ಜೈಲು ಶಿಕ್ಷೆ ಹೇಗಿರಬಹುದೆಂಬ ಪ್ರತ್ಯಕ್ಷ ಅನುಭವ ಈ ಅವಧಿಯಲ್ಲಾಯಿತು. ಓಡಾಡಲು ಜಾಗವಿಲ್ಲ. ಗಂಟೆಗಟ್ಟಲೆ ಕೂತು, ಮಲಗಿ ಅಭ್ಯಾಸವಿಲ್ಲ. ವರ್ಕ್ ಫ್ರಂ ಹೋಮ್ ಪ್ರಯುಕ್ತ ಕಚೇರಿ ಕೆಲಸ ಮಾಡುತ್ತಿದ್ದಷ್ಟುಹೊತ್ತು ಹೇಗೋ ಸಾಗುತ್ತಿತ್ತು. ಆಕೆಯೂ ಗಾಯಕಿಯಾದ ಕಾರಣ ಒಂದಷ್ಟುಆನ್‌ಲೈನ್ ಕ್ಲಾಸ್‌ಗಳನ್ನು ಮಾಡುತ್ತಿದ್ದಳು. ಅವೆಲ್ಲ ನಾಲ್ಕೈದು ಗಂಟೆಗಳ ಬಾಬತ್ತು. ಉಳಿದ 19-20 ಗಂಟೆ ಕಳೆಯುವುದು ಮಾತ್ರ ಶಿಕ್ಷೆಯಂತಿತ್ತು.
- ರವಿಶಂಕರ್ ಭಟ್
ಅದು ಸೆಪ್ಟೆಂಬರ್ 12ರ ಶನಿವಾರ. ರಾಜ್ಯಾದ್ಯಂತ ವಾರದಿಂದ ಮಳೆಯೋ ಮಳೆ. ನನಗೆ ಸಣ್ಣಗೆ ಶೀತಮ್ಮನ ಕಾಟ ಶುರುವಾಗಿತ್ತು. ಮೋಡ ಕವಿದ ವಾತಾವರಣವಿದ್ದಾಗ ನನಗೆ ಸುರಿಶೀತ ಬಾಧೆ ಹೆಚ್ಚು. ಪ್ರತಿ ಬಾರಿಯಂತೆ ಶೀತಕ್ಕೆ ಔಷಧ ತೆಗೆದುಕೊಳ್ಳಲು ಆರಂಭಿಸಿದೆ. ಮುನ್ನೆಚ್ಚರಿಕೆಯಾಗಿ ಮನೆಯವರಿಂದ ಬೇರೆಯೇ ಇದ್ದೆ. ಭಾನುವಾರ ತಲೆನೋವೂ ಸೇರಿಕೊಂಡಿತು. ಇದಕ್ಕೆ ಮುನ್ನ ಸಹೋದ್ಯೋಗಿ ಮತ್ತು ಅವರ ಪತ್ನಿಗೂ ಕೊರೋನಾ ತಗುಲಿತ್ತು. ನನಗೆ ಒಳಗೊಳಗೇ ಅನುಮಾನ ಶುರುವಾಯಿತು. ವರ್ಕ್ ಫ್ರಂ ಹೋಮ್‌ನಲ್ಲಿದ್ದವನು ಇನ್ನು 2-3 ದಿನದಲ್ಲಿ ಕಚೇರಿಗೆ ಹೋಗಬೇಕಿತ್ತು. ಮನೆಯಲ್ಲಿ ಇಬ್ಬರು ಮಕ್ಕಳು, ವೃದ್ಧ ತಂದೆ-ತಾಯಿ ಇದ್ದಾರೆ. ಎಲ್ಲರಿಗೂ ಎಚ್ಚರಿಸುತ್ತಲೇ ಇರುವ ನಾನೇ ನಿರ್ಲಕ್ಷ್ಯ ವಹಿಸುವುದು ತರವಲ್ಲ ಎನಿಸಿ ಪರೀಕ್ಷೆ ಮಾಡಿಸಲು ನಿರ್ಧರಿಸಿದೆ.
undefined
RAT ಮತ್ತು RT-PCR ಪರೀಕ್ಷೆ
ಕೋವಿಡ್ ಪರೀಕ್ಷಾ ಶಿಬಿರದಲ್ಲಿ ಎರಡು ರೀತಿಯ ಪರೀಕ್ಷೆ ಮಾಡುತ್ತಾರೆ. ಒಂದು, ತಕ್ಷಣ ಫಲಿತಾಂಶ ನೀಡುವ ಪರೀಕ್ಷೆ. ಅದಕ್ಕೆ Rapid antigen test (RAT) ಅಂತ ಹೆಸರು. ಒಂದು ಕಡ್ಡಿಯಲ್ಲಿ ಮೂಗಿನೊಳಗೆ ಸವರಿ ರಾಸಾಯನಿಕವೊಂದರ ಮಿಶ್ರಣ ಮಾಡುತ್ತಾರೆ. ಹತ್ತೇ ನಿಮಿಷಲ್ಲಿ ಫಲಿತಾಂಶ ಬರುತ್ತದೆ. ಇದರಲ್ಲಿ ನಿಖರತೆ ಕಮ್ಮಿ (ಶೇ.60-70) ಅನ್ನುತ್ತಾರೆ ಕೆಲವು ಜನ. ಇನ್ನೊಂದು,RT-PCR (Reverse transcription-polymerase chain reaction ) ಅಂತ. ಅದರಲ್ಲಿ ಮೂಗು ಮತ್ತೆ ಗಂಟಲಿಂದ ದ್ರವ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಿ ಪರೀಕ್ಷೆ ಮಾಡುತ್ತಾರೆ. ಇದರ ಫಲಿತಾಂಶ ಬರಲು ಎರಡು-ಮೂರು ದಿನ ಆಗುತ್ತೆ. ರೋಗಲಕ್ಷಣ (ಜ್ವರ, ಶೀತ, ತಲೆನೋವು, ಕೆಮ್ಮು, ಗಂಟಲುಬೇನೆ ಅಥವಾ ಆಘ್ರಾಣಿಸುವ ಶಕ್ತಿವಿಹೀನತೆ) ಇದ್ದವರಿಗೆ RAT ಮಾಡುತ್ತಾರೆ. ರೋಗಲಕ್ಷಣ ಇಲ್ಲದ್ದವರಿಗೆ RT-PCR ಮಾಡುತ್ತಾರೆ. ಪರೀಕ್ಷೆ ಎಲ್ಲವೂ ಉಚಿತ.
ರವಿಶಂಕರ್ ಭಟ್ ಸಾಹಿತ್ಯಕ್ಕೆ ನಾಗಚಂದ್ರಿಕಾ ಭಟ್ ಮತ್ತು ಮಕ್ಕಳ ಗಾಯನ;ವಿಡಿಯೋ ವೈರಲ್!
ಪಾಸಿಟಿವ್ ಎಂದರೂ ಅನುಮಾನ
ಸೆಪ್ಟೆಂಬರ್ 16ರ ಬುಧವಾರ ಶಿಬಿರಕ್ಕೆ ಹೋದೆ. ರೋಗಲಕ್ಷಣ ಇದೆಯಾ? ಅಂತ ಕೇಳಿದರು. ಶೀತ-ತಲೆನೋವು ಇತ್ತು, ಕಡಿಮೆ ಆಗಿದೆ ಎಂದೆ. RT-PCR ಮಾಡುತ್ತೇವೆ ಅಂದರು. RAT ಮಾಡಿ ಎಂದು ಚೌಕಾಸಿ ತೆಗೆದೆ. ಒಪ್ಪಿ ಪರೀಕ್ಷೆ ಮಾಡಿದರೆ ಹೌದೋ, ಅಲ್ವೋ ಎಂಬಂತೆ ಫಲಿತಾಂಶ ಬಂತು. ಸ್ವಲ್ಪವೇ ಲಕ್ಷಣ ಕಂಡು ಬಂದರೂ ಪಾಸಿಟಿವ್ ಅಂತಲೇ ಪರಿಗಣಿಸುತ್ತೇವೆ ಎಂದರು. ನನ್ನ ಸಂಶಯ ಪರಿಹಾರವಾಗಲಿಲ್ಲ. RT-PCR ಮಾಡಿ ಬಿಡಿ ಅಂದೆ. ಅವರೊಪ್ಪಲಿಲ್ಲ. ಮತ್ತೊಂದು ಶಿಬಿರಕ್ಕೆ ಹೋಗಿ ಅಲ್ಲಿ RT-PCR ಪರೀಕ್ಷೆಗೆ ಕೊಟ್ಟು ಬಂದೆ.
ಫೋನ್ ಪ್ರವಾಹದಲ್ಲಿ ಬದುಕಿದ್ದೇ ಹೆಚ್ಚು
ಮನೆಗೆ ಬಂದು ಇದೊಳ್ಳೆ ಪೇಚಾಟವಾಯ್ತಲ್ಲ ಅಂದುಕೊಳ್ಳುತ್ತಿರುವಷ್ಟರಲ್ಲಿ ಶುರುವಾಯಿತು ಕರೆಗಳ ಸುರಿಮಳೆ. ಸಾರ್ ನಾವು ಬಿಬಿಎಂಪಿಯಿಂದ, ಸಾರ್ ನಾವು ಆರೋಗ್ಯ ಇಲಾಖೆ, ಸಾರ್ ನಾವು ಆಪ್ತಮಿತ್ರ, ನಾವು ಎಂಪಿ ಆಫೀಸಿಂದ... ನಿಮಗೆ ಜ್ವರ ಇದೆಯಾ? ವಾಸನೆ-ರುಚಿ ಸರಿ ಇದೆಯಾ? ನೀವು ಸರ್ಕಾರಿ ಆಸ್ಪತ್ರೆ ಸೇರ್ತೀರಾ, ಪ್ರೈವೇಟ್ ಹಾಸ್ಪಿಟಲ್ ಸೇರ್ತೀರಾ? ಮನೆಯಲ್ಲೇ ಇರೋದಾದರೆ ಪ್ರತ್ಯೇಕ ಕೋಣೆ ಇರಬೇಕು, ಅದಕ್ಕೆ ಪ್ರತ್ಯೇಕ ಶೌಚಾಲಯ ಇರಬೇಕು, ನೀವೂ ಬೇರೆ ಕಡೆ ಓಡಾಡಬಾರದು, ಊಟೋಪಚಾರ ಮಾಡಲು ಜನ ಇರಬೇಕು. ಇದಕ್ಕೆಲ್ಲ ವ್ಯವಸ್ಥೆ ಇದೆಯಾ...?
ನನಗೆ ಕೊರೋನಾ ಬಂದದ್ದಕ್ಕಿಂತ ಹೆಚ್ಚು ಟೆನ್ಷನ್ ಆಗಿ ಬಿಟ್ಟಿತು, ಅರ್ಧ ದಿನದಲ್ಲಿ. ಅಯ್ಯೋ, ನಿಮ್ಮ ದಮ್ಮಯ್ಯ. ನಾನು ಮನೆಯಲ್ಲೇ ಇರುತ್ತೇನೆ. ಎಲ್ಲಾ ವ್ಯವಸ್ಥೆ ಇದೆ ಅಂದೂ ಅಂದು ಸಾಕಾಯಿತು. ಅವತ್ತು ರಾತ್ರಿಯೇ ಮಡದಿ ನಾಗಚಂದ್ರಿಕಾಗೂ ಜ್ವರ ಕಾಣಿಸಿಕೊಂಡಿತು. ನನಗೆ ತಲೆನೋವು ಜಾಸ್ತಿಯಾಯಿತು. ಅಪ್ಪನಿಗೆ 78, ಅಮ್ಮನಿಗೆ 66, ಹಿರಿ ಮಗನಿಗೆ 12, ಕಿರಿಯವನಿಗೆ 7. ಎಲ್ಲರಿಗೂ ಪರೀಕ್ಷೆ ಮಾಡಿಸುವ ನಿರ್ಧಾರಕ್ಕೆ ಬಂದೆ. ಪತ್ನಿಗೆ ಪಾಸಿಟಿವ್ ಬಂತು. ಇತರೆಲ್ಲರಿಗೆ ನೆಗೆಟಿವ್ ಬಂತು.
ಏಕ್ ಕಮರೇ ಮೇ ಬಂದ್ ಹೋ...
ಗೃಹ ಏಕಾಂತ ಕೋಣೆಗೆ ಪತ್ನಿಯೂ ಸೇರಿಕೊಂಡಳು. ಒಂದು ಇಂಡಕ್ಷನ್ ಸ್ಟವ್, ಪಾತ್ರೆ, ತಟ್ಟೆ-ಲೋಟ, ಬಟ್ಟೆಬರೆ ಮತ್ತಿತರೆ ಅತೀ ಅಗತ್ಯದ ವಸ್ತುಗಳನ್ನು ಇಟ್ಟುಕೊಂಡು ಪುಟ್ಟಕೋಣೆಯಲ್ಲಿ ಸೋಂಕಿತರ ಸಂಸಾರ ಆರಂಭವಾಯಿತು. ತಟ್ಟೆಹೊರಗಿಟ್ಟರೆ ಅಮ್ಮ ಅದರಲ್ಲಿ ಊಟ-ತಿಂಡಿ ನೀಡುತ್ತಿದ್ದರು. ಮಾತುಕತೆ ಎಲ್ಲಾ ಫೋನ್ ಮೂಲಕ. ಬದುಕಿನಲ್ಲಿ ಇದಕ್ಕಿಂತ ಸಂಕಷ್ಟದ ದಿನಗಳನ್ನು ಕಳೆದ ಅನುಭವ ಇದ್ದ ಕಾರಣ ಇಬ್ಬರಿಗೂ ಅಷ್ಟುಕಷ್ಟಎನಿಸಲಿಲ್ಲ. ತೀರಾ ಕಷ್ಟಆದದ್ದು ಒಂದೇ ಕಡೆ ಇರುವ ಶಿಕ್ಷೆಯೊಂದೇ.
ಮೂರು ದಶಕಗಳಷ್ಟು ಹಳೆಯ ಧಾರಾವಾಹಿ ಅಗ್ರಸ್ಥಾನ ಅಲಂಕರಿಸಿದ್ದು ಹೇಗೆ?
ಗೃಹ ಏಕಾಂತದಲ್ಲಿ ಇರುವವರಿಗೆ ಸಾಮಾನ್ಯವಾಗಿ ನಾಲ್ಕು ಅಲೋಪಥಿಕ್ ಔಷಧಗಳನ್ನು ಕೊಡುತ್ತಾರೆ. ಜೊತೆಗೆ ಇನ್ನೆರಡು. ದಿನಕ್ಕೆ ಕನಿಷ್ಠ ಮೂರು ಸಲ ಬಿಸಿನೀರ ಆವಿ ಸೇವಿಸಬೇಕು, ಬಿಸಿ ನೀರು ಕುಡಿಯಬೇಕು, ಉಪ್ಪು ನೀರಲ್ಲಿ ಗೊಳಗೊಳ ಮಾಡಬೇಕು ಎಂದು ಸೂಚಿಸಿದ್ದರು. ಆರೋಗ್ಯವೇನಾದರೂ ವ್ಯತ್ಯಾಸ ಆದರೆ ತಕ್ಷಣ ತಿಳಿಸಿ ಅಂದಿದ್ದರು. ಬಹಳ ಖಾರ ತಿನ್ನಬೇಡಿ, ಹೆಚ್ಚು ಎಣ್ಣೆ ಬಳಸಿದ ಪದಾರ್ಥ ಸೇವಿಸಬೇಡಿ ಎಂದೂ ವೈದ್ಯರು ಹೇಳಿದ್ದರು. ಇವೆಲ್ಲವನ್ನೂ ಚಾಚೂ ತಪ್ಪದೆ ಪಾಲಿಸುತ್ತಿದ್ದೆವು.
ಸರ್ಕಾರದಿಂದಲೇ ಉಚಿತ ಆರೋಗ್ಯ ಕಿಟ್
ಸೋಂಕಿತರಾಗಿ ಮನೆಯಲ್ಲೇ ವಿರಾಮ ಪಡೆಯುವವರಿಗೆ ಸರ್ಕಾರ ಉಚಿತ ವೈದ್ಯಕೀಯ ಕಿಟ್ ಒದಗಿಸುತ್ತದೆ. ಅದರಲ್ಲಿ, ಔಷಧ ಮತ್ತಿತರೆ ವಸ್ತುಗಳ ಜೊತೆ ಬಹುಮುಖ್ಯವಾಗಿ ಪಲ್ಸ್ ಆಕ್ಸಿಮೀಟರ್ ಹಾಗೂ ಡಿಜಿಟಲ್ ಥರ್ಮಾಮೀಟರ್ ಎಂಬ ಉಪಕರಣಗಳನ್ನು ನೀಡಿರುತ್ತಾರೆ. ಸೋಂಕು ತೊಲಗುವವರೆಗೆ ಇವುಗಳನ್ನು ನಿಯಮಿತವಾಗಿ ಬಳಸಿ ದೇಹದ ಆಮ್ಲಜನಕ ಅಂಶ, ನಾಡಿಮಿಡಿತ, ಉಷ್ಣಾಂಶಗಳನ್ನು ಪರಿಶೀಲಿಸುತ್ತಿರಬೇಕು. ನಿತ್ಯ ಸರ್ಕಾರದ ವತಿಯಿಂದ ಕರೆ ಮಾಡುವವರಿಗೆ ಇದರ ಮಾಹಿತಿ ನೀಡುತ್ತಿರಬೇಕು. ಆಮ್ಲಜನಕ ಸ್ಥಿರತೆ ಅತ್ಯಂತ ಮುಖ್ಯ ಎನ್ನುತ್ತಾರೆ ತಜ್ಞರೆಲ್ಲರೂ. ಈ ಕಿಟ್‌ನಲ್ಲಿ ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್, ಸೋಪ್‌ನಂತಹ ವಸ್ತುಗಳಿದ್ದವು.
ಅಂತೂ ಮುಗಿಯಿತು ವನವಾಸ
ಜೈಲು ಶಿಕ್ಷೆ ಹೇಗಿರಬಹುದೆಂಬ ಪ್ರತ್ಯಕ್ಷ ಅನುಭವ ಈ ಅವಧಿಯಲ್ಲಾಯಿತು. ಓಡಾಡಲು ಜಾಗವಿಲ್ಲ. ಗಂಟೆಗಟ್ಟಲೆ ಕೂತು, ಮಲಗಿ ಅಭ್ಯಾಸವಿಲ್ಲ. ವರ್ಕ್ ಫ್ರಂ ಹೋಮ್ ಪ್ರಯುಕ್ತ ಕಚೇರಿ ಕೆಲಸ ಮಾಡುತ್ತಿದ್ದಷ್ಟುಹೊತ್ತು ಹೇಗೋ ಸಾಗುತ್ತಿತ್ತು. ಆಕೆಯೂ ಗಾಯಕಿಯಾದ ಕಾರಣ ಒಂದಷ್ಟುಆನ್‌ಲೈನ್ ಕ್ಲಾಸ್‌ಗಳನ್ನು ಮಾಡುತ್ತಿದ್ದಳು. ಅವೆಲ್ಲ ನಾಲ್ಕೈದು ಗಂಟೆಗಳ ಬಾಬತ್ತು. ಉಳಿದ 19-20 ಗಂಟೆ ಕಳೆಯುವುದು ಮಾತ್ರ ಶಿಕ್ಷೆಯಂತಿತ್ತು. ಎಷ್ಟೂಂತ ಮೊಬೈಲ್? ಎಷ್ಟೂಂತ ಮಾತು? ಎಷ್ಟೂಂತ ನಿದ್ದೆ?
ಹಾಗೂ ಹೀಗೂ ನಾನು 10 ದಿನ ಪೂರೈಸಿದೆ. ಅಷ್ಟರಲ್ಲಿ ಕರೆ ಬಂತು. ಒಬ್ಬರು ನಿಮಗೆ ಯಾವುದೇ ಲಕ್ಷಣಗಳಿಲ್ಲದಿದ್ದರೆ ನೀವು ಗುಣಮುಖರಾಗಿದ್ದೀರಿ ಅಂತರ್ಥ ಎಂದರು. ಮತ್ತೊಬ್ಬರು 14 ದಿನ ಕ್ವಾರಂಟೈನ್‌ನಲ್ಲಿ ಇದ್ದು, 17ನೇ ದಿನದ ನಂತರ ಓಡಾಡಬಹುದು ಎಂದರು. ಮಗದೊಬ್ಬರು 14 ದಿನದ ನಂತರ ನೆಗೆಟಿವ್ ಬಂದರೆ 7 ದಿನ ಮನೆಯಲ್ಲೇ ಇದ್ದು ನಂತರ ಓಡಾಡಬಹುದು ಎಂದರು. ಪಾಸಿಟಿವ್ ಬಂದಾಗ ಎಷ್ಟುಗೊಂದಲಗಳು ಉಂಟಾದವೋ, ಅದಕ್ಕಿಂತ ಹೆಚ್ಚು ಗೊಂದಲ ಗೃಹಬಂಧನದಿಂದ ಬಿಡುಗಡೆಗೆ ಆಯಿತು. ಕಡೆಗೆ, ತಜ್ಞ ವೈದ್ಯರೊಬ್ಬರ ಅಭಿಪ್ರಾಯ ಪಡೆದು, ಪರೀಕ್ಷೆ ಮಾಡಿಸಿದೆವು. ನೆಗೆಟಿವ್ ಬಂತು. ಕೊರೋನಾ ವಿರುದ್ಧದ ಹೋರಾಟ ಗೆದ್ದಂತಾಯಿತು. ನಾವಿದ್ದ ಕೋಣೆ, ಬಳಸಿದ ವಸ್ತು, ಬಟ್ಟೆಬರೆಗಳನ್ನೆಲ್ಲ ವೈಜ್ಞಾನಿಕ ವಿಧಿವಿಧಾನದ ಅನ್ವಯ ಸ್ವಚ್ಛಗೊಳಿಸಿ ಎಂದಿನ ದಿನಚರಿಗೆ ಮರಳಿದ್ದಾಯಿತು.
ಇನ್ನು ಒಂದು-ಒಂದೂವರೆ ತಿಂಗಳ ಕಾಲ ದೇಹದಲ್ಲಿ ಕೊರೋನಾ-ನಿರೋಧಕ ಪ್ರತಿಕಾಯಗಳಿರುತ್ತವಂತೆ. ಅಷ್ಟರಲ್ಲಿ ಯಾರಿಗಾದರೂ ಪ್ಲಾಸ್ಮಾ ನೀಡಿ ನೆರವಾಗಲು ಸಾಧ್ಯವಾ ನೋಡಬೇಕು.
ಒಂದು ವಿಶೇಷ ಕೊರೋನಾ ಹಾಡು . ಇದಕ್ಕೊಂದು ಚಪ್ಪಾಳೆ ಹೊಡಿಲೇಬೇಕು