ ಹೊಡೆದಾಡಿದ್ದಾರೆ. ಆದರೆ ಈ ಮಾರಾಮಾರಿ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ದಿಢೀರ್ ಆ್ಯಂಬುಲೆನ್ಸ್ ಸೈರನ್ ಮೊಳಗಿಸುತ್ತಾ ಪ್ರತ್ಯಕ್ಷಗೊಂಡಿತ್ತು.ಕಿತ್ತಾಡಿಕೊಳ್ಳುತ್ತಿದ್ದ ಕಾರ್ಯಕರ್ತರು ತಕ್ಷಣ ಜಗಳ ನಿಲ್ಲಿಸಿ ಆಂಬುಲೆನ್ಸ್ ಸಾಗಲು ದಾರಿಮಾಡಿಕೊಟ್ಟ ಘಟನ ಕೇರಳದ ಕೋಝಿಕೋಡ್ ಜಿಲ್ಲೆಯ ಚೇವಾಯೂರ್ ಬಳಿ ನಡೆದಿದೆ. ಆ್ಯಂಬುಲೆನ್ಸ್ ಸಾಗಿದ ಬಳಿಕ ಇವರ ಜಗಳದ ಕತೆ ಮತ್ತಷ್ಟು ರೋಚಕ.
ನವೆಂಬರ್ 16ರಂದುು ಚೇವಾಯುರ ಸಹಕಾರ ಬ್ಯಾಂಕ್‌ನಲ್ಲಿ ಮತದಾನ ನಡೆದಿತ್ತು. ಬ್ಯಾಂಕ್ ಬೋರ್ಡ್ ಮೆಂಬರ್, ಅಧ್ಯಕ್ಷರು, ಪದಾಧಿಕಾರಿಗಳ ಆಯ್ಕೆಗೆ ಮತದಾನ ನಡೆದಿತ್ತು. ಕಳೆದ 61 ವರ್ಷದಿಂದ ಈ ಸಹಕಾರ ಬ್ಯಾಂಕ್ ಬೋರ್ಡ್ ಹಾಗೂ ಆಡಳಿತ ಕಾಂಗ್ರೆಸ್ ಕೈಯಲ್ಲಿತ್ತು. ಆದರೆ ಈ ಬಾರಿ ಸಿಪಿಐ(ಎಂ) ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಇದಕ್ಕೆ ನಕಲಿ ಮತದಾನ ಕಾರಣ ಎಂದು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಿಪಿಐ(ಎಂ) ಬೆಂಬಲಿತ ಬಂಡಾಯ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಭಾರಿ ವಾಗ್ವಾದ ನಡೆದು ಜಗಳ ಶುರುವಾಗಿದೆ.
ಆ್ಯಂಬುಲೆನ್ಸ್‌ಗೆ ದಾರಿ ಬಿಡದೇ ಸಾಗಿದ ಕಾರು ಮಾಲೀಕ, ಮನೆ ಸೇರುವಷ್ಟರಲ್ಲೇ ಕಾದಿತ್ತು ಆಘಾತ!
ಸಹಕಾರಿ ಬ್ಯಾಂಕ್ ಮುಂಭಾಗದ ರಸ್ತೆಯಲ್ಲೇ ಎರಡು ಕಾಂಗ್ರೆಸ್ ಕಾರ್ಯಕರ್ತರ ಗುಂಪು ಮಾತಿಗೆ ಮಾತು ಬೆಳಸಿ ಹೊಡೆದಾಟ ಆರಂಭಿಸಿತ್ತು. ಇದೇ ದಾರಿಯಲ್ಲಿ ಆ್ಯಂಬುಲೆನ್ಸ್ ತುರ್ತು ಸೇವೆ ನಿಮಿತ್ತ ಆಗಮಿಸಿದೆ. ಕಿಕ್ಕಿರಿದು ಜನ ತುಂಬಿದ್ದರು. ತಳ್ಳಾಟ, ಎಳೆದಾಟ, ಹೊಡೆದಾಟ ಎಲ್ಲವು ಇಲ್ಲಿ ಸಾಮಾನ್ಯವಾಗಿತ್ತು. ಪರಿಸ್ಥಿತಿ ಉದ್ವಿಘ್ನವಾಗಿತ್ತು. ಆದರೆ ಆ್ಯಂಬುಲೆನ್ಸ್ ಸೈರನ್ ಕೇಳಿಸುತ್ತಿದ್ದಂತೆ ಎರಡು ಗುಂಪಿನ ಸದಸ್ಯರು ಅಲರ್ಟ್ ಆಗಿದ್ದಾರೆ.
ತಕ್ಷಣವೇ ಕಿತ್ತಾಟ ನಿಲ್ಲಿಸಿದ್ದಾರೆ. ಬಳಿಕ ಎರಡೂ ಗುಂಪಿನ ಕಾರ್ಯಕರ್ತರು ಆ್ಯಂಬುಲೆನ್ಸ್ ಸಾಗಲು ದಾರಿ ಮಾಡಿಕೊಟ್ಟಿದ್ದಾರೆ. ರಸ್ತೆಯ ಪಕ್ಕಕ್ಕೆ ಸರಿದು ಆ್ಯಂಬುಲೆನ್ಸ್‌ಗೆ ದಾರಿ ಮಾಡಿದ್ದಾರೆ. ಸೈರನ್ ಮೊಳಗಿಸುತ್ತಾ ಆ್ಯಂಬುಲೆನ್ಸ್ ಸಾಗಿದೆ. ಆದರೆ ಆ್ಯಂಬುಲೆನ್ಸ್ ಸಾಗಿದ ಬೆನ್ನಲ್ಲೇ ಇವರ ಕಿತ್ತಾಟ ಮತ್ತಷ್ಟು ಜೋರಾಗಿದೆ. ಮತ್ತೆ ರಸ್ತೆಯಲ್ಲಿ ಮುತ್ತಿಕೊಂಡ ಎರಡು ಗುಂಪುಗಳ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ.
ಬೆಳಿಗ್ಗೆ ಎಂಟು ಗಂಟೆಗೆ ಮತದಾನ ಆರಂಭವಾದ ನಂತರ ಕಾಂಗ್ರೆಸ್ ಮತ್ತು ಸಿಪಿಐಎಂ ಬೆಂಬಲಿತ ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಕಲಿ ಮತದಾನದ ಬಗ್ಗೆ ಆರೋಪ-ಪ್ರತ್ಯಾರೋಪಗಳು ಆರಂಭಗೊಂಡಿತ್ತು. ಈ ಜಗಳದಲ್ಲಿ ಏಳು ವಾಹನಗಳ ಮೇಲೆ ವಿವಿಧ ಸ್ಥಳಗಳಲ್ಲಿ ದಾಳಿ ನಡೆದಿತ್ತು. ಮತದಾನ ನಡೆಯುತ್ತಿದ್ದ ಪರಯಂಚೇರಿ ಶ್ಕೂಲಿನ ಹೊರಗೆ ಕಾಂಗ್ರೆಸ್ - ಸಿಪಿಐಎಂ ಕಾರ್ಯಕರ್ತರು ಬಡಿದಾಡಿದ್ದಾರೆ.