ಬುಡಕಟ್ಟು ಕೊರಗರಲ್ಲಿ ಹೀಗೊಂದು ಆಂತರಿಕ ಕೌಟುಂಬಿಕ ನ್ಯಾಯಾಲಯ!

 ಬುಡಕಟ್ಟು ಕೊರಗ ಸಮುದಾಯದ ಸಣ್ಣ ಪುಟ್ಟವ್ಯಾಜ್ಯಗಳು ಕೋರ್ಟು ಮೆಟ್ಟಿಲೇರುವುದೇ ಇಲ್ಲ. ಸ್ಥಳೀಯವಾಗಿಯೇ ಇತ್ಯರ್ಥವಾಗುತ್ತವೆ. ಬಹುತೇಕ ಕೌಟುಂಬಿಕ ಸಮಸ್ಯೆಗಳನ್ನು ಕೊರಗರ ಸಮುದಾಯದ ಅಥವಾ ಸಂಘದಲ್ಲಿ ಕುಳಿತು ಚರ್ಚೆ ಮಾಡಿ, ಅಭಿಪ್ರಾಯ ಪಡೆದುಕೊಂಡು ನ್ಯಾಯ ತೀರ್ಮಾನ ಮಾಡುತ್ತಾರೆ.

An internal court in the Koraga community dakshina kannada mangaluru rav

ಸಂಶುದ್ದೀನ್‌ ಸಂಪ್ಯ

 ಪುತ್ತೂರು (ಮಾ.7) : ಬುಡಕಟ್ಟು ಕೊರಗ ಸಮುದಾಯದ ಸಣ್ಣ ಪುಟ್ಟವ್ಯಾಜ್ಯಗಳು ಕೋರ್ಟು ಮೆಟ್ಟಿಲೇರುವುದೇ ಇಲ್ಲ. ಸ್ಥಳೀಯವಾಗಿಯೇ ಇತ್ಯರ್ಥವಾಗುತ್ತವೆ. ಬಹುತೇಕ ಕೌಟುಂಬಿಕ ಸಮಸ್ಯೆಗಳನ್ನು ಕೊರಗರ ಸಮುದಾಯದ ಅಥವಾ ಸಂಘದಲ್ಲಿ ಕುಳಿತು ಚರ್ಚೆ ಮಾಡಿ, ಅಭಿಪ್ರಾಯ ಪಡೆದುಕೊಂಡು ನ್ಯಾಯ ತೀರ್ಮಾನ ಮಾಡುತ್ತಾರೆ. ಈ ವಿಶಿಷ್ಟವ್ಯವಸ್ಥೆಗೆ ‘ನಮ್ಮ ನ್ಯಾಯಕೂಟ’ ಎಂದು ಹೆಸರು. ಇದೊಂದು ಸಮುದಾಯದ ಕೌಟುಂಬಿಕ ನ್ಯಾಯಾಲಯ ಇದ್ದ ಹಾಗೆ. ಕೊರಗರು ವಾಸಿಸುವ ಪ್ರದೇಶಗಳಲ್ಲೆಲ್ಲ ಈ ವ್ಯವಸ್ಥೆ ಸಕ್ರಿಯವಾಗಿದೆ.

ಉಚಿತ ಅದಾಲತ್‌: ಕೊರಗ ಸಮುದಾಯ(Korag community)ವು ಕಡು ಬಡತನದಿಂದ ಕೂಡಿದ್ದು, ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ನ್ಯಾಯಾಲಯದ ಮೊರೆ ಹೋಗುವಷ್ಟರ ಮಟ್ಟಿಗೆ ಇನ್ನೂ ಅರಿವು ಪಡೆದುಕೊಂಡಿಲ್ಲ. ಹಾಗೆಂದು ಈ ಸಮುದಾಯಗಳ ನಡುವೆ ಸಮಸ್ಯೆಗಳು ಬರುವುದಿಲ್ಲ ಎನ್ನಲು ಸಾಧ್ಯವಿಲ್ಲ.

 

ಕೊರಗ ಸಮುದಾಯವನ್ನು ಸದೃಢಗೊಳಿಸಬೇಕು: ಶಾಸಕ ರಘುಪತಿ ಭಟ್

ವೈಯಕ್ತಿಕ ಕಾರಣಗಳಿಂದ ಕುಟುಂಬಗಳ ಒಳಗಡೆ ಜಗಳ ಭಿನ್ನಾಭಿಪ್ರಾಯಗಳು ಬಂದು ಪತಿ, ಪತ್ನಿ ಪರಸ್ಪರ ದೂರವಾಗುವುದು. ಅಲ್ಲದೆ ಜಮೀನು ವಿಚಾರಗಳಲ್ಲಿ ಸಹೋದರರ ನಡುವೆ ಜಗಳ ಬಿನ್ನಾಭಿಪ್ರಾಯ ನಡೆದು ಮಾತುಕತೆ ಇಲ್ಲದಂತಾಗುವ ಕೆಲವು ಘಟನೆಗಳು ನಡೆಯುತ್ತದೆ. ಅಂತಹ ಸಂದರ್ಭದಲ್ಲಿ ‘ನಮ್ಮ ನ್ಯಾಯಕೂಟ’ಕ್ಕೆ ದೂರು ನೀಡಿ ಪರಿಹರಿಸಿಕೊಳ್ಳುತ್ತಾರೆ. ಈ ಒಟ್ಟೂಅದಾಲತ್‌ ಉಚಿತವಾಗಿ ನಡೆಯುತ್ತದೆ. ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಅಹವಾಲುಗಳ ವಿಚಾರಣೆ ಸಾವಕಾಶವಾಗಿ ನಡೆಯುತ್ತದೆ. ಮಾತ್ರವಲ್ಲ, ಮಹಿಳೆಯರಿಗೆ ಮುಜುಗರವಾಗದಂತೆ ಅವರ ಅಹವಾಲುಗಳನ್ನು ಮಹಿಳಾ ಪ್ರತಿನಿಧಿಗಳೇ ಪ್ರತ್ಯೇಕವಾಗಿ ಆಲಿಸುವ ವ್ಯವಸ್ಥೆಯೂ ಇಲ್ಲಿದೆ.

100ಕ್ಕೂ ಅಧಿಕ ಸಮಸ್ಯೆಗಳ ಪರಿಹಾರ: ಕಾರಸಗೋಡು, ಉಡುಪಿ, ದ.ಕ. ಜಿಲ್ಲೆಯ ವ್ಯಾಪ್ತಿಯ ಕೊರಗ ಸಮುದಾಯದ ನಮ್ಮ ನ್ಯಾಯ ಕೂಟಗಳು ಆರಂಭಗೊಂಡು ಐದಾರು ವರ್ಷಗಳೇ ಕಳೆದವು. ಈ ನ್ಯಾಯ ಕೂಟದಲ್ಲಿ ಈ ತನಕ ಸುಮಾರು 100ಕ್ಕೂ ಅಧಿಕ ಕೌಟುಂಬಿಕ ಹಾಗೂ ಇನ್ನಿತರ ಸಮಸ್ಯೆಗಳು ಪರಿಹಾರಗೊಂಡಿದೆ. ಹಿಂದೆಲ್ಲ ಸಮುದಾಯದ ಗುರಿಕಾರರು ವ್ಯಾಜ್ಯ ಪರಿಹಾರ ಮಾಡುತ್ತಿದ್ದರೆ, ಸದ್ಯ ಒಕ್ಕೂಟದ ವ್ಯಾಪ್ತಿಯಲ್ಲಿ ಅಹವಾಲು ಆಲಿಸುವ ವ್ಯವಸ್ಥೆ ಇದೆ. ಇಲ್ಲಿ ಸಮಸ್ಯೆ ಪರಿಹಾರಗೊಂಡ ಬಳಿಕ ಅದು ಮತ್ತೆ ಮುಂದುವರಿದ ಉದಾಹರಣೆಗಳಿಲ್ಲ. ಎಲ್ಲರೂ ನ್ಯಾಯ ತೀರ್ಮಾನಕ್ಕೆ ಬದ್ಧರಾಗಿರುತ್ತಾರೆ ಎಂಬುದು ಸಮುದಾಯದ ಮುಖಂಡ ಮತ್ತಡಿ ಕಾಯರ್‌ಪಲ್ಕೆ ಅವರ ಅಭಿಪ್ರಾಯ.

ದಂಪತಿ ಕಲಹ ಇತ್ಯರ್ಥ: ಇದಕ್ಕೆ ಪೂರಕವಾಗಿ ಕೊರಗ ಸಮುದಾಯದ ದಂಪತಿ ನಡುವಿನ ಕೆಲ ಸಮಯಗಳಿಂದ ಇದ್ದ ಕೌಟುಂಬಿಕ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಸುಸೂತ್ರವಾಗಿ ಮಾತುಕತೆಯಲ್ಲಿ ಬಗೆಹರಿಸಲಾಗುತ್ತದೆ.

ಇಲ್ಲಿನ ದರ್ಬೆ ಕೊರಗ ಸಮುದಾಯ ಭವನದಲ್ಲಿ ಇತ್ತೀಚೆಗೆ ನಡೆದ ನಮ್ಮ ನ್ಯಾಯಕೂಟ ಅದಾಲತ್‌ನಲ್ಲಿ ಕುಟುಂಬದ ಸಮಸ್ಯೆಗಳನ್ನು ಆಲಿಸಿ ಸೌಹಾರ್ದಯುತವಾಗಿ ನ್ಯಾಯ ತೀರ್ಮಾನ ಮಾಡಲಾಯಿತು. ಕೊರಗ ಸಮುದಾಯದ ಮುಖಂಡ ಮತ್ತಡಿ ಕಾಯರ್‌ಪಲ್ಕೆ ನ್ಯಾಯ ಸ್ಥಾನದಲ್ಲಿ ಕುಳಿತು ನ್ಯಾಯ ತೀರ್ಮಾನ ಮಾಡಿದರು. ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಹಾಗೂ ಕೊರಗ ಅಭಿವೃದ್ಧಿ ಸಂಘ, ಪುತ್ತೂರು ತಾಲೂಕು ಇವರ ಸಂಯೋಜನೆಯಲ್ಲಿ ನಮ್ಮ ನ್ಯಾಯಕೂಟ ಸಮಾಲೋಚನೆ ನಡೆಯಿತು. ದೂರುದಾರರು ಹಾಗೂ ಪ್ರತಿವಾದಿಗಳ ಅಭಿಪ್ರಾಯ, ವಾದ ಪ್ರತಿವಾದಗಳನ್ನು ಆಲಿಸಿ ಸಮುದಾಯದ ಪಂಚರ ಸಮ್ಮುಖದಲ್ಲಿ ನ್ಯಾಯದಾನ ನೀಡಲಾಯಿತು.

ದೈವ ಕೊರಗಜ್ಜನಿಗೆ ವಿಶೇಷ ಪೂಜೆ ಸಲ್ಲಿಸಿದ ನಟಿ ಶ್ರುತಿ; ಮುಂದಿಟ್ಟ ಬೇಡಿಕೆ ಏನು?

ಸಂಘದ ಕಾರ್ಯಕರ್ತೆ ಕಮಲಾ ಕೊರಗ ಪುತ್ತೂರು ಹಾಗೂ ಸಂಘದ ಅಧ್ಯಕ್ಷ ಸುರೇಶ್‌ ಕೊರಗ ಪುತ್ತೂರು ನ್ಯಾಯಕೂಟವನ್ನು ಸಂಘಟಿಸಿದ್ದರು.

ಸಮುದಾಯದ ಸಮಸ್ಯೆಗಳು ಕೋರ್ಟಿಗೆ ಹೋಗುವ ಮಟ್ಟಕ್ಕೆ ಬೆಳೆಯುವುದಿಲ್ಲ. ಕೌಟುಂಬಿಕ ಸಮಸ್ಯೆ, ಕುಡಿತ ಸಮಸ್ಯೆ, ಸಹೋದರರ ನಡುವೆ ಭಿನ್ನಾಭಿಪ್ರಾಯ ಇಂತಹ ಸಮಸ್ಯೆಗಳು ಹೆಚ್ಚು ಕೊರಗ ಸಮುದಾಯದಲ್ಲಿ ಕಂಡು ಬರುವುದು. ಅಂತಹ ಸಮಸ್ಯೆಗಳನ್ನು ನಮ್ಮ ನ್ಯಾಯ ಕೂಟದಲ್ಲಿ ಇತ್ಯರ್ಥ ಪಡಿಸಿಕೊಳ್ಳುತ್ತೇವೆ. ಇದರಿಂದಾಗಿ ಕೊರಗ ಸಮುದಾಯದ ಬದುಕಿನಲ್ಲಿ ಬದಲಾವಣೆ ಕಾಣಲು ಸಾಧ್ಯವಾಗಿದೆ. ಸಮುದಾಯಕ್ಕೆ ನಮ್ಮನ್ನು ಕೇಳುವವರು ಇಲ್ಲ ಎಂಬ ಭಾವನೆ ದೂರವಾಗಿ ಸಮುದಾಯದ ನಡುವೆ ಪರಸ್ಪರ ಪ್ರೀತಿ, ವಿಶ್ವಾಸ ಹೆಚ್ಚಾಗಿದೆ.

-ಮತ್ತಡಿ ಕಾಯರ್‌ಪಲ್ಕೆ, ಸಮುದಾಯದ ಮುಖಂಡ.

Latest Videos
Follow Us:
Download App:
  • android
  • ios