ಖ್ಯಾತ ಹೋಮಿಯೋಪಥಿ ವೈದ್ಯರಾದ ನಾಡೋಜ ಡಾ.ಬಿ.ಟಿ. ರುದ್ರೇಶ್ ಬರೆದ ‘ಅಶ್ವಿನಿ ಸ್ಪರ್ಶ’ ಕೃತಿಯ ಆಯ್ದಭಾಗ ಇಲ್ಲಿದೆ. ಇದು ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆಯಾಗುತ್ತಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
-ನಾಡೋಜ ಡಾ.ಬಿ.ಟಿ. ರುದ್ರೇಶ್
24ರ ವಯಸ್ಸಿನ ತರುಣಿಯೊಬ್ಬಳನ್ನು ಆಕೆಯ ತಂದೆ ನಮ್ಮ ಕ್ಲಿನಿಕ್‌ಗೆ ಕರೆ ತಂದಿದ್ದರು. ಆಕೆಯ ಕೇಸ್ ಹಿಸ್ಟರಿ ನೋಡಿದಾಗ ಆಕೆಗೆ ಎಪಿಲೆಪ್ಸಿ(ಅಪಸ್ಮಾರ) ರೋಗದ ಲಕ್ಷಣಗಳು ಇರುವುದು ತಿಳಿಯಿತು. ಆಕೆ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಳು. ಎಂಎಸ್‌ಗಾಗಿ ಲಂಡನ್‌ಗೆ ಹೋಗಿದ್ದಳು. ಆರಂಭದ ವರ್ಷ ವ್ಯಾಸಂಗ ಚೆನ್ನಾಗಿತ್ತು. ಆಮೇಲೆ ಇದ್ದಕ್ಕಿದ್ದಂತೆ ಎಪಿಲೆಪ್ಸಿ ಆವರಿಸಿಕೊಂಡಿತ್ತು.
undefined
ಮಗಳಿಗೆ ಫಿಟ್ಸ್ ಬಂದಿತ್ತು ಗೊತ್ತಾಗಿ ತಂದೆ ತಕ್ಷಣ ಬೆಂಗಳೂರಿಗೆ ಕರೆಸಿಕೊಂಡರು. ತಜ್ಞ ವೈದ್ಯರ ಭೇಟಿ, ಎಂಆರ್‌ಐ ಪರೀಕ್ಷೆ ನಡೆಯಿತು. ಮೆದುಳಲ್ಲೇನೂ ತೊಂದರೆ ಇಲ್ಲ ಎಂದ ವೈದ್ಯರು, ಮಾತ್ರೆ ಬರೆದುಕೊಟ್ಟರು. ಒಂದು ತಿಂಗಳ ನಂತರ ಎರಡನೇ ಸಂದರ್ಶನದಲ್ಲಿ ಅದೇ ಮಾತ್ರೆ ಮುಂದುವರಿಸಲು ಹೇಳಿ ಲಂಡನ್‌ಗೆ ಹೋಗಬಹುದು ಎಂದರು. ಆದರೆ ತಂದೆಗೆ ಕಳುಹಿಸುವ ಧೈರ್ಯ ಇರಲಿಲ್ಲ. ದೈಹಿಕವಾಗಿ, ಮಾನಸಿಕವಾಗಿ ಕುಗ್ಗಿದ ಸ್ಥಿತಿಯಲ್ಲಿ ಕಳಾಹೀನವಾಗಿ ಆ ತರುಣಿ ನನ್ನ ಮುಂದೆ ಕುಳಿತಿದ್ದಳು.
ನೂರಾರು ಕನಸಿನೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟ ಯುವತಿ ಬಾಳು ಮೊದಲ ರಾತ್ರಿಯೇ ಹಾಳು!
ಕಾಯಿಲೆಯ ಹಿನ್ನೆಲೆಯ ವಿವರ ಕೇಳಿದೆ. ಆಕೆ ತಡಬಡಾಯಿಸಿದಳು. ಆಕೆಯ ತಂದೆಯನ್ನು ಹೊರಕಳುಹಿಸಿದೆ. ವೈಯಕ್ತಿಕ ಸಮಸ್ಯೆಯ ಕುರಿತು ಕೇಳಿದೆ. ಸಮರ್ಪಕ ಉತ್ತರ ನೀಡದೇ ಇದ್ದರೆ ಸಮಸ್ಯೆಯ ಮೂಲಕ್ಕೆ ಹೋಗಿ ಚಿಕಿತ್ಸೆ (Treatment) ನೀಡಲಾಗದು, ಅದರಿಂದ ಜೀವಮಾನಪೂರ್ತಿ ಔಷಧ ತೆಗೆದುಕೊಳ್ಳಬೇಕಾಗಬಹುದು ಎಂದೆ. ಬದುಕಿನಲ್ಲಿ ಅಸಾಮಾನ್ಯ ಘಟನೆ ನಡೆದಿದ್ದರೆ ತಿಳಿಸು, ಇವೆಲ್ಲವೂ ಗೌಪ್ಯವಾಗಿರುತ್ತದೆ ಎಂದು ಮನವರಿಕೆ ಮಾಡಿದೆ. ಆಗ ನಿಜ ಸ್ಥಿತಿ ಹೇಳಿದಳು.
ಇಂಗ್ಲೆಂಡಿನಲ್ಲಿ ಒಬ್ಬ ಇವಳಲ್ಲಿ ಅನುರಕ್ತನಾಗಿದ್ದ. ಕೆಲ ತಿಂಗಳ ಸಾಂಗತ್ಯದ ನಂತರ ಅವನೊಬ್ಬ ಫ್ಲರ್ಚ್ ಎಂದೂ ಹಿಂದೆಯೂ ಹಲವು ಯುವತಿಯರಿಗೆ ದ್ರೋಹ ಮಾಡಿದ್ದಾನೆಂದು ತಿಳಿಯಿತು. ಮದುವೆಗೆ ಸಿದ್ಧವಾಗಿ ಸರ್ವಸ್ವವೂ ಅವನೇ ಎಂದು ನಂಬಿದ್ದ ಈ ಯುವತಿ ವಿಚಲಿತಳಾಗಿದ್ದಳು. ಸಂಬಂಧ (Relationship) ಮುರಿದುಕೊಂಡ ದಿನವೇ ಫಿಟ್ಸ್ ಆರಂಭವಾಗಿತ್ತು.
‘ನೀವು ಹುಲಿ ತಿನ್ನುತ್ತಿರಾ’ ಎಂದೆ. ‘ಇಲ್ಲ. ಹೀಗೇಕೆ ಕೇಳುತ್ತಿದ್ದಿರಾ’ ಎಂದಳು. ‘ನೀವು ಹುಲಿ ತಿನ್ನುವುದಿಲ್ಲ ಎಂದು ಹುಲಿಯ ಮುಂದೆ ಕುಳಿತ ನಿಮ್ಮನ್ನು ಹುಲಿ ತಿನ್ನದೆಯೇ ಬಿಡುತ್ತದೆ’ ಎಂದಾಗ ಆಕೆಗೆ ನನ್ನ ಬಗ್ಗೆ ನಂಬಿಕೆ (Trust) ಬರಲಾರಂಭಿಸಿತ್ತು. ‘ನೀನಿನ್ನು ಜೀವನದಲ್ಲಿ ಬಹಳಷ್ಟುಕಷ್ಟಎದುರಿಸ ಬೇಕಾಗುತ್ತದೆ. ಅವನನ್ನು ನೆನಪಿಸಿಕೊಂಡು ಉನ್ಮಾದಕ್ಕೆ ಒಳಗಾಗಿ ಫಿಟ್ಸ್ ತರಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಅವನ ಜತೆ ಮದುವೆಯಾಗಿದ್ದರೆ ಜೀವಮಾನವಿಡೀ ಕಷ್ಟಅನುಭವಿಸಬೇಕಾಗಿತ್ತು. ಮದುವೆಗೆ ಮುನ್ನವೇ ಡಿವೋರ್ಸ್ ಆಗಿದೆ ಎಂದುಕೊಳ್ಳಬೇಕು’ ಎಂದು ಹೇಳಿದಾಗ ಅವಳ ದುಗುಡ ಕಡಿಮೆಯಾಗಲಾರಂಭಿಸಿತ್ತು.
ಗಂಡ ಅತಿಯಾಗಿ ಪ್ರೀತಿಸ್ತಾನೆ, ಜಗಳಾನೇ ಆಡಲ್ಲ..ಡಿವೋರ್ಸ್ ಬೇಕು ಅಂತಿದ್ದಾಳೆ ಪತ್ನಿ!
ಪ್ರೀತಿಪಾತ್ರರನ್ನು ಕಳೆದುಕೊಂಡು ಆಘಾತದಿಂದ ನರಳುವವರಿಗೆ ಹೋಮಿಯೋಪತಿ ಚಿಕಿತ್ಸೆಯಲ್ಲಿ ‘ಇಗ್ನೆಷಿಯಾ’ ಎಂಬ ಔಷಧ (Medicine)ವಿದೆ. ಅದನ್ನು ಕೊಟ್ಟು ಇಂಗ್ಲೆಂಡಿಗೆ ಹೋಗಿ ವ್ಯಾಸಂಗ ಮುಂದುವರೆಸಲು ಹೇಳಿದೆ. ಈಗ ನಾನು ಕೊಟ್ಟ ಔಷಧಿಯನ್ನಷ್ಟೆತೆಗೆದುಕೊಳ್ಳುತ್ತಿದ್ದಾಳೆ. ಫಿಟ್ಸ್ ಮತ್ತೆ ಮರುಕಳಿಸಿದಂತಿಲ್ಲ. ಆರು ತಿಂಗಳಿನಿಂದ ಇಂಗ್ಲೆಂಡಿನಲ್ಲಿದ್ದಾಳೆ. ಮೊದಲಿನ ಉತ್ಸಾಹ, ಕಳೆ, ಹುಮ್ಮಸ್ಸು ಮರಳಿ ಬಂದಿದೆ.