ಬಿಜೆಪಿಯ ಭೀಷ್ಮ, ಪಾಕಿಸ್ತಾನದಲ್ಲಿ ಜನಿಸಿ ಭಾರತದ ಮನಗೆದ್ದ ನಾಯಕ ಎಲ್‌ ಕೆ ಅಡ್ವಾಣಿ

By Kannadaprabha NewsFirst Published Feb 4, 2024, 8:24 AM IST
Highlights

ಎಲ್‌.ಕೆ.ಅಡ್ವಾಣಿ ಹುಟ್ಟಿದ್ದು ಇಂದಿನ ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದ ಕರಾಚಿಯಲ್ಲಿ. ಅಡ್ವಾಣಿ ಅವರ ಮನೆ ಇದ್ದದ್ದು ಜಮ್‌ಷೆಡ್‌ ಕ್ವಾಟರ್ಸ್‌ನಲ್ಲಿ. ಅಡ್ವಾಣಿ ಕುಟುಂಬ ಸಿಂಧಿ ಹಿಂದು ಪಂಗಡದ ಅಮಿಲ್‌ ವಿಭಾಗಕ್ಕೆ ಸೇರಿತ್ತು

ನವದೆಹಲಿ: ಎಲ್‌.ಕೆ.ಅಡ್ವಾಣಿ ಹುಟ್ಟಿದ್ದು ಇಂದಿನ ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದ ಕರಾಚಿಯಲ್ಲಿ. ಅಡ್ವಾಣಿ ಅವರ ಮನೆ ಇದ್ದದ್ದು ಜಮ್‌ಷೆಡ್‌ ಕ್ವಾಟರ್ಸ್‌ನಲ್ಲಿ. ಅಡ್ವಾಣಿ ಕುಟುಂಬ ಸಿಂಧಿ ಹಿಂದು ಪಂಗಡದ ಅಮಿಲ್‌ ವಿಭಾಗಕ್ಕೆ ಸೇರಿತ್ತು. ಅಮಿಲ್‌ ಎಂದರೆ ಮುಸ್ಲಿಂ ರಾಜರಿಗೆ ಆಡಳಿತ ವ್ಯವಹಾರ ನಡೆಸಿಕೊಡುತ್ತಿದ್ದ ಮುನ್ಷಿಗಳಿಗೆ ಸಹಾಯ ಮಾಡುತ್ತಿದ್ದ ವರ್ಗ. ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡ ಎಲ್‌.ಕೆ.ಅಡ್ವಾಣಿಯನ್ನು ಸಾಕಿ ಸಲಹಿ ಪರಿಪೂರ್ಣ ವ್ಯಕ್ತಿಯನ್ನಾಗಿ ಮಾಡಿದ್ದು ಅವರ ತಂದೆ. ಹೀಗಾಗಿ ಅಡ್ವಾಣಿಗೆ ಮೊದಲಿನಿಂದಲೂ ತಂದೆಯ ಮೇಲೆ ಅಪಾರ ಪ್ರೀತಿ.

ಪಾಕಿಸ್ತಾನದಲ್ಲೇ ಪ್ರಾಥಮಿಕ ಶಿಕ್ಷಣ

ಅಡ್ವಾಣಿ ಪ್ರೌಢಶಾಲೆ ಅಭ್ಯಾಸ ನಡೆದಿದ್ದು ಕರಾಚಿಯ ಸೆಂಟ್‌ ಪ್ಯಾಟ್ರಿಕ್ಸ್‌ ಹೈಸ್ಕೂಲ್‌ನಲ್ಲಿ. ಅಡ್ವಾಣಿ ಬುದ್ಧಿವಂತನಾಗಿದ್ದರಿಂದ ಶಾಲೆಯಲ್ಲಿ ಎಲ್ಲಾ ಶಿಕ್ಷಕರಿಗೂ ಮೆಚ್ಚಿನ ವಿದ್ಯಾರ್ಥಿಯಾಗಿದ್ದರು. ಅಡ್ವಾಣಿಗೆ 14 ವರ್ಷ ವಯಸ್ಸಾದ ಸಂದರ್ಭದಲ್ಲಿ ಅವರ ಕುಟುಂಬ ಕರಾಚಿಯಿಂದ ಸಿಂಧ್‌ ಪ್ರಾಂತ್ಯದಲ್ಲಿನ ಹೈದ್ರಾಬಾದ್‌ಗೆ ಸ್ಥಳಾಂತರಗೊಂಡಿತು. ಎಸ್‌ಎಸ್‌ಎಲ್‌ಸಿ ನಂತರದ ಶಿಕ್ಷಣವನ್ನು ಹೈದ್ರಾಬಾದ್‌ನ ಡಿ.ಜಿ.ನ್ಯಾಷನಲ್‌ ಕಾಲೇಜಿನಲ್ಲಿ ಪಡೆದರು. ನಂತರ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ಪಾಕಿಸ್ತಾನದ ಹೈದ್ರಾಬಾದ್‌ನಲ್ಲಿ ಮುರಳಿ ಮುಖಿ ಮೂಲಕ ಆರ್‌ಎಸ್‌ಎಸ್‌ ನಂಟಿಗೆ ಬಂದಿದ್ದರು.

ಕರಾಚಿಯಿಂದ ದೆಹಲಿಗೆ ಕರೆ ತಂದ ಸ್ಫೋಟ

ಆಗಿನ್ನು ಭಾರತದ ವಿಭಜನೆಯಾಗಿ ತಿಂಗಳಾಗಿರಲಿಲ್ಲ. ಅಷ್ಟರಲ್ಲೇ, ಅಂದರೆ 1947ರ ಸೆ.9ರಂದು ಕರಾಚಿಯ ಶಿಕಾರಿಪುರಿ ಪ್ರಾಂತ್ಯದಲ್ಲಿ ಸ್ಫೋಟ ಸಂಭವಿಸಿತ್ತು. ಸ್ಫೋಟಕ್ಕೆ ಆರ್‌ಎಸ್‌ಎಸ್‌ ಕಾರಣ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡತೊಡಗಿದವು. ಇದರಿಂದಾಗಿ ಅಲ್ಲಿನ ಪೊಲೀಸರು ಕರಾಚಿಯ ಹಲವು ಪ್ರಮುಖ ಆರ್‌ಎಸ್‌ಎಸ್‌ ನಾಯಕರನ್ನು ಬಂಧಿಸಿ ಜೈಲಿಗೆ ಅಟ್ಟಿದರು. ಇದನ್ನು ಗಮನಿಸಿದ ಅಡ್ವಾಣಿಯ ಕೆಲ ಸ್ನೇಹಿತರು ಪಾಕಿಸ್ತಾನ ಬಿಟ್ಟು ಭಾರತಕ್ಕೆ ತೆರಳುವಂತೆ ಸಲಹೆ ನೀಡಿದರು. ಈ ಹಿನ್ನೆಲೆಯಲ್ಲಿ ಸೆ.12ರಂದು ಅಡ್ವಾಣಿ ತಮ್ಮ ಸ್ನೇಹಿತ ಮುರಳೀಧರ ಎಂಬುವವರ ಜೊತೆಗೂಡಿ ವಿಮಾನ ಏರಿ, ನವದೆಹಲಿ ಎಂಬ ಅಪರಿಚಿತ ನಗರಕ್ಕೆ ಬಂದಿಳಿದರು. ಹೀಗೆ ಭಾರತಕ್ಕೆ ಬಂದ ಅಡ್ವಾಣಿ ಮುಂದೆ ಭಾರತದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಸೃಷ್ಟಿಸಿದರು.

ಬಿಜೆಪಿಗೆ ಗೆಲುವಿನ ಸ್ಪರ್ಶ ನೀಡಿದ ಧೀಮಂತ ನಾಯಕ

ಕಾಂಗ್ರೆಸ್‌ಗೆ ಪರ್ಯಾಯ ಶಕ್ತಿಯಾಗಿ ಉದಯವಾಗಿ, ಇದೀಗ ಅತಿದೊಡ್ಡ ಶಕ್ತಿಯಾಗಿ ಹೊರಹೊಮ್ಮಿದ ಬಿಜೆಪಿಯ ಬೆಳವಣಿಗೆಯಲ್ಲಿ ಅಡ್ವಾಣಿ ಪಾತ್ರ ಅತ್ಯಂತ ಮಹತ್ವದ್ದು. ಉದಯವಾಗಿ ದಶಕ ಕಳೆದರೂ ದೊಡ್ಡ ಮಟ್ಟದ ಗೆಲುವಿನ ರುಚಿ ಕಂಡಿರದಿದ್ದ ಬಿಜೆಪಿಗೆ ರಾಮಮಂದಿರ ಆಂದೋಲನದ ಮೂಲಕ ಹೊಸ ಸ್ಪರ್ಶ ನೀಡಿದ್ದೂ ಅಲ್ಲದೆ ಮೊದಲ ಗೆಲುವಿನ ಸಿಹಿ ತಿನ್ನಿಸಿದ್ದು ಅಡ್ವಾಣಿ.

ಮೊದಲ ರಾಜಕೀಯ ಹೆಜ್ಜೆ

1947ರಲ್ಲಿ ಆಕಸ್ಮಿಕವಾಗಿ ಭಾರತಕ್ಕೆ ಕಾಲಿಟ್ಟ ಅಡ್ವಾಣಿ ಮೊದಲಿಗೆ ರಾಜಸ್ಥಾನದಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಈ ನಡುವೆ 1950ರಲ್ಲಿ ಆರಂಭವಾದ ಜನಸಂಘ ಎಂಬ ಹೊಸ ರಾಜಕೀಯ ಸಂಘಟನೆಯಲ್ಲಿ ಸದಸ್ಯರಾದ ಅಡ್ವಾಣಿ, 1972ರಲ್ಲಿ ಜನಸಂಘದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.

ಅಟಲ್‌ ನಂಟು:

ಭಾರತಕ್ಕೆ ಸ್ವಾತಂತ್ಯ್ರ ಬಂದ ದಿನಗಳಲ್ಲಿ ಕಾಂಗ್ರೆಸ್‌ನದ್ದೇ ಅಧಿಪತ್ಯವಾಗಿತ್ತು. ಇಂತದ ದಿನಗಳಲ್ಲೇ ಅಂದರೆ 1957ರಲ್ಲಿ, ಜನಸಂಘದ ನಾಯಕ ದೀನ್‌ ದಯಾಳ್‌ ಸೂಚನೆ ಅನ್ವಯ ಅಡ್ವಾಣಿ ನವದೆಹಲಿಗೆ ಕಾಲಿಟ್ಟರು. ಅಲ್ಲಿ ವಾಜಪೇಯಿ ಸೇರಿದಂತೆ ಜನಸಂಘದ ನೂತನ ಸಂಸದರಿಗೆ ಸಂಸದೀಯ ಕೆಲಸಗಳಲ್ಲಿ ನೆರವಾಗುವ ಕೆಲಸವನ್ನು ಅಡ್ವಾಣಿಗೆ ವಹಿಸಲಾಗಿತ್ತು. ಇಲ್ಲಿಂದ ಅಡ್ವಾಣಿ ಅವರ ದೆಹಲಿ ಹಾಗೂ ಅಟಲ್‌ ಜಿ ನಂಟು ಆರಂಭವಾಯಿತು.

ರಾಜಕೀಯದಲ್ಲಿ ಮೊದಲ ಹುದ್ದೆ

ಅಡ್ವಾಣಿ ಮೊದಲ ರಾಜಕೀಯ ಹುದ್ದೆ ಏರಿದ್ದು ನವದೆಹಲಿಯಲ್ಲಿ. ಪಕ್ಷದ ಸಂಸದೀಯ ಕಾರ್ಯಚಟುವಟಿಕೆ ಜೊತೆಗೆ ಪಕ್ಷದ ದೆಹಲಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುವಂತೆ ದೀನ್‌ದಯಾಲ್‌ ಅಡ್ವಾಣಿಗೆ ಸೂಚಿಸಿದರು. ಇದು ಅಡ್ವಾಣಿಗೆ ರಾಜಕೀಯದಲ್ಲಿ ಒಲಿದ ಮೊದಲ ಹುದ್ದೆಯಾಗಿತ್ತು.

ಜನತಾ ಪಕ್ಷದ ಉದಯ:

ತುರ್ತು ಪರಿಸ್ಥಿತಿ ಬಳಿಕ ಅಂದರೆ 1977ರಲ್ಲಿ ನಡೆದ ಲೋಕಸಭಾ ಚುನಾವಣೆಗೆ ಜನಸಂಘ, ಕಾಂಗ್ರೆಸ್‌ (ಒ), ಸೋಷಿಯಲಿಸ್ಟ್‌ ಪಕ್ಷ ಹಾಗೂ ಲೋಕದಳ ಒಗ್ಗೂಡಿ ಜನತಾಪಕ್ಷ ಸ್ಥಾಪನೆಗೊಂಡಿತ್ತು. ಈ ವೇಳೆ ಅಡ್ವಾಣಿ ಅವರನ್ನು ಹೊಸ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯ್ತು. ಈ ಚುನಾವಣೆಯಲ್ಲಿ ಜನತಾ ಪಕ್ಷ 295 ಸ್ಥಾನ ಗೆದ್ದು ಅಧಿಕಾರಕ್ಕೆ ಬಂದಿತು. ಮೊರಾರ್ಜಿ ದೇಸಾಯಿ ಪ್ರಧಾನಿಯಾದರೆ, ಅಡ್ವಾಣಿ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾಗಿ ನಿಯುಕ್ತಿಗೊಂಡರು.

Breaking: ಬಿಜೆಪಿಯ ಭೀಷ್ಮ ಎಲ್‌ ಕೆ ಅಡ್ವಾಣಿಗೆ ಭಾರತರತ್ನ ಘೋಷಣೆ

ಸಂಸತ್ತಿಗೆ ಪ್ರವೇಶ: 

ಕೇಂದ್ರಾಡಳಿತ ಪ್ರದೇಶ ದೆಹಲಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಇಂದ್ರ ಕುಮಾರ್‌ ಗುಜ್ರಾಲ್‌ ಅವರ ಅಧಿಕಾರದ ಅವಧಿ 1970ಕ್ಕೆ ಮುಕ್ತಾಯವಾಗಿತ್ತು. ಈ ವೇಳೆ ದೆಹಲಿ ಪಾಲಿಕೆಯಲ್ಲಿ ಜನಸಂಘಕ್ಕೆ ಹೆಚ್ಚಿನ ಸದಸ್ಯ ಬಲ ಇದ್ದಿದ್ದರಿಂದ ರಾಜ್ಯಸಭೆಗೆ ಸದಸ್ಯರೊಬ್ಬರನ್ನು ಕಳುಹಿಸಿಕೊಡುವ ಅವಕಾಶ ಜನಸಂಘಕ್ಕೆ ಸಿಕ್ಕಿತ್ತು. ಈ ಸಂದರ್ಭದಲ್ಲಿ ಅಡ್ವಾಣಿ ಅವರನ್ನು ಕಳುಹಿಸಲಾಯಿತು.

ಬಿಜೆಪಿ ಉದಯ

ಕಾಂಗ್ರೆಸ್‌ಗೆ ಪರ್ಯಾಯವಾಗಿ ಗುರುತಿಸಿಕೊಂಡಿದ್ದ ಜನತಾ ಪಕ್ಷ 1980ರಲ್ಲಿ ಚರಣ್‌ ಸಿಂಗ್‌ ಸರ್ಕಾರದ ಪತನದೊಂದಿಗೆ ತಾನೂ ಪತನಗೊಂಡಿತು. ಈ ವೇಳೆ ಅಟಲ್‌ ಬಿಹಾರಿ ವಾಜಪೇಯಿ, ಅಡ್ವಾಣಿ, ಭೈರೋನ್‌ಸಿಂಗ್‌ ಶೇಖಾವತ್‌ ಮೊದಲಾದವರ ಮುಂದಾಳತ್ವದಲ್ಲಿ ಭಾರತೀಯ ಜನತಾ ಪಕ್ಷ ಜನ್ಮತಾಳಿತು.

ಗೆಲುವಿನ ರುಚಿ

1980ರಲ್ಲಿ ಅಸ್ತಿತ್ವಕ್ಕೆ ಬಂದ ಬಿಜೆಪಿಯ ಚುಕ್ಕಾಣಿಯನ್ನು 1986ರವರೆಗೂ ವಾಜಪೇಯಿ ಹಿಡಿದಿದ್ದರು. 1984ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೇವಲ 2 ಸ್ಥಾನ ಪಡೆದಿತ್ತು. ಇದಾದ 2 ವರ್ಷಗಳ ಬಳಿಕ ಪಕ್ಷಕ್ಕೆ ಹೊಸ ಚೈತನ್ಯ ನೀಡುವ ನಿಟ್ಟಿನಲ್ಲಿ ವಾಜಪೇಯಿ ಪಕ್ಷದ ಚುಕ್ಕಾಣಿಯನ್ನು ಅಡ್ವಾಣಿಗೆ ವಹಿಸಿದರು. 1989ರಲ್ಲಿ ಕಾಂಗ್ರೆಸ್‌ ಪ್ರಧಾನಿಯಾಗಿದ್ದ ರಾಜೀವ್‌ಗಾಂಧಿ ಆರೋಪಿಯಾಗಿದ್ದ ಬೋಫೋರ್ಸ್‌ ಹಗರಣವನ್ನು ದೊಡ್ಡಮಟ್ಟದಲ್ಲಿ ಜನರಿಗೆ ತಲುಪಿಸುವಲ್ಲಿ ಅಡ್ವಾಣಿ ಯಶಸ್ವಿಯಾದರು. ಪರಿಣಾಮ 1989ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲುಂಡಿತು. ಈ ಚುನಾವಣೆಯಲ್ಲಿ ಗಮನಾರ್ಹ ಸ್ಥಾನ ಪಡೆದ ಬಿಜೆಪಿ ಕೇಂದ್ರದಲ್ಲಿ ವಿ.ಪಿ.ಸಿಂಗ್‌ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಿತು ಮೊದಲ ಬಾರಿಗೆ ಕೇಂದ್ರದಲ್ಲಿ ಅಧಿಕಾರದ ರುಚಿ ಉಂಡಿತು.

ನಂತರದ ದಿನಗಳಲ್ಲಿ ಅಡ್ವಾಣಿ ನೇತೃತ್ವದಲ್ಲಿ ಬಿಜೆಪಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪ್ರಸ್ತಾಪವನ್ನು ಕೈಗೆತ್ತಿಕೊಂಡಿತು. ಈ ಸಂಬಂಧ 1989ರಲ್ಲಿ ಅಡ್ವಾಣಿ ರಥಯಾತ್ರೆ ಕೈಗೊಂಡರು. ಇದು ಬಿಜೆಪಿಗೆ ಹಿಂದುತ್ವದ ಚುಕ್ಕಾಣಿ ಹಿಡಿಯುವ ಅವಕಾಶ ಕಲ್ಪಿಸಿತು. ಇದರ ಫಲವಾಗಿ 1991ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎರಡನೇ ಅತ್ಯಧಿಕ ಸ್ಥಾನ ಪಡೆದ ಪಕ್ಷವಾಗಿ ಹೊರಹೊಮ್ಮಿತು. ಬಳಿಕವೂ ಅಡ್ವಾಣಿ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸುವ ಯತ್ನ ಮಾಡುತ್ತಾ ಬಂದರು.

ಇದರ ಫಲವಾಗಿಯೇ 1996ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ ಈ ಸಂತೋಷ ಬಹುಕಾಲ ಬಾಳಲಿಲ್ಲ. ಸದನದಲ್ಲಿ ಬಹುಮತ ಸಾಬೀತು ಮಾಡಲಾರದೆ ಕೇವಲ 13 ದಿನಗಳಲ್ಲಿ ಪಕ್ಷ ಅಧಿಕಾರದ ಗದ್ದುಗೆ ಬಿಡಬೇಕಾಯಿತು. ಈ ನಡುವೆ1998ರಲ್ಲಿ ಮತ್ತೆ ಲೋಕಸಭೆಗೆ ಚುನಾವಣೆ ನಡೆಯಿತು. ಈ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಸ್ಪಷ್ಟಬಹುಮತದೊಂದಿಗೆ ಅಧಿಕಾರಕ್ಕೆ ಬಂತು. ಈ ಸರ್ಕಾರದಲ್ಲಿ ಅಡ್ವಾಣಿ ಗೃಹ ಸಚಿವರಾಗಿ ನಿಯುಕ್ತಿಗೊಂಡರು. ನಂತರ ದಿನಗಳಲ್ಲಿ ಅಡ್ವಾಣಿ ಅವರನ್ನು ಉಪಪ್ರಧಾನಿ ಪಟ್ಟಕ್ಕೆ ಏರಿಸಲಾಯಿತು.

ಆದರೆ, 2004ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ವಿಫಲವಾಯಿತು. ಇದಾದ ಬಳಿಕ ಅಟಲ್‌ ಬಿಹಾರಿ ವಾಜಪೇಯಿ ಸಕ್ರಿಯ ರಾಜಕೀಯದಿಂದ ನಿವೃತ್ತಿಯಾದರು. ಹೀಗಾಗಿ 2004ರಿಂದ 2009ರ ಅವಧಿಗೆ ಅಡ್ವಾಣಿ ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕನಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದರು. ಅಡ್ವಾಣಿ ವಾರ್ತಾ ಮತ್ತು ಪ್ರಸಾರ, ಗಣಿ, ಗೃಹ ಸಚಿವರಾಗಿ, ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದ ಹಿರಿಮೆ ಹೊಂದಿದ್ದಾರೆ.

click me!