ತಲೆಯ ಹೊಟ್ಟು ನಿವಾರಣೆ ಇಲ್ಲಿವೆ 6 ಮನೆ ಮದ್ದುಗಳು

By Sathish Kumar KH  |  First Published Nov 5, 2024, 8:11 PM IST

ನಿಮ್ಮ ತಲೆಯ ಕೂದಲಿನಲ್ಲಿ ಅತಿಯಾದ ಹೊಟ್ಟಿನಿಂದಾಗಿ ನಿಮಗೆ ಬೇಸರವಾಗಿದೆಯೇ? ವಿವಿಧ ಶಾಂಪೂಗಳನ್ನು ಬಳಸಿ ಹೊಟ್ಟು ನಿವಾರಣೆ ಆಗದೇ ಬೇಸತ್ತಿದ್ದರೆ, ಕೂಡಲೇ ಈ ಮನೆ ಮದ್ದುಗಳನ್ನು ಹಚ್ಚಿಕೊಳ್ಳಿ, ಡ್ಯಾಂಡ್ರಫ್‌ ಮುಕ್ತವಾಗಿರಿ. 


ಸಾಮಾನ್ಯವಾಗಿ ಕೆಲವರಿಗೆ ಒತ್ತಡದ ಕೆಲಸ, ಎಸಿಯಲ್ಲಿ ಕುಳಿತುಕೊಂಡು ಕೆಲಸ ಮಾಡುವುದು, ಒಬ್ಬರ ಹೆಲ್ಮೆಟ್ ಮತ್ತೊಬ್ಬರು ಬಳಸುವುದು, ಒಬ್ಬರು ಬಳಸಿದ ಬಾಚಣಿಕೆಯನ್ನು ಮತ್ತೊಬ್ಬರು ಬಳಸುವುದು, ಮನೆಯಲ್ಲಿ ಸಾಮಾನ್ಯ ತಲೆದಿಂಬುಗಳನ್ನು ಬಳಸುವುದು , ಮಾಲಿನ್ಯಕಾರಕ ಧೂಳುಯುಕ್ತ ಪ್ರದೇಶದಲ್ಲಿ ಸಂಚಾರ ಸೇರಿದಂತೆ ವಿವಿಧ ಕಾರಣಗಳಿಂದ ತಲೆಯ ಹೊಟ್ಟು ಬರುತ್ತದೆ. ಆದರೆ, ಒಮ್ಮೆ ಬಂದ ತಲೆಹೊಟ್ಟು ಸುಲಭವಾಗಿ ಹೋಗುವುದಿಲ್ಲ. ಕೆಲವರಿಗೆ ಹಲವು ತಿಂಗಳು, ಹಲವು ವರ್ಷಗಳು ಕಳೆದರೂ ತಲೆಹಿಟ್ಟು ಹೋಗದೇ ಬೇಸತ್ತಿರುತ್ತಾರೆ. ಇನ್ನು ಟಿವಿಯಲ್ಲಿ ಹಾಗೂ ಇತರೆ ಜಾಹೀರಾತುಗಳ ಮೂಲಕ ತೋರಿಸುವ ಶಾಂಪೂಗಳನ್ನು ಬಳಸಿ ಸ್ನಾನ ಮಾಡಿದಾಗ ಮಾತ್ರ ಕಣ್ಮರೆಯಾಗುವ ಹೊಟ್ಟು ಪುನಃ ಮೂರು ದಿನಕ್ಕೆ ವಾಪಸ್ ಬರುತ್ತದೆ.

ಇದರಿಂದ ತಲೆಯಲ್ಲಿ ತುರಿಕೆ, ಕೂದಲು ಉದುರುವಿಕೆ, ಸೌಂದರ್ಯ ಕಳೆಗುಂದುವುದು, ಮುಖ ಹಾಗೂ ಬೆನ್ನಿನ ಮೇಲೆ ಸಣ್ಣ ಗುಳ್ಳೆಗಳಾಗುವುದು ಸೇರಿದಂತೆ ಹಲವು ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ. ತಲೆ ಹೊಟ್ಟಿನಿಂದ ಬೇಸತ್ತು ಕೆಲವು ಪುರುಷರು ಇಡೀ ತಲೆಯನ್ನೇ ಬೋಳಿಸಿಕೊಂಡಿರುತ್ತಾರೆ. ಆದರೆ, ಮಹಿಳೆಯರು ತಮ್ಮ ಸೌಂದರ್ಯಕ್ಕೆ ಪೂರಕವಾಗಿರುವ ತಲೆ ಕೂದಲನ್ನು ತೆಗೆಯಲಾಗದೇ ಹೊಟ್ಟಿನಿಂದ ಬಳಲುತ್ತಿರುತ್ತಾರೆ. ಜೊತೆಗೆ, ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳೋಣ ಎಂದರೂ ವೈದ್ಯರ ಫೀಸು ಹಾಗೂ ದುಬಾರಿ ಬೆಲೆಯ ಶಾಂಪೂ ಬಳಸಲು ಆರ್ಥಿಕ ಪರಿಸ್ಥಿತಿಯೂ ಉತ್ತಮ ಆಗಿರುವುದಿಲ್ಲ. ಹೀಗೆ, ತಲೆ ಹೊಟ್ಟಿನಿಂದ ಬೇಸತ್ತವರಿಗೆ ಸುಲಭವಾಗಿ ಮನೆಯಲ್ಲಿರುವ ವಸ್ತುಗಳನ್ನು ಬಳಸಿ ನಿವಾರಣೆ ಮಾಡಿಕೊಳ್ಳುವ ಸಿಂಪಲ್ ಟಿಪ್ಸ್‌ಗಳು ಇಲ್ಲಿವೆ ನೋಡಿ.. 

Tap to resize

Latest Videos

undefined

ಇದನ್ನೂ ಓದಿ: ದಾಸವಾಳ ಹೂ ಹೀಗೆ ಬಳಸಿ: ಬಿಳಿ ಕೂದಲಿಗೆ ಹೇಳಿ ಟಾಟಾ ಬೈಬೈ

  1. ಒಂದು: ತೆಂಗಿನ ಎಣ್ಣೆಯಲ್ಲಿ ಹೊಟ್ಟು ನಿವಾರಕ ಗುಣಗಳಿವೆ, ಇದನ್ನು ನಿಯಮಿತವಾಗಿ ನೆತ್ತಿಗೆ ಹಚ್ಚಿ ಮಸಾಜ್ ಮಾಡುವುದರಿಂದ ಹೊಟ್ಟು ನಿವಾರಣೆಯಾಗುತ್ತದೆ. ಕೆಲವರು ತಲೆ ಸ್ನಾನ ಮಾಡುವ ಒಂದು ಗಂಟೆ ಮುಂಚೆ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡುತ್ತಾರೆ. ಇದರಿಂದ ಹೊಟ್ಟು ನಿವಾರಣೆ ಆಗುವುದಿಲ್ಲ. ಕೊಬ್ಬರಿ ಎಣ್ಣೆ ತಲೆಯ ನೆತ್ತಿಗೆ ಹಾಗೂ ಕೂದಲಿಗೆ ಹಿಡಿಯುವ ಹಾಗೆ ಎಣ್ಣೆ ಹಚ್ಚಿಕೊಂಡು ನಂತರ ಕನಿಷ್ಠ 4-5 ಗಂಟೆಯ ನಂತರ ಸ್ನಾನ ಮಾಡಬೇಕು. ಇಲ್ಲವಾದರೆ ರಾತ್ರಿ ಎಣ್ಣೆ ಹಚ್ಚಿಕೊಂಡು ಮಲಗಿ ಬೆಳಗ್ಗೆ ತಲೆ ಸ್ನಾನ ಮಾಡಬಹುದು. 
  2. ಎರಡು : ಟೀ ಟ್ರೀ ಆಯಿಲ್ ಮತ್ತು ತೆಂಗಿನ ಎಣ್ಣೆಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ನೆತ್ತಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ.  30 ನಿಮಿಷಗಳ ನಂತರ ಶಾಂಪೂ ಬಳಸಿ ತೊಳೆಯಿರಿ. ನಿಯಮಿತವಾಗಿ ಇದನ್ನು ಬಳಸುವುದರಿಂದ ಹೊಟ್ಟು ನಿವಾರಣೆ ಆಗುತ್ತದೆ.
  3. ಮೂರು : ಅಲೋವೆರಾ ಹೊಟ್ಟು ನಿವಾರಣೆಗೆ ಸಹಾಯ ಮಾಡುತ್ತದೆ. ಹೊಟ್ಟು ಇರುವವರು ನೆತ್ತಿಗೆ ಅಲೋವೆರಾ ಜೆಲ್ ಹಚ್ಚಿ ಚೆನ್ನಾಗಿ ಮಸಾಜ್ ಮಾಡ 30 ನಿಮಿಷಗಳು ಬಿಡಬೇಕು. ನಂತರ ಅತಿಯಾದ ಬಿಸಿನೀರನ್ನು ಬಳಸದೇ ಸಾಮಾನ್ಯ ಬಿಸಿನೀರಿನಲ್ಲಿ ಶಾಂಪೂ ಬಳಸಿ ತೊಳೆಯಿರಿ. 
  4. ನಾಲ್ಕು : ಮನೆಯಲ್ಲಿ ಅಡುಗೆಗೆ ಬಳಸುವ ಆರೋಗ್ಯಕ್ಕೂ ಉತ್ತಮವಾದ ಸಾಮಗ್ರಿ, ಮೆಂತ್ಯವನ್ನು ತಲೆ ಹೊಟ್ಟು ನಿವಾರಣೆಗೆ ಬಳಸಬಹುದು. ಮೆಂತೆ ಕಾಳುಗಳನ್ನು ಸಣ್ಣದಾಗಿ ಅರೆದು, ಅದಕ್ಕೆ ಮೊಟ್ಟೆಯ ಬಿಳಿ ಭಾಗ ಮತ್ತು ಒಂದು ಚಮಚ ನಿಂಬೆ ರಸವನ್ನು ಬೆರೆಸಿ ತಲೆಗೆ ಹಚ್ಚಿ. ಹದಿನೈದು ನಿಮಿಷಗಳ ನಂತರ ತೊಳೆಯಬೇಕು. 
  5. ಐದು: ಸಮಪ್ರಮಾಣದಲ್ಲಿ ಈರುಳ್ಳಿ ರಸ ಮತ್ತು ನಿಂಬೆ ರಸವನ್ನು ಬೆರೆಸಿ ತಲೆಗೆ ಹಚ್ಚುವುದರಿಂದ ಹೊಟ್ಟು ಮತ್ತು ನೆತ್ತಿಯ ತುರಿಕೆ ನಿವಾರಣೆಯಾಗುತ್ತದೆ. ಇದು ಸುಲಭ ಆಗಿದ್ದರೂ ಕೆಲವರಿಗೆ ತಲೆಯಲ್ಲಿ ಸಣ್ಣ ಪುಟ್ಟ ಗಾಯಗಳಾಗಿದ್ದರೆ ತಲೆಯಲ್ಲಿ ಉರಿ ಕೂಡ ಕಾಣಿಸುಕೊಳ್ಳುತ್ತದೆ.  ಹೀಗಾಗಿ, ತಲೆಯಲ್ಲಿ ಗಾಯಗಳಾಗಿದ್ದರೆ ಇದನ್ನು ಪ್ರಯತ್ನಿಸಬೇಡಿ.
  6. ಆರು: ಇನ್ನು ತಲೆಯಲ್ಲಿ ಅತಿಯಾದ ಹೊಟ್ಟು ನಿಯಂತ್ರಣಕ್ಕೆ ಬಾರದೇ ಸಮಸ್ಯೆ ಅನುಭವಿಸುತ್ತಿದ್ದರೆ ತಜ್ಞ ಚರ್ಮ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡು ಅವರು ಸೂಚಿಸುವ ಒಳ್ಳೆಯ ಮಾಯಿಶ್ಚರೈಸಿಂಗ್ ಶಾಂಪೂ ಬಳಸುವುದರಿಂದಲೂ ಹೊಟ್ಟು ನಿವಾರಣೆ ಮಾಡಿಕೊಳ್ಳಬಹುದು. ಈ ಆರು ಟಿಪ್ಸ್‌ಗಳನ್ನು ಬಳಸಿ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಬಹುದು.

ಇದನ್ನೂ ಓದಿ: ಮಹಿಳೆಗೆ ವಾಂತಿ ಮಾಡಿಸಿದ ಅಮೇಜಾನ್ ಪಾರ್ಸಲ್!

click me!