
ಆಫ್ರಿಕಾದ ಈಕ್ವಟೋರಿಯಲ್ ಗಿನಿಯಾದಲ್ಲಿ ಎಬೋಲಾ ತರಹದ ಮಾರ್ಬರ್ಗ್ ವೈರಸ್ ಪತ್ತೆಯಾಗಿದ್ದು, ಏಕಾಏಕಿ 9 ಮಂದಿ ಸಾವನ್ನಪ್ಪಿದ್ದಾರೆ ಎಂದು WHO ದೃಢಪಡಿಸಿದೆ. ಹಣ್ಣಿನ ಬಾವಲಿಗಳಿಂದ ಹರಡುವ ಮಾರ್ಬರ್ಗ್ ವೈರಸ್ ಹೆಚ್ಚು ಸಾಂಕ್ರಾಮಿಕವಾಗಿದೆ. ವಿಪರೀತ ವಾಂತಿ, ಅತಿಸಾರ, ಜ್ವರ ಮತ್ತು ಆಯಾಸದಂತಹ ತೀವ್ರ ರಕ್ತಸ್ರಾವದ ಲಕ್ಷಣಗಳೊಂದಿಗೆ ಅನಾರೋಗ್ಯವನ್ನು ಉಂಟು ಮಾಡುತ್ತದೆ. ರೋಗಲಕ್ಷಣಗಳು ಹೆಮರಾಜಿಕ್ ಜ್ವರವನ್ನು ಉಂಟು ಮಾಡುತ್ತದೆ. ಇದು ಎಬೋಲಾ ಕಾಯಿಲೆಯಂತೆಯೇ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ. ಕಳೆದ ವಾರ ಈಕ್ವಟೋರಿಯಲ್ ಗಿನಿಯಾದ ಮಾದರಿಗಳನ್ನು ಸೆನೆಗಲ್‌ನ ಲ್ಯಾಬ್‌ಗೆ ಕಳುಹಿಸಿದ ನಂತರ ಆರೋಗ್ಯ ಸಂಸ್ಥೆ ಸಾಂಕ್ರಾಮಿಕ ರೋಗವನ್ನು ದೃಢಪಡಿಸಿದೆ.
ಬಾವಲಿಗಳಿಂದ ಮನುಷ್ಯರಿಗೆ ಹರುಡುವ ವೈರಸ್
ಮಾರ್ಬರ್ಗ್ ವೈರಸ್ ಬಾವಲಿ (Bat)ಗಳಿಂದ ಮನುಷ್ಯರಿಗೆ ಹರಡುತ್ತದೆ. ನಂತರ ಇದು ಸೋಂಕಿತ ರೋಗಿಯ ದೈಹಿಕ ದ್ರವಗಳು, ಮೇಲ್ಮೈಗಳು ಮತ್ತು ವಸ್ತುಗಳ ನೇರ ಸಂಪರ್ಕದ ಮೂಲಕ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ ಎಂದು ತಿಳಿದುಬಂದಿದೆ. ಈ ವೈರಸ್ ಚಿಕಿತ್ಸೆಗಾಗಿ (Treatment) ಇಲ್ಲಿಯವರೆಗೆ ಯಾವುದೇ ಲಸಿಕೆ (Vaccine) ಅಥವಾ ಚಿಕಿತ್ಸೆಯಿಲ್ಲ. ಹೀಗಾಗಿ ಮಾರ್ಬರ್ಗ್ ವೈರಸ್ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಸೋಂಕಿತ ಪ್ರದೇಶಗಳಲ್ಲಿ ಸಂಪರ್ಕ ಪತ್ತೆಹಚ್ಚುವಿಕೆ, ಸೋಂಕಿತ ಜನರ ಪ್ರತ್ಯೇಕತೆ ಮತ್ತು ರೋಗದ ಲಕ್ಷಣಗಳಿರುವ (Symptoms) ಜನರ ಚಿಕಿತ್ಸೆ ಮತ್ತು ಆರೈಕೆಗಾಗಿ ಪೀಡಿತ ಜಿಲ್ಲೆಗಳಲ್ಲಿ ಮುಂಗಡ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದೆ.
ಭಾರತದ ಮೊದಲ ಕೋವಿಡ್ ಪತ್ತೆಯಾಗಿ 3 ವರ್ಷ, ಸರಿಯಾಗಿ ನೆನಪಿದೆ ಕೊರೋನಾ ಸಂಕಷ್ಟ!
ಮಾರ್ಬರ್ಗ್ ವೈರಸ್ ಎಂದರೇನು?
ಮಾರ್ಬರ್ಗ್ ಒಂದು ಹೆಮರಾಜಿಕ್ ಜ್ವರವಾಗಿದ್ದು ಅದು ದೇಹದ ಅಂಗಗಳ ಮೇಲೆ ಪರಿಣಾಮ ಬೀರಬಹುದು ಮತ್ತು ರಕ್ತಸ್ರಾವವನ್ನು ಉಂಟುಮಾಡಬಹುದು ಎಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಹೇಳಿದೆ. ಇದು ಝೂನೋಟಿಕ್ ವೈರಸ್ ಆಗಿದ್ದು, ಆರು ಜಾತಿಯ ಎಬೋಲಾ ವೈರಸ್ ಜೊತೆಗೆ ಫಿಲೋವೈರಸ್ ಕುಟುಂಬವನ್ನು ಒಳಗೊಂಡಿದೆ ಎಂದು ಸಿಡಿಸಿ ಹೇಳಿದೆ.
ಮಾರ್ಬರ್ಗ್ ವೈರಸ್ ಲಕ್ಷಣಗಳು
ಮಾರ್ಬರ್ಗ್ ವೈರಸ್ ಸೋಂಕು ವೇಗವಾಗಿ ಹರಡುತ್ತದೆ. ರೋಗ ಲಕ್ಷಣಗಳು ಎಬೋಲಾ ವೈರಸ್‌ನಂತೆಯೇ ಇರುತ್ತವೆ. ಮಾರ್ಬರ್ಗ್ ವೈರಸ್ ಸಾಮಾನ್ಯ ಲಕ್ಷಣಗಳೆಂದರೆ ಜ್ವರ (Fever) ಮತ್ತು ಎದೆ ನೋವು. ಇದು ಎಷ್ಟು ಅಪಾಯಕಾರಿ ಎಂದರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದಿದ್ದರೆ ರೋಗಿಯ ಸಾವು ಕೂಡ ಸಂಭವಿಸಬಹುದು. ಮಾರ್ಬರ್ಗ್ ವೈರಸ್ ತುಂಬಾ ಅಪಾಯಕಾರಿ ಮತ್ತು ಅದರ ಸೋಂಕಿನ ನಂತರ ಸಾವಿನ ಪ್ರಮಾಣವು 88 ಪ್ರತಿಶತಕ್ಕೆ ಹೋಗಬಹುದು. ವೈರಸ್ ಹರಡುವುದನ್ನು ತಡೆಯಲು, ವಿಶ್ವಾರೋಗ್ಯ ಸಂಸ್ಥೆಯ ಆರೋಗ್ಯ ತುರ್ತು ತಜ್ಞರು, ಸೋಂಕು ನಿಯಂತ್ರಣ ತಂಡಗಳು, ಲ್ಯಾಬ್‌ಗಳು ಮತ್ತು ಸಂವಹನ ಬೆಂಬಲ ವ್ಯವಸ್ಥೆಗಳನ್ನು ನಿಯೋಜಿಸಿದೆ.
Monkey fever: ಕೆಎಫ್‌ಡಿ ಸೋಂಕಿತ ವ್ಯಕ್ತಿ ಆಸ್ಪತ್ರೆಗೆ ದಾಖಲು: ಮಲೆನಾಡಲ್ಲಿ ಆತಂಕ
ಮಾರ್ಬರ್ಗ್ ಕಾಯಿಲೆಗೆ ಲಸಿಕೆ ಲಭ್ಯವಿದೆಯೇ?
ಪ್ರಸ್ತುತ ವೈರಸ್‌ನ ವಿರುದ್ಧ ಯಾವುದೇ ಲಸಿಕೆ ಲಭ್ಯವಿಲ್ಲ. ವೈರಸ್‌ಗೆ ಚಿಕಿತ್ಸೆ ನೀಡಲು ಯಾವುದೇ ಲಸಿಕೆಗಳು ಅಥವಾ ಆಂಟಿವೈರಲ್ ಚಿಕಿತ್ಸೆಗಳನ್ನು ಅನುಮೋದಿಸಲಾಗಿಲ್ಲ. ಆದರೆ ಮೌಖಿಕ ಅಥವಾ ಇಂಟ್ರಾವೆನಸ್ ದ್ರವಗಳೊಂದಿಗೆ ಪುನರ್ಜಲೀಕರಣ, ನಿರ್ದಿಷ್ಟ ರೋಗಲಕ್ಷಣಗಳನ್ನು ಗುಣಪಡಿಸಬಹುದು ಎಂದು ತಿಳಿದುಬಂದಿದೆ. ರಕ್ತದ ಉತ್ಪನ್ನಗಳು, ಪ್ರತಿರಕ್ಷಣಾ ಚಿಕಿತ್ಸೆಗಳು ಮತ್ತು ಔಷಧ ಚಿಕಿತ್ಸೆಗಳು ಸೇರಿದಂತೆ ಸಂಭಾವ್ಯ ಚಿಕಿತ್ಸೆಗಳ ಶ್ರೇಣಿ, ಹಾಗೆಯೇ ಹಂತ 1 ಡೇಟಾವನ್ನು ಹೊಂದಿರುವ ಅಭ್ಯರ್ಥಿ ಲಸಿಕೆಗಳನ್ನು ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ಆರೋಗ್ಯ ಸಂಸ್ಥೆ ಹೇಳಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.