ಖ್ಯಾತ ಮನೋವೈದ್ಯ ಡಾ.ಸಿ.ಆರ್ ಚಂದ್ರಶೇಖರ್ 30 ಮಂದಿ ಆಪ್ತ ಸಮಾಲೋಚಕರ ತಂಡ ಕಟ್ಟಿದವರು. ಈವರೆಗೆ 30 ಸಾವಿರಕ್ಕೂ ಹೆಚ್ಚು ಮಮದಿಗೆ ಆಪ್ತ ಸಮಾಲೋಚನೆ ನೀಡಿದ್ದಾರೆ. ನೊಂದ, ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಆಸರೆಯಾಗುತ್ತಿದ್ದಾರೆ ಜೊತೆಗೆ ಸಾವಿರಾರು ಆಪ್ತ ಸಮಾಲೋಚಕರನ್ನೂ ಸೃಷ್ಟಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ವಿಶ್ವದ ಪ್ರತಿ 8 ಮಂದಿಯಲ್ಲಿ ಒಬ್ಬರು ಮಾನಸಿಕ ಸಮಸ್ಯೆ ಹೊಂದಿದ್ದಾರೆ. 2019ರ ವೇಳೆಗೆ 97 ಕೋಟಿ ಮಂದಿ ವಿವಿಧ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. 2020ರ ಕೋವಿಡ್ ದುರಂತದ ಬಳಿಕ ಇದು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಕೊರೋನಾ ಬಳಿಕ ಮಾನಸಿಕ ಅನಾರೋಗ್ಯದ ಪ್ರಮಾಣ ಶೇ.26 ರಿಂದ ಶೇ.28ರಷ್ಟು ಹೆಚ್ಚಾಗಿದೆ. ರಾಜ್ಯದಲ್ಲೂ ಸ್ಥಿತಿ ಬೇರೆಯಿಲ್ಲ. ಒತ್ತಡದ ಜೀವನ, ಚಿಂತೆ, ವೈಯಕ್ತಿಕ ಸಮಸ್ಯೆ, ಆರ್ಥಿಕ ಸಮಸ್ಯೆ ಮತ್ತಿತರ ಕಾರಣಗಳು ಲಕ್ಷಾಂತರ ಮಂದಿಯ ಮಾನಸಿಕ ನೆಮ್ಮದಿ ಕಸಿದುಕೊಳ್ಳುತ್ತಿವೆ. ನಗರ ಪ್ರದೇಶದ ಜತೆಗೆ ಗ್ರಾಮೀಣ ಬದುಕೂ ಒತ್ತಡದ ಜೀವನದತ್ತ ಸಾಗಿ ಮಾನಸಿಕ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇದೆಷ್ಟು ಗಂಭೀರ ಎಂದರೆ ಗ್ರಾಮೀಣ ಪ್ರದೇಶದಲ್ಲಿ ಮಾನಸಿಕ ಸಮಸ್ಯೆ ಇರುವವರನ್ನು ಹುಚ್ಚರ ಪಟ್ಟಿಗೆ ಸೇರಿಸಿಬಿಡುತ್ತಾರೆ.
undefined
ದೀರ್ಘಕಾಲ ಟಿವಿ-ಟ್ಯಾಬ್ಲೆಟ್ ನೋಡುವುದೂ ಆಟಿಸಂ ಲಕ್ಷಣವೇ?
ಇಂತಹ ಗಂಭೀರ ಸಮಸ್ಯೆಗೆ ಪರಿಹಾರ ಕಲ್ಪಿಸಲು 15 ವರ್ಷ 75 ವರ್ಷ ವಯಸ್ಸಿನ ಖ್ಯಾತ ಮನೋ ವೈದ್ಯ ಡಾ.ಸಿ.ಆರ್. ಚಂದ್ರಶೇಖರ್ ಸದ್ದಿಲ್ಲದೆ ಅವಿರತವಾಗಿ ದುಡಿಯುತ್ತಿದ್ದಾರೆ. 'ಆಪ್ತ ಸಮಾಲೋಚನೆ' ಎಂಬ ಸುಲಭ ಮತ್ತು ಸರಳ ಮಾರ್ಗದ ಮೂಲಕ ಇಂತಹ ಮಾನಸಿಕ ಸಮಸ್ಯೆಗಳನ್ನು ಪರಹರಿಸುತ್ತಿದ್ದಾರೆ. ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ದಶಕಗಳ ಕಾಲ 50 ಸಾವಿರಕ್ಕೂ ಹೆಚ್ಚು ಮ೦ದಿಗೆ ಚಿಕಿತ್ಸೆ, ಆಪ್ತಸಲಹೆ ನೀಡಿದ್ದ ಅವರು ನಿವೃತರಾದ ಬಳಿಕವೂ ಅರಕೆರ ಮೈಕೋ ಬಡಾವಣೆಯ 'ಸಮಾಧಾನ ಆಪ್ತ ಸಲಹಾ ಕೇಂದ್ರ'ದ ಮೂಲಕ ಕಳೆದ ಹದಿತಾರೂವರೆ ವರ್ಷದಿಂದ ಸತತವಾಗಿ ಮಾನಸಿಕ ರೊಟ್ಟಿಗಳಿಗೆ ಉಚಿತ ಮಾನಸಿಕ ಚಿಕಿತ್ಸೆ ಹಾಗೂ ಆಪ್ತ ಸಮಾಲೋಚನೆ ನೀಡುತ್ತಿದ್ದಾರೆ. 30 ಮಂದಿ ನಿಸ್ವಾರ್ಥ ಅಪ್ತ ಸಮಾಲೋಚಕರ ತಂಡ ಕಟ್ಟಿರುವ ಅವರು ಈವರೆಗೆ 30 ಸಾವಿರಕ್ಕೂ ಹೆಚ್ಚು ಮಂದಿಗೆ ಉಚಿತವಾಗಿ ಆಪ್ತ ಸಮಾಲೋಚನೆ ನೀಡಿದ್ದಾರೆ, ನೊಂದ, ಏನತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಆಸರೆಯಾಗುತ್ತಿದ್ದಾರೆ. ಉಚಿತ ಆಪ್ತ ಸಮಾಲೋಚನ ತರಬೇತಿಯನ್ನೂ ನೀಡುತ್ತಿದ್ದಾರೆ. ಈ ರೀತಿ ಸಾವಿರಾರು ಆಪ್ತ ಸಮಾಲೋಕಕರನ್ನೂ ಸೃಷ್ಟಿಸಿದ್ದಾರೆ.
ಸಾವಿರಾರು ಮಂದಿ ಬದುಕಿನಲ್ಲಿ 'ಸಮಾಧಾನ'
ಬದುಕೇ ಬೇಡ ಎನಿಸಿಬಿಟ್ಟಿದೆ ಎಂದು ತಮ್ಮ ಆಪ್ತ ಸಲಹಾ ಕೇಂದ್ರಕ್ಕೆ ಬಂದ ಎಷ್ಟೋ ಮಂದಿಯ ಬದುಕಿನಲ್ಲಿ ನೆಮ್ಮದಿ ತರಿಸಿದ್ದಾರೆ. ಯಾವುದೇ ವಯಸ್ಸಿನವರಿಗೆ ಬರುವ ಮಾನಸಿಕ ಅಸ್ವಸ್ಥತೆಗೆ ಉಚಿತ ಚಿಕಿತ್ಸೆ, ಸಲಹೆ ನೀಡಲಾಗುತ್ತಿದೆ. ಕೇಂದ್ರ ಹತ್ತಾರು ಜಿಲ್ಲೆಗಳಲ್ಲಿ ಆಪ್ತ ಸಮಾಲೋಚನಾ ಶಿಬಿರಗಳನ್ನೂ ನಡೆಸಿದೆ. ಹಲವರು ಪುಸ್ತಕಗಳನ್ನೂ ಪ್ರಕಟಿಸಿದೆ. ಕಳೆದ ಹದಿನಾರೂವರೆ ವರ್ಷಗಳಿಂದ ನಿರಂತರವಾಗಿ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಉಚಿತ ಸೇವೆ ನೀಡುತ್ತಿದೆ.
ವಯಸ್ಸಾದಷ್ಟೂ ಹೆಚ್ಚುತ್ತಿದೆ ಸೇವಾ ಉತ್ಸಾಹ
ಮನೋವೈದ್ಯ ಸಾಹಿತ್ಯದ ಹರಿಕಾರ, ನಡೆದಾಡುವ ಮನೋಸ್ವಾಸ್ಥ್ಯ ವಿಶ್ವವಿದ್ಯಾಲಯ ಎಂದೇ ಕರೆಯಲ್ಪಡುವ ಚಂದ್ರಶೇಖರ್ ಅವರಿಗೆ ವಯಸ್ಸಾದಷ್ಟೂ ಸೇವಾ ಉತ್ಸಾಹ ಹೆಚ್ಚಾಗುತ್ತಿದೆ. ಕನ್ನಡದಲ್ಲಿ 280ಕ್ಕೂ ಹೆಚ್ಚು ಪುಸ್ತಕ ಬರೆದಿದ್ದಾರೆ. ಇಂಗ್ಲೀಷ್‌ನಲ್ಲಿ 10 ಪುಸ್ತಕ ಬರೆದಿರುವ ಅವರು 100ಕ್ಕೂ ಹೆಚ್ಚು ಕೃತಿಗಳ ಸಂಪಾದನೆ ಮಾಡಿದ್ದಾರೆ. ಇವರ ಕೃತಿಗಳು ಉರ್ದು, ತೆಲುಗು, ಗುಜರಾತಿ, ಹಿಂದಿ ಭಾಷೆಗೂ ಭಾಷಾಂತರಗೊಂಡಿವೆ. ಮಾನಸಿಕ ಚಿಕಿತ್ಸೆ ಬಗ್ಗೆ ತಪ್ಪು ಅಭಿಪ್ರಾಯ ಹೊಂದಿದ್ದ ಕಾಲಘಟ್ಟದಲ್ಲಿ 45 ವರ್ಷಗಳ ಸುದೀರ್ಘ ಅಭಿಯಾನದ ಮೂಲಕ ಅಪನಂಬಿಕೆಗಳನ್ನು ತೊಡೆದು ಹಾಕಲು ಯತ್ನಿಸಿದವರು.
ರಾಷ್ಟ್ರೀಯ ಮಾನಸಿಕ ಮತ್ತು ನರ ರೋಗಗಳ ವಿಜ್ಞಾನ ಸಂಸ್ಥೆಯಲ್ಲಿ (ನಿಮ್ಹಾನ್ಸ್) ಹಲವು ಪ್ರಮುಖ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಅವರು ಈ ಪಯಣದಲ್ಲಿ 50 ಸಾವಿರಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ ನೀಡಿದ್ದಾರೆ. ಅಲ್ಲದೆ, 40 ಸಾವಿರಕ್ಕೂ ಹೆಚ್ಚು ಜನರಿಗೆ ಪತ್ರ ಮುಖೇನ ಸಲಹೆ ನೀಡಿದ್ದಾರೆ. 30 ಸಾವಿರಕ್ಕೂ ಹೆಚ್ಚು ಉಪನ್ಯಾಸ ನೀಡಿದ್ದಾರೆ. ಅಲ್ಲದೆ ವಿವಿಧ ಪತ್ರಿಕೆಗಳಲ್ಲಿ ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಮಾನಸಿಕ ಆರೋಗ್ಯ, ಸಾಮಾನ್ಯ ಆರೋಗ್ಯ, ಲೈಂಗಿಕ ವಿಜ್ಞಾನ, ದೆವ್ವ, ಭೂತ, ಭಾನಾಮತಿಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಸಾಕಷ್ಟು ಅಧ್ಯಯನ ನಡೆಸಿದ್ದಾರೆ.ಈ ಅನುಭವವನ್ನು ಧಾರೆ ಎರೆದು ಸಾವಿರಾರು ಮ೦ದಿಯ ಜೀವನ ಹಸನಾಗಿಸಿದ್ದಾರೆ. ಭಾನಾಮತಿ, ಮೈಮೇಲೆ ದೇವರು ದೆವ್ವ ಬರುವುದೇ? ಅತೀ೦ದ್ರಿಯ ಶಕ್ತಿ ಇರುವುದು ನಿಜವೇ? ದೇವರು ದೆವ್ವ ಇರುವುದೇ? ಮೈಮೇಲೆ ಬರುವುದೇ? ಎಂಬ ಪ್ರಶ್ನೆ ಕೇಳುತ್ತಲೇ ತಮ್ಮ ಪುಸ್ತಕಗಳ ಮೂಲಕ ಉತ್ತರ ನೀಡುತ್ತಾ ಜನಸಾಮಾನ್ಯರಲ್ಲಿ ನಾಟಿಕೊಂಡಿದ್ದ ಅಪನಂಬಿಕೆಗಳನ್ನು ತೊಡೆದು ಹಾಕುವ ಕೆಲಸ ಮಾಡಿದ್ದಾರೆ.
ಅಲ್ಲದೆ ನಿಮ್ಹಾನ್ಸ್ ಸಂಸ್ಥೆಗೆ 1.09 ಕೋಟಿ ರು. ದೇಣಿಗೆ ನೀಡಿದ್ದಾರೆ. ಹಲವು ಸೇವಾ ಕಾರ್ಯಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಅವರ ಸೇವೆಗೆ ಕನ್ನಡ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಕೇಂದ್ರ ಸರ್ಕಾರದ ರಾಷ್ಟ್ರೀಯ ಪುರಸ್ಕಾರ, ಕಂಪೇಗೌಡ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮಹಾತ್ಮ ಗಾಂಧೀಜಿ ಸೇವಾ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗಳ ಗೌರವ ಸಂದಿದೆ.
ಮೂಢನಂಬಿಕೆಗಳು ಪ್ರಾಣ ತೆಗೆಯಬಹುದು:
ತನ್ನ ಆಪ್ತ ಸಲಹಾ ಕೇಂದ್ರದಲ್ಲಿ ಯಾವ್ಯಾವ ರೀತಿಯ ಮಾಮನ ಸಮಸ್ಯೆ ಗಳ ಪರಿಹಾರಕ್ಕೆ ಬರುತ್ತಾರೆ ಎಂಬ ಬಗ್ಗೆ ಖುದ್ದು ಡಾ.ಸಿ.ಆರ್. ಚಂದ್ರಶೇಖ ಅವರೇ ವಿವರಣೆ ನೀಡುತ್ತಾರೆ. 'ಮಾನಸಿಕ ಕಾಯಿಲೆಯನ್ನು ದೆವ್ವ ಭೂತ, ಗ್ರಹಚಾರ, ನಾಗದೋಷ, ಪೂರ್ವಜನ್ಮದ ಪಾಪದ ಫಲ ಹೀಗೆ ಮೂಢ ನಂಬಿಕೆಗಳನ್ನು ನಂಬುವವರು ಹೆಚ್ಚಾಗಿದ್ದಾರೆ. ವಿದ್ಯಾವಂತರು ಹೆಚ್ಚಾದರೂ ಈ ಸಮಸ್ಯೆ ಕಡಿಮೆಯಾಗಿಲ್ಲ, ದೇವರ ಮೇಲಿನ ನಂಬಿಕೆಗಳು ತಪ್ಪಲ್ಲ, ಮಾನಸಿಕ ನೆಮ್ಮದಿಗೆ ಅದು ಅಗತ್ಯವೂ ಹೌದು. ಆಶೀರ್ವಾದ ಮಾಡುವಂತೆ ಕೇಳು. ಆದರೆ ದೆವ್ವ ಭೂತ, ನಾಗದೋಷ ಇವೆಲ್ಲಾ ಸುಳ್ಳು. ನಂಬಿಕೆಗಳು ಇರಬೇಕು. ಆದರೆ ಎಷ್ಟು ನಂಬಬೇಕು ಎಂಬುದು ಮುಖ್ಯ. ಮಾನಸಿಕ ರೋಗಿಗಳಿಗೆ ಕ್ರೂರವಾಗಿ ಹಿಂಸಿಸುವ ಪರಿಪಾಠ ಇದೆ. ಇದೆಲ್ಲವೂ ಅಪರಾಧ' ಎಂದು ಹೇಳುತ್ತಾರೆ.
ಇದರಿಂದ ಆಗುವ ಅಪಾಯಗಳ ಬಗ್ಗೆಯೂ ಎಚ್ಚರಿಸುವ ಅವರು, 'ಪಿಟ್ಸ್, ಸ್ಟೋಕ್ಸ್‌ನಂತಹ ಸಮಸ್ಯೆ ಉಳ್ಳವರು ದೆವ್ವ ಭೂತ ಎಂದು ಸಮಯ ವ್ಯರ್ಥ ಮಾಡಿದರೆ ಕಾಯಿಲೆ ಉಲ್ಬಣವಾಗುತ್ತದೆ. ಇದರಿಂದ ಸಾವೂ ಸಂಭವಿಸಬಹುದು' ಎನ್ನುತ್ತಾರೆ.
ಕೌಟುಂಬಿಕ ಸಂಬಂಧಗಳು ಮರೆಯಾಗುತ್ತಿವೆ
ನಮಗೆ ಮದುವೆ ಬೇಡ ಎಂದು ಕೇಂದ್ರಕ್ಕೆ ಬರುವ ಯುವಕ-ಯುವತಿಯರು ಹೆಚ್ಚಾಗಿದ್ದಾರೆ. ಕೆಲವೊಮ್ಮೆ ಅವರೇ ಬಂದರೆ ಕೆಲವು ಪ್ರಕರಣದಲ್ಲಿ ಪೋಷಕರು ಕರೆ ತರುತ್ತಿದ್ದಾರೆ. 30-35 ವರ್ಷ ಆದರೂ ಮದುವೆ ಬೇಡ ಎನ್ನುತ್ತಾರೆ. ನಮಗೆ ಸ್ವಾತಂತ್ರ್ಯ ಬೇಕು. ಕೌಟುಂಬಿಕ ಜಂಜಾಟ ಬೇಡ ಎನ್ನುತ್ತಾರೆ.
ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಹೆಚ್ಚಾಗುತ್ತಿದೆ. ವಿವಾಹೇತರ ಸಂಬಂಧ ಹಾಗೂ ವಿವಾಹ ಪೂರ್ವ ಲೈಂಗಿಕ ಸಂಬಂಧಗಳಿಂದ ಬಂಧಿಯಾಗುತ್ತಿದ್ದಾರೆ. ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಲೈಂಗಿಕ ಶಿಸ್ತು ಇಲ್ಲದಂತಾಗಿದೆ. ಪರಸರ ಅಪನಂಬಿಕೆಗಳು ದೊಡ್ಡದಾಗುತ್ತಿವೆ. ಶೇ.90 ರಷ್ಟು ಉದ್ಯೋಗಗಳಲ್ಲಿ ಅನಿಶ್ಚಿತತೆಯಿದೆ. ಹೀಗಾಗಿ ಮದುವೆಯೇ ಬೇಡ ಎನ್ನುತ್ತಾರೆ. ಅವರಿಗೆ ಕೌಟುಂಬಿಕ ವ್ಯವಸ್ಥೆಯ ಹಿರಿಮೆ, ಸಂಬಂಧಗಳ ಅಗತ್ಯ, ಒಂಟಿ ಜೀವನದ ಸಮಸ್ಯೆಗಳನ್ನು ವಿವರಿಸಿ ತಿಳಿ ಹೇಳುವ ಕೆಲಸ ಮಾಡುತ್ತಿದ್ದೇವೆ.
ಕೊರೋನಾ ಬಳಿಕ ಆರ್ಥಿಕ ಅಭದ್ರತೆ, ಅನಿಶ್ಚಿತತೆ, ಜೀವದ ಬಗ್ಗೆಯೂ ಅನಿಶ್ಚಿತತೆಯಿಂದ ಭರವಸೆ ಕಳೆದುಕೊಂಡಿದ್ದಾರೆ. ಅಲೋಹಾಲ್ ಹಾಗೂ ಮಾದಕವಸ್ತುಗಳ ವ್ಯಸನ ಹೆಚ್ಚಾಗುತ್ತಿದೆ. ಮಾರ್ಕ್ಸ್, ಮನಿ ಹಾಗೂ ಮೆಟೀರಿಯಲ್ ಎಂಬುದೇ ಜೀವನ ಆಗಿದೆ. ಹೀಗಾಗಿ ಹೊಸ ಹೊಸ ಸಮಸ್ಯೆಗಳು ಸೃಷ್ಟಿಯಾಗಿ ಖಿನ್ನತೆ ಹೆಚ್ಚಾಗುತ್ತಿದೆ.
ಮಕ್ಕಳ ಬಗ್ಗೆ ಎಚ್ಚರ ವಹಿಸಿ
ಮಕ್ಕಳಿಗೆ ಶಿಕ್ಷಣದ ಬಗ್ಗೆ ಅತಿಯಾದ ಒತ್ತಡ ಹೇರಬೇಡಿ. ಪೋಷಕರು ಎಲ್ಲರೂ ತಮ್ಮ ಮಕ್ಕಳು ಐಎಎಸ್ ಆಗಬೇಕು ಇಲ್ಲ ಎಂಬಿಬಿಎಸ್ ಆಗಬೇಕು ಎಂಬುದನ್ನು ಬಿಡಬೇಕು. ಮಗುವಿನ ಸಾಮರ್ಥ್ಯ ಗಮನಿಸಿ ವಾಸ್ತವ ನೆಲೆಗಟ್ಟಿನಲ್ಲಿ ಗುರಿ ಮಾಡಿಕೊಳ್ಳಬೇಕು. ಪರ್ಯಾಯ ಎಂಬುದೇ ಇಲ್ಲ ಎಂದು ಮಕ್ಕಳ ಮೇಲೆ ಪೋಷಕರು ನಿರ್ಧಾರವನ್ನು ಹೇರಬಾರದುಎಂದು ಸಲಹೆ ನೀಡುತ್ತಾರೆ.
ಮೊಬೈಲ್ ಗೀಳು ಬಿಡಿಸಿ
ಅತಿಯಾದ ಸ್ಮಾರ್ಟ್ ಫೋನ್ ಬಳಕೆಯಿಂದ ಖಿನ್ನತೆ, ನಿದ್ರಾಹೀನತೆ, ಕಿರಿಕಿರಿ, ಏಕಾಗ್ರತೆ ಕೊರತೆ, ದೈಹಿಕ ಸಮಸ್ಯೆ, ಬೊಜ್ಜು, ದೃಷ್ಟಿ ಸಮಸ್ಯೆ, ನೆನಪಿನ ಶಕ್ತಿ ಕ್ಷೀಣಿಸುವುದು, ನರ ದೌರ್ಬಲ್ಯದಂತಹ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಓದಿನ ಆಸಕ್ತಿಯನ್ನೇ ಕಳೆದುಕೊಂಡು ಜೀವನ ಹಾಳಾಗಬಹುದು. ಪೋರ್ನೋಗ್ರಫಿ, ಅಪರಾಧ ಕೃತ್ಯಗಳು, ಜೂಜು ಚಟುವಟಿಕೆಯಲ್ಲಿ ತೊಡಗುವ ಮಕ್ಕಳ ಪ್ರಮಾಣ ಹೆಚ್ಚಾಗುತ್ತಿದೆ. ಪೋಷಕರು ಸಿಟ್ಟಿನ ಭರದಲ್ಲಿ ಮೊಬೈಲ್ ಕಿತ್ತುಕೊಳ್ಳುವುದು, ಬೈಯ್ಯುವುದು, ಹೊಡೆಯುವುದನ್ನ ಮಾಡಿದರೆ ಅವರ ಸ್ಥಿತಿ ಇನ್ನಷ್ಟು ವಿಷಮಕ್ಕೆ ಹೋಗಬಹುದು. ಹೀಗಾಗಿ ಮೊದಲಿಗೆ ಪೋಷಕರೇ ಮೊಬೈಲ್‌ನ್ನು ಪಕ್ಕಕ್ಕಿಟ್ಟು ಮಕ್ಕಳ ಜತೆ ಹೆಚ್ಚಾಗಿ ಬೆರೆಯಬೇಕು. ಮೊಬೈಲ್ ನೀಡಲು ಒಂದು ದಿನಚರಿ ಮಾಡಿಕೊಡಬೇಕು. ಏಕಾಏಕಿ ನಿಲ್ಲಿಸಿದರೆ ಮಕ್ಕಳು ಪೋಷಕರ ಮೇಲೆ ದಾಳಿ ಮಾಡುತ್ತಾರೆ. ಪೋಷಕರನ್ನೇ ಕೊಲೆ ಮಾಡಿರುವ ಹಾಗೂ ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣಗಳೂ ಇವೆ.
ಬೇಕಾಬಿಟ್ಟಿ ಚಿಕನ್ ತಿಂದ್ರೆ ಆರೋಗ್ಯದ ಮೇಲೆ ಬೀರೋ ಪರಿಣಾಮ ಅಷ್ಟಿಷ್ಟಲ್ಲ! ಹುಷಾರು
ಮೊಬೈಲ್ ಗೀಳು ಅಷ್ಟರ ಮಟ್ಟಿಗೆ ಅಪಾಯಕಾರಿ. ಮೊಬೈಲ್ ವಿಚಾರದಲ್ಲಿ, ಅಡಿಕ್ಷನ್ ದೃಶ್ಯಾವಳಿ ಅಥವಾ ದೃಶ್ಯಾವಳಿ, ಅಡಿಯೋಗೆ ಮಾತ್ರ ಇರುತ್ತದೆ. ಕೇವಲ ಆಡಿಯೋ ಮಾತ್ರವಾದರೆ ಅಡಿಕ್ಷನ್ ಇರುವುದಿಲ್ಲ. ಹೀಗಾಗಿ ಸಂಗೀತ ಕಲಿಕೆಯಂತಹ ಪರ್ಯಾಯ ದೈಹಿಕ, ಮಾನಸಿಕ ಚಟುವಟಿಕೆಗಳಲ್ಲಿ ತೊಡಗಿಸಿರೆ ಮೊಬೈಲ್ ಗೀಳು ಬಿಡಿಸಬಹುದು. ಪೋರ್ನೋಗ್ರಫಿ ವ್ಯಸನಕ್ಕೆ ದಾಸರಾಗಿದ್ದರೆ 24 ಗಂಟೆ ನಿಗಾ ವಹಿಸಿ ವ್ಯಸನ ಬಿಡಿಸಬೇಕು, ಅತಿಯಾಗಿದ್ದರೆ ಬಿ.ಟಿ.ಎಂ. ಲೇಔಟ್‌ನಲ್ಲಿ ನಿಮ್ಹಾನ್ಸ್ ವೆಲ್ ನೆಸ್ ಸೆಂಟರ್ ಇದೆ ಅಲ್ಲಿಗೆ ಹೋಗಿ ಚಿಕಿತ್ಸೆ ಪಡೆಯಬಹುದು ಎಂಬುದು ಡಾ.ಸಿ.ಆರ್. ಚಂದ್ರಶೇಖರ್ ಅವರ ಕಿವಿಮಾತು
ಉಚಿತ ಆಪ್ತ ಸಲಹಾ ಕೇಂದ್ರ ವಿಳಾಸ:
ಸಮಾಧಾನ ಆಪ್ತ ಸಲಹಾ ಕೇಂದ್ರ, 324, 6ನೇ ಕ್ರಾಸ್ ಅರಕೆರೆ ಮೈಕೋ ಲೇಔಟ್ ಒಂದನೇ ಹಂತ, ಬನ್ನೇರುಘಟ್ಟ ರಸ್ತೆ ಬೆಂಗಳೂರು-76,
ದೂ: 080-26482929
ಸಮಯ: ಬೆಳಗ್ಗೆ 11 - 6 ರಿಂದ 8 ಗಂಟೆ ಸಂಜೆ.(ಭಾನುವಾರ ರಜೆ)