Zika Virus In Karnataka: ರೋಗಲಕ್ಷಣಗಳೇನು, ಆರೋಗ್ಯದ ಕಾಳಜಿ ವಹಿಸೋದು ಹೇಗೆ ?

By Vinutha PerlaFirst Published Dec 13, 2022, 10:10 AM IST
Highlights

ಕರ್ನಾಟಕದಲ್ಲಿ ಮೊತ್ತ ಮೊದಲ ಬಾರಿಗೆ ಝಿಕಾ ವೈರಸ್ ಪತ್ತೆಯಾಗಿದೆ. ಹೀಗಾಗಿ ಮೂವರು ಜನರು ಒಳಗೊಂಡ ಕೇಂದ್ರ ತಜ್ಞರ ತಂಡ ರಾಯಚೂರಿಗೆ ಆಗಮಿಸಿದ್ದು ಝಿಕಾ ವೈರಸ್ ಪಾಸಿಟಿವ್ ಬಂದಿದ್ದರ ಬಗ್ಗೆ ಮಾಹಿತಿಯನ್ನ ಪಡೆದುಕೊಳ್ಳಲಿದೆ. ಇಂಥಾ ಸಂದರ್ಭದಲ್ಲಿ ಝಿಕಾ ವೈರಸ್ ಎಂದರೇನು? ಅದರ ರೋಗಲಕ್ಷಣಗಳೇನು ? ತಿಳಿಯೋಣ.

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕೋಳಿ ಕ್ಯಾಂಪ್‌ನಲ್ಲಿ 5 ವರ್ಷದ ಮಗುವಿನಲ್ಲಿ ಝಿಕಾ ವೈರಸ್ ಪತ್ತೆಯಾಗಿದೆ. ಹೀಗಾಗಿ ತುರ್ತಾಗಿ ಆರೋಗ್ಯ ಇಲಾಖೆ (Health Department) ಸಚಿವ ಡಾ.ಕೆ. ಸುಧಾಕರ್‌ ಎಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಮಕ್ಕಳು ಮತ್ತು ವೃದ್ಧರ ಆರೋಗ್ಯದ (Health) ಬಗ್ಗೆ ಮಾರ್ಗಸೂಚಿ (Guidelines)ಯನ್ನು ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ. ಝಿಕಾ ವೈರಸ್‌ನ ದೃಢಪಡಿಸಿದ ಪ್ರಕರಣದ ಕುರಿತು ನಾವು ಪುಣೆಯಿಂದ ಲ್ಯಾಬ್ ವರದಿಯನ್ನು ಪಡೆದುಕೊಂಡಿದ್ದೇವೆ. ಡಿಸೆಂಬರ್ 5 ರಂದು, ಅದನ್ನು ಸಂಸ್ಕರಿಸಿ ಡಿಸೆಂಬರ್ 8ರಂದು ವರದಿ ಮಾಡಲಾಗಿದೆ. ಮೂರು ಮಾದರಿಗಳನ್ನು ಕಳುಹಿಸಲಾಗಿದೆ ಅದರಲ್ಲಿ ಎರಡು ನೆಗೆಟಿವ್ ಮತ್ತು ಒಂದು ಪಾಸಿಟಿವ್ ಆಗಿತ್ತು. ಪಾಸಿಟಿವ್‌ ಬಂದಿರೋದು ಒಂದು ವರ್ಷದ ಬಾಲಕಿ (Girl). ಆಕೆಯ ಕುರಿತು ನಾವು ನಿಗಾ ಇರಿಸಿದ್ದೇವೆ' ಎಂದು ಸುಧಾಕರ್ ರಾಯಚೂರಿನಲ್ಲಿ ತಿಳಿಸಿದ್ದಾರೆ

ಕರ್ನಾಟಕದಲ್ಲಿ ಝಿಕಾ ವೈರಸ್
ಕೇಂದ್ರದ ತಜ್ಞರ ತಂಡ ಇಂದು ರಾಯಚೂರಿಗೆ ಆಗಮಿಸಿದೆ. ಮೂವರು ಜನರು ಒಳಗೊಂಡ ಕೇಂದ್ರ ತಜ್ಞರ ತಂಡ ರಾಯಚೂರಿಗೆ ಆಗಮಿಸಿದ್ದು ಝಿಕಾ ವೈರಸ್ ಪಾಸಿಟಿವ್ ಬಂದಿದ್ದರ ಬಗ್ಗೆ ಮಾಹಿತಿಯನ್ನ ಪಡೆದುಕೊಳ್ಳಲಿದೆ.  ಇಬ್ಬರು ಬೆಂಗಳೂರಿನಿಂದ, ಒಬ್ಬರು ಕೇರಳದಿಂದ ತಜ್ಞರು ರಾಯಚೂರಿಗೆ ಆಗಮಿಸಿದ್ದಾರೆ. ಇಂದು ಡಿಎಚ್‌ಒ ಕಚೇರಿಯಲ್ಲಿ ವೈದ್ಯರ ಜೊತೆಗೆ ಕೇಂದ್ರ ತಂಡ ಸಭೆ ನಡೆಸಲಿದೆ. 'ಕರ್ನಾಟಕದಲ್ಲಿ ಇದು ಮೊದಲ ದೃಢಪಡಿಸಿದ ಪ್ರಕರಣವಾಗಿದೆ. ಸೀರಮ್ ಅನ್ನು ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾ ಪರೀಕ್ಷೆಗೆ ಒಳಪಡಿಸಿದಾಗ ಇದು ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ, ಅಂತಹ 10 ಪ್ರತಿಶತ ಮಾದರಿಗಳನ್ನು ಪರೀಕ್ಷೆಗೆ ಪುಣೆಗೆ ಕಳುಹಿಸಲಾಗುತ್ತದೆ, ಅದರಲ್ಲಿ ಇದು ಪಾಸಿಟಿವ್ ಎಂದು ಕಂಡುಬಂದಿದೆ 'ಎಂದು ಸಚಿವರು ಹೇಳಿದರು. ಕೆಲವು ತಿಂಗಳ ಹಿಂದೆ ಕೇರಳ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ಝಿಕಾ ವೈರಸ್ ಪ್ರಕರಣಗಳು ಕಂಡುಬಂದಿವೆ. 

Raichur : 5 ವರ್ಷದ ಮಗುವಿಗೆ ಝಿಕಾ ವೈರಸ್‌ ಪತ್ತೆ: ಮಕ್ಕಳ ಆರೋಗ್ಯ ಮಾರ್ಗಸೂಚಿ ರಚನೆ

ಝಿಕಾ ವೈರಸ್ ಎಂದರೇನು?
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಝಿಕಾ ವೈರಸ್ ಈಡಿಸ್ ಸೊಳ್ಳೆಗಳ ಮೂಲಕ ಹರಡುತ್ತದೆ. ಈ ಸೊಳ್ಳೆಗಳು ಡೆಂಗ್ಯೂ, ಚಿಕೂನ್‌ಗುನ್ಯಾ ಮತ್ತು ಯೆಲ್ಲೋ ಫೀವರ್‌ನ್ನು ಸಹ ಹರಡುತ್ತವೆ. ಝಿಕಾ ವೈರಸ್‌ನ್ನು ರಕ್ತ ಪರೀಕ್ಷೆ ಅಥವಾ ಇತರ ದೇಹದ ದ್ರವಗಳನ್ನು ಒಳಗೊಂಡ ಪರೀಕ್ಷೆಗಳ ಮೂಲಕ ರೋಗನಿರ್ಣಯ ಮಾಡಲಾಗುತ್ತದೆ. ಝಿಕಾ ವೈರಸ್‌ಗೆ ಇನ್ನೂ ನಿರ್ದಿಷ್ಟ ಚಿಕಿತ್ಸೆ ಅಥವಾ ಲಸಿಕೆ ಲಭ್ಯವಿಲ್ಲ.

ಝಿಕಾ ವೈರಸ್‌ನ ಲಕ್ಷಣಗಳೇನು ?
WHO ಪ್ರಕಾರ, ದದ್ದುಗಳು, ಜ್ವರ, ಕಾಂಜಂಕ್ಟಿವಿಟಿಸ್, ಸ್ನಾಯು ಮತ್ತು ಕೀಲು ನೋವು, ಅಸ್ವಸ್ಥತೆ ಮತ್ತು ತಲೆನೋವು ರೋಗದ ಸಾಮಾನ್ಯ ಲಕ್ಷಣಗಳಾಗಿವೆ. ಹೀಗಿದ್ದೂ, ಝೀಕಾ ವೈರಸ್ ಹೊಂದಿರುವ ಹೆಚ್ಚಿನ ಜನರು ರೋಗಲಕ್ಷಣಗಳನ್ನು ಅಭಿವೃದ್ಧಿಪಡಿಸುವುದಿಲ್ಲ. ರೋಗಲಕ್ಷಣಗಳು ಸಾಮಾನ್ಯವಾಗಿ 2-7 ದಿನಗಳ ವರೆಗೆ ಇರುತ್ತದೆ.

ಈ ಚಳಿ ಬಂದ್ರೆ ಸಾಕು, ಅಲ್ಲಿ, ಇಲ್ಲಿ ನೋವು! ಹೀಗ್ಯಾಕೆ?

ಝಿಕಾ ವೈರಸ್‌ ಬಗ್ಗೆ ಎಚ್ಚರಿಕೆ ವಹಿಸುವುದು ಹೇಗೆ ?
ಮನೆಯಿಂದ ಹೊರ ಹೋಗುವಾಗ ಯಾವಾಗಲೂ ಮಾಸ್ಕ್ ಧರಿಸಿ. ಸೋಂಕು ಸುಲಭವಾಗಿ ತಗುಲದಂತಿರಲು ಕೈಗಳನ್ನು ಆಗಾಗ ಸ್ಯಾನಿಟೈಸ್ ಮಾಡುತ್ತಿರಿ. ಸೋಪನ್ನು ನಿಯಮಿತವಾಗಿ ಬಳಸುತ್ತಿರಿ. ಮನೆಯಲ್ಲಿ ನೆನೆದು ಮನೆಗೆ ಬಂದ ಕೂಡಲೇ ಬಿಸಿ ನೀರಿನಲ್ಲಿ ಸ್ನಾನ ಮಾಡಿ. ಶೀತ, ನೆಗಡಿ, ಜ್ವರ ಕಾಣಿಸಿಕೊಂಡರೆ ತಕ್ಷಣಕ್ಕೆ ಮನೆಮದ್ದು ಟ್ರೈ ಮಾಡಬೇಡಿ. ಬದಲಿಗೆ ತಜ್ಞರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಿರಿ.

ಝಿಕಾ ವೈರಸ್ ತಡೆಗಟ್ಟಲು ಸೊಳ್ಳೆ ಕಡಿತವನ್ನು ತಪ್ಪಿಸಿ. ಇದಕ್ಕಾಗಿ ದೇಹದ ಗರಿಷ್ಠ ಭಾಗವನ್ನು ಮುಚ್ಚಿ. ಬಯಲಿನಲ್ಲಿ ಮಲಗಿದರೆ ಸೊಳ್ಳೆ ಪರದೆ ಬಳಸಿ. ಮನೆ ಮತ್ತು ನಿಮ್ಮ ಸುತ್ತಮುತ್ತ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಿ. ಸೊಳ್ಳೆಗಳು ಬೆಳೆಯದಂತೆ ತಡೆಯಲು ನಿಂತ ನೀರನ್ನು ಸಂಗ್ರಹಿಸಲು ಬಿಡಬೇಡಿ. ಅಲ್ಲದೆ ಜ್ವರ, ಗಂಟಲು ನೋವು, ಕೀಲು ನೋವು, ಚರ್ಮ ಕೆಂಪಗಾಗಿಸುವಿಕೆಯಂತಹ ರೋಗ ಲಕ್ಷಣಗಳನ್ನು ಗಮನಿಸಿದರೆ, ತಕ್ಷಣವೇ ವೈದ್ಯರನ್ನು ಭೇಟಿಮಾಡಿ. ಸಾಕಷ್ಟು ವಿಶ್ರಾಂತಿಯೊಂದಿಗೆ ಸಾಧ್ಯವಾದಷ್ಟು ದ್ರವಾಹಾರ ಸೇವಿಸಿ.   

click me!