ವ್ಯಾಟ್ಸಾಪ್ ಮೂಲಕ ಮದುವೆ ಆಮಂತ್ರಣ ಬಂದಿದೆಯಾ? ಹೊಸ ವೆಡ್ಡಿಂಗ್ ಸೈಬರ್ ಸ್ಕ್ಯಾಮ್ ಪತ್ತೆ!

By Chethan Kumar  |  First Published Nov 18, 2024, 12:54 PM IST

ಮದುವೆ ಸೀಸನ್ ಶುರುವಾಗಿದೆ. ನಿಮಗೆ ವ್ಯಾಟ್ಸಾಪ್ ಮೂಲಕ ಮದುವೆ ಆಮಂತ್ರಣ ಪತ್ರಿಕೆ ಬಂದಿದೆಯಾ? ಡೌನ್ಲೋಡ್ ಮಾಡುವ ಮುನ್ನ ವೆಡ್ಡಿಂಗ್ ಸೈಬರ್ ಸ್ಕ್ಯಾಮ್ ಬಗ್ಗೆ ತಿಳಿದುಕೊಳ್ಳಿ. 
 


ನವದೆಹಲಿ(ನ.18) ಮದುವೇ ಸೀಸನ್ ಶುರುವಾಗಿದೆ. ಒಂದೇ ಶುಭ ಮುಹೂರ್ತಗಳಲ್ಲಿ ಎರಡು, ಮೂರು ಮದುವೆಯಲ್ಲಿ ಭಾಗಯಾಗಬೇಕಾದ ಅನಿವಾರ್ಯತೆಯೂ ಹಲವರಿಗೆ ಎದುರಾಗಿದೆ. ನವೆಂಬರ್ 12 ರಿಂದ ಆರಂಭಗೊಂಡಿರುವ ಮದುವೆ ಶುಭ ಮೂಹೂರ್ತ ಈ ಬಾರಿ ದಾಖಲೆ ಪ್ರಮಾಣದಲ್ಲಿ ನವ ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹೊಸ ಜಮಾನದಲ್ಲಿ ಕುಟುಂಬಸ್ಥರು, ಆಪ್ತರ ಮನೆಗೆ ತೆರಳಿ ಮದುವೆ ಆಮಂತ್ರಣ ಪತ್ರಿಕೆ ನೀಡುವುದು ಕಷ್ಟ. ಬಹುತೇಕರು ಡಿಜಿಟಲ್ ಆಮಂತ್ರಣ ಪತ್ರಿಕೆ ಮಾಡಿಸಿ ವ್ಯಾಟ್ಸಾಪ್ ಮೂಲಕ ಹಂಚಲಾಗುತ್ತದೆ. ಬಳಿಕ ಕರೆ ಮಾಡಿ ಮದುವೆಗೆ ಆಮಂತ್ರಣ ಮಾಡುವ ಪದ್ದತಿಯೇ ಈಗ ಹೆಚ್ಚು ಹಾಗೂ ಸುಲಭ. ಆದರೆ ಇದೇ ಡಿಜಿಟಲ್ ವೆಡ್ಡಿಂಗ್ ಇನ್ವಿಟೇಶನ್ ಸಂದರ್ಭವನ್ನು ಸೈಬರ್ ಕ್ರೈಮ್ ಕಿರಾತಕರು ಬಳಸಿಕೊಂಡಿದ್ದಾರೆ. ನಿಮಗೆ ವ್ಯಾಟ್ಸಾಪ್ ಮೂಲಕ ಮದುವೆ ಆಮಂತ್ರಣ ಪತ್ರಿಕೆ ಬಂದರೆ ಡೌನ್ಲೋಡ್ ಮಾಡುವ ಮುನ್ನ ಹೊಸ ವೆಡ್ಡಿಂಗ್ ಸೈಬರ್ ಸ್ಕ್ಯಾಮ್ ಬಗ್ಗೆ ತಿಳಿದುಕೊಳ್ಳಿ.

ಹಿಮಾಚಲ ಪ್ರದೇಶದ ಸೈಬರ್ ಪೊಲೀಸರು ಇದೀಗ ಹೊಸ ಸೈಬರ್ ಸ್ಕ್ಯಾಮ್ ಕುರಿತು ಎಚ್ಚರಿಸಿದ್ದಾರೆ. ಪ್ರತಿಯೊಬ್ಬರು ಡಿಜಿಟಲ್ ವೆಡ್ಡಿಂಗ್ ಇನ್ವಿಟೇಶನ್ ಸೈಬರ್ ಸ್ಕ್ಯಾಮ್ ಕುರಿತು ಎಚ್ಚರವಾಗಿರಬೇಕು. ಒಂದು ಸಣ್ಣ ತಪ್ಪಿನಿಂದ ಅತೀ ದೊಡ್ಡ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತೀರಿ ಎಂದು ಹಿಮಾಚಲ ಸೈಬರ್ ಪೊಲೀಸರು ಎಚ್ಚರಿಸಿದ್ದಾರೆ.ಡಿಜಿಟಲ್ ಮೂಲಕ ವಂಚನೆ ಪ್ರತಿ ದಿನ ಹೊಸ ಹೊಸ ರೂಪ ಪಡೆದುಕೊಳ್ಳುತ್ತಿದೆ. ಸೈಬರ್ ಕ್ರೈಂ ಪೊಲೀಸರು ಅದಷ್ಟೇ ಬಿಗಿ ಹಿಡಿತ ಸಾಧಿಸಿದರೂ ಹೊಸ ವಿಧಾನ, ಹೊಸ ರೂಪದಲ್ಲಿ ವಂಚನೆ ನಡೆಯುತ್ತಲೇ ಇದೆ. ಇದೀಗ ಪತ್ತೆಯಾಗಿರುವ ಡಿಜಿಟಲ್ ವೆಡ್ಡಿಂಗ್ ಕಾರ್ಡ್ ಸ್ಕ್ಯಾಮ್ ನಿಮಗೆ ಅಚ್ಚರಿಯಾಗುವುದು ಖಚಿತ. 

Tap to resize

Latest Videos

undefined

SBI ಬ್ಯಾಂಕ್‌ನಲ್ಲಿ ಖಾತೆ ಇದೆಯಾ? ನಿಮಗೆ ಈ ಸಂದೇಶ ಬಂದರೆ ಅಪ್ಪಿ ತಪ್ಪಿ ಓಪನ್ ಮಾಡಬೇಡಿ!

ಏನಿದು ಡಿಜಿಟಲ್ ವೆಡ್ಡಿಂಗ್ ಕಾರ್ಡ್ ಸೈಬರ್ ಸ್ಕ್ಯಾಮ್?
ನಿಮ್ಮ ವ್ಯಾಟ್ಸಾಪ್ ನಂಬರ್‌ಗೆ ಅನಾಮಿಕರು, ಅಥವಾ ನಿಮಗೆ ಪರಿಚಯ ಇಲ್ಲದವರೂ ಮದುವೆ ಆಮಂತ್ರಣ ಪತ್ರಿಕೆಯನ್ನು ಕಳುಹಿಸುತ್ತಾರೆ. ಒಂದು ಡೌನ್ಲೋಡ್ ಫೈಲ್ ಆಮಂತ್ರಣ ಪತ್ರಿಕೆ. ಮೇಲ್ನೋಟಕ್ಕೆ ಎಲ್ಲರೂ ಕಳುಹಿಸುವ ಆಮಂತ್ರಣ ಪತ್ರಿಕೆ. ಈ ಆಮಂತ್ರಣ ಪತ್ರಿಕೆಯಲ್ಲಿ ವರ ಹಾಗೂ ವಧುವಿನ ಹೆಸರು, ಮದುವೆ ದಿನಾಂಕ, ಮುಹೂರ್ತ, ಸ್ಥಳ ಸೇರಿದಂತೆ ಎಲ್ಲಾ ಮಾಹಿತಿಯೂ ಇರಲಿದೆ. ಆದರೆ ಈ ಮಾಹಿತಿ, ಈ ಮದುವೆ ನಕಲಿ. ಈ ಡೌನ್ಲೋಡ್ ಫೈಲ್ ಕಳುಹಿಸುವ ಜೊತೆಗೆ ಟೆಕ್ಸ್ಟ್ ಮೆಸೇಜ್ ಕೂಡ ಕಳುಹಿಸಿದ್ದಾರೆ. ದಯವಿಟ್ಟು ಮದುವೆ ಬಂದು ಹರಸಿ, ಸಮಯದ ಅಭಾವದಿಂದ ವ್ಯಾಟ್ಸಾಪ್ ಮೂಲಕ ಆಮಂತ್ರಣ ಪತ್ರಿಕೆ ಕಳುಹಿಸಿದ್ದೇನೆ, ಅನ್ಯತಾ ಭಾವಿಸದೆ ದಯವಿಟ್ಟು ಮದುವೆಗೆ ಬನ್ನಿ ಎಂದು ಬರೆಯುತ್ತಾರೆ. 

ಅನಾಮಿಕ ಅಥವಾ ನಿಮ್ಮ ಫೋನ್‌ನಲ್ಲಿ ಸೇವ್ ಇಲ್ಲದ ನಂಬರ್‌ನಿಂದ ಈ ರೀತಿಯ ಟೆಕ್ಸ್ಟ್ ಮೆಸೇಜ್ ಜೊತೆ ಡಿಜಿಟಲ್ ಕಾರ್ಡ್ ಬಂದಾಗ? ಸಹಜವಾಗಿ ಯಾರೋ ಕುಟುಂಬಸ್ಥರು, ಆಪ್ತರು, ಗೆಳೆಯರು ಇರಬಹುದು. ಆಮಂತ್ರಣ ಪತ್ರಿಕೆ ನೋಡಿದಾಗ ಯಾರು ಅನ್ನೋದು ತಿಳಿಯಲಿದೆ ಎಂದುಕೊಂಡು ಡೌನ್ಲೋಡ್ ಮಾಡಿದರೆ ಅಲ್ಲೀಗೆ ಕತೆ ಮುಗೀತು. ಕಾರಣ ಈ ಆಮಂತ್ರಣ ಪತ್ರಿಕೆ ಡೌನ್ಲೋಡ್ ಮಾಡುತ್ತಿದ್ದಂತೆ ಮಾಲ್‌ವೇರ್ ವೈರಸ್ ನಿಮ್ಮ ಫೋನ್ ಸೇರಿಕೊಳ್ಳಲಿದೆ. ಇದರಿಂದ ನಿಮ್ಮ ಫೋನ್‌ನಿಂದ ರಹಸ್ಯವಾಗಿ ಸೈಬರ್ ಕ್ರೈಂ ಕಿರಾತಕರು ಮಾಹಿತಿ ಕದಿಯುತ್ತಾರೆ. ಪ್ರಮುಖವಾಗಿ ಬ್ಯಾಂಕ್ ಖಾತೆ, ಗೂಗಲ್ ಪೇ, ಫೋನ್ ಪೇ ಸೇರಿದಂತೆ ಖಾತೆಗಳ ಮಾಹಿತಿ ಕದ್ದು ಹಣ ಗುಳುಂ ಮಾಡುತ್ತಾರೆ. ನೀವು ಮದುವೆ ಆಮಂತ್ರಣ ಡೌನ್ಲೋಡ್ ಮಾಡಿ ಓದಿ ಮುಗಿಸುವಷ್ಟರಲ್ಲಿ ನಿಮ್ಮ ಖಾತೆ ಕಾಲಿಯಾಗಲಿದೆ. 

ಗೊತ್ತಿಲ್ಲದೆ ಸೈಬರ್ ಪೊಲೀಸ್‌ಗೆ ಕರೆ ಮಾಡಿದ ನಕಲಿ ಪೊಲೀಸ್, ವಂಚಿಸಲು ಹೋದವ ಏನಾದ?

ಇಲ್ಲಿ ನಿಮ್ಮನ್ನು ಟಾರ್ಗೆಟ್ ಮಾಡಿ ಆಮಂತ್ರಣ ಪತ್ರಿಕೆ ಕಳುಹಿಸುವುದಿಲ್ಲ. ಸಿಕ್ಕ ಸಿಕ್ಕ ನಂಬರ್‌ಗೆ ಈ ರೀತಿ ಆಮಂತ್ರಣ ಪತ್ರಿಕೆ ಕಳುಹಿಸಲಾಗುತ್ತದೆ. ಲಕ್ಷಾಂತರ ಮಂದಿಗೆ ಈ ಆಮಂತ್ರಣ ಪತ್ರಿಕೆ ಫಾರ್ವರ್ಡ್ ಮಾಡುತ್ತಾರೆ. ಈ ಪೈಕಿ ಸಾವಿರಾರು ಅಥವಾ ನೂರಾರು ಮಂದಿ ಡೌನ್ಲೋಡ್ ಮಾಡಿದರೂ ಸಾಕು. ಸೈಬರ್ ಕ್ರೈಂ ಕಿರಾತಕರ ಪ್ಲಾನ್ ಸಕ್ಸಸ್. ಹೀಗಾಗಿ ಅತೀವ ಎಚ್ಚರವಹಿಸುವಂತೆ ಹಿಮಾಚಲ ಪ್ರದೇಶ ಸೈಬರ್ ಪೊಲೀಸರು ಮನವಿ ಮಾಡಿದ್ದಾರೆ. ಅನಾಮಿಕರ ನಂಬರ್, ನಿಮಗೆ ಗೊತ್ತಿಲ್ಲದ ನಂಬರ್‌ಗಳಿಂದ ಡೌನ್ಲೋಡ್ ಫೈಲ್ ಬಂದರೆ, ಮದುವೆ ಆಮಂತ್ರಣ ಪತ್ರಿಕೆ ಬಂದರೆ ಡೌನ್ಲೋಡ್ ಮಾಡಲು ಹೋಗಬೇಡಿ. 

click me!