
ಮಕ್ಕಳಿಗೆ ಸಾಮಾನ್ಯವಾಗಿ ಬಹುಬೇಗ ಶೀತ, ನೆಗಡಿ, ಕೆಮ್ಮು ಆಗುತ್ತಿರುತ್ತದೆ. ತಿಂಗಳಿಗೆ ಒಮ್ಮೆಯಾದರೂ ವೈದ್ಯರನ್ನು ಕಾಣಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂದು ಚಿಕ್ಕ ಮಕ್ಕಳ ಪಾಲಕರು ಬೇಸರ ಪಟ್ಟುಕೊಳ್ಳುವುದನ್ನು ಕಾಣಬಹುದು. ರೋಗ ನಿರೋಧಕ ಶಕ್ತಿ ಕಡಿಮೆ ಇರುವುದು ಹಾಗೂ ಇಂದಿನ ವಾತಾವರಣ ಇದಕ್ಕೆ ಪ್ರಮುಖ ಕಾರಣ. ಹಾಗೆಯೇ, ಮಕ್ಕಳ ದೇಹ ಪ್ರಕೃತಿಯೂ ಶೀತ, ನೆಗಡಿಗೆ ಕೊಡುಗೆ ನೀಡಬಹುದು. ಪದೇ ಪದೆ ನೆಗಡಿ, ಕೆಮ್ಮು ಉಂಟಾಗುವ ಮಕ್ಕಳಿಗೆ ಮನೆಯಲ್ಲೇ ಕೆಲವು ಸರಳ ಪದಾರ್ಥಗಳನ್ನು ನೀಡಬಹುದು. ಇದರಿಂದ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವ ಜತೆಗೇ ಆಗಾಗ ಶೀತ ಉಂಟಾಗುವುದು ತಪ್ಪುತ್ತದೆ. ಇವುಗಳನ್ನು ಭಾರತೀಯರು ಅನಾದಿ ಕಾಲದಿಂದಲೂ ಬಳಕೆ ಮಾಡುತ್ತಿದ್ದಾರೆ. ಇಂದಿನ ಹೊಸ ಅಮ್ಮಂದಿರೂ ಸಹ ಇವುಗಳ ಬಳಕೆ ಅರಿತುಕೊಂಡರೆ ತಮ್ಮ ಪುಟಾಣಿ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅನುಕೂಲವಾಗುತ್ತದೆ.
• ಒಂದು ಚಮಚ ಜೇನುತುಪ್ಪ (Honey) ಹಾಗೂ ಕೆಲವು ಹನಿ ಶುಂಠಿ (Ginger) ರಸ ಮತ್ತು ತುಳಸಿ ಎಲೆಗಳ ಮೂರ್ನಾಲ್ಕು ಹನಿಯನ್ನು ಮಿಶ್ರಣ ಮಾಡಿ ದಿನವೂ ಕುಡಿಸಬೇಕು.
ಆರೋಗ್ಯಕ್ಕೆ ಯಾವುದು ಒಳ್ಳೇದಲ್ಲವೋ, ಅದ್ರಿಂದಾನೇ ಮಾಡ್ತಾರೆ ಮೊಮೋಸ್, ತಿನ್ನೋ ಮುನ್ನ ಎಚ್ಚರ!
• ದೇಸಿ ಹಸುವಿನ (Ghee) ಒಂದು ಚಮಚ ತುಪ್ಪವನ್ನು ಬಿಸಿ ಮಾಡಿ, ಅದಕ್ಕೆ 2-3 ಲವಂಗ (Cloves) ಹಾಕಬೇಕು. ಬಿಸಿ ತಣಿದ ಬಳಿಕ ನೀಡಬೇಕು. ಇದನ್ನು ದಿನವೂ ಮಲಗುವ ಮುನ್ನ ಅನುಸರಿಸಬೇಕು.
• ಕೆಲವು ಓಮ (Ajwan) ಕಾಳುಗಳನ್ನು ಫ್ರೈ ಮಾಡಿ, 3-4 ಬೆಳ್ಳುಳ್ಳಿ (Garlic) ಎಸಳುಗಳನ್ನು ಬಿಸಿ ಮಾಡಿ. ಅದನ್ನು ಸ್ವಚ್ಛವಾದ ಹತ್ತಿ ಬಟ್ಟೆಯಲ್ಲಿ ಸುತ್ತಿ ಮಗುವಿನ ಎದೆಯ ಮೇಲೆ ಇಡಿ.
• ಅರಿಶಿಣ ಒಂದು ಚಮಚ, ಜೇನು 2 ಚಮಚ ಸೇರಿಸಿ ಮಕ್ಕಳಿಗೆ ಮಲಗುವ ಮುನ್ನ ನೀಡಬೇಕು.
• ಜೇನುತುಪ್ಪ 1 ಚಮಚ, ಲಿಂಬೆ ರಸ 1 ಚಮಚವನ್ನು ಸ್ವಲ್ಪ ಬಿಸಿಯಾಗಿಸಿ ಮಕ್ಕಳಿಗೆ ನೀಡಬೇಕು. ಜೇನನ್ನು ಬಿಸಿ ಮಾಡಬಾರದು.
• 1 ಚಮಚ ದೇಸಿ ಹಸುವಿನ ತುಪ್ಪ ಬಿಸಿ ಮಾಡಿ, ಅದಕ್ಕೆ ಕಡಲೆ ಹಿಟ್ಟನ್ನು 2-3 ಚಮಚ ಸೇರಿಸಿ, ಹುರಿಯಿರಿ. ಇದಕ್ಕೆ ಒಂದು ಕಪ್ ನೀರು ಹಾಕಿ ಚಿಟಿಕೆ ಅರಿಶಿಣ, ಕಾಳುಮೆಣಸಿನ (Pepper) ಪುಡಿ, ಏಲಕ್ಕಿ, ಬೆಲ್ಲ ಸೇರಿಸಿ. ಅದನ್ನು ಉಂಡೆಯಾಗಿಸಿ ದಿನವೂ ಮಲಗುವ ಮುನ್ನ ನೀಡಿ.
• ಒಂದೆರಡು ಹನಿ ಶುಂಠಿ ರಸವನ್ನು ದಿನವೂ ರಾತ್ರಿ ನೀಡಿ.
ಬಿಪಿ ಲೋ ಆಯ್ತು ಅಂತ ಟೆನ್ಶನ್ ಮಾಡ್ಕೋಬೇಡಿ, ಈ ಆಹಾರ ತಿಂದ್ರೆ ಥಟ್ಟಂತ ಹುಷಾರಾಗ್ತೀರಿ
• ತೀವ್ರ ಕೆಮ್ಮು (Cough) ಇರುವಾಗ ಜೇನುತುಪ್ಪ ಮತ್ತು ಪೈನಾಪಲ್ ಸೇರಿಸಿ ನೀಡಿದರೆ ಸಹಕಾರಿಯಾಗುತ್ತದೆ.
• ಬಿಸಿನೀರಿನ ಆವಿ (Steam) ತೆಗೆದುಕೊಳ್ಳುವುದು ಪರಿಣಾಮಕಾರಿ. ಸಾದಾ ನೀರಿನ ಆವಿ ತೆಗೆದುಕೊಳ್ಳಬೇಕು. ಕೆಲವೊಮ್ಮೆ ತೀವ್ರವಾಗಿ ಮೂಗು ಕಟ್ಟಿದ್ದರೆ ನೀಲಗಿರಿ ತೈಲದ ಒಂದೆರಡು ಹನಿ ಸೇರಿಸಬಹುದು. ಇದರಿಂದ ಉಸಿರಾಟದ ಸಮಸ್ಯೆ ನಿವಾರಣೆಯಾಗುತ್ತದೆ.
• ಹವಾಮಾನ ಬದಲಾಗುತ್ತಿರುವ ಸಮಯದಲ್ಲಿ ಮಕ್ಕಳ ಪಾದಗಳನ್ನು ಬೆಚ್ಚಗಿರಿಸಬೇಕು. ಶೀತವಾದಾಗ ವಿಕ್ಸ್ ಹಾಕಿ ಉಜ್ಜಿ ಪಾದಗಳಿಗೆ ಸಾಕ್ಸ್ ಹಾಕಿಡಿ.
• ಸಾಸಿವೆ ಎಣ್ಣೆಗೆ 3-4 ಅರೆದ ಬೆಳ್ಳುಳ್ಳಿ, ಲವಂಗ ಹುರಿದು ಸೇರಿಸಿ. ಈ ತೈಲದಿಂದ ಎದೆ, ಬೆನ್ನು ಭಾಗಕ್ಕೆ ತಿಕ್ಕಿ ಮಲಗಿಸಿ.
• ಜೇನುತುಪ್ಪ, ದಾಲ್ಚಿನ್ನಿ (Cinnamon) ಪುಡಿ, ಕಪ್ಪು ಮೆಣಸಿನ ಪುಡಿ ಸೇರಿಸಿ ಹೊಟ್ಟೆಗೆ ನೀಡಬೇಕು.
• ಬೆಳ್ಳುಳ್ಳಿ, ಲವಂಗವನ್ನು ಆಲಿವ್ ತೈಲದಲ್ಲಿ ಹುರಿದು ಅದಕ್ಕೆ ಈರುಳ್ಳಿ ಸೇರಿಸಿ ನೀಡಿ.
• ತುಳಸಿ ಎಲೆ ರಸವನ್ನು 1 ಚಮಚ ಜೇನುತುಪ್ಪದೊಂದಿಗೆ ಬೆರೆಸಿ, ಶುಂಠಿ ರಸ ಸೇರಿಸಿ ದಿನವೂ ಬೆಳಗ್ಗೆ ಖಾಲಿ ಹೊಟ್ಟೆಗೆ ಕೊಡಬೇಕು.
• ಹಾಲಿಗೆ ದಾಲ್ಚಿನ್ನಿ ಪುಡಿ, ಏಲಕ್ಕಿ, ಲವಂಗ, ಮೆಣಸು ಪುಡಿ ಸೇರಿಸಿ ಮಲಗುವ ಮುನ್ನ ನೀಡಬೇಕು.
ಎಚ್ಚರಿಕೆ ಇರಲಿ
ಈ ಮೇಲಿನ ಪರಿಹಾರಗಳಲ್ಲಿ ಯಾವುದಾದರೂ ಒಂದನ್ನು ಮಾತ್ರವೇ ಫಾಲೋ ಮಾಡಬೇಕು. ಒಂದಕ್ಕಿಂತ ಹೆಚ್ಚಾಗಿ ಅನುಸರಿಸಿದರೆ ದೇಹ ಉಷ್ಣವಾಗಿ ಸಮಸ್ಯೆಯಾಗಬಹುದು. ಹಾಗೆಯೇ, ಸಮಸ್ಯೆ ತೀವ್ರವಾಗಿದ್ದಾಗ ವೈದ್ಯರನ್ನು ಭೇಟಿಯಾಗುವುದು ಸಹ ಅಗತ್ಯ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.