ಚುನಾವಣೆಯಲ್ಲಿ ತಾರಾ ಪ್ರಚಾರಕರ ಕಮಾಲ್‌, ಬಿಜೆಪಿಯಲ್ಲಿ ಮೋದಿ ಚರಿಷ್ಮಾ, ಟಾಪ್‌ 10 ಗೇಮ್‌ ಚೇಂಜರ್‌ಗಳಿವರು

First Published Mar 18, 2024, 10:08 AM IST

18ನೇ ಲೋಕಸಭಾ ಚುನಾವಣೆಗೆ ಅಖಾಡ ಸಿದ್ಧಗೊಂಡಿದ್ದು ಹಲವು ಪಕ್ಷಗಳಲ್ಲಿ ಚುನಾವಣೆಯ ದಿಕ್ಕನ್ನೇ ಬದಲಿಸುವ ಹಲವು ತಾರಾ ಪ್ರಚಾರಕರಿದ್ದಾರೆ. ಇವರು ತಮ್ಮ ನಿಪುಣ ವಾಕ್ಚಾತುರ್ಯದಿಂದ ಮತದಾರರ ಮನಸ್ಸನ್ನು ಭಾವನಾತ್ಮಕವಾಗಿ ಪ್ರವೇಶಿಸಿ ತಮ್ಮ ಪಕ್ಷಕ್ಕೆ ಮತ ಬೀಳುವಂತೆ ಅವರು ಮನವೊಲಿಸುವಲ್ಲಿ ನಿಷ್ಣಾತರಾಗಿದ್ದಾರೆ. ಅಂತಹ ಟಾಪ್‌ 10 ಚುನಾವಣಾ ಗೇಮ್‌ ಚೇಂಜರ್‌ಗಳ ಕುರಿತು ಇಲ್ಲದೆ ಸಂಕ್ಷಿಪ್ತ ಮಾಹಿತಿ.

ಪ್ರಸ್ತುತ ಪ್ರಧಾನಮಂತ್ರಿಯಾಗಿರುವ ನರೇಂದ್ರ ಮೋದಿ ಮೂರನೇ ಬಾರಿಗೆ ಅಧಿಕಾರ ಹಿಡಿಯುವ ವಿಶ್ವಾಸದಲ್ಲಿದ್ದಾರೆ. ಈ ಬಾರಿ ಮೋದಿಯವರ ಗ್ಯಾರಂಟಿ ಎಂಬ ಧ್ಯೇಯಮಂತ್ರದೊಂದಿಗೆ ಮತದಾರರತ್ತ ಮುನ್ನುಗ್ಗುತ್ತಿರುವ ಅವರು, ಕಳೆದ ಬಾರಿಗಿಂತ ಅತಿಹೆಚ್ಚು ಸ್ಥಾನಗಳಲ್ಲಿ ಗೆದ್ದು ಜವಹರ್‌ಲಾಲ್‌ ನೆಹರೂ ಅವರಂತೆ ಹ್ಯಾಟ್ರಿಕ್‌ ಪ್ರಧಾನಿಯಾಗುವ ಹಾದಿಯಲ್ಲಿದ್ದಾರೆ.

ಚುನಾವಣಾ ರಣತಂತ್ರದ ಚಾಣಕ್ಯ ಎಂದೇ ಬಿಂಬಿತರಾಗಿರುವ ಕೇಮದ್ರ ಗೃಹ ಸಚಿವ ಅಮಿತ್‌ ಶಾ ಈ ಬಾರಿ ಇನ್ನಷ್ಟು ಆಕ್ರಮಣಕಾರಿ ಶೈಲಿಯಲ್ಲಿ ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ. ಪ್ರಸ್ತುತ ಗೃಹ ಮಂತ್ರಿಯಾಗಿ 370ನೇ ವಿಧಿ ರದ್ದತಿ, ತಲಾಖ್‌ ಸೇರಿದಂತೆ ಹಲವು ಕ್ರಾಂತಿಕಾರಕ ನಿರ್ಧಾರಗಳನ್ನು ತೆಗೆದುಕೊಂಡು ಜನರನ್ನು ಸೆಳೆಯಬಲ್ಲವರಾಗಿದ್ದಾರೆ.

ಕಾಂಗ್ರೆಸ್‌ ನಾಯಕರಾಗಿರುವ ರಾಹುಲ್‌ ಗಾಂಧಿ ಕಳೆದ ಹತ್ತು ವರ್ಷಗಳಿಂದ ಅಧಿಕಾರ ವಂಚಿತವಾಗಿರುವ ಕಾಂಗ್ರೆಸ್‌ ಪಕ್ಷ ಕೇಂದ್ರದಲ್ಲಿ ಅಧಿಕಾರ ಹಿಡಿಯಲೇಬೇಕೆಂಬ ಹುಮ್ಮಸ್ಸಿನೊಂದಿಗೆ ಹಲವು ಜನಪ್ರಿಯ ಕೊಡುಗೆಗಳನ್ನು ಘೋಷಿಸುತ್ತಿದ್ದಾರೆ. ಜೊತೆಗೆ ಭಾರತ್‌ ಜೋಡೋ ಯಾತ್ರೆ ಮತ್ತು ನ್ಯಾಯ ಯಾತ್ರೆಗಳ ಮೂಲಕ ಭಾರತದ ತಳಸಮುದಾಯದೊಂದಿಗೆ ಮುಕ್ತವಾಗಿ ಬೆರೆಯುವ ಪ್ರಯತ್ನ ನಡೆಸಿದ್ದಾರೆ.

ಕಾಂಗ್ರೆಸ್‌ ರಾಷ್ಟ್ರಾಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟವಾಗಿ ಹಿಂದಿ ಮಾತನಾಡುವ ದಕ್ಷಿಣ ಭಾರತ ಮೂಲದ ಕಾಂಗ್ರೆಸ್‌ ನಾಯಕರಲ್ಲಿ ಒಬ್ಬರಾಗಿದ್ದಾರೆ. ಇವರು ಅತ್ಯಂತ ನಿಖರವಾದ ಮತ್ತು ಮೌಲ್ಯಯುತವಾದ ಮಾಹಿತಿ ಮತ್ತು ಅಂಕಿಅಂಶಗಳೊಂದಿಗೆ ಕೇಂದ್ರ ಸರ್ಕಾರಕ್ಕೆ ಸದನದಲ್ಲಿ ಚಾಟಿ ಬೀಸಿ ಸೈ ಎನಿಸಿಕೊಂಡಿರುವ ಇವರು ಚುನಾವಣಾ ರಣರಂಗದಲ್ಲಿ ಹೇಗೆ ಆಡಳಿತ ಪಕ್ಷಕ್ಕೆ ತಿರುಗೇಟು ಕೊಡುವರು ಎಂಬುದು ಕುತೂಹಲ ಮೂಡಿಸಿದೆ.
 

ಪ್ರಭಾವಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿರುವ ತೃಣಮೂಲ ಕಾಂಗ್ರೆಸ್‌ ಅಧ್ಯಕ್ಷ ಮಮತಾ ಬ್ಯಾನರ್ಜಿ ಈ ಬಾರಿ ಬಿಜೆಪಿಯಿಂದ ಜಿದ್ದಾಜಿದ್ದಿನ ಸ್ಪರ್ಧೆ ಎದುರಿಸುತ್ತಿದ್ದಾರೆ. ಸೀಟು ಹಂಚಿಕೆ ವಿಚಾರದಲ್ಲಿ ಇಂಡಿಯಾ ಕೂಟಕ್ಕೆ ಸೆಡ್ಡು ಹೊಡೆದು ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಘೋಷಿಸಿರುವ ಮಮತಾ ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ಬಿಜೆಪಿಯ ವಿರುದ್ಧ ಯಾವ ಅಸ್ತ್ರಗಳನ್ನು ಪ್ರಯೋಗಿಸುತ್ತಾರೆ ಎಂದು ಕಾದು ನೋಡಬೇಕಿದೆ.

ಬಿಹಾರದಲ್ಲಿ ಇತ್ತೀಚೆಗಷ್ಟೇ ಎನ್‌ಡಿಎ ಮೈತ್ರಿಕೂಟ ಸೇರಿಕೊಂಡಿರುವ ಅನುಕೂಲಸಿಂಧು ರಾಜಕಾರಣಿ ನಿತೀಶ್‌ ಕುಮಾರ್ ಲಾಲು ನೇತೃತ್ವದ ಆರ್‌ಜೆಡಿ ಪಕ್ಷದಿಂದ ಪ್ರಬಲ ಸ್ಪರ್ಧೆ ಎದುರಿಸುತ್ತಿದ್ದಾರೆ. ಆದರೆ ಬಿಜೆಪಿಯ ಸಖ್ಯ ಬೆಳೆಸಿಕೊಂಡಿರುವುದು ನಿತೀಶ್‌ರ ಬಲ ಹೆಚ್ಚಿಸಿದ್ದು, ಸುಲಭವಾಗಿ ರಾಜ್ಯದಲ್ಲಿ ಹೆಚ್ಚಿನ ಸ್ಥಾನಗಳನ್ನು ಎನ್‌ಡಿಎ ಮೈತ್ರಿಕೂಟಕ್ಕೆ ಗೆಲ್ಲಿಸಿಕೊಡಬಲ್ಲರು ಎಂದೇ ಅಂದಾಜಿಸಲಾಗಿದೆ.

ಎನ್‌ಸಿಪಿ ಪರಮೋಚ್ಛ ನಾಯಕ ಶರದ್‌ ಪವಾರ್‌ ತಮ್ಮ ಸಂಧ್ಯಾಕಾಲದ ಸಂದಿಗ್ಧ ಸ್ಥಿತಿಯಲ್ಲಿ ಎದುರಿಸುತ್ತಿರುವ ಚುನಾವಣೆಯಲ್ಲಿ ಅಳಿವು ಉಳಿವಿನ ಪ್ರಶ್ನೆ ಎದುರಿಸುತ್ತಿದ್ದಾರೆ. ತಮ್ಮ ಸೋದರ ಸಂಬಂಧಿ ಅಜಿತ್‌ ಪವಾರ್ ಅವರಿಂದ ಹೊಸ ಪಕ್ಷ ಸ್ಥಾಪನೆಯಾದ ಮೇಲೆ ಶರದ್‌ ಹೇಗೆ ಇಂಡಿಯಾ ಮೈತ್ರಿಕೂಟಕ್ಕೆ ಮಹಾರಾಷ್ಟ್ರದಲ್ಲಿ ನೆರವಾಗಬಲ್ಲರು ಎಂಬುದನ್ನು ಕಾದು ನೋಡಬೇಕಿದೆ.
 

ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಸಾಧ್ಯತೆ ಇದೆ. ದಕ್ಷಿಣದ ರಾಜ್ಯಗಳಲ್ಲಿ ಬೇರೂರಲು ಪ್ರಯತ್ನಿಸುತ್ತಿರುವ ಬಿಜೆಪಿಗೆ ತಮಿಳುನಾಡಿನಲ್ಲಿ ಭಾಷಾ ಅಸ್ಮಿತೆಯನ್ನು ಪ್ರಮುಖ ಅಸ್ತ್ರವಾಗಿ ಇಟ್ಟುಕೊಂಡು ಹೇಗೆ ಸಡ್ಡುಹೊಡೆಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಅಲ್ಲದೆ ಈ ರಾಜ್ಯದಲ್ಲೇ ಕಾಂಗ್ರೆಸ್‌ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲು ನೆರವಾಗುವ ಸಾಧ್ಯತೆಯೂ ಇದೆ.

 ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಈ ಬಾರಿ ಆರ್‌ಜೆಡಿ ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ. ಇತ್ತೀಚೆಗಷ್ಟೇ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಬಲ ಪ್ರದರ್ಶಿಸಿದ್ದ ಅವರು ತಮ್ಮ ತಂದೆ ಲಾಲು ಪ್ರಸಾದ್‌ ಯಾದವ್ ಅವರ ರೀತಿಯಲ್ಲಿ ಮತದಾರರನ್ನು ಸೆಳೆದು ನಿತೀಶ್‌ಕುಮಾರ್‌ ಮತ್ತು ಬಿಜೆಪಿಗೆ ಮುಳುವಾಗುವರೇ ಎಂಬುದನ್ನು ಕಾದು ನೋಡಬೇಕಿದೆ.

ಹೈದರಾಬಾದ್‌ ಪ್ರಾಂತ್ಯದಲ್ಲಿ ಪ್ರಭಾವ ಹೊಂದಿರುವ ಅಖಿಲ ಭಾರತ ಮುಸ್ಲಿಂ ಇಂಡಿಯಾ ಲೀಗ್‌ ಸ್ಥಾಪಕ ಅಸಾದುದ್ದೀನ್‌ ಒವೈಸಿ ಈ ಬಾರಿ ಯಾರನ್ನು ಸೋಲಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಅವರ ಪಕ್ಷ ಪ್ರತಿಬಾರಿಯೂ ಪಡೆಯುವ ಮತಗಳಿಕೆಯಿಂದಾಗಿ ಮತ್ತೊಂದು ಪಕ್ಷಕ್ಕೆ ಸೋಲುಣಿಸುವ ರುಚಿ ತೋರಿಸುತ್ತಿದ್ದಾರೆ. ಈ ಬಾರಿ ಇವರಿಂದ ಬಿಜೆಪಿ ಮತ್ತು ಬಿಆರ್‌ಎಸ್‌ ಪಕ್ಷದಲ್ಲಿ ಯಾರಿಗೆ ಲಾಭ ಯಾರಿಗೆ ನಷ್ಟ ಉಂಟಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

click me!