ಸಿಎಂ ಬೊಮ್ಮಾಯಿ ಪಂಚ ಉಡುಗೊರೆ: ರಾಜ್ಯಕ್ಕೆ ಅಮೃತೋತ್ಸವದ ಕೊಡುಗೆ

By Govindaraj SFirst Published Aug 16, 2022, 4:00 AM IST
Highlights

* ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರಿ ನೌಕರಿ ಜತೆಗೆ .25 ಲಕ್ಷ
* ಕುಶಲಕರ್ಮಿಗಳಿಗೆ 50 ಸಾವಿರ ರು. ಸಾಲ, ಸಹಾಯಧನ ವಿತರಣೆ
* ಸರ್ಕಾರಿ ಶಾಲೆ, ಕಾಲೇಜಲ್ಲಿ ಶೌಚಾಲಯ ಕಟ್ಟಲು .250 ಕೋಟಿ
* ರಾಜ್ಯಾದ್ಯಂತ ಹೊಸದಾಗಿ 4050 ಅಂಗನವಾಡಿ ಕೇಂದ್ರ ಆರಂಭ
* ಕೃಷಿ ಕಾರ್ಮಿಕರ ಮಕ್ಕಳಿಗೂ ವಿದ್ಯಾಸಿರಿ ಯೋಜನೆ ವಿಸ್ತರಣೆ

ಬೆಂಗಳೂರು (ಆ.16): ಸೇವಾವಧಿಯಲ್ಲಿ ಹುತಾತ್ಮರಾದ ವೀರ ಯೋಧರ ಕುಟುಂಬ ಸದಸ್ಯರಿಗೆ ಸರ್ಕಾರಿ ನೌಕರಿಯೊಂದಿಗೆ 25 ಲಕ್ಷ ರು. ಪರಿಹಾರ, ಕುಶಲಕರ್ಮಿಗಳಿಗೆ 50 ಸಾವಿರ ರು.ವರೆಗೆ ಸರ್ಕಾರದಿಂದ ಸಾಲ- ಸಹಾಯಧನ, ಒಂದು ವರ್ಷದ ಅವಧಿಯಲ್ಲಿ ರಾಜ್ಯದ ಎಲ್ಲ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಶೌಚಾಲಯ ನಿರ್ಮಾಣ, ಹೊಸದಾಗಿ 4050 ಅಂಗನವಾಡಿಗಳ ಆರಂಭ, ಕೃಷಿ ಕಾರ್ಮಿಕರ ಮಕ್ಕಳಿಗೂ ವಿದ್ಯಾ ಸಿರಿ ಯೋಜನೆ ವಿಸ್ತರಣೆ. ಭಾರತದ 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಡಿನ ಜನತೆಗೆ ನೀಡಿದ ಕೊಡುಗೆಗಳಿವು.

ಬೆಂಗಳೂರಿನ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಸೋಮವಾರ ಧ್ವಜಾರೋಹಣ ನೆರವೇರಿಸಿ ನಾಡಿನ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಸೈನಿಕರು ಸೇವಾವಧಿಯಲ್ಲಿ ಹುತಾತ್ಮರಾದರೆ ಅವರ ಕುಟುಂಬದ ಒಬ್ಬ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ನೀಡುವುದರ ಜತೆಗೆ, 25 ಲಕ್ಷ ರು. ನೀಡಲಾಗುವುದು. 77ನೇ ಸ್ವಾತಂತ್ರ್ಯೋತ್ಸವದ ವೇಳೆಗೆ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣ ನಿರ್ಮಿಸುವ ಉದ್ದೇಶದಿಂದ ಎಲ್ಲ ಶಾಲೆ-ಕಾಲೇಜುಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ 250 ಕೋಟಿ ರು. ವೆಚ್ಚ ಮಾಡಲಾಗುವುದು. ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದಿಂದ ಕುಂಬಾರ, ಕಮ್ಮಾರ, ಬಡಗಿ, ಶಿಲ್ಪಿಗಳು, ಭಜಂತ್ರಿ, ಬುಟ್ಟಿಹೆಣೆಯುವವರು, ವಿಶ್ವಕರ್ಮರು, ಮಾದರು ಸೇರಿ ಎಲ್ಲ ಕುಶಲ ಕರ್ಮಿಗಳಿಗೆ ತಲಾ 50 ಸಾವಿರ ರು. ವರೆಗೆ ಸಾಲ-ಸಹಾಯಧನ ಯೋಜನೆ ಜಾರಿಗೊಳಿಸಲಾಗುವುದು ಎಂದು ಘೋಷಿಸಿದರು.

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ: ಸಿಎಂ ಬಸವರಾಜ ಬೊಮ್ಮಾಯಿ ಭಾಷಣ

ಅಲ್ಲದೆ, ರೈತ ವಿದ್ಯಾನಿಧಿ ಯೋಜನೆಯ ಮೂಲಕ ರೈತರ ಮಕ್ಕಳಿಗೆ ನೀಡಲಾಗುತ್ತಿರುವ ಸೌಲಭ್ಯಗಳನ್ನು ಭೂ ರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ವಿಸ್ತರಿಸಲಾಗುವುದು. ಜತೆಗೆ, ಭೂ ರಹಿತ ಕಾರ್ಮಿಕರು ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ಹೊಸ 4,050 ಅಂಗನವಾಡಿ ಆರಂಭಿಸಲಾಗುವುದು. ಈ ಮೂಲಕ 16 ಲಕ್ಷ ಕುಟುಂಬಗಳ ಮಕ್ಕಳಿಗೆ ಪೌಷ್ಟಿಕ ಆಹಾರ, ಶಾಲಾ ಪೂರ್ವ ಶಿಕ್ಷಣ ನೀಡುವ ಯೋಜನೆ ರೂಪಿಸಲಾಗಿದೆ. ಇದರಿಂದ 8,100 ಮಹಿಳೆಯರಿಗೆ ಉದ್ಯೋಗಾವಕಾಶ ಸಿಗಲಿದೆ ಎಂದು ಹೇಳಿದರು.

ಸ್ವತಂತ್ರ ಭಾರತಕ್ಕೆ 75 ವರ್ಷಗಳಾಗಿದ್ದು, ಹಿಂದಿರುಗಿ ನೋಡಬೇಕು. ನಡೆದು ಬಂದ ದಾರಿಯಲ್ಲಿನ ಕೊರತೆಗಳನ್ನು ಸರಿಪಡಿಸಿಕೊಂಡು ಅಮೃತ ಕಾಲಕ್ಕೆ ಕೊರತೆಗಳನ್ನು ನೀಗಿಸಿ ಮುಂದೆ ಹೋಗಲು ಸಿಂಹಾವಲೋಕನ, ಆತ್ಮಾವಲೋಕನದ ಅವಶ್ಯಕತೆ ಇದೆ. ಜತೆಗೆ, ಈ ಅನುಭವ ಮುಂದೆ ನಡೆಯಬೇಕಾಗಿರುವ ದಾರಿಯ ಕುರಿತು ದಿಕ್ಸೂಚಿ ಹಾಕಿಕೊಳ್ಳಲು ಅಮೃತ ಕಾಲವಾಗಿದೆ ಎಂದರು.

ನಮ್ಮಲ್ಲಿ ಸಂಕಲ್ಪ, ಛಲ, ದೂರದೃಷ್ಟಿಇದೆ. ನವ ಕರ್ನಾಟಕದಿಂದ ನವ ಭಾರತ ನಿರ್ಮಾಣದ ದೃಢ ಹೆಜ್ಜೆಗಳನ್ನಿಡುತ್ತಿದ್ದೇವೆ. ಆರ್ಥಿಕತೆ ಎಂದರೆ ದುಡ್ಡಲ್ಲ, ಜನರ ದುಡಿಮೆ ಎಂದು ಅರಿತಿದ್ದೇವೆ. ರಾಜ್ಯದಲ್ಲಿ ಅತಿ ಹೆಚ್ಚು ಸ್ಟಾರ್ಚ್‌ ಅಪ್‌, ಯೂನಿಕಾರ್ನ್‌, ಡೆಕಾಕಾರ್ನ್‌ಗಳಿವೆ. ತಂತ್ರಜ್ಞಾನದಲ್ಲಿ ನಂ.1 ರಾಜ್ಯವಾಗಿದೆ. ತಲಾವಾರು ಆದಾಯದಲ್ಲಿ ಇಡೀ ದೇಶದಲ್ಲಿ 3ನೇ ಸ್ಥಾನದಲ್ಲಿದೆ. ಜಿಡಿಪಿ ಶೇ.9ರಷ್ಟುಬೆಳೆಯುತ್ತಿದೆ. ದೇಶದ ಶೇ.38ರಷ್ಟುವಿದೇಶಿ ನೇರ ಬಂಡವಾಳ ರಾಜ್ಯಕ್ಕೆ ಹರಿದು ಬರುತ್ತಿದೆ ಎಂದು ತಿಳಿಸಿದರು.

ಇದೇ ವೇಳೆ ಕಳೆದ ವರ್ಷ 75ನೇ ಸ್ವಾತಂತ್ರ್ಯೋತ್ಸವದ ವೇದಿಕೆಯಲ್ಲಿ ಘೋಷಿಸಿದ 750 ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆ, 750 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣ, 7,500 ಯುವಕರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಯೋಜನೆ, 324 ರೈತ ಉತ್ಪಾದಕರ ಸಂಘ ಸ್ಥಾಪಿಸುವ ಯೋಜನೆ, ಗ್ರಾ.ಪಂ.ಗಳಿಗೆ ಮೂಲಸೌಕರ್ಯ ಒದಗಿಸುವ ಯೋಜನೆ ಸೇರಿದಂತೆ 11 ಅಮೃತ ಯೋಜನೆಗಳನ್ನು ಸರ್ಕಾರ ಈಗಾಗಲೇ ಅನುಷ್ಠಾನಗೊಳಿಸಿದೆ ಎಂದು ಹೇಳಿದರು.

ಪ್ರಸಕ್ತ ಬಜೆಟ್‌ನಲ್ಲಿ ಘೋಷಿಸಿದ ಅತಿವೃಷ್ಟಿಪರಿಹಾರ ಮೊತ್ತವನ್ನು ಎಸ್‌ಡಿಆರ್‌ಎಫ್‌ ಮಾರ್ಗಸೂಚಿಗಿಂತ ಹೆಚ್ಚುವರಿಯಾಗಿ ವಿತರಿಸಲಾಗಿದೆ. ಯಶಸ್ವಿನಿ ಯೋಜನೆ ಮರು ಜಾರಿಗೆ ಕ್ರಮ ಕೈಗೊಳ್ಳಲಾಗಿದೆ. 8,101 ಸರ್ಕಾರಿ ಶಾಲಾ ಕೊಠಡಿಗಳನ್ನು 1,412 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲು ಕ್ರಮ ಕೈಗೊಂಡಿದ್ದೇವೆ. ರಾಜ್ಯದ ಆರು ಎಂಜಿನಿಯರ್‌ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ರಾಜ್ಯದ ಐದು ನಗರಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಟ್ಟುತ್ತಿದ್ದೇವೆ. ನೀರಾವರಿ ಯೋಜನೆಗಳನ್ನು ಸಮಯದಲ್ಲಿ ಪೂರ್ಣ ಮಾಡಿ, ಪ್ರತಿ ಹನಿ ನೀರನ್ನು ಸಮರ್ಪಕವಾಗಿ ಬಳಸಲು ಸಂಕಲ್ಪ ಮಾಡಲಾಗಿದೆ. ವಿದ್ಯುಚ್ಛಕ್ತಿ, ನೀರಾವರಿಯಲ್ಲಿ ಕ್ಷಮತೆ ಕಾಯ್ದುಕೊಳ್ಳಲಾಗಿದೆ. ಜನರಿಗೆ ಸೌಲಭ್ಯಗಳನ್ನು ರೂಪಿಸುವುದರೊಂದಿಗೆ ನೇರವಾಗಿ ತಲುಪಿಸುವುದಕ್ಕೂ ಸರ್ಕಾರ ಆದ್ಯತೆ ನೀಡಿದೆ. ನೆಲ, ಜಲ, ಭಾಷೆಯ ವಿಚಾರದಲ್ಲಿ ನಾಡಿನ ಹಿತ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಮಾಂಸ ಉತ್ಪಾದನಾ ಒಕ್ಕೂಟವಾಗಿ ಕುರಿ ನಿಗಮ ಪರಿವರ್ತನೆ: ಸಿಎಂ ಬೊಮ್ಮಾಯಿ

ಅಮೃತ ಕಾಲದ ಆತ್ಮಾವಲೋಕನ ನಡೆದು ಬಂದ ದಾರಿಯಲ್ಲಿನ ಕೊರತೆಗಳನ್ನು ಸರಿಪಡಿಸಿಕೊಂಡು ಅಮೃತ ಕಾಲಕ್ಕೆ ಕೊರತೆಗಳನ್ನು ನೀಗಿಸಿ ಮುಂದೆ ಹೋಗಲು ಸಿಂಹಾವಲೋಕನ, ಆತ್ಮಾವಲೋಕನದ ಅವಶ್ಯಕತೆ ಇದೆ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

click me!