ಬಿಜೆಪಿ ನಾಯಕರು ಕಾಂಗ್ರೆಸ್ ಸೇರಿಕೊಂಡ ಘಟನೆ ಸಂಬಂಧ ಏಷ್ಯಾನೆಟ್ ಪತ್ರಕರ್ತನ ಕೈವಾಡ ಕುರಿತು ಗಂಭೀರ ಆರೋಪ ಮಾಡಿದ ಕೇರಳ ರಾಜ್ಯಾಧ್ಯಕ್ಷರಿಗೆ ಏಷ್ಯಾನೆಟ್ ನ್ಯೂಸ್ ಸ್ಪಷ್ಟನೆ ನೀಡಿದೆ.ಅಷ್ಟಕ್ಕೂ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಆರೋಪವೇನು? ಇದಕ್ಕೆ ಏಷ್ಯಾನೆಟ್ ನ್ಯೂಸ್ ಮಾಧ್ಯಮದ ಉತ್ತರವೇನು?
ನವದೆಹಲಿ(ನ.18) ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ನಲ್ಲಿ ವಿಧಾನಸಭೆ ಚುನಾವಣೆ ಕಾವು ಹೆಚ್ಚಾಗಿದೆ. ಇನ್ನು ದೇಶದ ಬಹುತೇಕ ಕಡೆ ಉಪ ಚುನಾವಣೆ ಭರಾಟೆ ಜೋರಾಗಿದೆ. ಕರ್ನಾಟಕದಲ್ಲಿ ಚನ್ನಪಟ್ಟಣವಾದರೆ, ಕೇರಳದಲ್ಲಿ ವಯನಾಡು ಹಾಗೂ ಪಾಲಕ್ಕಾಡ್. ಹೀಗೆ ಒಂದೊಂದು ರಾಜ್ಯದಲ್ಲಿ ಹಲವು ಕ್ಷೇತ್ರಗಳು ಪ್ರತಿಷ್ಠೆಯ ಕಣವಾಗಿದೆ. ಈ ಪೈಕಿ ಕೇರಳದಲ್ಲಿ ಕ್ಷೇತ್ರ ಮಾತ್ರವಲ್ಲ, ರಾಜಕೀಯದಲ್ಲೂ ಭಾರಿ ಕೋಲಾಹಲ ಸೃಷ್ಟಿಯಾಗಿದೆ. ಇದರ ನಡುವೆ ಕೇರಳ ಬಿಜೆಪಿಯ ಪ್ರಮುಖ ನಾಯಕ ಕಾಂಗ್ರೆಸ್ ಸೇರಿಕೊಂಡ ಘಟನೆ ಕೇರಳ ಬಿಜೆಪಿಗೆ ತೀವ್ರ ಮುಖಭಂಗ ತರಿಸಿದೆ. ರಾಜಕೀಯ ಚದುರಂಗದಾಟದ ನಡುವೆ ಕೇರಳ ಬಿಜೆಪಿ ರಾಜ್ಯಾಧ್ಯಕ್ಷರು ಏಷ್ಯಾನೆಟ್ ನ್ಯೂಸ್ ಪತ್ರಕರ್ತನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿ ನಾಯಕ ಪಕ್ಷಾಂತರದಲ್ಲಿ ಏಷ್ಯಾನೆಟ್ ನ್ಯೂಸ್ ಹಿರಿಯ ಪತ್ರಕರ್ತ ಕಾಂಗ್ರೆಸ್ ಜೊತೆ ರಹಸ್ಯ ಒಪ್ಪಂದ ಮಾಡಿಕೊಂಡಿದ್ದಾರೆ ಅನ್ನೋ ಆರೋಪವನ್ನು ಮಾಡಿದ್ದಾರೆ. ಆದರೆ ಈ ಆರೋಪನ್ನು ಏಷ್ಯಾನೆಟ್ ನ್ಯೂಸ್ ತಿರಸ್ಕರಿಸಿದೆ. ಇಷ್ಟೇ ಅಲ್ಲ ಈ ಆರೋಪ ಸತ್ಯಕ್ಕೆ ದೂರವಾಗಿದ್ದು, ಆಧಾರ ರಹಿತವಾಗಿದೆ ಎಂದು ಸ್ಪಷ್ಟನೆ ನೀಡಿದೆ.
ಪಾಲಕ್ಕಾಡ್ ಉಪಚುನಾವಣೆಗೂ ಮುನ್ನ ಬಿಜೆಪಿ ನಾಯಕರು ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಈ ಬೆಳವಣಿಗೆಯಲ್ಲಿ ಏಷ್ಯಾನೆಟ್ ಹಿರಿಯ ಪತ್ರಕರ್ತ ಪಿಜಿ ಸುರೇಶ್ ಕುಮಾರ್ ಕಾಂಗ್ರೆಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಆರೋಪಿಸಿದ್ದಾರೆ. ಈ ಕುರಿತು ಏಷ್ಯಾನೆಟ್ ನ್ಯೂಸ್ ಕಾರ್ಯನಿರ್ವಾಹಕ ಅಧ್ಯಕ್ಷ ರಾಜೇಶ್ ಕಾಲ್ರ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಕೆ ಸುರೇಂದ್ರ ಸುಳ್ಳನ್ನು ಉದ್ದೇಶಪೂರ್ವಕವಾಗಿ ಹೇಳಿದ್ದಾರೆ ಎಂದು ಪ್ರಕಟನೆಯಲ್ಲಿ ಹೇಳಿದ್ದಾರೆ. ಏಷ್ಯಾನೆಟ್ ನ್ಯೂಸ್ ಕಾರ್ಯಾಧ್ಯಕ್ಷ ರಾಜೇಶ್ ಕಾಲ್ರ ಅಧಿಕೃತ ಹೇಳಿಕೆ ಇಲ್ಲಿದೆ.
ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಇತ್ತೀಚೆಗೆ ಸೋಶಿಯಲ್ ಮೀಡಿಯಾ ಮೂಲಕ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಏಷ್ಯಾನೆಟ್ ನ್ಯೂಸ್ ಪತ್ರಕರ್ತ ಪಿಜಿ ಸುರೇಶ್ ಕುಮಾರ್ ವಿರುದ್ಧ ಆರೋಪ ಮಾಡಿದ್ದಾರೆ. ಇತ್ತೀಚೆಗೆ ಬಿಜಿಪಿ ನಾಯಕರೊಬ್ಬರು ಕಾಂಗ್ರೆಸ್ ಸೇರಿಕೊಂಡ ಘಟನೆ ಮುಂದಿಟ್ಟುಕೊಂಡು, ಇದರಲ್ಲಿ ಪಿಜಿ ಸುರೇಶ್ ಕುಮಾರ್ ಕಾಂಗ್ರೆಸ್ ಪಕ್ಷದ ಜೊತೆ ಹೊಂದಾಣಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಕೆ ಸುರೇಂದ್ರನ್ ಪ್ರತಿಷ್ಠಿತ ರಾಷ್ಟ್ರೀಯ ಪಕ್ಷವಾದ ಬಿಜೆಪಿ ನಾಯಕರಾಗಿದ್ದಾರೆ. ಹೀಗಾಗಿ ಕೆ ಸುರೇಂದ್ರನ್ ಮಾಡಿರುವ ಆರೋಪವನ್ನು ಕೂಲಂಕುಷವಾಗಿ ಪರಿಶೀಲಿಸಿದ್ದೇವೆ. ಕೆ ಸುರೇಂದ್ರನ್ ಅವರ ಆರೋಪ ಸಂಪೂರ್ಣ ಸುಳ್ಳು ಎಂದು ನಾನು ದೃಢೀಕರಿಸಬಲ್ಲೆ.ಈ ಸುಳ್ಳನ್ನು ನಿರೂಪಿಸಬಹುದು.
ಏಷ್ಯಾನೆಟ್ ನ್ಯೂಸ್ ಪತ್ರಕರ್ತ ಪಿಜಿ ಸುರೇಶ್ ಕುಮಾರ್ ತಕ್ಕ ಸಮಯಕ್ಕೆ ಸ್ಥಳಕ್ಕೆ ಧಾವಿಸಿ ವರದಿ ಮಾಡಿದ್ದಾರೆ. ಈ ಮೂಲಕ ತ್ವರಿತ, ನಿಸ್ಪಕ್ಷಪಾತವಾಗಿ ಹಾಗೂ ಕ್ಷಣಾರ್ಧದಲ್ಲಿ ಸುದ್ದಿಯನ್ನು ಬಿತ್ತರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ರೀತಿಯ ಬ್ರೇಕಿಂಗ್, ಎಕ್ಸ್‌ಕ್ಲೂಸೀವ್ ಹಾಗೂ ಪ್ರಮುಖ ಸುದ್ದಿಯನ್ನು ಬ್ರೇಕ್ ಮಾಡುವುದನ್ನು ನಾವು ಹೆಮ್ಮೆ ಪಡುತ್ತೇವೆ. ಏಷ್ಯಾನೆಟ ನ್ಯೂಸ್ ಜನರಲ್ಲಿ ವಿಶ್ವಾಸಾರ್ಹತೆಗಳಿಸಿದೆ. ರಾಷ್ಟ್ರೀಯ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ. ದೇಶ ಹಾಗೂ ವಿದೇಶಗಳಲ್ಲಿರುವ 100 ಮಿಲಿಯನ್ ನಮ್ಮ ಗ್ರಾಹಕರಿಗೆ ಪತ್ರಿಕೋದ್ಯಮದ ಉನ್ನತ ಗುಣಮಟ್ಟದ ಹಾಗೂ ಅಧಿಕೃತ ಮಾಹಿತಿ ನೀಡುವ ನಮ್ಮ ಬದ್ಧತೆಯಲ್ಲಿ ನಾವು ದೃಢವಾಗಿ ನಿಲ್ಲುತ್ತೇವೆ. ಸತ್ಯ ಸೋಲಿಲ್ಲದ ಚಾಂಪಿಯನ್ ಎಂದು ಏಷ್ಯಾನೆಟ್ ನ್ಯೂಸ್ ಕಾರ್ಯಾಧ್ಯಕ್ಷ ರಾಜೇಶ್ ಕಾಲ್ರ ಪ್ರಕಟಣೆಯಲ್ಲಿ ಹೇಳಿದ್ದಾರೆ.