ಪ್ರತಿಯೊಬ್ಬ ಭಾರತೀಯನು ಗುಣಮಟ್ಟದ ಜೀವನದ ಬಗ್ಗೆ ಕಾಳಜಿ ವಹಿಸುವ ನವಭಾರತವನ್ನು ನಾವು ರೂಪಿಸುತ್ತಿದ್ದೇವೆ. ದೇಶದ ಸುಧಾರಿತ ಆರೋಗ್ಯ ಸೌಲಭ್ಯಗಳ ಪ್ರಯೋಜನಗಳು ಪ್ರತಿಯೊಬ್ಬ ವ್ಯಕ್ತಿಗೂ, ಸಾಮಾಜಿಕ ವ್ಯವಸ್ಥೆಯ ಕಟ್ಟಕಡೆಯ ವ್ಯಕ್ತಿಗೂ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಮನ್ಸುಖ್ ಮಾಂಡವಿಯಾ
ಬೆಂಗಳೂರು(ಜು.01): ಸಿಕಲ್ ಸೆಲ್ ಅನೀಮಿಯಾ ರೋಗದಿಂದ ಬಳಲುತ್ತಿರುವ ವ್ಯಕ್ತಿಯು ನಿರಂತರ ನೋವು, ಆಯಾಸ ಮತ್ತು ರಕ್ತಹೀನತೆ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾನೆ. ಇದು ಅವರ ಜೀವನವನ್ನು ಹೈರಾಣಾಗಿಸುತ್ತದೆ. 2047ರೊಳಗೆ ಎರಡು ವಿಧಾನಗಳ ಮೂಲಕ ಸಿಕಲ್ ಸೆಲ್ ಅನೀಮಿಯಾ ರೋಗವನ್ನು ದೇಶದಿಂದ ಸಂಪೂರ್ಣ ನಿರ್ಮೂಲನೆ ಮಾಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ.
ಭಾರತವು ವೈವಿಧ್ಯತೆಯ ದೇಶ. ವೈವಿಧ್ಯತೆಯಲ್ಲಿ ಏಕತೆ ನಮ್ಮ ಗುರುತಾಗಿದೆ. ಈ ವೈವಿಧ್ಯತೆ ಕಾಪಾಡಿಕೊಳ್ಳಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ‘ಏಕ ಭಾರತ, ಶ್ರೇಷ್ಠ ಭಾರತ’ ಎಂಬ ಮಂತ್ರ ನೀಡಿದ್ದಾರೆ. ಪ್ರತಿಯೊಬ್ಬ ಭಾರತೀಯನು ಗುಣಮಟ್ಟದ ಜೀವನದ ಬಗ್ಗೆ ಕಾಳಜಿ ವಹಿಸುವ ನವಭಾರತವನ್ನು ನಾವು ರೂಪಿಸುತ್ತಿದ್ದೇವೆ. ದೇಶದ ಸುಧಾರಿತ ಆರೋಗ್ಯ ಸೌಲಭ್ಯಗಳ ಪ್ರಯೋಜನಗಳು ಪ್ರತಿಯೊಬ್ಬ ವ್ಯಕ್ತಿಗೂ, ಸಾಮಾಜಿಕ ವ್ಯವಸ್ಥೆಯ ಕಟ್ಟಕಡೆಯ ವ್ಯಕ್ತಿಗೂ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ.
undefined
National Doctor's Day: ಕರ್ನಾಟಕದ ಆರೋಗ್ಯ ಕ್ಷೇತ್ರ ಸುಧಾರಣೆಗೆ ಸಂಕಲ್ಪ, ಸಚಿವ ಗುಂಡೂರಾವ್
ಭಾರತದಲ್ಲಿ, ಸರಿಸುಮಾರು 706 ವಿವಿಧ ಬುಡಕಟ್ಟು ಸಮುದಾಯಗಳಿವೆ. ಇದು ಒಟ್ಟು ಜನಸಂಖ್ಯೆಯ 8.6%ರಷ್ಟಿದೆ. ನಮ್ಮ ಬುಡಕಟ್ಟು ಜನಸಂಖ್ಯೆಯು ನಮ್ಮ ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ಥಳೀಯ ಸಮುದಾಯಗಳಿಲ್ಲದೆ ಭಾರತದ ಭೂತ, ವರ್ತಮಾನ ಮತ್ತು ಭವಿಷ್ಯವು ಎಂದಿಗೂ ಪೂರ್ಣಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಭಾರತ ಸರ್ಕಾರವು ಬುಡಕಟ್ಟು ಜನರ ಆರೋಗ್ಯ ಮತ್ತು ಅಭಿವೃದ್ಧಿಯನ್ನು ರಾಷ್ಟ್ರೀಯ ಆದ್ಯತೆಯಾಗಿ ಪರಿಗಣಿಸಿದ್ದು, ಈ ಸೌಲಭ್ಯಗಳನ್ನು ಒದಗಿಸಲು ಸಂಪೂರ್ಣವಾಗಿ ಬದ್ಧವಾಗಿದೆ, ಅವರ ನೈತಿಕ ಮೌಲ್ಯಗಳು, ಸಂಪ್ರದಾಯಗಳು, ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳು ಮತ್ತು ಬುಡಕಟ್ಟು ಸಂಸ್ಥೆಗಳನ್ನು ಆದ್ಯತೆಯ ಪರಿಗಣನೆಗೆ ತೆಗೆದುಕೊಂಡಿದೆ.
ಬುಡಕಟ್ಟು ಜನರ ಆರೋಗ್ಯ ಸಮಸ್ಯೆ
ಭಾರತದ ಬುಡಕಟ್ಟು ಸಮುದಾಯದಲ್ಲಿ ಕುಡುಗೋಲು ರೂಪದ ಕೆಂಪು ರಕ್ತ ಕಣಗಳಲ್ಲಿ ಕಂಡುಬರುವ ರಕ್ತಹೀನತೆ (ಸಿಕಲ್ ಸೆಲ್ ಅನೀಮಿಯಾ) ರೋಗವು ಗಂಭೀರವಾದ ಆರೋಗ್ಯ ಸವಾಲಾಗಿದೆ. ಕುಡುಗೋಲು ರೂಪದ ಕೆಂಪು ರಕ್ತ ಕಣವು ಒಂದು ಆನುವಂಶಿಕ ಅಸ್ವಸ್ಥತೆಯಾಗಿದ್ದು, ಇದರಲ್ಲಿ ವ್ಯಕ್ತಿಯ ಕೆಂಪು ರಕ್ತ ಕಣಗಳು ವಿರೂಪಗೊಂಡು ಕುಡುಗೋಲು ತರಹದ ಆಕಾರ ಪಡೆಯುತ್ತವೆ. ಈ ರೋಗವು ಸಾಮಾನ್ಯವಾಗಿ ಬುಡಕಟ್ಟು ಸಮುದಾಯಗಳಲ್ಲಿ ಕಂಡುಬರುತ್ತದೆ. ಇದು ನಮ್ಮ ಸ್ಥಳೀಯ ಜನಸಂಖ್ಯೆಯ ಭವಿಷ್ಯ ಮತ್ತು ಅಸ್ತಿತ್ವಕ್ಕೆ ಗಮನಾರ್ಹ ಅಪಾಯವನ್ನು ಉಂಟುಮಾಡುತ್ತದೆ. ಹಾಗಾಗಿ, ಈ ರೋಗದ ಹರಡುವಿಕೆಯನ್ನು ಸಮಯೋಚಿತವಾಗಿ ತಡೆಗಟ್ಟುವುದು ಕಡ್ಡಾಯವಾಗಿದೆ. ಈ ಆನುವಂಶಿಕ ರೋಗ ತಡೆಗಟ್ಟಲು ಅಗತ್ಯವಿದ್ದ ಸಾಕಷ್ಟು ಪ್ರಯತ್ನಗಳನ್ನು ಹಿಂದಿನ ಸರ್ಕಾರಗಳು ಮಾಡಿಲ್ಲ. ಆದರೆ, ಇಟಲಿ, ಜಪಾನ್ ಇತ್ಯಾದಿ ದೇಶಗಳು ಈ ರೋಗದ ಮೇಲೆ ನಿಯಂತ್ರಣ ಸಾಧಿಸಿವೆ. ಆದಾಗ್ಯೂ, ಭಾರತ ಇನ್ನೂ ಈ ಕಾಯಿಲೆಯೊಂದಿಗೆ ಹೋರಾಡುತ್ತಿದೆ. 2023-24ರ ಆರ್ಥಿಕ ವರ್ಷದ ಕೇಂದ್ರ ಬಜೆಟ್‌ನಲ್ಲಿ ಕುಡುಗೋಲು ರೂಪದ ಕೆಂಪು ರಕ್ತ ಕಣದ ಅಸ್ವಸ್ಥತೆಯ ಈ ಸವಾಲನ್ನು ನಿರ್ಮೂಲನೆ ಮಾಡಲು ರಾಷ್ಟ್ರೀಯ ಅಭಿಯಾನ ಸಿಕಲ್ ಸೆಲ್ ಅನೀಮಿಯಾ ನಿರ್ಮೂಲನೆ ಕಾರ್ಯಕ್ರಮ 2047ವನ್ನು ಪ್ರಾರಂಭಿಸುವುದಾಗಿ ಘೋಷಿಸಿದ ಪ್ರಧಾನಿ ಮೋದಿ ಅವರಿಗೆ ನಾನು ವಿಶೇಷ ಕೃತಜ್ಞತೆ ವ್ಯಕ್ತಪಡಿಸಲು ಬಯಸುತ್ತೇನೆ.
2 ತರಹದ ಸಿಕಲ್ ಸೆಲ್ ಅನೀಮಿಯಾ
ಕುಡಗೋಲು ರೂಪದ ಕೆಂಪು ರಕ್ತ ಕಣಗಳ ಅಸ್ವಸ್ಥತೆ ರೋಗವು ಮಾನವ ದೇಹದಲ್ಲಿ 2 ರೂಪಗಳಲ್ಲಿ ಕಾಣಿಸಿಕೊಳ್ಳುತ್ತದೆ. ಒಂದು ವಿಧದ ಸಿಕಲ್ ಸೆಲ್ ಅನೀಮಿಯಾದಲ್ಲಿ ವ್ಯಕ್ತಿಯು ಯಾವುದೇ ರೋಗ ಅಥವಾ ರೋಗಲಕ್ಷಣಗಳನ್ನು ತೋರುವುದಿಲ್ಲ. ದೇಹದಲ್ಲಿ ರೋಗವಿದ್ದರೂ ಅವರು ಸಾಮಾನ್ಯ ಜೀವನ ನಡೆಸುತ್ತಿರುತ್ತಾರೆ. ಎರಡನೇ ರೂಪವು ಕುಡುಗೋಲು ರೂಪದ ಕೆಂಪು ರಕ್ತ ಕಣಗಳ ಅಸ್ವಸ್ಥತೆ ರೋಗಕ್ಕೆ ಸಂಬಂಧಿಸಿದ ರೋಗಲಕ್ಷಣಗಳ ಉಪಸ್ಥಿತಿಯಿಂದ ನಿರೂಪಿಸಲ್ಪಟ್ಟಿದೆ. ದೇಶದ 13 ರಾಜ್ಯಗಳಾದ ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ, ಪಶ್ಚಿಮ ಬಂಗಾಳ, ಒಡಿಶಾ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಈ ರೋಗ ಹೆಚ್ಚಾಗಿ ಕಾಣಿಸಿಕೊಂಡಿದೆ. ಆದಾಗ್ಯೂ, ದೇಶದ 4 ರಾಜ್ಯಗಳಾದ ಬಿಹಾರ, ಅಸ್ಸಾಂ, ಉತ್ತರಾಖಂಡ ಮತ್ತು ಉತ್ತರ ಪ್ರದೇಶಗಳಲ್ಲಿ ಕುಡುಗೋಲು ರೂಪದ ಕೆಂಪು ರಕ್ತ ಕಣಗಳ ಅಸ್ವಸ್ಥತೆಯು ಭಾಗಶಃ ಹರಡಿದೆ.
ವಿಪರೀತ ನೋವು, ಆಯಾಸ, ರಕ್ತಹೀನತೆ
ಸಿಕಲ್ ಸೆಲ್ ಅನೀಮಿಯಾ ರೋಗದಿಂದ ಬಳಲುತ್ತಿರುವ ವ್ಯಕ್ತಿಯು ನಿರಂತರ ನೋವು, ಆಯಾಸ ಮತ್ತು ರಕ್ತಹೀನತೆ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾನೆ. ಇದು ಅವರ ಜೀವನದ ಆರೋಗ್ಯ ಗುಣಮಟ್ಟದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಎರಡು ವಿಧಾನಗಳ ಮೂಲಕ ಸಿಕಲ್ ಸೆಲ್ ಅನೀಮಿಯಾ ನಿರ್ಮೂಲನೆ ಮಾಡಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಮೊದಲ ವಿಧಾನವು ರೋಗ ತಡೆಗಟ್ಟುವಿಕೆಯ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಇದು ಹೊಸ ಪ್ರಕರಣಗಳು ಕಾಣಿಸಿಕೊಳ್ಳುವುದಿಲ್ಲ ಎಂಬುದನ್ನು ಖಚಿತಪಡಿಸುತ್ತದೆ. ಆದರೆ ಎರಡನೆಯ ವಿಧಾನವು ಚಿಕಿತ್ಸೆ ನಿರ್ವಹಿಸುವುದಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಸಿಕಲ್ ಸೆಲ್ ಅನೀಮಿಯಾ ರೋಗಿಗಳಿಗೆ ಸರಿಯಾದ ಆರೋಗ್ಯ ಮತ್ತು ನಿರ್ವಹಣೆಗೆ ಪ್ರವೇಶ ಖಚಿತಪಡಿಸಿಕೊಳ್ಳಲು ಸಮಗ್ರ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
7 ಕೋಟಿ ಜನರ ಪರೀಕ್ಷೆಯ ಗುರಿ
ಸಿಕಲ್ ಸೆಲ್ ಅನೀಮಿಯಾ ರೋಗ ಲಕ್ಷಣ ಹೊಂದಿರುವ ಇಬ್ಬರು ವ್ಯಕ್ತಿಗಳು ಒಬ್ಬರನ್ನೊಬ್ಬರು ವಿವಾಹವಾದರೆ, ಅವರ ಮಗುವಿಗೆ ಸಿಕಲ್ ಸೆಲ್ ಕಾಯಿಲೆ ಬರುವ ಹೆಚ್ಚಿನ ಸಂಭವನೀಯತೆ ಇದೆ. ವಿವಾಹಕ್ಕೆ ಮೊದಲು ಸಿಕಲ್ ಸೆಲ್ ಗುಣಲಕ್ಷಣ ಇರುವ ವ್ಯಕ್ತಿಗಳನ್ನು ಪರೀಕ್ಷಿಸುವ ಮೂಲಕ ರೋಗದ ಹರಡುವಿಕೆ ತಡೆಯಬಹುದು. ಆರೋಗ್ಯ ಸಚಿವಾಲಯವು ಬುಡಕಟ್ಟು ವ್ಯವಹಾರಗಳ ಸಚಿವಾಲಯ ಮತ್ತು ರಾಜ್ಯಗಳ ಸಹಯೋಗದೊಂದಿಗೆ, ಮುಂದಿನ 2-3 ವರ್ಷಗಳೊಳಗೆ 17 ರಾಜ್ಯಗಳ ಸುಮಾರು 200 ಜಿಲ್ಲೆಗಳಲ್ಲಿ ವಾಸಿಸುವ ಬುಡಕಟ್ಟು ಮತ್ತು ಇತರ ಗುಂಪುಗಳಿಗೆ ಸೇರಿದ 0-40 ವರ್ಷ ವಯಸ್ಸಿನ ಸುಮಾರು 70 ದಶಲಕ್ಷ ವ್ಯಕ್ತಿಗಳನ್ನು ಪರೀಕ್ಷಿಸಲು ಯೋಜನೆ ರೂಪಿಸಿದೆ. 2047ರ ವೇಳೆಗೆ ಸಿಕಲ್ ಸೆಲ್ ರೋಗ ತೊಡೆದುಹಾಕುವುದು ಸರ್ಕಾರದ ಗುರಿಯಾಗಿದೆ. ತಪಾಸಣೆಯ ನಂತರ, ರೋಗಿಗಳಿಗೆ ಅವರ ಸ್ಥಳೀಯ ಭಾಷೆಯಲ್ಲಿ ಸ್ಮಾರ್ಟ್ ಕಾರ್ಡ್‌ಗಳನ್ನು ಒದಗಿಸಲಾಗುತ್ತದೆ. ತಮ್ಮ ಭವಿಷ್ಯದ ಮಕ್ಕಳು ಸಿಕಲ್ ಸೆಲ್ ಕಾಯಿಲೆಗೆ ತುತ್ತಾಗುತ್ತಾರೋ ಅಥವಾ ಇಲ್ಲವೋ ಎಂಬುದನ್ನು ಸುಲಭವಾಗಿ ನಿರ್ಧರಿಸಲು ಪತಿ, ಪತ್ನಿಗೆ ಈ ಪರೀಕ್ಷೆಯು ಅನುವು ಮಾಡಿಕೊಡುತ್ತದೆ.
ಈ ಸಂಪೂರ್ಣ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲು, ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ದೊಡ್ಡ ಪ್ರಮಾಣದಲ್ಲಿ ಜಾಗೃತಿ ತರಲು ವಿವಿಧ ಹಂತಗಳಲ್ಲಿ ಮೇಲ್ವಿಚಾರಣಾ ಕಾರ್ಯವಿಧಾನಗಳನ್ನು ಸ್ಥಾಪಿಸಲಾಗುತ್ತದೆ. ಸ್ಕ್ರೀನಿಂಗ್ ಮೂಲಕ ರೋಗಿಗಳು ನಿಯಮಿತ ಪರೀಕ್ಷೆಗೆ ಒಳಗಾಗಿ, ಚಿಕಿತ್ಸೆ ಮತ್ತು ಔಷಧಿ ಪಡೆಯುತ್ತಾರೆ. ಅವರು ಇತರ ಕಾಯಿಲೆಗಳಿಗೂ ಲಸಿಕೆಗಳನ್ನು ಸ್ವೀಕರಿಸುತ್ತಾರೆ, ಆಹಾರದ ಬೆಂಬಲ ಪಡೆಯುತ್ತಾರೆ ಮತ್ತು ಸಕಾಲಿಕ ಸಲಹಾ ಸೇವೆಗಳಿಗೆ ಪ್ರವೇಶ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಸರ್ಕಾರದಿಂದ ಪಡೆದುಕೊಳ್ಳುತ್ತಾರೆ.
ವಿಟಮಿನ್ ಡಿ, ವಯಸ್ಸಾದವರಲ್ಲಿ ಹೃದಯಾಘಾತ ತಡೆಯಬಹುದು; ಅಧ್ಯಯನದಿಂದ ಮಾಹಿತಿ
ಸರ್ಕಾರವು ಈ ಕಾರ್ಯಕ್ರಮಕ್ಕೆ ಸಾಕಷ್ಟು ಅನುದಾನ ನಿಗದಿಪಡಿಸಿದೆ. ಜೊತೆಗೆ ಸುಧಾರಿತ ತಂತ್ರಜ್ಞಾನ ಬಳಸಿಕೊಂಡಿದೆ, ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಿದೆ, ಅಗತ್ಯ ಮೂಲಸೌಕರ್ಯಗಳನ್ನು ಖಾತ್ರಿಪಡಿಸಿದೆ ಮತ್ತು ಈ ರೋಗ ಎದುರಿಸಲು ಸಾಮಾಜಿಕ ಜಾಗೃತಿ ಮತ್ತು ಭಾಗವಹಿಸುವಿಕೆಯ ಪ್ರಯತ್ನಗಳನ್ನು ಮಾಡಿದೆ. ಈ ಎಲ್ಲಾ ಪ್ರಯತ್ನಗಳು ದೃಢ ನಿಶ್ಚಯ ಮತ್ತು ನೀತಿ ನಿರ್ಧಾರಗಳ ಫಲವಾಗಿದೆ.
ಜೂ.27ಕ್ಕೆ ಹೊಸ ಮಿಷನ್ ಪ್ರಾರಂಭ
ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ದೇಶವು 2018ರಿಂದ 1.6 ಲಕ್ಷ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳ ಜಾಲ ಸ್ಥಾಪಿಸಿದೆ. ಇದು ಕೋವಿಡ್‌ನಂತಹ ಸಾಂಕ್ರಾಮಿಕ ರೋಗಗಳನ್ನು ಎದುರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಈ ಕೇಂದ್ರಗಳು ಇತರ ಕಾಯಿಲೆಗಳೊಂದಿಗೆ ಕುಡುಗೋಲು ರೂಪದ ಕೆಂಪು ರಕ್ತ ಕಣ ರೋಗ ನಿರ್ಮೂಲನೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಸಿಕಲ್ ಸೆಲ್ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ನಾವು ಈ ಕೇಂದ್ರಗಳಲ್ಲಿ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಿದ್ದೇವೆ. ಪ್ರಧಾನಿ ಮೋದಿ ಅವರು ಸಿಕಲ್ ಸೆಲ್ ಅನೀಮಿಯಾ ನಿರ್ಮೂಲನಾ ಕಾರ್ಯಕ್ರಮ (ಮಿಷನ್) ಪ್ರಾರಂಭಿಸಲಿದ್ದಾರೆ. ಈ ಉಪಕ್ರಮವು ಕುಡುಗೋಲು ರೂಪದ ಕೆಂಪು ರಕ್ತ ಕಣಗಳ ರಕ್ತಹೀನತೆ ರೋಗದ ತೊಡೆದುಹಾಕುವ ಹೋರಾಟಕ್ಕೆ ಹೆಚ್ಚಿನ ಶಕ್ತಿ ನೀಡುತ್ತದೆ. ಸಿಕಲ್ ಸೆಲ್ ರೋಗಿಗಳ ಸಂಪೂರ್ಣ ದಾಖಲೆಯನ್ನು ಪತ್ತೆಹಚ್ಚಲು ಮತ್ತು ನಿರ್ವಹಿಸಲು ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ವೆಬ್ ಪೋರ್ಟಲ್ ಸೃಜಿಸಲಾಗಿದೆ.
ಈ ಮಿಷನ್ 2047ರ ವೇಳೆಗೆ ಕುಡುಗೋಲು ರೂಪದ ಕೆಂಪು ರಕ್ತ ಕಣ ರಕ್ತಹೀನತೆಯ ನಿರ್ಮೂಲನೆಗೆ ದಾರಿ ಮಾಡಿಕೊಡುತ್ತದೆ ಎಂಬ ವಿಶ್ವಾಸ ನನಗಿದೆ. ದೇಶದ ಪರಂಪರೆಯನ್ನು ಜೀವಂತವಾಗಿಟ್ಟಿರುವ ಭಾರತದ ಬುಡಕಟ್ಟು ಜನರಿಗೆ ಈ ಮಿಷನ್ ರಕ್ಷಣೆ ನೀಡಲಿದೆ. ಜತೆಗೆ, ಈ ಜನರ ಜೀವನದ ಅಸ್ತಿತ್ವವನ್ನು ಭದ್ರಪಡಿಸಲಿದೆ.