INDIA@75: ಚಳವಳಿಗಾರರ ಬಂಧಿಸಿಡುತ್ತಿದ್ದ ಸೆಂಟ್ರಲ್‌ ಜೈಲ್‌ ಈಗ ಸ್ವಾತಂತ್ರ್ಯ ಉದ್ಯಾನವನ

By Kannadaprabha NewsFirst Published Aug 15, 2022, 7:13 AM IST
Highlights
  • 1867ರಲ್ಲಿ ಬ್ರಿಟಿಷರು ಬೆಂಗಳೂರಲ್ಲಿ ನಿರ್ಮಿಸಿದ್ದ ಜೈಲೀಗ ಸ್ವಾತಂತ್ರ್ಯ ಉದ್ಯಾನವನವಾಗಿ ಬದಲಾವಣೆ
  • ದೊರೆಸ್ವಾಮಿ, ಕೆಂಗಲ್‌, ನಿಜಲಿಂಗಪ್ಪ ಸೇರಿ ಸಾವಿರಾರು ಹೋರಾಟಗಾರರನ್ನು ಇದೇ ಜೈಲಿನಲ್ಲಿರಿಸಲಾಗಿತ್ತು.

ವರದಿ: ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು (ಆ.15) :ಸ್ವಾತಂತ್ರ್ಯ ಸಂಗಾಮದ ಕಹಳೆ ಊದಿದ್ದ ಸೇನಾನಿಗಳ ಹೋರಾಟದ ಕಿಚ್ಚು ಅಡಗಿಸಲು ತಲೆ ಎತ್ತಿದ್ದೇ ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿದ್ದ ಕೇಂದ್ರ ಕಾರಾಗೃಹ. ‘ಕ್ವಿಟ್‌ ಇಂಡಿಯಾ’ ಚಳವಳಿಗೆ ಧುಮುಕಿದ್ದ ಸಾವಿರಾರು ದೇಶಪ್ರೇಮಿಗಳನ್ನು ಇಲ್ಲಿ ಬಂಧಿಸಿಡಲಾಗಿತ್ತು. 1857ರಲ್ಲಿ ಪಶ್ಚಿಮ ಬಂಗಾಳದಿಂದ ಆರಂಭವಾದ ಮೊದಲ ಸ್ವಾತಂತ್ರ್ಯ ಸಂಗ್ರಾಮ ರಾಜ್ಯದಲ್ಲೂ ತೀವ್ರವಾದಾಗ ದೇಶಪ್ರೇಮಿಗಳ ಸದ್ದಡಗಿಸಲು ಬ್ರಿಟಿಷರು 1867 ರಲ್ಲಿ ಸೆಂಟ್ರಲ್‌ ಜೈಲ್‌ ನಿರ್ಮಿಸಿದರು. ಇದನ್ನೇ ಈಗ ಸ್ವಾತಂತ್ರ್ಯ ಉದ್ಯಾನವಾಗಿ ಸಂರಕ್ಷಿಸಲಾಗಿದೆ.

Gadag: ಗಾಂಧಿ ತಾತನಿಗೆ ಊಟ ಉಪಚಾರ ಮಾಡಿದ್ದ ಪೋರಿ ಈಗ ಶತಾಯುಷಿ ಅಜ್ಜಿ

ಬೆಂದಕಾಳೂರಿನ ಹೃದಯ ಭಾಗದ 21 ಎಕರೆ ವಿಶಾಲವಾದ ಸ್ಥಳದಲ್ಲಿ ಪಾಶ್ಚಾತ್ಯ ಶೈಲಿಯಲ್ಲಿ ನಿರ್ಮಾಣವಾಗಿದ್ದ ಈ ಜೈಲಿನಲ್ಲಿ ಅಸಂಖ್ಯಾತ ದೇಶಪ್ರೇಮಿಗಳು ಸೆರೆವಾಸ ಅನುಭವಿಸಿದ್ದಾರೆ. ಕೈದಿಗಳು ತಪ್ಪಿಸಿಕೊಂಡು ಹೋಗದಂತೆ ಸುತ್ತಲೂ ಎತ್ತರದ ಕಾಂಪೌಂಡ್‌ ನಿರ್ಮಿಸಲಾಗಿತ್ತು. ಹಲವು ಬ್ಯಾರಕ್‌ ಕೈದಿಗಳ ಸಾಲಮನೆ)ಗಳನ್ನು ನಿರ್ಮಿಸಿದ್ದು ಒಂದೊಂದು ಬ್ಯಾರಕ್‌ನಲ್ಲಿ ನೂರರವರೆಗೂ ಕೈದಿಗಳನ್ನು ಇರಿಸಲು ಸ್ಥಳಾವಕಾಶವಿತ್ತು.

ಎತ್ತರವಾದ ಕಾವಲು ಗೋಪುರ: ಪೋರ್ಟ್‌ಬ್ಲೆರ್ ಸೆಲ್ಯೂಲರ್‌(Portblair Cellular Jail) ಕಾರಾಗೃಹದ ಮಾದರಿಯಲ್ಲಿ ಬ್ರಿಟಿಷರು ಈ ಕಾರಾಗೃಹ ನಿರ್ಮಿಸಿದ್ದರು. ಕಾರಾಗೃಹದ ಮಧ್ಯ ಭಾಗದಲ್ಲಿರುವ ಕಾವಲು ಗೋಪುರದ ಮೇಲೆ ಪೊಲೀಸರು ನಿಂತರೆ ಸಾಕು ಸುತ್ತಮುತ್ತ ನಡೆಯುತ್ತಿದ್ದ ಚಟುವಟಿಕೆಗಳನ್ನೆಲ್ಲಾ ಗಮನಿಸಬಹುದಿತ್ತು.

ಬ್ಯಾರೆಕ್‌ಗಳ ಹಿಂದೆಯೇ ಶೌಚಾಲಯ ನಿರ್ಮಿಸಿದ್ದು ಸಂಜೆ 6 ಗಂಟೆಗೆ ಮುಚ್ಚಿ ಬೆಳಿಗ್ಗೆ 6 ಗಂಟೆಗೆ ತೆರೆಯಲಾಗುತ್ತಿತ್ತು. ಮಹಿಳೆಯರನ್ನು ಪ್ರತ್ಯೇಕವಾಗಿ ಬ್ಯಾರೆಕ್‌ಗಳಲ್ಲಿ ಇರಿಸಲಾಗುತ್ತಿತ್ತು. ಕೈದಿಗಳನ್ನು ನೇಣಿಗೇರಿಸುವ ವ್ಯವಸ್ಥೆಯಿದ್ದ ರಾಜ್ಯದ ಮೊದಲ ಜೈಲು ಇದಾಗಿತ್ತು. ಶಿವಮೊಗ್ಗದ ಈಸೂರು ಸ್ವಾತಂತ್ರ್ಯ ಹೋರಾಟಗಾರರನ್ನು ಈ ಬಂದೀಖಾನೆಯಲ್ಲೇ ನೇಣು ಹಾಕಲಾಗಿತ್ತು. 1968 ರಲ್ಲಿ ಕೊನೆಯದಾಗಿ ಇಲ್ಲಿ ಗಲ್ಲು ಶಿಕ್ಷೆ ಜಾರಿ ಮಾಡಲಾಗಿತ್ತು. ಬಳಿಕ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ನೇಣಿಗೇರಿಸುವ ಸೌಲಭ್ಯ ಕಲ್ಪಿಸಲಾಯಿತು. ಅನಾರೋಗಕ್ಕೆ ಒಳಗಾದ ಕೈದಿಗಳಿಗೆ ಚಿಕಿತ್ಸೆ ನೀಡಲು ಜೈಲಿನಲ್ಲಿಯೇ ಆಸ್ಪತ್ರೆ ನಿರ್ಮಿಸಲಾಗಿತ್ತು.

ಕ್ವಿಟ್‌ ಇಂಡಿಯಾ ಚಳವಳಿ ಸಂದರ್ಭದಲ್ಲಿ ಪ್ರೊ.ಎಚ್‌.ಎಸ್‌.ದೊರೆಸ್ವಾಮಿ(H.S.Doreswamy) ಅವರು 1942-43ರಲ್ಲಿ 14 ತಿಂಗಳು ಇಲ್ಲಿ ಸೆರೆವಾಸ ಅನುಭವಿಸಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಎಸ್‌.ನಿಜಲಿಂಗಪ್ಪ(S.Nijalingappa), ಕೆಂಗಲ್‌ ಹನುಮಂತಯ್ಯ(Kengal Hanamantaiah)(, ಮಾಜಿ ಗೃಹ ಸಚಿವ ಎಂ.ವಿ.ರಾಮರಾವ್‌(M.V.Ramarao), ಮುಖಂಡರಾದ ಎಚ್‌.ವಿ.ದಾಸಪ್ಪ(H.V.Dasappa), ಪಿ.ಸುಬ್ರಹ್ಮಣ್ಯ, ಎಚ್‌.ಸಿದ್ದಯ್ಯ ಮತ್ತಿತರರನ್ನೂ ಈ ಜೈಲಿನಲ್ಲಿ ಇರಿಸಲಾಗಿತ್ತು.

ಮಗಳ ಸ್ವಾತಂತ್ರ್ಯ ದಿನಾಚರಣೆ ಕೊನೆಗೂ ಈಡೇರಲಿಲ್ಲ, ನಾಪತ್ತೆಯಾಗಿದ್ದ ಯೋಧನ ಶವ 38 ವರ್ಷಗಳ ಬಳಿಕ ಪತ್ತೆ!

ಉದ್ಯಾನವಾಗಿ ಬದಲಾವಣೆ: ಕೈದಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ 1997 ರಲ್ಲಿ ಪರಪ್ಪನ ಅಗ್ರಹಾರದಲ್ಲಿ ಕೇಂದ್ರ ಕಾರಾಗೃಹ ನಿರ್ಮಿಸಿ ಹಂತಹಂತವಾಗಿ ಕೈದಿಗಳನ್ನು ಸ್ಥಳಾಂತರಿಸಲಾಯಿತು. ಬಳಿಕ ಹಳೆಯ ಕೇಂದ್ರ ಕಾರಾಗೃಹವನ್ನು ಸ್ವಾತಂತ್ರ್ಯ ಉದ್ಯಾನವನ ಎಂದು ನಾಮಕರಣ ಮಾಡಿ 2008ರಲ್ಲಿ ಸಾರ್ವಜನಿಕರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಯಿತು. ಈಗಲೂ ಸೆಂಟ್ರಲ್‌ ಜೈಲ್‌ನಲ್ಲಿದ್ದ ಪ್ರವೇಶ ದ್ವಾರ, ಕೈದಿಗಳ ಸಾಲುಮನೆ, ಸಮಾನಾಂತರ ಗೋಡೆ, ಕಾವಲು ಗೋಪುರ, ನೇಣುಗಂಬ ಮತ್ತಿತರ ಸ್ಥಳಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಉಳಿದ ಜಾಗದಲ್ಲಿ ಉದ್ಯಾನವನ, ಮಕ್ಕಳಿಗೆ ಆಟದ ಮೈದಾನ, ಪ್ರತಿಭಟನೆಗಳಿಗೆಂದು ಸ್ಥಳ ಮೀಸಲಿಡಲಾಗಿದೆ.

ತಲುಪುವುದು ಹೇಗೆ?

ಬೆಂಗಳೂರು ಮೆಜೆಸ್ಟಿಕ್‌ ಬಸ್‌ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನವನ ಒಂದೂವರೆ ಕಿ.ಮೀ. ದೂರವಿದ್ದು ಬಸ್‌, ಆಟೋ ಮೂಲಕ ತಲುಪಬಹುದು.

click me!