ಟೆಲಿಕಾಂ ಕಂಪನಿಗಳಿಗೆ 9 ರೀತಿಯ ಕೊಡುಗೆ!

By Kannadaprabha NewsFirst Published Sep 16, 2021, 7:43 AM IST
Highlights

* ಕೋವಿಡ್‌f ಸಂಕಷ್ಟದಲ್ಲಿರುವ ವಲಯಕ್ಕೆ ಆರ್ಥಿಕ ಉತ್ತೇಜನ

* ಟೆಲಿಕಾಂ ಕಂಪನಿಗಳಿಗೆ 9 ರೀತಿಯ ಕೊಡುಗೆ

* ಮಹತ್ವದ ದೂರಸಂಪರ್ಕ ಸುಧಾರಣೆಗೆ ಅಸ್ತು

ನವದೆಹಲಿ(ಸೆ.16): ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ದೇಶದ ದೂರಸಂಪರ್ಕ ವಲಯದ ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರ, ಈ ವಲಯಕ್ಕೆ ಚಿತೋಹಾರಿ ಎನ್ನಬಹುದಾದ ಹಲವು ಭರ್ಜರಿ ಕ್ರಮಗಳನ್ನು ಪ್ರಕಟಿಸಿದೆ. ಸರ್ಕಾರ ಪ್ರಕಟಿಸಿರುವ ಕ್ರಮಗಳು ಹಾಲಿ ಇರುವ ಕಂಪನಿಗಳನ್ನು ಕಾಪಾಡುವ ಜೊತೆಗೆ, ಹೊಸ ಕಂಪನಿಗಳ ಆಗಮನಕ್ಕೆ ನೆರವಾಗಲಿದೆ. ಜೊತೆಗೆ ದಿವಾಳಿ ಅಂಚಿನಲ್ಲಿದ್ದ ‘ವಿ’ (ವೊಡಾಫೋನ್‌-ಐಡಿಯಾ) ಕಂಪನಿಗೆ ಉಸಿರಾಡಲು ಅವಕಾಶ ಕಲ್ಪಿಸಲಿದೆ ಎಂದು ವಿಶ್ಲೇಷಿಸಲಾಗಿದೆ. ಸರ್ಕಾರದ ಈ ನಿರ್ಧಾರವನ್ನು ಟೆಲಿಕಾಂ ವಲಯ ಸ್ವಾಗತಿಸಿದೆ.

ಟೆಲಿಕಾಂ ವಲಯದ ಪುನಶ್ಚೇತನಕ್ಕೆ ಒಟ್ಟು 9 ಸುಧಾರಣೆಗಳಿಗೆ ಬುಧವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಸಭೆಯ ಬಳಿಕ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭರ್ಜರಿ ನೆರವು:

ಟೆಲಿಕಾಂ ಕಂಪನಿಗಳು ಸೆಕ್ಟ್ರಂ, ಲೈಸೆನ್ಸ್‌ ಮತ್ತು ಎಜಿಆರ್‌ ರೂಪದಲ್ಲಿ ಸರ್ಕಾರಕ್ಕೆ ಪಾವತಿಸಬೇಕಿದ್ದ ಬಾಕಿ ಶುಲ್ಕ ಪಾವತಿ ಮಾಡಲು 4 ವರ್ಷ ಕಾಲಾವಕಾಶ ನೀಡಲಾಗಿದೆ. ಸಣ್ಣ ಪ್ರಮಾಣದ ಬಡ್ಡಿಯೊಂದಿಗೆ ಈ ಹಣವನ್ನು ಕಂಪನಿಗಳು ಪಾವತಿ ಮಾಡಬಹುದಾಗಿದೆ. ಹೀಗಾಗಿ ತಕ್ಷಣಕ್ಕೆ ಕಂಪನಿಗಳು ಸಾವಿರಾರು ಕೋಟಿ ಪಾವತಿ ಹೊಣೆಯಿಂದ ಬಚಾವ್‌ ಆಗಲಿವೆ.

ಇನ್ನು ಈವರೆಗೆ ಟೆಲಿಕಾಂ ವಲಯದಲ್ಲಿ ಸ್ವಯಂಚಾಲಿತ ಮಾರ್ಗದ ಮೂಲಕ ಶೇ.49ರಷ್ಟುವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶವಿತ್ತು. ಅದಕ್ಕಿಂತ ಹೆಚ್ಚಿನ ಹೂಡಿಕೆಗೆ ಸರ್ಕಾರದ ಅನುಮತಿ ಕಡ್ಡಾಯವಿತ್ತು. ಇದೀಗ ಆ ಪ್ರಮಾಣವನ್ನು ಶೇ.100ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಆರ್ಥಿಕ ಸಂಕಷ್ಟದಲ್ಲಿರುವ ಕಂಪನಿಗಳಿಗೆ ವಿದೇಶಗಳಿಂದ ಹೆಚ್ಚಿನ ಬಂಡವಾಳ ಸ್ವೀಕಾರಕ್ಕೆ ಅನುಕೂಲವಾಗಲಿದೆ. ಆದರೆ ಪಾಕಿಸ್ತಾನ ಹಾಗೂ ಚೀನಾದಿಂದ ಎಫ್‌ಡಿಐಗೆ ಸರ್ಕಾರದ ಅನುಮತಿ ಬೇಕು ಎಂಬ ಷರತ್ತು ವಿಧಿಸಲಾಗಿದೆ.

ಮತ್ತೊಂದೆಡೆ ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್‌) ವ್ಯಾಪ್ತಿಯಿಂದ ಟೆಲಿಕಾಮೇತರ ಆದಾಯ ಹೊರಗಿಡಲಾಗಿದೆ. ಅಂದರೆ ಇನ್ನು ಕರೆ ಸಂಬಂಧಿತ ಆದಾಯದಲ್ಲಿ ಮಾತ್ರ ಸರ್ಕಾರದ ಜೊತೆಗೆ ಆದಾಯ ಹಂಚಿಕೊಂಡರೆ ಸಾಕು. ಇದರೆ ಆದಾಯ ಹಂಚಿಕೊಳ್ಳುವ ಅಗತ್ಯವಿಲ್ಲ.

ಕಂಪನಿಗಳ ನಡುವೆ ಪರಸ್ಪರ ಸ್ಪೆಕ್ಟ್ರಂ ಹಂಚಿಕೆಗೆ ಅನುಮತಿ ನೀಡಲಾಗಿದೆ. ಇದರಿಂದ ಕಂಪನಿಗಳ ಆರ್ಥಿಕ ಹೊರೆ ಇಳಿಯಲಿದೆ. ಸೇವೆಯ ಸಾಮರ್ಥ್ಯ ಹೆಚ್ಚಲಿದೆ. ಇದಲ್ಲದೆ ಭವಿಷ್ಯದಲ್ಲಿ ಕಂಪನಿಗಳಿಗೆ ಸ್ಪೆಕ್ಟ್ರಂ ಬಳಕೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ಇದು ಕಂಪನಿಗಳಿಗೆ ಭಾರೀ ಆರ್ಥಿಕ ಲಾಭ ಮಾಡಿಕೊಡಲಿದೆ. ಜೊತೆಗೆ ಸ್ಪೆಕ್ಟ್ರಂ ಬಳಕೆ ಶುಲ್ಕವನ್ನು ಪ್ರತಿ ತಿಂಗಳ ಬದಲು ವರ್ಷಕ್ಕೊಮ್ಮೆ ಕಟ್ಟಲು ಅನುಮತಿಸಲಾಗಿದೆ. ಟೆಲಿಕಾಂ ಕಂಪನಿಗಳು ವಿದೇಶದಿಂದ ಸಲಕರಣೆಗಳನ್ನು ಆಮದು ಮಾಡಿಕೊಳ್ಳಬೇಕೆಂದರೆ ಲೈಸೆನ್ಸ್‌ ಪಡೆಯಬೇಕು ಎಂಬ ಷರತ್ತನ್ನು ರದ್ದುಗೊಳಿಸಲಾಗಿದೆ. ಸ್ಪೆಕ್ಟ್ರಂ ಅವಧಿಯನ್ನು 20ರಿಂದ 30 ವರ್ಷಕ್ಕೆ ಹೆಚ್ಚಿಸಲಾಗಿದೆ. 10 ವರ್ಷಗಳ ಬಳಿಕ ಸ್ಪೆಕ್ಟ್ರಂ ಮರಳಿಸಲು ಅವಕಾಶ ನೀಡಲಾಗಿದೆ.

ಏನೇನು ಬದಲಾವಣೆ?

1.ಆಟೋಮೆಟಿಕ್‌ ರೂಟ್‌ನಲ್ಲಿ ಶೇ.100ರಷ್ಟುಎಫ್‌ಡಿಐಗೆ ಅವಕಾಶ

2.ಸರ್ಕಾರಕ್ಕೆ ಕಟ್ಟಬೇಕಿರುವ ಬಾಕಿ ಪಾವತಿಸಲು 4 ವರ್ಷ ಕಾಲಾವಕಾಶ

3.ಕರೆಯಿಂದ ಬಂದ ಆದಾಯ ಮಾತ್ರ ಸರ್ಕಾರದ ಜೊತೆಗೆ ಹಂಚಿಕೆ

4.ಟೆಲಿಕಾಂ ಕಂಪನಿಗಳ ನಡುವೆ ಸ್ಪೆಕ್ಟ್ರಂ ವಿನಿಮಯಕ್ಕೆ ಸರ್ಕಾರ ಅಸ್ತು

5.ಒಮ್ಮೆ ಸ್ಪೆಕ್ಟ್ರಂ ಖರೀದಿಸಿದ ಮೇಲೆ ಪ್ರತಿ ವರ್ಷ ಶುಲ್ಕ ಪಾವತಿಸಬೇಕಿಲ್ಲ

6.ಹಳೆ ಕಂಪನಿಗಳಿಂದ ತಿಂಗಳ ಬದಲು ವರ್ಷಕ್ಕೊಮ್ಮೆ ಸ್ಪೆಕ್ಟ್ರಂ ಶುಲ್ಕ ಪಾವತಿ

7.ವಿದೇಶಿ ಸಲಕರಣೆ ಆಮದಿಗೆ ಇನ್ನುಮುಂದೆ ಲೈಸೆನ್ಸ್‌ ಪಡೆಯಬೇಕಿಲ್ಲ

8.ತರಂಗಾಂತರ ಹಂಚಿಕೆಯ ಅವಧಿ 20ರಿಂದ 30 ವರ್ಷಕ್ಕೆ ಹೆಚ್ಚಳ

9.ಕೇವಲ 10 ವರ್ಷದ ಬಳಿಕ ತರಂಗಾಂತರ ಮರಳಿಸಲು ಅವಕಾಶ

click me!