ಪತ್ನಿಗೆ ಜೀವನಾಂಶ ನೀಡುವುದನ್ನು ತಪ್ಪಿಸಲು ಸಿಂಗಾಪುರದಲ್ಲಿನ ತನ್ನ ಅಧಿಕ ಸಂಬಳದ ಕೆಲಸವನ್ನು ತೊರೆದ ವ್ಯಕ್ತಿಗೆ ನ್ಯಾಯಾಲಯವು ಶಾಕ್ ನೀಡಿದೆ. ಆತನ ಬೇಜವಾಬ್ದಾರಿ ನಿರ್ಧಾರವನ್ನು ಖಂಡಿಸಿದ ನ್ಯಾಯಾಲಯ, ಸುಮಾರು 4 ಕೋಟಿ ರೂಪಾಯಿಗಳಷ್ಟು ಹಿಂದಿನ ನಿರ್ವಹಣಾ ವೆಚ್ಚವನ್ನು ಪಾವತಿಸುವಂತೆ ಆದೇಶಿಸಿದೆ.
ಪತ್ನಿಗೆ ಪರಿಹಾರ ಕೊಡಬೇಕಾಗುತ್ತದೆ ಅಂತ ಕೆಲಸ ಬಿಟ್ಟ ಪತಿಗೆ ಶಾಕ್
ಕೌಟುಂಬಿಕ ಕಲಹ ಹಾಗೂ ನಂತರದ ವಿವಾಹ ವಿಚ್ಛೇದನ ಪ್ರಕರಣಗಳಲ್ಲಿ ಅನೇಕರು ಪತ್ನಿಗೆ ಜೀವನಾಂಶ ನೀಡಬೇಕಾಗುತ್ತದೆ ಎಂದು ತಮಗೆ ಕೈ ತುಂಬಾ ಸಂಬಳ ಸಿಗುವ ಕೆಲಸವನ್ನೇ ಬಿಟ್ಟು ಹೋಗುತ್ತಾರೆ. ಹಾಗೆಯೇ ಇನ್ನು ಕೆಲವರು ತಮ್ಮ ಹೆಸರಿನಲ್ಲಿದ್ದ ಆಸ್ತಿಯನ್ನೆಲ್ಲಾ ಕೋರ್ಟ್ ತೀರ್ಪು ಬರುವುದಕ್ಕೂ ಮೊದಲೇ ಅಥವಾ ಕಾನೂನು ಸಮರ ನಡೆಯುವುದಕ್ಕೂ ಮೊದಲೇ ತಮ್ಮ ಆಪ್ತರ ಹೆಸರಿಗೆ ಮಾಡಿಸಿ ಬಿಡುತ್ತಾರೆ. ಅಥವಾ ಮಾರಿ ಬಿಡುತ್ತಾರೆ. ಅದೇ ರೀತಿ ಕೆನಡಾದಲ್ಲಿ 4 ಮಕ್ಕಳ ತಂದೆಯಾಗಿದ್ದ ವಿವಾಹಿತ ಪುರುಷನೋರ್ವ ಪತ್ನಿ ಹಾಗೂ ಕುಟುಂಬಕ್ಕೆ ಜೀವನಾಂಶ ನೀಡಬೇಕಾಗುತ್ತದೆ ಎಂದು ತಾನು ಸಿಂಗಾಪುರದಲ್ಲಿ ಕೈ ತುಂಬಾ ಸಂಬಳ ಪಡೆಯುತ್ತಿದ್ದ ಕೆಲಸವನ್ನು ತೊರೆದು ಮನೆಯಲ್ಲಿ ಕುಳಿತಿದ್ದ. ಆದರೆ ಆತನಿಗೆ ಈಗ ನ್ಯಾಯಾಲಯ ಶಾಕ್ ನೀಡಿದೆ.
26
4 ಕೋಟಿ ಪರಿಹಾರ ನೀಡುವಂತೆ ಆದೇಶಿಸಿದ ನ್ಯಾಯಾಲಯ
ಸಿಂಗಾಪುರದಲ್ಲಿ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕೆನಡಾದ ವ್ಯಕ್ತಿಯೊಬ್ಬ ಕುಟುಂಬ ನಿರ್ವಹಣೆಗೆ ಹಣ ನೀಡುವುದನ್ನು ತಪ್ಪಿಸಲು ಸಿಂಗಾಪುರದಲ್ಲಿ ಹೆಚ್ಚಿನ ಸಂಬಳ ಪಡೆಯುವ ಕೆಲಸವನ್ನು ತ್ಯಜಿಸಿ ಮನೆಗೆ ಹಿಂದಿರುಗಿದ್ದ. ಆದರೆ ಈಗ ನ್ಯಾಯಾಲಯವು ಸುಮಾರು 4 ಕೋಟಿ ರೂ. ಹಳೆಯ ನಿರ್ವಹಣಾ ವೆಚ್ಚವನ್ನು ಪಾವತಿಸುವಂತೆ ನ್ಯಾಯಾಲಯವೂ ಆತನಿಗೆ ಆದೇಶಿಸಿದೆ.
36
ಪತ್ನಿ 4 ನಾಲ್ವರು ಮಕ್ಕಳಿದ್ದ ಕುಟುಂಬ ತೊರೆದು ಬೇರೆ ಮಹಿಳೆ ಜೊತೆ ವಾಸ
ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ವಾರ್ಷಿಕವಾಗಿ 6 ಕೋಟಿ ರೂ.ಗೂ ಹೆಚ್ಚು ಸಂಪಾದಿಸುತ್ತಿದ್ದ ಆ ವ್ಯಕ್ತಿ, ಆಗಸ್ಟ್ 2023 ರಲ್ಲಿ ತನ್ನ ಕುಟುಂಬವನ್ನು ತೊರೆದು ಬೇರೆ ಮಹಿಳೆಯೊಂದಿಗೆ ವಾಸಿಸಲು ಶುರು ಮಾಡಿದ್ದ. ಹೀಗಾಗಿ ಆತನ ಪತ್ನಿ ತನಗಾಗಿ ಮತ್ತು ತಮ್ಮಿಬ್ಬರ ನಾಲ್ವರು ಮಕ್ಕಳಿಗೆ ಆರ್ಥಿಕ ಸಹಾಯ ಮಾಡುವಂತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದಾಗಿ ಸ್ವಲ್ಪ ಸಮಯದ ನಂತರ ಆ ವ್ಯಕ್ತಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಅಂತಿಮವಾಗಿ ಕೆನಡಾಕ್ಕೆ ಮರಳಿದ್ದನು. ನ್ಯಾಯಾಲಯದ ಆದೇಶದಂತೆ ಪರಿಹಾರವನ್ನು ನೀಡದೇ ನ್ಯಾಯಾಲಯಕ್ಕೂ ಹಾಜರಾಗದೇ ತಿರುಗಾಡುತ್ತಿದ್ದ ಆತನ ವಿರುದ್ಧ 2024 ರ ಆರಂಭದಲ್ಲಿ ಬಂಧನ ವಾರಂಟ್ ಹೊರಡಿಸಲಾಗಿತ್ತು. ಹೀಗಾಗಿ ಕೊನೆಗೂ ಆತ ಆನ್‌ಲೈನ್ ಕೋರ್ಟ್ ಸೆಷನ್‌ಗೆ ಹಾಜರಾಗಿದ್ದರಿಂದ ಈ ಬಂಧನ ವಾರೆಂಟ್ ಅನ್ನು ರದ್ದುಗೊಳಿಸಲಾಗಿತ್ತು.
4 ಮಕ್ಕಳಿರುವ ತಂದೆಯದ್ದು ಬೇಜವಾಬ್ದಾರಿಯುತ ನಿರ್ಧಾರ ಎಂದ ನ್ಯಾಯಾಲಯ
ಆರಂಭದಲ್ಲಿ ಮಕ್ಕಳ ಶಾಲಾ ಶುಲ್ಕ, ಶಾಲಾ ಬಸ್ ಶುಲ್ಕ ಮತ್ತು ಕುಟುಂಬದ ಮನೆಯ ಮಾಸಿಕ ಬಾಡಿಗೆಯನ್ನು ಪಾವತಿಸುವುದರ ಜೊತೆಗೆ, ಕುಟುಂಬವನ್ನು ಪೋಷಿಸಲು ಪತ್ನಿಗೆ ತಿಂಗಳಿಗೆ $20,000 ಡಾಲರ್ ಎಂದರೆ ರೂ. 14 ಲಕ್ಷ ನೀಡುವುದಾಗಿ ಆತ ನ್ಯಾಯಾಲಯಕ್ಕೆ ಹೇಳಿದ್ದರು. ನಂತರ ಇದನ್ನು ತಿಂಗಳಿಗೆ $11,000 ಅಂದರೆ ರೂ. 8 ಲಕ್ಷ ಕ್ಕೆ ಇಳಿಸಲಾಗಿತ್ತು. ಆದರೆ ಪತ್ನಿ ಜೀವನಾಂಶಕ್ಕೆ ಅರ್ಜಿ ಸಲ್ಲಿಸಿದ ನಂತರ ಈತ ಇದ್ದಕ್ಕಿದ್ದಂತೆ ಕೆಲಸ ತೊರೆದಿದ್ದ. ಇದನ್ನು ಗಮನಿಸಿದ ನ್ಯಾಯಾಲಯವೂ ಪತ್ನಿ ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಿದ ತಕ್ಷಣ ಕೆಲಸ ತ್ಯಜಿಸುವ ನಿರ್ಧಾರ ಬೇಜವಾಬ್ದಾರಿಯಿಂದ ಕೂಡಿದೆ ಎಂದು ಹೇಳಿದೆ. ಜವಾಬ್ದಾರಿಯುತ ತಂದೆಯಾಗಿ ರಾಜೀನಾಮೆ ನೀಡುವ ಮೊದಲು ತನ್ನ ಕುಟುಂಬವನ್ನು ಪೋಷಿಸಲು ಹೊಸ ಉದ್ಯೋಗವನ್ನು ಪಡೆದುಕೊಳ್ಳಬೇಕಾಗಿತ್ತು ಎಂದು ನ್ಯಾಯಾಧೀಶ ಫಾಂಗ್ ಹ್ಸಿಯಾವೊ ಚುಂಗ್ ಹೇಳಿದರು.
ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಕ್ರಮಕ್ಕೆ ಮುಂದಾದ ನ್ಯಾಯಾಲಯವು ಆ ವ್ಯಕ್ತಿಯು ಹಿಂದಿನ ಪಾವತಿಯಾದ ಸೆಪ್ಟೆಂಬರ್ 2023 ರಿಂದ ಸೆಪ್ಟೆಂಬರ್ 2025 ರವರೆಗಿನ ಪರಿಹಾರ ಹಣವಾಗಿ $634,000 ಅಂದರೆ ರೂ. 4 ಕೋಟಿ ಪಾವತಿಸಲು ಆದೇಶಿಸಿದ ಜೊತೆಗೆ ಆ ವ್ಯಕ್ತಿಯ ಹೊಸ ಕೆನಡಾದ ಉದ್ಯೋಗದಲ್ಲಿ ಅವರ ಆದಾಯ ಸುಮಾರು $315,500 (ರೂ. 2 ಕೋಟಿ) ಕ್ಕೆ ಇಳಿದ ಕಾರಣ, ನ್ಯಾಯಾಧೀಶರು ಇಬ್ಬರೂ ಪೋಷಕರು ಅಂತಿಮವಾಗಿ ಕುಟುಂಬದ ವೆಚ್ಚಗಳಿಗೆ ಸಮಾನವಾಗಿ ಕೊಡುಗೆ ನೀಡಬೇಕೆಂದು ನ್ಯಾಯಾಲಯ ತೀರ್ಪು ನೀಡಿದೆ.
ಇದೇ ವೇಳೆ ಆ ವ್ಯಕ್ತಿಯ ವಕೀಲರು ತಮ್ಮ ಕಕ್ಷಿದಾರರ ಪತ್ನಿ, ಫಾರ್ಮುಲಾ ಒನ್ ಟಿಕೆಟ್‌ಗಳು, ದುಬಾರಿ ರಜಾದಿನಗಳು ಮತ್ತು ಸೌಂದರ್ಯವರ್ಧಕ ಚಿಕಿತ್ಸೆಗಳಂತಹ ವಿಷಯಗಳಿಗೆ ಹೆಚ್ಚಿನ ಹಣ ವೆಚ್ಚ ಮಾಡುತ್ತಿದ್ದಾರೆ ಎಂದು ನ್ಯಾಯಾಲಯದ ಮುಂದೆ ವಾದಿಸಿದರು. ಕುಟುಂಬವು ಆರೋಗ್ಯ ರಕ್ಷಣೆ ಮತ್ತು ಶಾಲೆಗಳು ಉಚಿತವಾಗಿರುವ ಕೆನಡಾಕ್ಕೆ ಹಿಂತಿರುಗಬೇಕೆಂದು ಅವರು ವಾದಿಸಿದರು. ಆದರೆ ಮಕ್ಕಳು ಸಿಂಗಾಪುರದಲ್ಲಿ ಒಗ್ಗಿಕೊಂಡಿರುವ ಉನ್ನತ ಮಟ್ಟದ ಜೀವನ ಮಟ್ಟವನ್ನು ಕಾಯ್ದುಕೊಳ್ಳಲು ತಾನು ಬಯಸುತ್ತೇನೆ ಎಂದು ಪತ್ನಿ ವಾದಿಸಿದರು. ಪತ್ನಿ ತನ್ನ ಜೀವನಶೈಲಿಯನ್ನು ಸರಿದೂಗಿಸಲು ಅಂತಿಮವಾಗಿ ಕೆಲಸ ಹುಡುಕಬೇಕಾದರೂ, ತಂದೆ ತನ್ನ ಹಣಕಾಸಿನ ಜವಾಬ್ದಾರಿಗಳಿಂದ ದೂರ ಸರಿಯಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಅಂತಿಮವಾಗಿ ತೀರ್ಪು ನೀಡಿದರು. 2013 ರಲ್ಲಿ ಸಿಂಗಾಪುರಕ್ಕೆ ತೆರಳಿದ ದಂಪತಿಗಳು ಪ್ರಸ್ತುತ ವಿಚ್ಛೇದನದ ಮೂಲಕ ದೂರಾಗಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.