The Kashmir Files: ಕಾಶ್ಮೀರಿ ಪಂಡಿತರ ಹತ್ಯೆ ನಂತರ ಅನುಪಮ್‌ ಖೇರ್‌ ನನ್ನಲ್ಲಿ ಕಣ್ಣೀರುಗರೆದು ನೆರವು ಕೇಳಿದ್ರು: ಅನಂತನಾಗ್‌

By Kannadaprabha NewsFirst Published Mar 15, 2022, 4:33 AM IST
Highlights

* ಕಾಶ್ಮೀರಿ ಪಂಡಿತರ ಹತ್ಯೆ ನಂತರ ಅನುಪಮ್‌  ಖೇರ್‌ ನನ್ನಲ್ಲಿ ಕಣ್ಣೀರುಗರೆದು ನೆರವು ಕೇಳಿದ್ರು!
* ದ ಕಾಶ್ಮೀರ್‌ ಫೈಲ್ಸ್‌ ಸಿನಿಮಾದಿಂದ 32 ವರ್ಷದ ಹಿಂದಿನ ಘಟನೆ ಬಗ್ಗೆ ಜನಜಾಗೃತಿ
* ಹಳೆಇಯ ದಿನಗಳನ್ನು ಮತ್ತೆ ನೆನಪು ಮಾಡಿಕೊಂಡ ನಟ

ಬೆಂಗಳೂರು(ಮಾ. 15)  ದ ಕಾಶ್ಮೀರ್‌ ಫೈಲ್ಸ್‌ ಸಿನಿಮಾ (The Kashmir Files) ಎಲ್ಲೆಡೆ ಸದ್ದು ಮಾಡುತ್ತಿದೆ. 1990ರಲ್ಲಿ ಕಾಶ್ಮೀರದಲ್ಲಿ (Kashmir) ನಡೆದ ಪಂಡಿತರ ಹತ್ಯಾಕಾಂಡದ ಕುರಿತ ಈ ಸಿನಿಮಾ ನೋಡಿದ ಖ್ಯಾತ ನಟ ಅನಂತನಾಗ್‌ (Anant Nag)  ತಮ್ಮ ಹಳೆಯ ಅನುಭವ ಇಲ್ಲಿ ಹಂಚಿಕೊಂಡಿದ್ದಾರೆ. ಅನಂತನಾಗ್‌ ಪೂರ್ವಜರು ಕಾಶ್ಮೀರದವರು.

ರಾಜಕಾರಣ ಬಿಟ್ಟು 20 ವರ್ಷಗಳು ಕಳೆದ ನಂತರ ಎರಡು ವರ್ಷಗಳ ಹಿಂದೆ ಹಿಂದೂ ಮಹಾಸಭಾ, ಆರ್‌ಎಸ್‌ಎಸ್‌ ಸ್ನೇಹಿತರು ಕರೆದಿದ್ದ ಕಾರ್ಯಕ್ರಮಕ್ಕೆ ಹೋಗಿದ್ದೆ. ಆ ಸಂದರ್ಭದಲ್ಲಿ ಆರ್ಟಿಕಲ್‌ 370 ರದ್ದುಮಾಡುವ ವಿಚಾರ ಕೇಳಿಬಂದಿತ್ತು. ಆ ಹಿನ್ನೆಲೆಯಲ್ಲಿ ನಮ್ಮ ಪೂರ್ವಜರು ಕಾಶ್ಮೀರದಿಂದ ವಲಸೆ ಬಂದವರು ಎಂಬ ವಿಚಾರ ತಿಳಿಸಿದ್ದೆ. ಪುಲ್ವಾಮಾ ದಾಳಿ ಆದಾಗ ಜಮ್ಮು ಮತ್ತು ಕಾಶ್ಮೀರ ಮಾತ್ರ ಇರುವುದಲ್ಲ, ಲಡಾಕ್‌ ಕೂಡ ಇದೆ. ಈ ಮೂರನ್ನೂ ವಿಂಗಡಿಸಿದರೆ ಆಡಳಿತ ನಡೆಸುವುದು ಸುಲವಾಗುತ್ತದೆ ಎಂಬ ಅಭಿಪ್ರಾಯ ಹೇಳಿದ್ದೆ. ಕರ್ಮ ಧರ್ಮ ಸಂಯೋಗದಿಂದ ಆರ್ಟಿಕಲ್‌ 370 ರದ್ದಾಯಿತು. ಲಡಾಕ್‌ ವಿಭಜನೆ ಆಯಿತು. ಇದೆಲ್ಲವೂ ಹಳೇ ಕತೆ.

ಈಗ ಕಾಶ್ಮೀರ್‌ ಫೈಲ್ಸ್‌ ಸಿನಿಮಾ ಬಂದಿದೆ. ಸಚಿವ ಮುನಿರತ್ನ ಒತ್ತಾಯದ ಮೇರೆಗೆ ಆ ಸಿನಿಮಾ ನೋಡಿದೆ. ಸಿನಿಮಾ ಪ್ರದರ್ಶನದಲ್ಲಿ ಆಘಾತ ತರುವ ಮೌನ ಆವರಿಸಿತ್ತು. ಅಲ್ಲಿಂದ ಬಂದ ಮೇಲೆ ಹಳೆಯದೆಲ್ಲಾ ಮತ್ತೆ ನೆನಪಾಯಿತು.

ನನ್ನ ಮೂಲವೂ ಕಾಶ್ಮೀರ: ನನ್ನ ಜೀವನದ ಮೊದಲ ಆರು ವರ್ಷಗಳನ್ನು ನಾನು ಕಳೆದಿದ್ದು ಕಾಸರಗೋಡಿನ ಆನಂದಾಶ್ರಮದಲ್ಲಿ. ನಂತರದ 6 ವರ್ಷ ಕಳೆದಿದ್ದು ಶಿರಾಲಿಯ ಚಿತ್ರಾಪುರ ಮಠದಲ್ಲಿ. ಅಲ್ಲಿ ನಮ್ಮ ತಂದೆ ಗುರುಗಳ ಕಾರ್ಯದರ್ಶಿಯಾಗಿ, ಮಠದ ಮ್ಯಾನೇಜರ್‌ ಆಗಿ ಇದ್ದರು. ಮಠದ ಸಂಪ್ರದಾಯ ಎಲ್ಲವನ್ನೂ ಕಲಿತಿದ್ದರು. 1965ನೇ ಇಸವಿಯಲ್ಲಿ ನಮ್ಮ ಅಂದಿನ ಗುರುಗಳಾದ ಸ್ವಾಮಿ ಆನಂದಾಶ್ರಮ ಗುರುಗಳು ಸನ್ಯಾಸತ್ವ ಸ್ವೀಕರಿಸಿ 50 ವರ್ಷ ಆಗಿತ್ತು. ಆ ಸಂದರ್ಭದಲ್ಲಿ ಗುರುಗಳು ಸಂಸ್ಕೃತದಲ್ಲಿ ಗುರು ಪರಂಪರಾ ಸ್ತೋತ್ರ ಬರೆದಿದ್ದರು. ಆ ಗುರು ಪರಂಪರಾ ಸ್ತೋತ್ರವನ್ನು ಒಂದು ದಿನ ಅಪ್ಪ ನನಗೆ ತಂದುಕೊಟ್ಟರು. ನನಗಾಗ ಹದಿನೈದೋ ಹದಿನಾರೋ ವರ್ಷ ಇರಬೇಕು. ಅಪ್ಪನ ಬಳಿ ಇದೇನಿದು ಎಂದು ಕೇಳಿದೆ. ಆಗ ಅವರು, ಇದು ನಮ್ಮ ಗುರು ಪರಂಪರೆಯ ಸ್ತೋತ್ರ, ನಮ್ಮ ಪೂರ್ವಜರು ಕಾಶ್ಮೀರದಿಂದ ಬಂದವರು ಎಂದರು. ನನಗೆ ಈ ವಿಚಾರ ಗೊತ್ತಾಗಿದ್ದು ಅದೇ ಮೊದಲು. ನಮ್ಮ ಗುರುಗಳು ಮಠದ 9ನೇ ಗುರುಗಳಾಗಿದ್ದವರು. ಅವರ ಹಿಂದೆ ಇದ್ದ 9 ಗುರುಗಳ ಸ್ತೋತ್ರ ಬರೆದಿದ್ದರು. ಇಷ್ಟುದಿನ ಯಾಕೆ ನನಗೆ ಹೇಳಲಿಲ್ಲ ಎಂದು ಕೇಳಿದೆ. ಗುರುಗಳು 50 ವರ್ಷಗಳ ನಂತರ ಇದನ್ನು ಬರೆಯೋಕೆ ಮನಸ್ಸು ಮಾಡಿದ್ದಾರೆ, ನಾವೆಲ್ಲಾ ಈ ವಿಚಾರಗಳನ್ನು ಗುರುಗಳ ಅಪ್ಪಣೆ ಇಲ್ಲದೆ ಮಾತನಾಡುವ ಹಾಗಿಲ್ಲ ಎಂದರು ತಂದೆ. ನಾನು ತಕ್ಷಣ ಅದನ್ನು ಬರೆದು ಕಂಠಪಾಠ ಮಾಡಿದೆ.

ನಂತರ ಆ ಕುರಿತು ಏನಾದ್ರೂ ಡಾಕ್ಯುಮೆಂಟ್‌ಗಳಿದ್ದರೆ ನನಗೆ ಕೊಡಿ ಎಂದು ಅಪ್ಪನನ್ನು ಕೇಳಿದ್ದೆ. ಅವರು ಯಾರಿಗೂ ಹೇಳಬಾರದು ಎಂದು ಅವರ ಬಳಿ ಇದ್ದ ಒಂದಷ್ಟುವಿವರ ಕೊಟ್ಟಿದ್ದರು. ಶ್ಲೋಕಗಳು ಹೇಗೂ ನನ್ನ ಬಳಿ ಇದ್ದವು. ಶ್ಲೋಕಗಳ ಆಧಾರದಲ್ಲಿ ಇತಿಹಾಸ ಹುಡುಕುತ್ತಾ ಇದ್ದೆ.

ಅಷ್ಟಕ್ಕೂ ಕಾಶ್ಮೀರದ ಬಗ್ಗೆ ಕಾಂಗ್ರೆಸ್ ನಿಲುವೇನು?

ನಮಗೆ ಕೊಟ್ಟಜಾಗವೇ ನಮ್ಮ ಅಡ್ಡ ಹೆಸರು: 1526ರಲ್ಲಿ ಬಾಬರ್‌ ಕಾಶ್ಮೀರಕ್ಕೆ ಬಂದು ಅಲ್ಲಿ ಮತಾಂತರ ಆರಂಭಿಸಿದಾಗ ನಮ್ಮ ಪೂರ್ವಜರು ಗುಂಪು ಗುಂಪಾಗಿ ದಕ್ಷಿಣದ ಕಡೆ ಬಂದರು. ಗೋವಾಗೆ ಹೋದರೆ ಅಲ್ಲಿ ಪೋರ್ಚುಗೀಸರು ಕ್ರಿಶ್ಚಿಯನ್‌ ಧರ್ಮಕ್ಕೆ ಸೇರಲು ಒತ್ತಾಯಿಸುತ್ತಿದ್ದರು. ಆಗ ಶಂಕರಾಚಾರ್ಯರ ಸನ್ನಿಧಾನ ನೆನಪಾಯಿತು. ಕಾಶ್ಮೀರದಲ್ಲಿ ಶಂಕರಾಚಾರ್ಯರು ತಂಗಿದ್ದ ಐತಿಹ್ಯ ಇದೆ. ಶಂಕರಾಚಾರ್ಯ ಹಿಲ್‌ ಅಂತಲೇ ಇದೆ ಅಲ್ಲಿ. ಆ ಕಾರಣ ಪೂರ್ವಜರು ಶೃಂಗೇರಿ ಗುರುಗಳ ಬಳಿ ಹೋದರು. ಕೆಳದಿ ಶಿವಪ್ಪ ನಾಯಕ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಆಳುತ್ತಿದ್ದ ಸಂದರ್ಭ ಅದು. ಮಾತುಕತೆ ನಡೆದು ಪೂರ್ವಜರು ಕಾರವಾರದಿಂದ ಕೇರಳ ಗಡಿ ನೀಲೇಶ್ವರದವರೆಗೂ ಒಂದೊಂದು ಊರಲ್ಲಿ ನೆಲೆಯಾದರು. ಎಲ್ಲೆಲ್ಲಿ ನಮಗೆ ಜಾಗ ಕೊಟ್ಟಿದ್ದರೋ ಆಯಾ ಊರಿನ ಹೆಸರುಗಳೇ ನಮಗೆ ಅಡ್ಡ ಹೆಸರುಗಳಾದವು. ಇದು ನಮ್ಮ ಇತಿಹಾಸ.

ಅನುಪಮ್‌ ಖೇರ್‌ ಅವರ ಕರೆ: ನಾನು ಮುಂಬೈಗೆ ಹೋದ ಮೇಲೆ ಅಲ್ಲಿ ನನಗೆ ಅನೇಕ ಕಾಶ್ಮೀರಿ ಗೆಳೆಯರಿದ್ದರು. ನಾನು ಮುಂಬೈ ತೊರೆದು ಬೆಂಗಳೂರಿಗೆ ಬಂದು ಸುಮಾರು ಸಮಯ ಆದ ಮೇಲೆ ಒಂದು ದಿನ ಅವರಿಂದ ಫೋನ್‌ ಬಂತು. ಆವತ್ತು 1990ರ ಜನವರಿ 23 ಇರಬೇಕು. ಈ ಕಾಶ್ಮೀರಿ ಗೆಳೆಯರು ಫೋನ್‌ ಮಾಡಿ ಅನುಪಮ್‌ ಖೇರ್‌ಗೆ ಕೊಟ್ಟರು. ನನಗೆ ಅನುಪಮ್‌ ಖೇರ್‌ ಅವರ ಮುಖತಃ ಪರಿಚಯ ಇರಲಿಲ್ಲ. ಹೆಸರು ಗೊತ್ತಿತ್ತು. ಅನುಪಮ್‌ ಖೇರ್‌, ‘ನಿಮ್ಮ ಪೂರ್ವಜರೂ ಕಾಶ್ಮೀರದಿಂದ ಬಂದವರು. ಈಗ ಕಾಶ್ಮೀರದಿಂದ ನಮ್ಮನ್ನು ಹೊರಗೆ ಹಾಕಿದ್ದಾರೆ, ರಸ್ತೆ ಮೇಲೆ ಬಂದಿದ್ದೇವೆ. ನಮಗೇನಾದರೂ ಸಹಾಯ ಮಾಡೋಕೆ ಆಗುತ್ತದಾ’ ಎಂದು ಕೇಳಿ ಜೋರಾಗಿ ಅತ್ತುಬಿಟ್ಟರು. ನಾನು ಸಮಾಧಾನ ಮಾಡಿ, ನನ್ನ ಕೈಲಾದದ್ದು ನಾನು ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದೆ.

ಆಗ ದೆಹಲಿಯಲ್ಲಿ ಜನತಾದಳದ ವಿ.ಪಿ. ಸಿಂಗ್‌ ಪ್ರಧಾನಮಂತ್ರಿ. ಬಿಜೆಪಿ ಅವರ ಸರ್ಕಾರವನ್ನು ಬೆಂಬಲಿಸಿತ್ತು. ಮುಫ್ತಿ ಮಹಮದ್‌ ಸಯೀದ್‌ ಕೇಂದ್ರ ಗೃಹಮಂತ್ರಿ ಆಗಿದ್ದರು. ಫಾರೂಕ್‌ ಅಬ್ದುಲ್ಲಾ ಕಾಶ್ಮೀರದ ಮುಖ್ಯಮಂತ್ರಿ. ಜಮ್ಮು ಕಾಶ್ಮೀರ ಲಿಬರೇಷನ್‌ ಫ್ರಂಟ್‌ ಹಿಂದೂಗಳನ್ನು ಹೊರಗೆ ಹಾಕಬೇಕು ಅಂತ ಚಳವಳಿ ನಡೆಸುತ್ತಿತ್ತು. ಅದು ವಿಕೋಪಕ್ಕೆ ಹೋಗುತ್ತದೆ ಎಂಬ ನಿರೀಕ್ಷೆ ಯಾರಿಗೂ ಇರಲಿಲ್ಲ. ಹಿಂದೂಗಳ ಹತ್ಯೆ, ಹೆಣ್ಣುಮಕ್ಕಳ ಅತ್ಯಾಚಾರ ನಡೆಯಿತು. ಬಹುತೇಕರು ಕಾಶ್ಮೀರ ತೊರೆದರು. ಸರ್ಕಾರಗಳು ಏನೂ ಮಾಡಲಿಲ್ಲ. ಸೇನೆಯೂ ನೆರವಿಗೆ ಹೋಗಲಾಗಲಿಲ್ಲ. ಇದೆಲ್ಲಾ ನಡೆದಿದ್ದು 1990 ಜ.19. ನನಗೆ ಫೋನ್‌ ಬಂದ್ದು ನಾಲ್ಕು ದಿನಗಳ ನಂತರ.

ಕನ್ನಡಪ್ರಭ ಸಂಪಾದಕ ವೈಎನ್‌ಕೆ ನೆರವು:  ಇಲ್ಲಿ ನಮ್ಮ ಸರ್ಕಾರ ಇರಲಿಲ್ಲ. ಹಾಗಾಗಿ ತಕ್ಷಣ ಆಪ್ತರಾಗಿದ್ದ ‘ಕನ್ನಡಪ್ರಭ’ ಸಂಪಾದಕ ವೈಎನ್‌ಕೆ ಅವರಿಗೆ ಫೋನ್‌ ಮಾಡಿದೆ. ಅವರು ಆಗ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪನವರನ್ನು ಭೇಟಿಯಾಗಲು ತಿಳಿಸಿದರು. ನನಗೆ ಬೇರೆ ಪಕ್ಷದವರಾಗಿದ್ದ ಅವರನ್ನು ಭೇಟಿ ಮಾಡಲು ಅಳುಕು. ಅದನ್ನು ವೈಎನ್‌ಕೆಗೆ ತಿಳಿಸಿದೆ. ಆದರೆ ವೈಎನ್‌ಕೆ ಅವರು, ಬಂಗಾರಪ್ಪ ಒಳ್ಳೆಯ ಅಭಿರುಚಿ ಇರುವ ವ್ಯಕ್ತಿ. ಇದರಲ್ಲಿ ರಾಜಕಾರಣ ಮಾಡಲ್ಲ, ನೀವು ಹೋಗಿ ಅವರ ಬಳಿ ಮಾತನಾಡಿ ಎಂದು ಹೇಳಿದರು.

ನಾನು ಬಂಗಾರಪ್ಪನವರನ್ನು ಭೇಟಿ ಮಾಡಿ ವಿಚಾರ ತಿಳಿಸಿದೆ. ಅವರು ಸದ್ಯ ಈ ವಿಚಾರ ಎಲ್ಲೂ ಮಾತನಾಡಬೇಡಿ. ಅಲ್ಲಿ ಏನು ನಡೆಯುತ್ತದೆ ಅಂತ ನಮಗೆ ಅರ್ಥ ಆಗುವುದಿಲ್ಲ. ನಾವು ಏನೋ ಮಾಡುವುದು, ಅದು ಇನ್ನೇನೋ ಆಗುವುದು ಬೇಡ. ಆದರೆ ನಾವು ಕನ್ನಡಿಗರು ವಿಶಾಲ ಹೃದಯದವರು. ಬರುವವರಿಗೆ ಸ್ವಾಗತ ಮಾಡೋಣ. ನಾನು ನನ್ನ ಪಾಡಿಗೆ ನನ್ನ ಕೈಯಲ್ಲಿ ಏನಾಗುತ್ತದೋ ಅದನ್ನು ಮಾಡುತ್ತೇನೆ. ನೀವು ಎಂಎಲ್‌ಸಿ, ನಟರು ಬೇರೆ. ನಿಮ್ಮ ಸಮಾಜದವರ ಬಳಿ ಮಾತನಾಡಿ, ಸಮಯ ಬಂದಾಗ ಸಹಾಯ ಮಾಡಬೇಕು ಎಂದು ಕೇಳಿಕೊಳ್ಳಿ ಎಂದರು. ನಾನು ಅವರು ಹೇಳಿದಂತೆ ಹಿರಿಯರ ಬಳಿ ಎಲ್ಲಾ ಮಾತನಾಡಿ ಬಂದೆ.

ನಾವು ಮೂರ್ಖರಾಗೋದು ತಪ್ಪಿತು: ನಂತರ ಯಾರದೂ ಫೋನ್‌ ಬರಲಿಲ್ಲ. ಮೂರು ತಿಂಗಳು ಕಳೆಯಿತು. ಬಾಂಬೆಯಲ್ಲಿ ಯಾರಾರನ್ನೋ ಹಿಡಿದು ಫೋನ್‌ ಮಾಡಿದವರನ್ನು ಕೇಳಿದರೆ ಯಾರೂ ಕೈಗೇ ಸಿಗಲಿಲ್ಲ. ಈ ಫೋನ್‌ ಬಂದಿದ್ದೇ ಇಲ್ಲ ಅನ್ನುವ ಥರ ಇದ್ದರು. ನಾನು ಮೂರ್ಖನಾದೆನಲ್ಲ ಅನ್ನಿಸಿತ್ತು. ಒಮ್ಮೆ ವಿಧಾನಸೌಧದಲ್ಲಿ ಸಿಕ್ಕ ಬಂಗಾರಪ್ಪ ಏನಾಯಿತು ಅನಂತ್‌ ಎಂದು ಕೇಳಿದಾಗ ನೀವು ಹೇಳಿದ್ದೇ ಸರಿ ಎಂದು ಹೇಳಿದೆ. ಅವರು, ನೋಡಿ ಸ್ವಲ್ಪದರಲ್ಲಿ ನಾವು ಮೂರ್ಖರಾಗುವುದು ತಪ್ಪಿತು ಎಂದರು.

ಅಲ್ಲಿ ಏನಾಗಿತ್ತು ಎಂದರೆ ಗಲಭೆ ರಾಜಕೀಯ ಬಣ್ಣ ಪಡೆದು ರಾಜಕೀಯ ಲಾಭ ಪಡೆದಿದ್ದ ಬೇರೆ ಕಾಶ್ಮೀರಿಗಳು ಮುಂದೆ ಬಂದಿದ್ದರು. ಈ ನಟರೆಲ್ಲಾ ಹಿಂದೆ ಸರಿದಿದ್ದರು. ಆಮೇಲೆ ನಾನೂ ಸುಮ್ಮನಾದೆ. ಅಷ್ಟರಲ್ಲಿ ಶಂಕರ್‌ಗೆ ಆ್ಯಕ್ಸಿಡೆಂಟ್‌ ಆಯಿತು. ಅದಾದ ನಂತರ ನಾನು ಈ ಬಗ್ಗೆ ಮಾತನಾಡಿದ್ದು ಎರಡು ವರ್ಷದ ಹಿಂದೆಯೇ.

ಕಾಶ್ಮೀರ್‌ ಫೈಲ್ಸ್‌ನಿಂದ ಜನಜಾಗೃತಿ: ಈಗ ಕಾಶ್ಮೀರ್‌ ಫೈಲ್ಸ್‌ ಸಿನಿಮಾ ಬಂದಿದೆ. 32 ವರ್ಷಗಳ ನಂತರ ದೇಶದಲ್ಲಿ ಅಂದಿನ ಘಟನೆಯ ಬಗ್ಗೆ ಜಾಗೃತಿ ಮೂಡಿಸಿದೆ. ಈಗ ನಾವು ಉಕ್ರೇನ್‌ ಬಗ್ಗೆ ಮಾತನಾಡುತ್ತೇವೆ. ಉಕ್ರೇನ್‌ ಎರಡು ನಗರಗಳಲ್ಲಿದ್ದ ಜನರನ್ನು ರಷ್ಯಾಗೆ ಓಡಿಸಿ ಅದನ್ನು ಕಬಳಿಸುವ ಯತ್ನ ಮಾಡಿತ್ತು. ರಷ್ಯಾ ಯುದ್ಧ ಹೂಡಿತು. ಅಮೆರಿಕ ಕೂಡ ಸಿರಿಯಾ, ಲಿಬಿಯಾ, ಇರಾಕ್‌ ವಿರುದ್ಧ ಯುದ್ಧ ಮಾಡಿತ್ತಲ್ಲ. 1990ರಲ್ಲಿ ಅದೇ ಥರ ಇಲ್ಲೂ ಆಗಿತ್ತು. ಬೇರೆ ದೇಶಗಳಾಗಿದ್ದರೆ ಯುದ್ಧ ಆಗುತ್ತಿತ್ತು. ಆದರೆ ನಮ್ಮಲ್ಲಿ ಬಲಿಷ್ಠ ನಾಯಕತ್ವ ಇರಲಿಲ್ಲ.

ಈಗ ಹಳೆಯದನ್ನು ದೂಷಿಸಿ ಫಲವಿಲ್ಲ. ನೆಹರೂ, ಲಾಲ್‌ ಬಹದ್ದೂರ್‌ ಶಾಸ್ತ್ರಿ, ಇಂದಿರಾ ಗಾಂಧಿ ನಂತರ ಬಲಿಷ್ಠ ನಾಯಕತ್ವ ಅಂತ ಸಿಕ್ಕಿದ್ದೇ ನರೇಂದ್ರ ಮೋದಿ ಬಂದ ಮೇಲೆ. ಪಿ.ವಿ.ನರಸಿಂಹ ರಾವ್‌ ಮತ್ತು ಅಟಲ್‌ ಬಿಹಾರಿ ವಾಜಪೇಯಿಯವರದು ಸಮ್ಮಿಶ್ರ ಸರ್ಕಾರ ಆಗಿತ್ತು. ಈಗ ಮೋದಿ 10 ವರ್ಷ ಆಡಳಿತ ನಡೆಸುತ್ತಿದ್ದಾರೆ. ಈ ಸಿನಿಮಾ ಬಂದು ಜಾಗೃತಿ ಮೂಡಿದೆ. ಯುವಪೀಳಿಗೆಗೆ ಇತಿಹಾಸದ ಅರಿವಾಗಿದೆ. ಸರ್ಕಾರಕ್ಕೆ ಜನಬೆಂಬಲ ಇದೆ. ಮುಂದೆ ಏನೇನು ಬದಲಾವಣೆಗಳಾಗಬಹುದು ಎಂಬ ನಿರೀಕ್ಷೆ ಪ್ರಸ್ತುತ ನಮಗೆಲ್ಲರಿಗೂ ಇದೆ.

 

click me!