ಗುಜರಾತ್‌ಗೆ 210 ಕಿಮೀ ಪ್ರಚಂಡಮಾರುತ ಭೀತಿ!

By Kannadaprabha NewsFirst Published May 18, 2021, 8:12 AM IST
Highlights

* ಗುಜರಾತ್‌ಗೆ 210 ಕಿಮೀ ಪ್ರಚಂಡಮಾರುತ ಭೀತಿ!

* ಪೋರಬಂದರ್‌ ಕರಾವಳಿಗೆ ಅಪ್ಪಳಿಸಿದ ತೌಕ್ಟೆ ಸೈಕ್ಲೋನ್‌

* ನಿನ್ನೆ ರಾತ್ರಿಯಿಂದಲೇ ಭಾರಿ ಮಳೆ

ಪೋರಬಂದರ್‌(ಮೇ.18): ಕೇರಳ, ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ಕರಾವಳಿಗಳಲ್ಲಿ ಸಾಕಷ್ಟುವಿನಾಶ ಸೃಷ್ಟಿಸಿ ಮುನ್ನುಗ್ಗಿರುವ ‘ತೌಕ್ಟೆಚಂಡಮಾರುತ’ ಸೋಮವಾರ ರಾತ್ರಿ 8.30ರ ಸುಮಾರಿಗೆ ಗುಜರಾತ್‌ನ ಪೋರಬಂದರ್‌ ಹಾಗೂ ಮಹುವಾ ಕಡಲತೀರದ ನಡುವೆ ಅಪ್ಪಳಿಸಿದೆ. ಗಂಟೆಗೆ 185 ಕಿ.ಮೀ. ವೇಗದಲ್ಲಿ ‘ಅತಿ ತೀವ್ರ ಸ್ವರೂಪದ ಚಂಡಮಾರುತ’ವಾಗಿ ಭಾರಿ ಬಿರುಗಾಳಿ ಹಾಗೂ ಮಳೆಯೊಂದಿಗೆ ಚಂಡಮಾರುತ ಅಪ್ಪಳಿಸಿದ್ದು, ಬಿರುಗಾಳಿಯ ತೀವ್ರತೆ 210 ಕಿ.ಮೀ.ವರೆಗೂ ಹೆಚ್ಚಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

ಸಮುದ್ರದ ಮಧ್ಯೆ ಸಿಲುಕಿದ ಟಗ್; ಕಾರ್ಮಿಕರ ರಕ್ಷಣೆ

1998ರ ನಂತರ ಗುಜರಾತ್‌ ಎದುರಿಸುತ್ತಿರುವ ಅತಿ ಭೀಕರ ಚಂಡಮಾರುತ ಇದಾಗಬಹುದು ಎನ್ನಲಾಗಿದೆ. ಆಗ ಸಂಭವಿಸಿದ ಚಂಡಮಾರುತದಲ್ಲಿ ಕಾಂಡ್ಲಾ ಬಂದರು ನಲುಗಿತ್ತು. 1173 ಜನರು ಸಾವನ್ನಪ್ಪಿ 1174 ಜನ ಕಾಣೆಯಾಗಿದ್ದರು. ಇದೇ ಕಾರಣ ಈಗ ಮುಂಜಾಗ್ರತಾ ಕ್ರಮ ಕೈಗೊಂಡು ಗುಜರಾತ್‌ನ 1.5 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ನಲುಗಿದ ಮಹಾರಾಷ್ಟ್ರದ ಕೊಂಕಣ:

ಇದಕ್ಕೂ ಮುನ್ನ ಸೋಮವಾರ ಮಧ್ಯಾಹ್ನ ಮಹಾರಾಷ್ಟ್ರ ಕರಾವಳಿಯನ್ನು ದಾಟಿ ಹೋದ ಚಂಡಮಾರುತ, ಮುಂಬೈ ಹಾಗೂ ಮಹಾರಾಷ್ಟ್ರ, ದಿಯು-ದಮನ್‌ ಕರಾವಳಿಯಲ್ಲಿ ಭಾರಿ ಆಪತ್ತು ಸೃಷ್ಟಿಸಿತು. ಮುಂಬೈ ಕರಾವಳಿಯಲ್ಲಿ ಗಂಟೆಗೆ 114 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಿತು. ಇಷ್ಟೊಂದು ಬಿರುಗಾಳಿಯನ್ನು ಮುಂಬೈ ಕಂಡಿದ್ದು ಇದೇ ಮೊದಲು ಎಂದು ಹೇಳಲಾಗಿದೆ. ಮಹಾರಾಷ್ಟ್ರದಲ್ಲಿ ಚಂಡಮಾರುತ ಸಂಬಂಧಿ ಘಟನೆಗಳಲ್ಲಿ 6 ಮಂದಿ ಸಾವಿಗೀಡಾಗಿದ್ದಾರೆ.

ಇನ್ನೆರಡು ದಿನ ರಾಜ್ಯದಲ್ಲಿ ಮಳೆಯಬ್ಬರ : ಯಾವ ಜಿಲ್ಲೆಗೆ?

ಮಹಾರಾಷ್ಟ್ರದ ಕೊಂಕಣ ಕರಾವಳಿಯಲ್ಲಿ ಭಾರೀ ಗಾಳಿ, ಮಳೆ ಬೀಸಿದ್ದರಿಂದ ಸ್ಥಳೀಯ ರೈಲು ಸೇವೆಗಳ ಮೇಲೆ ವ್ಯತ್ಯಯವಾಯಿತು. ಮುಂಬೈನ ಬಾಂದ್ರಾ-ವರ್ಲಿ ಸೀ ಲಿಂಕ್‌ ರಸ್ತೆ ಬಂದ್‌ ಆಯಿತು. ಗಂಟೆಗೆ 114 ಕಿ.ಮೀ ವೇಗದಲ್ಲಿ ಬೀಸುತ್ತಿರುವ ಗಾಳಿಯಿಂದ ಹಲವೆಡೆ ಮರಗಳು ಧರೆಗುರುಳಿ ಸಂಚಾರಕ್ಕೆ ಅಡ್ಡಿ ಆಯಿತು. ರಾತ್ರಿ 8 ಗಂಟೆ ವರೆಗೆ ವಿಮಾನ ನಿಲ್ದಾಣದ ಬಂದ್‌ ಆಗಿತ್ತು.

ಅಲೆಯ ಹೊಡೆತಕ್ಕೆ 410 ಜನರಿದ್ದ ಎರಡು ಬಾಜ್‌ರ್‍ ಸಿಲುಕಿದ್ದವು. ಸುದೈವವಶಾತ್‌ ಎಲ್ಲ 410 ಸಿಬ್ಬಂದಿ ಕೂಡ ಸುರಕ್ಷಿತವಾಗಿದ್ದಾರೆ. ನೌಕಾಪಡೆ ಇವರ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ. ಮುಂಬೈನಲ್ಲಿ ಆರೆಂಜ್‌ ಹಾಗೂ ಸಿಂಧುದುರ್ಗ, ರಾಯಗಡದಲ್ಲಿ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿತ್ತು.

ಗುಜರಾತ್‌ನಲ್ಲಿ ಭಾರಿ ಮುಂಜಾಗ್ರತೆ:

ಅತಿ ತೀವ್ರ ಸ್ವರೂಪದ ಚಂಡಮಾರುತದ ರೂಪದಲ್ಲಿ ‘ತೌಕ್ಟೆ’ ಗುಜರಾತ್‌ ತೀರಕ್ಕೆ ರಾತ್ರಿ ಅಪ್ಪಳಿಸಿದೆ. ಆದರೆ ಇದಕ್ಕೂ ಮುನ್ನವೇ ಅಂದರೆ, ಭಾನುವಾರ ರಾತ್ರಿಯಿಂದಲೇ 21 ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಗುಜರಾತ್‌ ಕರಾವಳಿಯ 17 ಜಿಲ್ಲೆಗಳ 1.5 ಲಕ್ಷಕ್ಕೂ ಹೆಚ್ಚು ಜನರ ಸ್ಥಳಾಂತರ ಮಾಡಲಾಗಿದೆ. ಪೋರಬಂದರ್‌ ಕೋವಿಡ್‌ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿದ್ದ 17 ಸೋಂಕಿತರು ಬೇರೆ ಆಸ್ಪತ್ರೆಗೆ ವರ್ಗ ಮಾಡಲಾಗಿದೆ.ಕೋವಿಡ್‌ ಆಸ್ಪತ್ರೆಗಳಲ್ಲಿ ನಿರಂತರ ವಿದ್ಯುತ್‌ ಸರಬರಾಜಿಗೆ ವ್ಯವಸ್ಥೆ ಏರ್ಪಡಿಸಲಾಗಿದೆ. ರಕ್ಷಣಾ ಕಾರ‍್ಯಕ್ಕೆ ಎನ್‌ಡಿಆರ್‌ಎಫ್‌ನ 41 ತುಕಡಿ, ರಾಜ್ಯ ವಿಪತ್ತು ನಿರ್ವಹಣಾ ಪಡೆಯ 10 ತಂಡ ನಿಯೋಜನೆ ಮಾಡಲಾಗಿದೆ.

ಚಂಡಮಾರುತದಿಂದ ಕರ್ನಾಟಕ ಪಾರು: ಭಾರೀ ಹಾನಿ ಮಾಡದೇ ಸಾಗಿದ ತೌಕ್ಟೆ!

ಸ್ಥಿತಿ ಮೇಲೆ ಮೋದಿ ನಿಗಾ:

ಪ್ರವಾಹ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ದೂರವಾಣಿ ಮಾತುಕತೆ ನಡೆಸಿ, ಕೇಂದ್ರದ ಎಲ್ಲ ಸಹಕಾರದ ಭರವಸೆ ನೀಡಿದ್ದಾರೆ. ಭಾರತೀಯ ಸೇನೆ 180 ತಂಡಗಳು ಹಾಗೂ 9 ಎಂಜಿನಿಯರ್‌ ಟಾಸ್ಕ್‌ ಫೋರ್ಸ್‌ ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿದ್ದು, ಯಾವುದೇ ಕ್ಷಣದಲ್ಲೂ ರಕ್ಷಣಾ ಕಾರ‍್ಯಕ್ಕೆ ಧುಮುಕಲು ಸಿದ್ಧವಾಗಿದೆ.

ಸೈಕ್ಲೋನ್‌ನಿಂದ ಕರ್ನಾಟಕ ಪಾರು

ರಾಜ್ಯಕ್ಕೆ ಭೀತಿಯನ್ನುಂಟುಮಾಡಿದ್ದ ತೌಕ್ಟೆಚಂಡಮಾರುತ ಗುಜರಾತ್‌ ಕಡೆಗೆ ಚಲಿಸಿದ ಹಿನ್ನೆಲೆಯಲ್ಲಿ ಶನಿವಾರದಿಂದೀಚೆಗೆ ಕರಾವಳಿ ಭಾಗದಲ್ಲಿ ಸುರಿದ ಬಿರುಗಾಳಿ-ಮಳೆ ಸೋಮವಾರ ವೇಳೆ ಸಂಪೂರ್ಣ ಕಡಿಮೆಯಾಗಿದೆ. ಕಡಲು ಕೊರೆತವೂ ತಹಬದಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಭಾರೀ ಹಾನಿಗೊಳಗಾಗಿದ್ದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಏಟಿನಿಂದ ಚೇತರಿಸಿಕೊಳ್ಳಲು ಸಾಕಷ್ಟುಸಮಯ ಬೇಕಾಗಲಿದೆ.

click me!