ಪಾಸಿಟಿವ್ ವೈಬ್ಸ್ ಕ್ರಿಯೇಟ್ ಮಾಡಲು ಯೋಗ ಅತ್ಯಗತ್ಯ, ಯೋಗ ಮಾಡಿ, ಆರೋಗ್ಯ ಚನ್ನಾಗಿಟ್ಕೊಳ್ಳಿ

By Nirupama K S  |  First Published Jun 20, 2024, 2:35 PM IST

ಯೋಗ ದಿನಾಚರಣೆ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಬೆಂಗಳೂರಿನ ಆರ್ಟ್ ಆಪ್ ಲಿವಿಂಗ್ ಫೌಂಡೇಷನ್‌ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ಯೋಗ ಏಕೆ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂಬುದನ್ನು ಬರೆದಿದ್ದಾರೆ. 


- ಶ್ರೀ ರವಿಶಂಕರ್ ಗುರೂಜಿ, ಆರ್ಟ್ ಆಪ್ ಲಿವಿಂಗ್, ಬೆಂಗಳೂರು

ಯೋಗ ನಮ್ಮಲ್ಲಿ ನಾವು ರೂಢಿಸಿಕೊಳ್ಳಬೇಕಾಗಿರುವ ಶಿಸ್ತು. ಅದು ಯಾವುದೇ ರೀತಿಯ ಹೇರಿಕೆಯಲ್ಲ. ನಮ್ಮ ಮನಸ್ಸಿನ ಪ್ರವೃತ್ತಿ ಮೇಲೆ ಹತೋಟಿಯನ್ನು ಸಾಧಿಸುವುದೇ ಯೋಗ. 

Latest Videos

undefined

ಮನಸ್ಸು ಎಂದರೇನೇ ಸಂಘರ್ಷ. ಎಲ್ಲಿ ನಮ್ಮ ಮನಸ್ಸು ಇರುವುದೋ ಅಲ್ಲಿ ಸಂಘರ್ಷವೂ ಇದ್ದೇ ಇರುತ್ತದೆ. ಹೊರಗೆ ಯಾವುದೇ ರೀತಿಯ ಸಂಘರ್ಷವಿಲ್ಲದಿದ್ದರೆ, ಮನಸ್ಸು ಒಳಗಿನಿಂದ ಒಂದನ್ನು ಸೃಷ್ಟಿಸುತ್ತದೆ. ಸಂಬಂಧವೇ ಇಲ್ಲದ ವಿಷಯಗಳನ್ನು ಜೋಡಿಸಿ ನಮ್ಮನ್ನು ಯೋಚನಾ ಸುಳಿಯಲ್ಲಿ ಸಿಲುಕುವಂತೆ ಮಾಡುತ್ತದೆ. ಇದನ್ನೇ ‘ಮಾಯೆ’ಎನ್ನುವುದು. 

ಸಮಯ ಮತ್ತು ಮನಸ್ಸು ಒಂದಕ್ಕೊಂದು ಬೆಸೆದುಕೊಂಡಿದೆ. ನಾವು ಸಂತೋಷವಾಗಿರುವಾಗ, ಸಮಯ ಕಳೆಯುವುದೇ ತಿಳಿಯುವುದಿಲ್ಲ. ಅದೇ  ದುಃಖಿತರಾಗಿರುವಾಗ, ಪ್ರತಿ ಕ್ಷಣವೂ ತುಂಬಾ ದೀರ್ಘವಾಗಿಯೂ ಭಾರವಾಗಿಯೂ ಅನ್ನಿಸುತ್ತದೆ. ಒತ್ತಡವೆಂದರೆ, ಮಾಡಲು ಸಾಕಷ್ಟು ಕೆಲಸವಿದ್ದು, ಸಮಯ ಮತ್ತು ಶಕ್ತಿಯ ಅಭಾವವಿರುವುದೇ ಆಗಿದೆ. ನಾವು ಸಂಪತ್ತನ್ನು ಗಳಿಸುವಲ್ಲಿ ನಮ್ಮ ಅರ್ಧ ಆರೋಗ್ಯವನ್ನು ಕಳೆದುಕೊಳ್ಳುತ್ತೇವೆ ಮತ್ತು ಗಳಿಸಿದ ಸಂಪತ್ತಿನ ಅರ್ಧವನ್ನು,  ಅದೇ ಆರೋಗ್ಯವನ್ನು ಮರಳಿ ಪಡೆಯಲು ವ್ಯಯ ಮಾಡುತ್ತೇವೆ. ಬಿಕ್ಕಟ್ಟುಗಳಿಂದ ತುಂಬಿರುವ ಇಂದಿನ ಜಗತ್ತಿನಲ್ಲಿ, ಸಾಕಷ್ಟು ಸಕಾರಾತ್ಮಕತೆಯ ಅಗತ್ಯವಿದೆ. ಅದರಿಂದಲೇ ನಾವು ಶಕ್ತಿಯನ್ನು ಪಡೆಯಲು ಸಾಧ್ಯ. ಇದನ್ನು ಸಾಧಿಸುವುದು ಹೇಗೆ? 

ನಾಳೆಯಿಂದ ಮೋದಿ 2 ದಿನ ಕಾಶ್ಮೀರಕ್ಕೆ: ಯೋಗ ದಿನದಲ್ಲಿ ಭಾಗಿ

ಯೋಗವು ಮನುಕುಲಕ್ಕೆ ಒಂದು ವರದಾನ. ಆದರೆ ದುರದೃಷ್ಟವಶಾತ್ ಇಂದು ಯೋಗ ಎಂದರೆ ಕೇವಲ ದೇಹವನ್ನು ದಣಿಸುವ ವ್ಯಾಯಾಮವೆಂದು ಪರಿಗಣಿಸಲಾಗುತ್ತಿದೆ. ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಸಾಧನವಾಗಿ ನೋಡಲಾಗುತ್ತಿದೆ. ಯೋಗದ ಉದ್ದೇಶವೆಂದರೆ ‘ಹೇಯಂ ದುಃಖ ಮನಾಗತಂ’ ಎಂದರೆ, ದುಃಖವನ್ನು, ಅದು ಬರುವ ಮುಂಚೆಯೇ ತಡೆಯುವುದು. ಯೋಗವು ರೋಗನಿವಾರಕ. ಅದರಿಂದ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಮತ್ತು ನಮ್ಮ ಆತ್ಮೋದ್ಧಾರಕ್ಕೂ ಅದು ಸಾಧನ. ಯೋಗದಿಂದ ನಮ್ಮ ಮನಸ್ಸು ಆನಂದಮಯವಾಗಿ, ಬುದ್ಧಿಯು ಚುರುಕಾಗುತ್ತದೆ. ಆದ್ದರಿಂದಲೇ ನಾವೆಲ್ಲರೂ ಯೋಗವನ್ನು ಮಾಡಬೇಕು. ಕೆಲವೊಮ್ಮೆ ನಾವು ನಮ್ಮ ಸೋಮಾರಿತನದಿಂದ ಯೋಗವನ್ನು ಮಾಡದಿದ್ದರೆ ಮತ್ತೆ ಕೆಲವೊಮ್ಮೆನಮಗೆ ಸಾಕಷ್ಟು ಕೆಲಸವಿರುವ ನೆಪ ಹಿಡಿದು, ಯೋಗ ಮಾಡುವುದಿಲ್ಲ. ನೆನಪಿಡಬೇಕಾದ ವಿಷಯವೆಂದರೆ ಯೋಗಾಭ್ಯಾಸಕ್ಕಾಗಿ ನಾವು ಯಾವುದೇ ಸಮಯ ಮೀಸಲಿಟ್ಟರೂ ಪ್ರಯೋಜನವಿದೆ. 

ಯೋಗವೆಂದರೆ ಕೌಶಲ್ಯ
ಯೋಗ ಎಂದರೆ ಕುಶಲತೆ. ಅದು ನಮ್ಮ ಜೀವನವನ್ನು ನಡೆಸುವ ಕೌಶಲ್ಯ, ಮನಸ್ಸನ್ನು ನಿರ್ವಹಿಸುವ ಕೌಶಲ್ಯ, ಜನರೊಂದಿಗೆ ಬೆರೆಯುವ ಕೌಶಲ್ಯ, ನಮ್ಮನ್ನು ನಾವು ಅರಿತುಕೊಳ್ಳುವ ಕೌಶಲ್ಯ. ಧ್ಯಾನ ಮತ್ತು ಪ್ರಾಣಾಯಾಮವು ಇಲ್ಲದಿದ್ದರೆ, ಯೋಗವು ಕೇವಲ ವ್ಯಾಯಾಮದಂತಾಗುತ್ತದೆ. 

ಯೋಗಾಭ್ಯಾಸ ಮಾಡಿ ಯುವಕರನ್ನೇ ನಾಚಿಸಿದ 127 ವರ್ಷದ ಗುರು ಸ್ವಾಮಿ ಶಿವಾನಂದ!
 
ಯಮ, ನಿಯಮ, ಪ್ರಾಣಾಯಾಮ, ಆಸನ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಇವು ಯೋಗದ ಎಂಟು ಅಂಗಗಳು. ಈ ಎಂಟು ಅಂಗಗಳನ್ನು ನಾವು ಅಳವಡಿಸಿಕೊಂಡಾಗ, ನಮ್ಮೊಳಗೆ ಒಂದು ಮೂಲಭೂತ ರೂಪಾಂತರವನ್ನು ಅನುಭವಿಸಬಹುದು. ದೌರ್ಬಲ್ಯದಿಂದ ಶಕ್ತಿ ಕಡೆಗೆ ಮತ್ತು ದುಃಖದಿಂದ ಸಂತೋಷ ಮತ್ತು ಆರೋಗ್ಯಕರ ಜೀವನದ ಕಡೆಗೆ ಮುನ್ನಡೆಯಬಹುದು. ಇದನ್ನು ಆಚರಣೆಗೆ ತರಲು ಯಾವುದೇ ನಿರ್ದಿಷ್ಟ ಪಂಥ ಅಥವಾ ಧರ್ಮಕ್ಕೆ ಸೇರಿರಬೇಕಾದ ಅಗತ್ಯವಿಲ್ಲ.

ಸವಾಲುಗಳು ವ್ಯಕ್ತಿಯನ್ನು ಬೆಳೆಯಲು ಮತ್ತು ತನ್ನೊಳಗಿನ ಜಾಣ್ಮೆಯನ್ನು ಅನ್ವೇಷಿಸಲು ಪ್ರೇರೇಪಿಸುತ್ತದೆ. ನಮ್ಮ ಸಾಮರ್ಥ್ಯದ ಬಗ್ಗೆ ನಮಗೆ ಯಾವಾಗ ಅರಿವಿರುವುದಿಲ್ಲವೋ, ಆಗ ನಮಗೆ ಸಂಕಟ ಉಂಟಾಗುತ್ತದೆ. ಸವಾಲುಗಳು, ನಮ್ಮ ಶೌರ್ಯ, ಸಹಾನುಭೂತಿ, ಕ್ರಿಯಾಶೀಲತೆ ಮತ್ತು ಮಹತ್ತರ ಧ್ಯೇಯದ ಕುರಿತು ನಮಗಿರುವ ಬದ್ಧತೆಯನ್ನು ವ್ಯಕ್ತಪಡಿಸುವ ಒಂದು ಮಾರ್ಗ. ಆರ್ಟ್ ಆಫ್ ಲಿವಿಂಗ್ ಸಹಾಯಕಾರಿಯಾಗುವುದು ಇಲ್ಲಿಯೇ. ನಾವು ವ್ಯಕ್ತಿಯ ಆತ್ಮ ವಿಶ್ವಾಸವನ್ನು ಮತ್ತು ಅವರ ಆಂತರಿಕ ಶಕ್ತಿಯನ್ನು ಹೆಚ್ಚಿಸುವಲ್ಲಿ, ದುಃಖವನ್ನು, ಒಂಟಿತನವನ್ನು ಕಡಿಮೆ ಮಾಡುವಲ್ಲಿ ಮತ್ತು ಸಮಾಜದಲ್ಲಿ ಒಗ್ಗಟ್ಟಿನ ಭಾವನೆ ಬೆಳೆಸುವಲ್ಲಿಯೂ ಕೆಲಸ ಮಾಡುತ್ತಿದ್ದೇವೆ. ಜೀವನದಲ್ಲಿ ಹೆಚ್ಚು ದುಃಖವನ್ನು ಅನುಭವಿಸುತ್ತಿರುವಾಗಲೇ, ಅಲ್ಲಿ ಹೆಚ್ಚನ ಸಕಾರಾತ್ಮಕತೆ ಅಗತ್ಯ. ನಾವು ಎಲ್ಲೆಲ್ಲಿ ಜನರಲ್ಲಿ ನಕಾರಾತ್ಮಕತೆಯನ್ನು ಕಾಣುತ್ತೇವೂ, ಅಲ್ಲೆಲ್ಲಾ ಅವರನ್ನು ಯೋಗ ಮಾಡಲು ಪ್ರೇರೇಪಿಸಬೇಕು. ಅಷ್ಟೇ ಅಲ್ಲದೇ ಸಕಾರಾತ್ಮಕವಾಗಿರುವ ಜನರನ್ನೂ ಸಹ, ಅವರಲ್ಲಿನ ಸಕಾರಾತ್ಮತೆಯನ್ನು ಉಳಿಸಿಕೊಳ್ಳಲು ಯೋಗವನ್ನು ಅಭ್ಯಾಸ ಮಾಡುವಂತೆ ಪ್ರೇರೇಪಿಸಬೇಕು. ಸೂರ್ಯ ನಮಸ್ಕಾರ ಮಾಡುವುದರಿಂದ ರೋಗನಿ ರೋಧಕ ಶಕ್ತಿಯು ಹೆಚ್ಚುತ್ತದೆ ಮತ್ತು ಅದು ದೇಹಕ್ಕೆ ಶಕ್ತಿ ಮತ್ತು ಚೈತನ್ಯವನ್ನು ನೀಡುತ್ತದೆ. ಪದ್ಮಸಾಧನವು ದೇಹವನ್ನು ಮೃದುವಾಗಿಸುವ ಯೋಗಾಸನಗಳ ಒಂದು ಸರಣಿಯಾಗಿದೆ. ಇದನ್ನು ಮಾಡುವುದರಿಂದ ಮನಸ್ಸು ಹಗುರಾಗುತ್ತದೆ ಮತ್ತು ಆತ್ಮವು ಪ್ರಕಾಶಮಾನವಾಗುತ್ತದೆ. ಸೂಕ್ಷ್ಮ ಯೋಗ ತಂತ್ರವು ನಮ್ಮ ದೇಹದ ಹೊರಗಿನ ಹಾಗೂ ಒಳಗಿನ ಭಾಗಗಳಲ್ಲಿ ಆಳವಾದ ರೂಪಾಂತರವನ್ನು ತರುವಲ್ಲಿ ಮತ್ತು ನಮ್ಮಲ್ಲಿನ ಸೂಕ್ಷ್ಮವಾದ ಶಕ್ತಿಯ ವಾಹಿನಿಗಳನ್ನು ತೆರವುಗೊಳಿಸುವಲ್ಲಿ ಸಹಕಾರಿ.  

ಆಯುರ್ವೇದವು ಯೋಗದೊಂದಿಗೆ ಸಮೀಕರಣಗೊಳ್ಳುತ್ತದೆ. ಪ್ರಾಚೀನವಾದ ಈ ವಿಜ್ಞಾನವು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿ. ನಮ್ಮ ಪ್ರಕೃತಿಗೆ ಅನುಗುಣವಾಗಿ ಉತ್ತಮವಾದ ಸಾತ್ವಿಕ ಆಹಾರವನ್ನು ಸೇವಿಸುವುದು ಅವಶ್ಯಕ. ಹೆಚ್ಚು ತಾಮಸವಾದ ಅಥವಾ ರಾಜಸವಾದ ಆಹಾರವನ್ನು ಸೇವಿಸುತ್ತಿದ್ದರೆ, ಅದು ನಮ್ಮ ಯೋಗ ಸಾಧನೆಗೆ ಅಡ್ಡಿಯಾಗುತ್ತದೆ. ಅದರಿಂದ ಧ್ಯಾನವು ಅಷ್ಟು ಪರಿಣಾಮಕಾರಿಯಾಗಿರುವುದಿಲ್ಲ. ತಾಜಾ ಹಣ್ಣು ಮತ್ತು ತರಕಾರಿಗಳು, ಖಿಚಡಿಯಂತಹ ಸರಳವಾದ ಆಹಾರವನ್ನು, ನಮ್ಮಲ್ಲಿನ ಆಮ ಶಮನಮಾಡುವುದಕ್ಕಾಗಿ  ಆಯುರ್ವೇದವು ಶಿಫಾರಸು ಮಾಡುತ್ತದೆ.
 

ನಿತ್ಯ ಯೋಗ ಮಾಡುವವರಿಗೆ ಯಾವುದೇ ರೋಗವಿಲ್ಲ

click me!