
ನವದೆಹಲಿ: ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆಯನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಲು ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿದ್ದ ‘ಕೋವಿನ್’ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಿಕೊಂಡಿದ್ದ ಹಿರಿಯ ರಾಜಕೀಯ ನಾಯಕರು ಸೇರಿದಂತೆ ದೇಶದ ಎಲ್ಲ ನಾಗರಿಕರ ಮಾಹಿತಿ ಸೋರಿಕೆಯಾಗಿದೆ ಎಂಬ ಗಂಭೀರ ಮಾಹಿತಿಯೊಂದು ಬಹಿರಂಗವಾಗಿದೆ.
ಟೆಲಿಗ್ರಾಂ ಆ್ಯಪ್‌ನಲ್ಲಿ ಭಾರತೀಯರ ಖಾಸಗಿ ಮಾಹಿತಿ, ಆಧಾರ್ ಹಾಗೂ ಪಾನ್ ಕಾರ್ಡ್ ವಿವರಗಳು ಲಭ್ಯ ಇವೆ ಎಂದು ಮಲಯಾಳ ವೆಬ್‌ಸೈಟ್‌ವೊಂದು ವರದಿ ಮಾಡಿದೆ. ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ, ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ (K C Venugopal), ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ (Meenakshi Lekhi), ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಾಜೇಶ್ ಭೂಷಣ್ (Rajesh Bhushan), ಅವರ ಪತ್ನಿಯೂ ಆಗಿರುವ ಶಾಸಕಿ ರೀತೂ ಖಂಡೂರಿ, ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್(Veena George), ಖ್ಯಾತನಾಮ ಪತ್ರಕರ್ತರು ಸೇರಿದಂತೆ ಹಲವರ ಮಾಹಿತಿ ಸೋರಿಕೆಯಾಗಿರುವುದಕ್ಕೆ ಸಂಬಂಧಿಸಿದ ಸ್ಕ್ರೀನ್‌ಶಾಟ್‌ಗಳು ವೈರಲ್ ಆಗಿವೆ.
ಅಮೆರಿಕ ಫೇಸ್‌ಬುಕ್ ಗ್ರಾಹಕರಿಗೆ 6000 ಕೋಟಿ ಭರ್ಜರಿ ಪರಿಹಾರ
ಈ ವರದಿ ಬಹಿರಂಗವಾಗುತ್ತಿದ್ದಂತೆ ಪ್ರತಿಪಕ್ಷಗಳು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ಮೋದಿ ಸರ್ಕಾರ ಬಲಿಷ್ಠ ದತ್ತಾಂಶ ಭದ್ರತೆಯನ್ನು ಅನುಸರಿಸುವುದಾಗಿ ಹೇಳುತ್ತದೆ. ಅದಲು ಎಲ್ಲಿದೆ ಎಂದು ತೃಣಮೂಲ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಇದೊಂದು ತೀವ್ರ ಕಳವಳದಾಯಕವಾದ ಹಾಗೂ ಒಪ್ಪತಕ್ಕ ಬೆಳವಣಿಗೆಯಲ್ಲ ಎಂದು ಎನ್‌ಸಿಪಿ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಕಿಡಿಕಾರಿದ್ದಾರೆ.
ಈ ನಡುವೆ, ಕೋವಿನ್ ಪೋರ್ಟಲ್ ಯಾವುದೇ ವ್ಯಕ್ತಿಯ ಜನ್ಮದಿನಾಂಕ, ವಿಳಾಸ ಸೇರಿದಂತೆ ವೈಯಕ್ತಿಕ ಮಾಹಿತಿಯನ್ನೂ ಪಡೆದುಕೊಂಡಿಲ್ಲ. ಆದಾಗ್ಯೂ ಈ ವಿವರವನ್ನು ಪರಿಶೀಲಿಸಲಾಗುತ್ತಿದೆ. ಯಾರಾದರೂ ಅನಧಿಕೃತವಾಗಿ ಕೋವಿನ್ ಆ್ಯಪ್ ಸಂಪರ್ಕ ಗಳಿಸಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಕೋವಿನ್ ಹ್ಯಾಕ್ ಆಗಿದೆ ಎಂಬುದನ್ನು ತಳ್ಳಿ ಹಾಕಿವೆ.
ಸಲ್ಮಾನ್ ಖಾನ್, ಸುಂದರ್ ಪಿಚೈ ಸೇರಿ 40 ಕೋಟಿ ಟ್ವಿಟ್ಟರ್ ಗ್ರಾಹಕರ ಮಾಹಿತಿ ಸೋರಿಕೆ..!
ಕೋವಿನ್ ಆ್ಯಪ್‌ನ ದತ್ತಾಂಶ ಸೋರಿಕೆ ಕುರಿತು ವ್ಯಾಪಕ ವರದಿಯಾಗುತ್ತಿದ್ದಂತೆ, ಆ ಮಾಹಿತಿಯನ್ನು ನೀಡುವ ಟೆಲಿಗ್ರಾಂನ ಬಾಟ್ ಸ್ಥಗಿತಗೊಂಡಿದೆ.
ಮಹಾ ಸೋರಿಕೆ:
ಟೆಲಿಗ್ರಾಂನಲ್ಲಿ ಬಾಟ್ ಚಾನಲ್‌ವೊಂದಿದೆ. ಕೋವಿನ್ ಪೋರ್ಟಲ್‌ನಲ್ಲಿ ನೋಂದಾಯಿತವಾಗಿರುವ ಯಾವುದೇ ಮೊಬೈಲ್ ಸಂಖ್ಯೆಯನ್ನು ಬಾಟ್‌ನಲ್ಲಿ ನಮೂದಿಸುತ್ತಿದ್ದಂತೆ, ಲಸಿಕಾಕರಣಕ್ಕಾಗಿ ಉಪಯೋಗಿಸಲಾಗಿದ್ದ ಗುರುತಿನ ಚೀಟಿಯ ಸಂಖ್ಯೆ, ಲಿಂಗ, ಜನ್ಮ ದಿನಾಂಕ, ಹೆಸರು, ಆತ/ಆಕೆಯ ಡೋಸ್‌ಗಳು ಎಲ್ಲ ಮಾಹಿತಿಯೂ ಹೊರಬೀಳುತ್ತದೆ. ಈ ಮಹಾ ದತ್ತಾಂಶ ಸೋರಿಕೆಯಿಂದಾಗಿ ಭಾರತೀಯರ ಆಧಾರ್ ಕಾರ್ಡ್, ವೋಟರ್ ಐಡಿ ಹಾಗೂ ಪ್ಯಾನ್ ಕಾರ್ಡ್ ಸಂಖ್ಯೆಗಳು ಟೆಲಿಗ್ರಾಂ ಆ್ಯಪ್‌ನಲ್ಲಿ ಎಲ್ಲರಿಗೂ ಲಭ್ಯವಾದಂತಾಗಿದೆ ಎಂದು ಕೇರಳ ವೆಬ್‌ಸೈಟ್ ವರದಿ ಮಾಡಿದೆ. 2021ರಲ್ಲಿ ಕೋವಿನ್ ಆ್ಯಪ್ ಹ್ಯಾಕ್ ಆಗಿದೆ. 15 ಕೋಟಿ ಜನರ ಡೇಟಾ ಬೇಸ್ ಮಾರಾಟವಾಗಿದೆ ಎಂಬ ವರದಿಗಳು ಬಂದಿದ್ದವು. ಆದರೆ ಸೈಬರ್ ಸೆಕ್ಯುರಿಟಿ ಸಂಶೋಧಕರು ಅದನ್ನು ಆ ಸಂದರ್ಭದಲ್ಲಿ ತಳ್ಳಿ ಹಾಕಿದ್ದರು.
ಕೋವಿನ್ ಮಾಹಿತಿ ಸೋರಿಕೆ ಆಗಿಲ್ಲ: ಸಚಿವ ಆರ್ಸಿ
ನವದೆಹಲಿ: ಕೋವಿನ್ ವೆಬ್‌ಸೈಟ್/ಆ್ಯಪ್ ಅನ್ನು ಹ್ಯಾಕ್ ಮಾಡಲಾಗಿದೆ ಎಂಬುದನ್ನು ನಿರಾಕರಿಸಿರುವ ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ‘ಕೋವಿನ್ ಆ್ಯಪ್‌ನ ದತ್ತಾಂಶ ಸೋರಿಕೆ ಆಗಿಲ್ಲ. ಅದರ ಬದಲಿಗೆ ಕೋವಿನ್ ಹೊರತಾದ ಇನ್ನಾವುದೋ ವೆಬ್ನಲ್ಲಿನ ದತ್ತಾಂಶ ಈ ಹಿಂದೆ ಸೋರಿಕೆ ಆಗಿರಬಹುದು. ಅದನ್ನು ಈಗ ಕೋವಿನ್ನೊಂದಿಗೆ ಸಮೀಕರಿಸುವ ಯತ್ನ ನಡೆದಿದೆ’ ಎಂದು ಸ್ಪಷ್ಟಪಡಿಸಿದ್ದಾರೆ. ಇದಲ್ಲದೆ, ‘ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡವು (ಸಿಇಆರ್ಟಿ-ಇನ್) ಕೂಡಲೇ ಈ ಸಮಸ್ಯೆಯನ್ನು ಸರಿಪಡಿಸಲು ಕಾರ್ಯತತ್ಪರವಾಗಿದ್ದು, ಇಡೀ ವ್ಯವಸ್ಥೆಯನ್ನು ಪರಿಶೀಲನೆಗೆ ಒಳಪಡಿಸಿದೆ. ರಾಷ್ಟ್ರೀಯ ದತ್ತಾಂಶ ನೀತಿಯನ್ನು ಅಂತಿಮಗೊಳಿಸಲಾಗಿದೆ. ಇದು ದತ್ತಾಂಶ ಸಂಗ್ರಹ, ಮಾಹಿತಿ ಪಡೆಯುವುದು ಹಾಗೂ ಭದ್ರತೆಗೆ ಏಕೀಕೃತ ಚೌಕಟ್ಟು ರೂಪಿಸಲಿದೆ’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ