ವಿಜಯಪುರ: ಸ್ವಾತಂತ್ರ್ಯ ಹೋರಾಟಗಾರನಿಗೆ ಗೋಲ್ಡನ್‌ ಟೆಂಪಲ್!

By Ravi Janekal  |  First Published Aug 13, 2023, 5:20 PM IST

ದೇಶದ ಅನೇಕ ಕಡೆಗಳಲ್ಲಿ ದೇವರಿಗೆ ದೇಗುಲಗಳನ್ನ ಕಟ್ಟಿದ್ದನ್ನ ನೋಡಿದ್ದೇವೆ. ಋಷಿಮುನಿಗಳಿಗು ದೇವಸ್ಥಾನ ಕಟ್ಟಲಾಗಿದೆ. ಅನೇಕ ಕಡೆಗಳಲ್ಲಿ ಶಕ್ತಿದೇವತೆಗಳಿಗು ದೇಗುಲ ಕಟ್ಟಲಾಗಿದೆ. ಆದ್ರೆ ಭಾರತ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಸೇನಾನಿಗೆ ಅತಿ ದೊಡ್ಡ ದೇಗುಲ ನಿರ್ಮಿಸಲಾಗ್ತಿದೆ ಎಂದರೆ ನೀವು ನಂಬ್ತಿರಾ? ಬಂಗಾರದ ಬಣ್ಣದಲ್ಲಿ ನಿರ್ಮಾಣಗೊಂಡು ನಿಂತಿರುವ ಸ್ವಾತಂತ್ಯ ಹೋರಾಟಗಾರನ ದೇಗುಲಕ್ಕೆ ಈಗ ಗೋಲ್ಡನ್‌ ಟೆಂಪಲ್‌ ಎಂದು ಕರೆಯಲಾಗ್ತಿದೆ.


- ಷಡಕ್ಷರಿ ಕಂಪೂನವರ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್

ವಿಜಯಪುರ (ಆ.13) : ದೇಶದ ಅನೇಕ ಕಡೆಗಳಲ್ಲಿ ದೇವರಿಗೆ ದೇಗುಲಗಳನ್ನ ಕಟ್ಟಿದ್ದನ್ನ ನೋಡಿದ್ದೇವೆ. ಋಷಿಮುನಿಗಳಿಗು ದೇವಸ್ಥಾನ ಕಟ್ಟಲಾಗಿದೆ. ಅನೇಕ ಕಡೆಗಳಲ್ಲಿ ಶಕ್ತಿದೇವತೆಗಳಿಗು ದೇಗುಲ ಕಟ್ಟಲಾಗಿದೆ. ಆದ್ರೆ ಭಾರತ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಸೇನಾನಿಗೆ ಅತಿ ದೊಡ್ಡ ದೇಗುಲ ನಿರ್ಮಿಸಲಾಗ್ತಿದೆ ಎಂದರೆ ನೀವು ನಂಬ್ತಿರಾ? ಬಂಗಾರದ ಬಣ್ಣದಲ್ಲಿ ನಿರ್ಮಾಣಗೊಂಡು ನಿಂತಿರುವ ಸ್ವಾತಂತ್ಯ ಹೋರಾಟಗಾರನ ದೇಗುಲಕ್ಕೆ ಈಗ ಗೋಲ್ಡನ್‌ ಟೆಂಪಲ್‌ ಎಂದು ಕರೆಯಲಾಗ್ತಿದೆ.

Tap to resize

Latest Videos

undefined

ಸ್ವಾತಂತ್ರ್ಯಸೇನಾನಿಗೆ ಗೋಲ್ಡನ್‌ ಟೆಂಪಲ್..!

ಭಾರತ ಸ್ವಾತಂತ್ರ್ಯಕ್ಕಾಗಿ ಅನೇಕರು ಹೋರಾಟ ನಡೆಸಿದ್ದಾರೆ. ಆದ್ರೆ ಇವರು ನಡೆಸಿದ ಹೋರಾಟ ರೀತಿಯೇ ವಿಶಿಷ್ಟವಾದದ್ದು. ಅವರೆ ವಿಜಯಪುರ ಜಿಲ್ಲೆಯ ಇಂಚಗೇರಿ ಮಠದ ಮಾಧವಾನಂದ ಪ್ರಭುಜಿ(Madhavananda prabhuji)ಗಳು. ಇದೆ ಮಹಾನ್‌ ಸ್ವಾತಂತ್ರ್ಯ ಸೇನಾನಿಗೆ ಬೃಹತ್‌ ದೇವಾಲಯ ನಿರ್ಮಾಣಗೊಳ್ತಿದೆ. ಹೌದು. ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಇಂಚಗೇರಿ ಮಠದಲ್ಲಿ ಸ್ವಾತಂತ್ರ್ಯ ಸೇನಾನಿ ಮಾಧವಾನಂದ ಪ್ರಭುಜಿಗಳಿಗೆ ಬಂಗಾರದ ಬಣ್ಣದಲ್ಲಿ ದೇಗುಲ ನಿರ್ಮಾಣವಾಗ್ತಿದೆ. ನೋಡಲು ದೇಗುಲದ ಗೋಪುರ ಚಿನ್ನದಂತೆ ಹೊಳೆಯುತ್ತಿದ್ದು, ಮಾಧವಾನಂದ ಪ್ರಭುಜೀಗಳ ಅನುಯಾಯಿಗಳು ಇದನ್ನ ಗೋಲ್ಡನ್‌ ಟೆಂಪಲ್‌(Golden temple) ಎಂದೇ ಕರೆಯುತ್ತಿದ್ದಾರೆ..

ಬ್ರಿಟಿಷರ ಜೊತೆಗೆ ಸಶಸ್ತ್ರವಾಗಿ ಹೋರಾಡಿದ್ದ ಇಂಚಗೇರಿ ಮಠದ ಕ್ರಾಂತಿಯೋಗಿಯ ಪುಣ್ಯಸ್ಮರಣೆ

ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟ ನಡೆಸಿದ್ದ ಮಹಾದೇವರು!

ಇಂಚಗೇರಿ ಮಠದ ಮಠಾಧೀಶರು ಆಗಿದ್ದ ಮಾಧವಾನಂದ ಪ್ರಭುಜಿಗಳು ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟ ಮಾಡಿದ್ದರು. ಯೆಸ್‌ ಮಾಧವಾನಂದ ಪ್ರಭುಜಿಗಳು ಆಧ್ಯಾತ್ಮ ಜೀವ, ವೀರಸನ್ಯಾಸಿಯಾಗಿ ಇಂಚಗೇರಿ ಮಠಕ್ಕೆ ಗುರುಗಳಾಗಿದ್ದರು. ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಇಂಚಗೇರಿ ಮಠದ ಗುರುಗಳಾಗಿದ್ದ ಶ್ರೀ ಗಿರಿಮಲ್ಲೇಶ್ವರ ಮಹಾರಾಜರು ಮಾಧವಾನಂದ ಪ್ರಭುಜಿಗಳಿಗೆ ಸ್ವಾತಂತ್ರ್ಯ ಹೋರಾಟ ನಡೆಸುವಂತೆ ಆದೇಶ ನೀಡಿದ್ದರು. ಹೀಗಾಗಿ ಮಾಧವಾನಂದ ಪ್ರಭುಜಿಗಳು ತಮ್ಮ ಇಂಚಗೇರಿ ಮಠದ ಭಕ್ತರನ್ನ ಕಟ್ಟಿಕೊಂಡು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದು ಇಂದು ಇತಿಹಾಸವಾಗಿದೆ.

ಮುರುಗೋಡು ಮಹಾದೇವಪ್ಪ ಅಂದ್ರೆ ಬೆಚ್ಚಿಬೀಳ್ತಿದ್ದ ಬ್ರಿಟಿಷರು..!

ಹುಬ್ಬಳ್ಳಿ ಮೂಲದವರಾದ ಮಾಧವಾನಂದ ಪ್ರಭುಜಿಗಳನ್ನ ಆಗ ಮುರುಗೋಡು ಮಹಾದೇವಪ್ಪ(Murugodu mahadevappa) ಅಂತಲೇ ಕರೆಯಲಾಗ್ತಿತ್ತು. ಉತ್ತರ ಕರ್ನಾಟಕ, ಮಹಾರಾಷ್ಟ್ರ ಗಡಿಭಾಗದಲ್ಲಿ ಮಾಧವಾನಂದ ಪ್ರಭುಜಿಗಳು ತಮ್ಮ ಭಕ್ತರೊಂದಿಗೆ ನಡೆಸಿದ ಹೋರಾಟವನ್ನ ಕಂಡು ಸ್ವತಃ ಬ್ರಿಟಿಷ್‌ ಅಧಿಕಾರಿಗಳೆ ದಂಗಾಗಿದ್ದರು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ, ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಸೋನ್ಯಾಳ ಗ್ರಾಮದಲ್ಲಿ ಸ್ವತಃ ಬಂದೂಕು ಪ್ಯಾಕ್ಟರಿ ತೆರೆದು ಮದ್ದು-ಗುಂಡು, ಬಂದೂಕುಗಳ ಮೂಲಕವೇ ಬ್ರಿಟಿಷರಿಗೆ ತಕ್ಕ ಉತ್ತರ ಕೊಟ್ಟಿದ್ದರು. ಹೊರ್ತಿ, ಸಾವಳಗಿ, ಅಕ್ಕಲಕೋಟ ಸೇರಿದಂತೆ ಅನೇಕ ಕಡೆಗಳಲ್ಲಿ ಬ್ರಿಟಿಷರ ಪೊಲೀಸ್‌ ಠಾಣೆಗಳಿಗೆ ಬೆಂಕಿ ಇಟ್ಟು ಬ್ರಿಟಿಷ್‌ ಅಧಿಕಾರಿಗಳು ಬೆದರುವಂತೆ ಮಾಡಿದ್ದರು. ಬ್ರಿಟಿಷರ ಸಂಪರ್ಕ ಕೊಂಡಿಗಳಾಗಿದ್ದ ರೇಲ್ವೆಗಳ ಹಳಿಗಳನ್ನ ಕಡಿದು ಹಾಕಿ, ಅಂಚೆ ತಂತಿಗಳನ್ನ ಕಟ್‌ ಮಾಡಿ ಗಮನ ಸೆಳೆದಿದ್ದರು. ಹೀಗಾಗಿ ಮುರುಗೋಡು ಮಹಾದೇವಪ್ಪರ ಹೆಸ್ರು ಕೇಳಿದ್ರೆ ಬ್ರಿಟಿಷರು ಬೆಚ್ಚಿಬೀಳ್ತಿದ್ದರು..

ಭಕ್ತರು, ಅನುಯಾಯಿಗಳಿಂದ ದೇಗುಲ ನಿರ್ಮಾಣ..!

ಈಗ ಮಹಾದೇವರ ನೆನಪಿಗಾಗಿ ಅವರು ಕೋಟ್ಯಂತರ ಭಕ್ತರು, ಅನುಯಾಯಿಗಳು ದೇಗುಲ ನಿರ್ಮಾಣ ಮಾಡ್ತಿದ್ದಾರೆ. ಮುರುಡೇಶ್ವರದ ಶಿವದೇಗುಲ ಮಾದರಿಯಲ್ಲೆ ಶಿಖರ ನಿರ್ಮಾಣವಾಗಿದೆ. ದೇಗುಲದ ಶಿಖರವೇ 110 ಅಡಿ ಎತ್ತರವಾಗಿದೆ, 200 ಅಡಿ ಉದ್ದ, 80 ಅಡಿ ಅಗಲದಲ್ಲಿ ದೇಗುಲ ನಿರ್ಮಾಣವಾಗಿದೆ. ವಿಜಯಪುರ ಜಿಲ್ಲೆಯಲ್ಲೆ ಅತಿ ಎತ್ತರದ ಶಿಖರ ಹೊಂದಿರುವ ಹೆಗ್ಗಳಿಕೆಯು ಮಹಾದೇವರ ಮಂದಿರಕ್ಕಿದೆ. ಇಡಿ ದೇಗುಲಕ್ಕೆ ಬಂಗಾರದ ಬಣ್ಣದಿಂದ ಕಲರ್‌ ಮಾಡಲಾಗಿದೆ. ಒಳಗೆ ಮಾಧವಾನಂದ ಪ್ರಭುಜಿಗಳ ಮಾರ್ಬಲ್‌ ಕಲ್ಲಿನಲ್ಲಿ ಕೆತ್ತಲಾದ ಸುಂದರವಾದ ಮೂರ್ತಿಯ ಪ್ರತಿಷ್ಟಾಪನೆ ಮಾಡಲಾಗಿದೆ. ಇನ್ನು ದೇಗುಲದ ಒಳಾಂಗಣ ಹಾಗೂ ಮುಂದಿನ ಮಂಟಪ ನಿರ್ಮಾಣ ಕಾರ್ಯ ಚಾಲ್ತಿಯಲ್ಲಿದ್ದು 6 ತಿಂಗಳಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎನ್ನಲಾಗಿದೆ..

ಭಕ್ತರಿಂದ ಹಣದ ನೆರವು, ಸರ್ಕಾರದ ಸಹಾಯ ಪಡೆಯದೆ ನಿರ್ಮಾಣ!

ಇನ್ನು ಸ್ವಾಂತ್ರ್ಯಕ್ಕಾಗಿ ಜೀವದ ಹಂಗು ತೊರೆದು ಹೋರಾಡಿದ ಮಾಧವಾನಂದ ಪ್ರಭುಜಿಗಳ ಬೃಹತ್‌ ದೇಗುಲ ನಿರ್ಮಾಣಕ್ಕೆ ಭಕ್ತರೇ 10ರೂಪಾಯಿ ಯಿಂದ ಹಿಡಿದು ಲಕ್ಷದ ವರೆಗು ದೇಣಿಗೆ ನೀಡಿದ್ದಾರೆ. ಮಹಾದೇವರ ಮಂದಿರ ನಿರ್ಮಾಣ ಕಾರ್ಯ ಶುರುವಾಗಿಯೇ 25 ವರ್ಷಗಳು ಕಳೆಯುತ್ತ ಬಂದಿವೆ. ಸರ್ಕಾರದ ಯಾವ ಹಣಕಾಸಿನ ನೆರವು ಬೇಡ ಎಂದ ಕಾರಣಕ್ಕಾಗಿಯೇ ಭಕ್ತರಿಂದಲೇ ಹಣ ಸಂಗ್ರಹಿಸಿ ಮಂದಿರ ನಿರ್ಮಿಸಲಾಗ್ತಿದೆ. ಇದೆ ಕಾರಣಕ್ಕೆ 25 ವರ್ಷ ಕಳೆದು ರಾಷ್ಟ್ರಭಕ್ತ, ಸ್ವಾತಂತ್ರ್ಯ ಹೋರಾಟಗಾರನ ದೇಗುಲ ನಿರ್ಮಾಣ ಪೂರ್ಣಗೊಂಡಿಲ್ಲ ಎನ್ನುತ್ತಾರೆ ಅವರ ಅನುಯಾಯಿಗಳು.. 25 ವರ್ಷಗಳ ಹಿಂದೆ ದೇಗುಲ ನಿರ್ಮಾಣದ ವ್ಯಚ್ಚ 7 ಕೋಟಿಯಾಗಿತ್ತು. ಈಗ 20 ಕೋಟಿಗು ಅಧಿಕ ಖರ್ಚಾಗಿದೆ ಎನ್ನಲಾಗ್ತಿದೆ.

ವಿಜಯಪುರದಲ್ಲಿ ಸ್ವಾತಂತ್ರ್ಯ ಹೋರಾಟಗಾರನ ನೆನಪಿಗೆ ಜಾತ್ರೆ ಮೀರಿಸುವ ಕಾರ್ಯಕ್ರಮ

ಅಪ್ಪಟ ಚಿನ್ನದ ಕಳಶ ಸ್ಥಾಪನೆಗೆ ಸಂಕಲ್ಪ..!

ಇನ್ನು ಕ್ರಾಂತಿಯೋಗಿ ಮಹಾದೇವರ ದೇಗುಲದ ಶಿಖರದ ಮೇಲೆ ಅಪ್ಪಟ ಚಿನ್ನದ ಕಳಶ ಸ್ಥಾಪನೆಯನ್ನು ಮಠದ ಭಕ್ತರು ಹೊಂದಿದ್ದಾರೆ. ಇಡೀ ದೇಗುಲ ಚಿನ್ನದ ವರ್ಣದಲ್ಲಿ ನಿರ್ಮಾಣವಾಗಿದೆ. ಶಿಖರದ ಮೇಲಿನ ಕಳಶವು ಬಂಗಾರದ್ದೆ ಆಗಬೇಕು ಎನ್ನುವ ಸಂಕಲ್ಪ ಮಠದ ಭಕ್ತರದ್ದಾಗಿದೆ. ಭಕ್ತರೆ ಹಣ ಸೇರಿಸಿ ಮಂದಿರ ನಿರ್ಮಾಣ ಮಾಡ್ತಿರೋದ್ರಿಂದ ಚಿನ್ನದ ಕಳಶವನ್ನು ಭಕ್ತರೇ ನಿರ್ಮಿಸ್ತಾರೆ, ಆಗಷ್ಟೆ ಇದೊಂದು ಗೋಲ್ಡನ್‌ ಟೆಂಪಲ್‌ ಆಗಲಿದೆ ಎನ್ನುತ್ತಾರೆ ಮಠದ ಸಧ್ಯದ ಪೀಠಾಧಿಕಾರಿಗಳಾದ ರೇವಣಸಿದ್ದೇಶ್ವರ ಮಹಾರಾಜರು.

click me!